ನಗರದ ಆಟೋ ನಿಲ್ದಾಣಗಳಿಗೆ ಸ್ಥಳಾವಕಾಶದ ಕೊರತೆ

ಡಿಪಿಎನ್‌ ಶ್ರೇಷ್ಠಿ ಚಿತ್ರದುರ್ಗ

ನಗರದಲ್ಲಿ ದಿನೇದಿನೆ ಹೆಚ್ಚುತ್ತಿರುವ ವಾಹನ ದಟ್ಟಣೆ ಒಂದೆಡೆಯಾದರೆ, ಕಿರಿದಾದ ರಸ್ತೆಗಳು ಮತ್ತೊಂದೆಡೆ. ಇವೆಲ್ಲದರ ನಡುವೆ ವಾಹನಗಳ ನಿಲುಗಡೆ ಸಮಸ್ಯೆ ಎದುರಾಗಿದ್ದು, ಆಟೋ ಚಾಲಕರು ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ಪರದಾಡುವಂತಾಗಿದೆ. ಕೆಲವು ಏರಿಯಾಗಳಲ್ಲಂತೂ ಆಟೋಗಳನ್ನು ಹೆಚ್ಚು ಹೊತ್ತು ನಿಲ್ಲಿಸುವ ಸ್ಥಿತಿಯೂ ಇಲ್ಲ.

ನಗರದಲ್ಲಿ ಕೆಎಸ್‌ಆರ್‌ಟಿಸಿ, ಒನಕೆ ಓಬವ್ವ ವೃತ್ತ, ಜಿಲ್ಲಾಸ್ಪತ್ರೆ, ಜೋಗಿಮಟ್ಟಿ ರಸ್ತೆ ಮೊದಲಾದೆಡೆ ಆಟೋ ನಿಲುಗಡೆಗೆ ಕೊಂಚ ಜಾಗವಿದೆ. ಉಳಿದೆಡೆ ಇರುವ ಜಾಗೆಯಲ್ಲಿಯೇ ಆಟೋಗಳನ್ನು ನಿಲ್ಲಿಸಿಕೊಳ್ಳಬೇಕು.

ಎಸ್‌ಬಿಐ ಸರ್ಕಲ್, ಮೆದೇಹಳ್ಳಿ ರಸ್ತೆ ಖಾಸಗಿ ಬಸ್ ನಿಲ್ದಾಣ, ಚಳ್ಳಕೆರೆ ಗೇಟ್, ಏಕಲವ್ಯ ವೃತ್ತ, ಚೈತನ್ಯ ವೃತ್ತ, ಕೆಳಗೋಟೆ ಭುವನೇಶ್ವರಿ ಸರ್ಕಲ್, ಮದಕರಿ ಸರ್ಕಲ್, ಜೆಸಿಆರ್ ಬಡಾವಣೆ, ಎಂ.ಜಿ.ವೃತ್ತ, ದಾವಣಗೆರೆ ರಸ್ತೆ, ಗೋಪಾಲಪುರ ರಸ್ತೆ ಸಹಿತ ನಗರದ ಹೊರವಲಯದ ಅಭಿವೃದ್ಧಿ ಹೊಂದುತ್ತಿರುವ ವಿವಿಧ ಬಡಾವಣೆಗಳಲ್ಲಿ ಆಟೋಗಳ ನಿಲುಗಡೆಗೆ ಸ್ಥಳಾವಕಾಶ ಸಾಲುತ್ತಿಲ್ಲ.

ಜನ ದಟ್ಟಣೆಯ ಖಾಸಗಿ ಬಸ್ ನಿಲ್ದಾಣದ ಬಳಿಯೂ ಆಟೋಗಳನ್ನು ರಸ್ತೆ ಪಕ್ಕದಲ್ಲೇ ನಿಲ್ಲಿಸಿಕೊಳ್ಳಬೇಕು. ಕೆಎಸ್‌ಆರ್‌ಆರ್‌ಟಿಸಿ ಆಟೋ ನಿಲ್ದಾಣದಲ್ಲೂ 50 ಕ್ಕೂ ಹೆಚ್ಚು ಆಟೋಗಳಿವೆ. ಆಟೋ ನಿಲ್ದಾಣಕ್ಕೊಂದು ಜಾಗ, ಷೆಲ್ಟರ್ ನಿರ್ಮಿಸಿ ಕೊಡಿ ಎಂದು ಚಾಲಕರು ಮಾಡಿದ ಮನವಿ ಅದ್ಯಾಕೋ ಅಧಿಕಾರಿಗಳ ಕಿವಿಗೆ ಹೋಗಿಲ್ಲ.

