ಜಾತಿ ಹೆಸರಲ್ಲಿ ಮತ ಕೇಳಿಲ್ಲ

ಲಖನೌ: ಮತದಾರರ ಓಲೈಕೆಗಾಗಿ ನಾನೆಂದೂ ಜಾತಿಯನ್ನು ಬಳಸಿಕೊಂಡಿಲ್ಲ. ಗುಜರಾತ್ ಮುಖ್ಯಮಂತ್ರಿಯಾಗಿ ಮೂರು ಬಾರಿ ಚುನಾವಣೆ ಎದುರಿಸಿದರೂ ನನ್ನ ಜಾತಿ ಹೆಸರಲ್ಲಿ ಮತ ಕೇಳಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಚುನಾವಣಾ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಮೋದಿ, ಬಿಎಸ್​ಪಿ ಮುಖ್ಯಸ್ಥೆ ಮಾಯಾವತಿ ಹಾಗೂ ಎಸ್​ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಉತ್ತರಪ್ರದೇಶ ಮುಖ್ಯಮಂತ್ರಿಯಾಗಿದ್ದ ಅವಧಿಯನ್ನು ಒಟ್ಟು ಗೂಡಿಸಿದರೂ, ಅದಕ್ಕಿಂತ ಹೆಚ್ಚಿನ ಅವಧಿಗೆ ನಾನು ಗುಜರಾತ್​ನ ಮುಖ್ಯಮಂತ್ರಿಯಾಗಿದ್ದೆ. ಆದರೆ, ಮತ ಗಳಿಸಲು ಎಂದಿಗೂ ಜಾತಿಯನ್ನು ಬಳಕೆ ಮಾಡಿಕೊಂಡಿಲ್ಲ ಎಂದರು.

ಕಾಶಿ ನನಗೆ ಸ್ಪೂರ್ತಿ: ನನ್ನ ಮೇಲೆ ಕಾಶಿ ಪ್ರಭಾವ ಬೀರಿದೆ. ನನ್ನ ಪಾಲಿಗೆ ಕಾಶಿ ಕೇವಲ ಎರಡು ಪದವಲ್ಲ, ಸ್ಪೂರ್ತಿಯಾಗಿದೆ. ನಾನು ಪ್ರಧಾನಿಯಾಗಿ ರೂಪುಗೊಳ್ಳಲು ವಾರಾಣಸಿಯೇ ಕಾರಣ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ನಮೋ ಆಪ್ ಮೂಲಕ ವಾರಾಣಸಿ ಜನರನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಮತದಾನದಲ್ಲಿ ಇಡೀ ದೇಶದ ದಾಖಲೆಯನ್ನು ವಾರಾಣಸಿ ಮತದಾರರು ಈ ಬಾರಿ ಮುರಿಯಬೇಕು ಎಂದು ಕರೆ ನೀಡಿದ್ದಾರೆ.

ಇನ್ನು ಸಾಕು.. ಈಗ ಬಹಳಷ್ಟಾಯಿತು

ಸಿಖ್ ಹತ್ಯಾಕಾಂಡವನ್ನು ಆಗಿದ್ದು, ಆಗಿ ಹೋಯಿತು (ಹುವಾ ತೋ ಹುವಾ) ಎಂದು ಕರೆದಿದ್ದ ಸ್ಯಾಮ್ ಪಿತ್ರೋಡಾ ಹೇಳಿಕೆಗೆ ಪ್ರತಿಯಾಗಿ ಪ್ರಧಾನಿ ಮೋದಿ, ‘ಇನ್ನು ಸಾಕು.. ಬಹಳಷ್ಟಾಯಿತು’ (ಅಬ್ ಬಹುತ್ ಹುವಾ) ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್​ನ ಕುಟುಂಬ ರಾಜಕಾರಣದಿಂದ ಬೇಸತ್ತಿರುವ ದೇಶದ ಜನತೆ ಇನ್ನು ಸಾಕು.. ಬಹಳಷ್ಟಾಯಿತು ಎಂದು ಕೂಗುತ್ತಿದ್ದಾರೆ. ಸ್ಯಾಮ್ ಪಿತ್ರೋಡಾ ಬದಲಿಗೆ ಇಂತಹ ಹೇಳಿಕೆಗಳಿಗೆ ರಾಹುಲ್ ಗಾಂಧಿಗೆ ನಾಚಿಕೆಯಾಗಬೇಕು ಎಂದು ಕಿಡಿಕಾರಿದ್ದಾರೆ.

Leave a Reply

Your email address will not be published. Required fields are marked *