ಮೋದಿ ಪ್ರಧಾನಿಯಾಗೋದು ಸೂರ್ಯಚಂದ್ರರಷ್ಟೇ ಸತ್ಯ

ವಿಜಯಪುರ: ಸೂರ್ಯ ಚಂದ್ರರು ಉದಯಿಸೋದು ಎಷ್ಟು ಸತ್ಯವೋ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗೋದು ಅಷ್ಟೇ ಸತ್ಯ ಎಂದು ಬಿಜೆಪಿ ಮಹಿಳಾ ಘಟಕದ ಸದಸ್ಯರು ಆತ್ಮವಿಶ್ವಾಸ ವ್ಯಕ್ತಪಡಿಸಿದರು.

ಬೇಟಿ ಬಚಾವೋ ಬೇಟಿ ಪಢಾವೋ, ಮಾತೃವಂದನ ಯೋಜನೆ ಜಾರಿ ಮಾಡಿದ್ದು ಮೋದಿ ಸರ್ಕಾರದ ಸಾಧನೆ. ಅಲ್ಲದೆ, ತ್ರಿವಳಿ ತಲಾಖ್ ನಿಷೇಧದ ಮೂಲಕ ಮಹಿಳೆ ಸ್ವಾತಂತ್ರೃ ಮತ್ತು ಸ್ವಾಭಿಮಾನಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದು ಮೋದಿ ಗೆಲುವಿಗೆ ಸಹಕಾರಿಯಾಗಲಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಕೇಂದ್ರ ಸಂಪುಟದಲ್ಲಿ ಒಂಬತ್ತು ಮಹಿಳೆಯರಿಗೆ ಅವಕಾಶ ನೀಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಐತಿಹಾಸಿಕ ಮೈಲಿಗಲ್ಲು ಸ್ಥಾಪಿಸಿದೆ. ಮಹಿಳೆಯರ ಸಬಲೀಕರಣಕ್ಕೆ ಬಿಜೆಪಿ ಶ್ರಮಿಸಿದಷ್ಟು ಬೇರಾವ ಸರ್ಕಾರವೂ ಶ್ರಮಿಸಿಲ್ಲ. ಹೆರಿಗೆ ಸಮಯದಲ್ಲಿ ಸರ್ಕಾರಿ ಮತ್ತು ಅರೆ ಸರ್ಕಾರಿ ಮಹಿಳಾ ನೌಕರರಿಗೆ 12 ವಾರಗಳ ರಜೆಯನ್ನು 26 ವಾರಗಳಿಗೆ ಏರಿಸಿ ಐತಿಹಾಸಿಕ ನಿರ್ಣಯ ಕೈಗೊಂಡಿದೆ. ಪ್ರಧಾನಮಂತ್ರಿ ಮಾತೃವಂದನ ಯೋಜನೆಯಡಿ ನೇರವಾಗಿ ತಾಯಂದಿರಿಗೆ ಐದು ಸಾವಿರ ರೂ. ಧನ ಸಹಾಯ ನೀಡಲಾಗುತ್ತಿದ್ದು, ಈವರೆಗೆ 55 ಲಕ್ಷ ತಾಯಂದಿರಿಗೆ ಧನಸಹಾಯ ದೊರಕಿದೆ ಎಂದರು.

ಉಜ್ವಲ ಯೋಜನೆಯಡಿ ದೇಶದಲ್ಲಿ 7 ಕೋಟಿ ಹೊಸ ಗ್ಯಾಸ್ ಸಂಪರ್ಕ ಕಲ್ಪಿಸಿದ್ದು, ಜಿಲ್ಲೆಯಲ್ಲಿ 125062 ಫಲಾನುಭವಿಗಳು ಈ ಯೋಜನೆಯ ಸೌಲಭ್ಯ ಪಡೆದಿದ್ದಾರೆ. ತಾಯಂದಿರು, ಸಹೋದರಿಯರ ಮರ್ಯಾದೆ ಕಾಪಾಡಲು 10 ಕೋಟಿ ಶೌಚಗೃಹಗಳನ್ನು ನಿರ್ಮಿಸಲಾಗಿದೆ. ಮಿಷನ್ ಇಂದ್ರಧನುಷ್ ಯೋಜನೆಯಡಿ 86.88 ಲಕ್ಷ ತಾಯಂದಿರಿಗೆ ಲಸಿಕೆ ಹಾಕಿಸಲಾಗಿದೆ. ಸ್ವಚ್ಛ ವಿದ್ಯಾಲಯ ಯೋಜನೆಯಡಿ ಬಾಲಕಿಯರ ಶಾಲೆಗಳಿಗೆ 4.17 ಲಕ್ಷ ಶೌಚಗೃಹಗಳನ್ನು ನಿರ್ಮಿಸುವ ಮೂಲಕ ಬಾಲಕಿಯರಿಗೆ ಗೌರವ ಸಲ್ಲಿಸಲಾಗಿದೆ ಎಂದು ಬಿಜೆಪಿ ನಾಯಕಿಯರು ಹೇಳಿದರು.

ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಮಲ್ಲಮ್ಮ ಜೋಗೂರ, ಜಿಪಂ ಸದಸ್ಯೆ ಜ್ಯೋತಿ ಅಸ್ಕಿ, ದಾನಮ್ಮ ಅಂಗಡಿ, ಪ್ರಭಾವತಿ ಪಾಟೀಲ, ಶ್ರೀದೇವಿ ಐಹೊಳಿ, ವಿಜಯಲಕ್ಷ್ಮೀ ಹಮೀದಖಾನೆ, ರಜನಿ ಸಂಬಣ್ಣಿ, ಭಾರತಿ ಭುಯ್ಯರ, ಭಾರತಿ ಶಿವಣಗಿ, ಸೌಮ್ಯ ಕಲ್ಲೂರ, ವಿಪ ಸದಸ್ಯ ಅರುಣ ಶಹಾಪುರ, ಸಂಗರಾಜ ದೇಸಾಯಿ ಇತರರಿದ್ದರು.