 

ನಗರದ ಮೆದೇಹಳ್ಳಿ ರಸ್ತೆ ಅಂಗಡಿ ಮುಂಗಟ್ಟುಗಳ ಮುಂದೆ ವಾರದಲ್ಲಿ ತಲಾ ಮೂರು ದಿನ ಅದಲು ಬದಲಾಗಿ ನಿಲ್ಲಿಸಿಕೊಳ್ಳ ಬೇಕಿದೆ. ದೊಡ್ಡ ವಾಹನಗಳು ಬಂದರೆ ಹಾಗೂ ಸರಕು ಲೋಡ್, ಅನ್‌ಲೋಡ್ ವೇಳೆ ಆಟೋಗಳನ್ನು ಎಲ್ಲಿ ನಿಲ್ಲಿಸಿಕೊಳ್ಳಬೇಕೆಂಬುದೇ ಗೊತ್ತಾಗದು.

ಮಂಜುನಾಥ ನಾಯಕ್ ಖಾಸಗಿ ಬಸ್ ನಿಲ್ದಾಣ ಬಳಿಯ ಆಟೋ ಚಾಲಕ.(ಸಿಟಿಡಿ 13 ಮಂಜುನಾಥ್ ನಾಯಕ್)

 

ಯಾರಿಗೂ ತೊಂದರೆ ಆಗದಂತೆ ಖಾಸಗಿ ನಿಲ್ದಾಣದ ಬಳಿ ಆಟೋಗಳನ್ನು ನಿಲ್ಲಿಸಲು ಸ್ಥಳವನ್ನು ಗುರುತಿಸುವ ಮೂಲಕ ಜಿಲ್ಲಾಡಳಿತ, ನಗರಸಭೆ, ಪೊಲೀಸರು ಸಮಸ್ಯೆಗೆ ಪರಿಹಾರವನ್ನು ಕಲ್ಪಿಸಲಿ.

ಜಿ.ಸಿ.ಮಂಜುನಾಥ್  ವರ್ತಕ,ಮೆದೇಹಳ್ಳಿ ರಸ್ತೆ.(ಸಿಟಿಡಿ 13 ಸಿ.ಎನ್.ಮಂಜುನಾಥ್)

 

ನಿಲ್ದಾಣದಲ್ಲಿ ಷೆಲ್ಟರ್ ಇಲ್ಲದೇ ಬಿಸಿಲಿನಲ್ಲೇ ಆಟೋಗಳನ್ನು ನಿಲ್ಲಿಸಿಕೊಳ್ಳುವಂತಾಗಿದೆ. ಷೆಲ್ಟರ್ ನಿರ್ಮಿಸಿ ಎಂದು ಯಾರನ್ನು ಕೇಳುವುದು?

ರಾಜು ಕೆಎಸ್‌ಆರ್‌ಟಿಸಿ ನಿಲ್ದಾಣದ ಆಟೋ ಚಾಲಕ,ಚಿತ್ರದುರ್ಗ.

 

ಆಟೋಗಳ ನಿಲ್ದಾಣಕ್ಕೆ ನಗರಸಭೆ ಜಾಗವನ್ನು ಗುರುತಿಸಬೇಕು. ನಗರದ ಅನೇಕ ಕಡೆ ಆಟೋಗಳನ್ನು ನಿಲ್ಲಿಸಲು ಸ್ಥಳವಿಲ್ಲ. ಇದನ್ನು ನಗರಸಭೆ ಅಧಿಕಾರಿಗಳು ಗಮನಿಸಿ ಕೂಡಲೇ ಸಮಸ್ಯೆ ಬಗೆಹರಿಸಲಿ.

ಅಂಜಿನಪ್ಪ ಚಿತ್ರದುರ್ಗ

 

ನಗರದಲ್ಲಿ ಅನೇಕ ಕಡೆ ರಸ್ತೆಗಳು ವಿಶಾಲವಾಗಿಲ್ಲ, ಆದರೆ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದೆ. ನಗರದ ಖಾಸಗಿ ಬಸ್ ನಿಲ್ದಾಣದ ಬಳಿ ನಗರಸಭೆಗೆ ಸೇರಿದ ಜಾಗವೊಂದನ್ನು ನೋಡಲಾಗಿದೆ.

ಪ್ರಕಾಶ್ ಪಾಟೀಲ್ ಸಿಪಿಐ, ಕೋಟೆ ಠಾಣೆ, ಚಿತ್ರದುರ್ಗ

 

ನಗರದಲ್ಲಿ ಕೊರತೆ ಇರುವಂಥ ಆಟೋ ನಿಲ್ದಾಣಗಳಿಗೆ ನಗರಸಭೆಗೆ ಸೇರಿದ ಸ್ಥಳಾವಕಾಶದ ಲಭ್ಯತೆಯ ಕುರಿತಂತೆ ಪರಿಶೀಲನೆ ನಡೆಸಲಾಗುವುದು.

ಚಂದ್ರಪ್ಪ ಆಯುಕ್ತರು, ನಗರಸಭೆ. ಚಿತ್ರದುರ್ಗ