ದಕ್ಷ ಆಡಳಿತಗಾರ, ಸ್ಪಂದನಶೀಲ ಪ್ರಧಾನಿಯಾಗಿ ಗಮನ ಸೆಳೆದಿರುವ ನರೇಂದ್ರ ದಾಮೋದರದಾಸ್ ಮೋದಿ ಮೂರನೇ ಅವಧಿಯ 100 ದಿನಗಳನ್ನು ನಿನ್ನೆಯಷ್ಟೇ ಯಶಸ್ವಿಯಾಗಿ ಪೂರೈಸಿದ್ದು, ಇಂದು (ಸೆ.17) 74ನೇ ಜನ್ಮದಿನದ ಸಂಭ್ರಮದಲ್ಲಿದ್ದಾರೆ. (ಜನನ: 1950, ಸೆ.17) ವಿಶಿಷ್ಟ ವ್ಯಕ್ತಿತ್ವದ ಮೋದಿ ಸವಾಲುಗಳನ್ನು ಪರಿಹರಿಸುವ ಬಗೆಯೂ ಅನನ್ಯ. ದಣಿವರಿಯದೆ ದಿನಕ್ಕೆ 18 ಗಂಟೆ ಕೆಲಸ ಮಾಡುವ ಅವರು ಸದಾ ಕ್ರಿಯಾಶೀಲ. ನಮೋ ಬದುಕಿನ ಹಾದಿ ಮತ್ತು ಅವರ ಸಾಧನೆಗಳ ಕುರಿತು ಗಣ್ಯರ ಅನಿಸಿಕೆಯನ್ನು ‘ವಿಜಯವಾಣಿ’ ಇಲ್ಲಿ ಕಟ್ಟಿಕೊಟ್ಟಿದೆ.
ಮೋದಿ ಮೊದಲುಗಳು
*ಸತತವಾಗಿ ಮೂರನೇ ಬಾರಿ ಪ್ರಧಾನಿ ಹುದ್ದೆಗೇರಿದ ಮೊದಲ ಕಾಂಗ್ರೆಸ್ಸೇತರ ವ್ಯಕ್ತಿ. 2014ರಲ್ಲಿ ಮೊದಲ ಬಾರಿ ಪೂರ್ಣ ಬಹುಮತದೊಂದಿಗೆ ಮೊದಲ ಕಾಂಗ್ರೆಸ್ಸೇತರ ಸರ್ಕಾರ ರಚಿಸಿದ ಹೆಗ್ಗಳಿಕೆ.
*2018ರಲ್ಲಿ ಮೊದಲ ಬಾರಿಗೆ ದೇಶದ 21 ರಾಜ್ಯಗಳಲ್ಲಿ ಬಿಜೆಪಿ/ಎನ್ಡಿಎ ಸರ್ಕಾರ.
*2019ರಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ಸೇತರ ಪಕ್ಷಕ್ಕೆ 300ಕ್ಕಿಂತ ಅಧಿಕ ಲೋಕಸಭಾ ಸೀಟು.
*2014ರಿಂದ ಈವರೆಗೆ ದೇಶದಲ್ಲಿ 68 ವಿಧಾನಸಭೆ ಚುನಾವಣೆಗಳು ನಡೆದಿವೆ. ಈ ಪೈಕಿ ಶೇಕಡ 78 ಅಂದರೆ 53 ಚುನಾವಣೆ ಮೋದಿ ವರ್ಚಸ್ಸಿನ ಮೇಲೆಯೇ ಬಿಜೆಪಿ ಸ್ಪರ್ಧಿಸಿತು.
*2024ರ ಲೋಕಸಭಾ ಚುನಾವಣೆಗಾಗಿ ಬಿಜೆಪಿ ಹೊರಡಿಸಿದ ಪ್ರಣಾಳಿಕೆಗೆ ‘ಮೋದಿ ಗ್ಯಾರಂಟಿ’ ಎಂದು ಹೆಸರಿಸಲಾಯಿತು. ಪ್ರತಿ ಆಶ್ವಾಸನೆಯನ್ನೂ ‘ಮೋದಿ ಗ್ಯಾರಂಟಿ’ ಎಂದು ಕರೆಯಲಾಯಿತು. ಪೂರ್ತಿ ಚುನಾವಣೆಯನ್ನು ಬಿಜೆಪಿ ಮೋದಿ ಹೆಸರಿನಲ್ಲೇ ಸ್ಪರ್ಧಿಸಿತು.
