ಸೂರ್ಯನ ಅಧ್ಯಯನಕ್ಕೆ ‘ಪಾರ್ಕರ್​’ ಶೋಧ ನೌಕೆ ಉಡಾವಣೆಗೆ ಕ್ಷಣಗಣನೆ ಆರಂಭ

ಟ್ಯಾಂಪಾ: ಜಗತ್ತಿಗೆ ಬೆಳಕಿನ ಮೂಲವಾಗಿರುವ ಸೂರ್ಯನ ಕುರಿತು ವಿಜ್ಞಾನಿಗಳು ಹಲವು ಸಂಶೋಧನೆಗಳನ್ನು ನಡೆಸಿದ್ದಾರೆ. ಆದರೂ ಸೂರ್ಯನ ಕುರಿತು ನಮಗೆ ಲಭ್ಯವಾಗಿರುವ ಮಾಹಿತಿ ಅಷ್ಟಕ್ಕಷ್ಟೇ. ಹಲವಾರು ವರ್ಷಗಳಿಂದ ಸೂರ್ಯನ ಮೇಲ್ಮೈ ಕುರಿತು ನಡೆಸಿರುವ ಸಂಶೋಧನೆಗಳಿಂದ ತಿಳಿದುಬಂದಿರುವ ಮಾಹಿತಿ ಹೆಚ್ಚು ಉಪಯೋಗವಾಗಿಲ್ಲ. ಹೀಗಾಗಿ ಅಮೆರಿಕದ ನಾಸಾ ಸೂರ್ಯನ ಕುರಿತು ಸಮಗ್ರವಾಗಿ ಅಧ್ಯಯನ ಮಾಡಲು ಪಾರ್ಕರ್​ ಶೋಧ ನೌಕೆಯನ್ನು ಶನಿವಾರ ಉಡಾವಣೆ ಮಾಡಲಿದೆ.

1.5 ಬಿಲಿಯನ್​ ಡಾಲರ್​ ಮೊತ್ತದಲ್ಲಿ ತಯಾರಾಗಿರುವ ಒಂದು ಕಾರಿನ ಗಾತ್ರದ ಪಾರ್ಕರ್​ ಸೋಲಾರ್​ ಪ್ರೋಬ್​ ಎಂಬ ಶೋಧ ನೌಕೆಯನ್ನು ಫ್ಲೋರಿಡಾದ ಕೇಪ್​ ಕಾರ್ನವೆರಲ್​ನಿಂದ ಡೆಲ್ಟಾ 4 ನೌಕೆಯ ಮೂಲಕ ಭಾರತೀಯ ಕಾಲಮಾನ ಶನಿವಾರ ಮಧ್ಯಾಹ್ನ 1 ಗಂಟೆ (ಸ್ಥಳೀಯ ಕಾಲಮಾನ 3.33 ಕ್ಕೆ) ಉಡಾವಣೆಯಾಗಲಿದೆ ಎಂದು ನಾಸಾ ತಿಳಿಸಿದೆ.

ಪಾರ್ಕರ್​ ಉಪಗ್ರಹ ಸೂರ್ಯನ ಮೇಲ್ಮೈನಲ್ಲಿ ನಡೆಯುವ ನಾನಾ ಪ್ರಕ್ರಿಯೆಗಳ ಕುರಿತು ಬೆಳಕು ಚೆಲ್ಲಲಿದೆ. ಸೂರ್ಯನ ಮೇಲ್ಮೈನಲ್ಲಿ ಇದ್ದಕ್ಕಿದ್ದಂತೆ ಉಷ್ಣಾಂಶದಲ್ಲಿ ಏರಿಳಿತ ಆಗುವುದೇಕೆ ಎಂಬುದೇ ಪ್ರಮುಖ ಅಧ್ಯಯನ ವಿಷಯವಾಗಿದೆ. ಆಗಾಗ ಬೀಸುವ ಸೌರ ಮಾರುತಗಳ ಕುರಿತು ಸಹ ಅಧ್ಯಯನ ನಡೆಸಲಿದೆ. ಜತೆಗೆ ಶಕ್ತಿಯ ಕಣಗಳು ಚಲಿಸೋಕೆ ಕಾರಣವಾಗುವ ಅಂಶಗಳು ಯಾವುವು ಎಂಬ ಕುರಿತು ಹೆಚ್ಚಿನ ಮಾಹಿತಿ ಕಲೆ ಹಾಕಲಿದೆ.