ಪ್ರಮುಖ ನಿರ್ಧಾರಗಳು
ನೋಟು ಅಮಾನ್ಯೀಕರಣ: ಅಧಿಕ ಮುಖಬೆಲೆಯ ಹಳೆಯ (ರೂ; 1000,-ರೂ; 500) ನೋಟುಗಳ ಅಮಾನ್ಯೀಕರಣವನ್ನು 2016ರ ನವೆಂಬರ್ 8ರಂದು ಮೋದಿ ಘೋಷಿಸಿದರು. ಆರಂಭದಲ್ಲಿ ಶ್ರೀಸಾಮಾನ್ಯರಿಗೆ ಕೊಂಚ ಅಡಚಣೆಯಾದರೂ, ನಕಲಿ ನೋಟು ಹಾವಳಿ, ಉಗ್ರರಿಗೆ ಆರ್ಥಿಕ ನೆರವು ಮುಖ್ಯವಾಗಿ ಭ್ರಷ್ಟಾಚಾರ, ಕಾಳಧನಕ್ಕೆ ಕಡಿವಾಣ ತರಲು ಇದು ಸಹಕಾರಿ ಆಯಿತು.
ಆರ್ಥಿಕ ಅಪರಾಧಿ ಕಾಯ್ದೆ: ದೇಶದ ಬ್ಯಾಂಕ್ಗಳಿಗೆ ದೊಡ್ಡ ಪ್ರಮಾಣದಲ್ಲಿ ವಂಚಿಸಿ ವಿದೇಶಕ್ಕೆ ಪರಾರಿಯಾಗುವವರನ್ನು ಅಪರಾಧಿ ಎಂದು ಘೋಷಿಸುವ ಕಾಯ್ದೆಯನ್ನು 2018ರ ಏಪ್ರಿಲ್ನಲ್ಲಿ ರೂಪಿಸಲಾಯಿತು. ಇದರಿಂದ ಆರ್ಥಿಕ ವಂಚಕರ ಆಸ್ತಿ ಜಪ್ತಿ, ವಿಲೇವಾರಿ ಮಾಡಿ ಸಾಲ ಚುಕ್ತಾ ಮಾಡಿಕೊಳ್ಳುವ ಕಾನೂನು ಜಾರಿಗೆ ಬಂತು.
ಗ್ರಾಮೀಣ ವಿದ್ಯುದೀಕರಣ ಯೋಜನೆ: ಸ್ವಾತಂತ್ರ್ಯ ಬಂದು ಏಳು ದಶಕಗಳಾದರೂ ವಿದ್ಯುತ್ತನ್ನೇ ಕಾರಣ ಸಾವಿರಾರು ಗ್ರಾಮಗಳಿಗೆ ಪಂಡಿತ್ ದೀನದಯಾಳ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆಯಡಿ ವಿದ್ಯುತ್ ಸಂಪರ್ಕ ಕಲ್ಪಿಸಲಾಯಿತು.
ಆರೋಗ್ಯ ಭಾಗ್ಯ: 70 ವರ್ಷ ಹಾಗೂ ಅದಕ್ಕಿಂತ ಹಿರಿಯ ನಾಗರಿಕರಿಗೆ ‘ಆಯುಷ್ಮಾನ್ ಭಾರತ್’ ಆರೋಗ್ಯ ವಿಮೆ ಯೋಜನೆಯಡಿ 5 ಲಕ್ಷ ರೂ.ಗಳವರೆಗೆ ಉಚಿತ ಚಿಕಿತ್ಸೆ.