ಉಪಗ್ರಹದಲ್ಲಿ ಫೀಲ್ಡ್ಸ್​, ಈಸೋಸ್​, ವಿಸ್ಪರ್​, ಸ್ವೀಪ್​, ಹೀಲಿಯೋಸ್ಪ್​​ ಎಂಬ ನಾನಾ ಉಪಕರಣಗಳನ್ನು ತನ್ನ ಜತೆ ಒಯ್ಯಲಿದೆ. ಫೀಲ್ಡ್ಸ್​​ ಸೂರ್ಯನ ವಿದ್ಯುತ್​ ವಲಯ, ಗುರುತ್ವಾಕರ್ಷಣ ಶಕ್ತಿ, ರೇಡಿಯೋ ತರಂಗಗಳ ಕುರಿತು ಸಂಶೋಧನೆ ನಡೆಸಲಿದೆ. ಈಸೋಸ್​ ಶಕ್ತಿಶಾಲಿ ಎಲೆಕ್ಟ್ರಾನ್​ಗಳು, ಪ್ರೋಟಾನ್​ಗಳು ಮತ್ತು ಇತರ ಭಾರದ ಅಯಾನ್​ಗಳ ಕುರಿತು ಅಧ್ಯಯನ ನಡೆಸಲಿದೆ. ವಿಸ್ಪರ್​ ಆಪ್ಟಿಕಲ್​ ಇಮೇಜ್​ ಸೆನ್ಸಾರ್​, ಸೂರ್ಯನ ಮೇಲ್ಮೈ ಅಂದರೆ ಕರೋನಾ ಮತ್ತು ಒಳ ವಾತಾವರಣದ ಚಿತ್ರಗಳನ್ನು ಸೆರೆ ಹಿಡಿಯಲಿದೆ. ಸ್ವೀಪ್​ ಎಲೆಕ್ಟ್ರಾನ್​ಗಳು, ಪ್ರೋಟಾನ್​ಗಳು ಮತ್ತು ಹೀಲಿಯಂ ಅಯಾನ್​ಗಳ ಸಂಖ್ಯೆಯನ್ನು ಲೆಕ್ಕ ಹಾಕಿ ಅವುಗಳ ಶಕ್ತಿ, ಸಾಂದ್ರತೆ ಮತ್ತು ಶಾಖದ ಕುರಿತು ಮಾಹಿತಿ ನೀಡಲಿದೆ.

ಈ ಹಿಂದೆ ಹಲವು ಬಾರಿ ಸೂರ್ಯನಲ್ಲಿಗೆ ನಾಸಾ ಶೋಧ ನೌಕೆಗಳನ್ನು ಹಾರಿ ಬಿಟ್ಟಿತ್ತು. ಆದರೆ ಇದೇ ಮೊದಲ ಬಾರಿಗೆ ಸೂರ್ಯನಿಗೆ ಅತ್ಯಂತ ಹತ್ತಿರಕ್ಕೆ ಶೋಧ ನೌಕೆಯನ್ನು ಕಳುಹಿಸಲಾಗುತ್ತಿದೆ. ಪಾರ್ಕರ್​ ಉಪಗ್ರಹ ಸೂರ್ಯನಿಂದ ಸುಮಾರು 7 ಲಕ್ಷ ಕಿಲೋಮೀಟರ್​ ಹತ್ತಿರದವರೆಗೆ ಹಾರಲಿದೆ. ಹೀಗಾಗಿ ಸೂರ್ಯನ ಕುರಿತು ಇದುವರೆಗೆ ನಮಗೆ ಗೊತ್ತಿರದ ಹತ್ತು ಹಲವು ಹೊಸ ಸಂಗತಿಗಳನ್ನು ಪಾರ್ಕರ್​ ತಿಳಿಸಿಕೊಡಲಿದೆ ಎಂಬ ನಿರೀಕ್ಷೆಯಿದೆ. (ಏಜೆನ್ಸೀಸ್​)