ದೇಶದ ಪ್ರಗತಿಗೆ ಸರ್ವ ಯತ್ನ
ನಮ್ಮ ಸರ್ಕಾರವು ಮೂರನೇ ಅವಧಿಯ ಮೊದಲ 100 ದಿನಗಳಲ್ಲಿ ದೇಶದ ಕ್ಷಿಪ್ರ ಪ್ರಗತಿಗಾಗಿ ಪ್ರತಿಯೊಂದು ರಂಗ ಹಾಗೂ ವಿಷಯಗಳಲ್ಲಿ ಕೆಲಸ ಮಾಡಿದೆ. 21ನೇ ಶತಮಾನಕ್ಕೆ ಭಾರತ ಉತ್ತಮ ಅವಕಾಶದ ತಾಣ (ಬೆಸ್ಟ್ ಬೆಟ್) ಎಂಬುದು ಭಾರತೀಯರು ಮಾತ್ರವಲ್ಲದೆ ಇಡೀ ಜಗತ್ತಿನ ಭಾವನೆಯಾಗಿದೆ. ಸರ್ಕಾರದ 100 ದಿನಗಳ ಅವಧಿಯಲ್ಲಿ ನಮ್ಮ ಆದ್ಯತೆಗಳು, ವೇಗ ಮತ್ತು ಪ್ರಮಾಣವನ್ನು ನೀವೆಲ್ಲರೂ ಗಮನಿಸಬಹುದಾಗಿದೆ. ಭಾರತದ ವೈವಿಧ್ಯ, ಸಾಮರ್ಥ್ಯ, ಅವಕಾಶ ಮತ್ತು ಕಾರ್ಯಕ್ಷಮತೆಗಳು ವಿಶಿಷ್ಟವಾಗಿವೆ. ಜಾಗತಿಕ ಅನ್ವಯಕ್ಕೆ ಭಾರತೀಯ ಪರಿಹಾರಗಳು ಎಂದು ನಾನು ಹೇಳಲು ಅದೇ ಕಾರಣವಾಗಿದೆ. ಭಾರತ ಮುಂದಿನ 1,000 ವರ್ಷಗಳ ಅಭಿವೃದ್ಧಿಗೆ ಅಡಿಪಾಯ ಸಿದ್ಧಪಡಿಸುತ್ತಿದೆ. ಅಗ್ರ ಸ್ಥಾನವನ್ನು ತಲುಪುವುದು ಮಾತ್ರವಲ್ಲದೆ ಅದನ್ನು ಉಳಿಸಿಕೊಳ್ಳುವ ಮೇಲೆಯೂ ಗಮನವನ್ನು ಕೇಂದ್ರೀಕರಿಸಲಾಗುತ್ತಿದೆ. ಹಸಿರು ಭವಿಷ್ಯ ಮತ್ತು ಶೂನ್ಯ ಕಾರ್ಬನ್ ನಮಗೆ ಕೇವಲ ರೋಚಕ ಪದಗಳಲ್ಲ. ಅವುಗಳು ದೇಶದ ಅವಶ್ಯಕತೆಗಳಾಗಿದ್ದು ಅದನ್ನು ಸಾಧಿಸಲು ದೇಶ ಬದ್ಧವಾಗಿದೆ.
| ನರೇಂದ್ರ ಮೋದಿ ಪ್ರಧಾನ ಮಂತ್ರಿ
(ಗಾಂಧಿನಗರದಲ್ಲಿ ಆಯೋಜನೆಗೊಂಡಿರುವ ನಾಲ್ಕನೇ ಜಾಗತಿಕ ನವೀಕರಿಸಬಹುದಾದ ಇಂಧನ ಹೂಡಿಕೆದಾರರ ಸಮಾವೇಶ ಮತ್ತು ಎಕ್ಸ್ಪೋ (ರೀ-ಇನ್ವೆಸ್ಟ್-2024) ಸಮಾವೇಶದಲ್ಲಿ ಸೋಮವಾರ ಮಾತನಾಡುತ್ತ ಹೇಳಿದ್ದು)
ಜನಧನ್ ಕ್ರಾಂತಿ: ದೇಶದ ಆರ್ಥಿಕ ಪ್ರಗತಿಗೆ ದೊಡ್ಡ ಪ್ರಮಾಣದ ಕೊಡುಗೆ ನೀಡಿರುವ ಪ್ರಧಾನಮಂತ್ರಿ ಜನಧನ್ ಯೋಜನೆಗೆ ಈಗ 10 ವರ್ಷಗಳು ಸಂದಿವೆ. ಮೋದಿ ಅವರು 2014ರ ಆಗಸ್ಟ್ 28ರಂದು ಘೊಷಿಸಿದ ಬ್ಯಾಂಕಿಂಗ್ ಕ್ಷೇತ್ರದ ಯೋಜನೆ ಇದು. 2024ರ ಆಗಸ್ಟ್ ವರೆಗೆ ಒಟ್ಟು 53 ಕೋಟಿ ಜನಧನ್ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ. ಈ ಖಾತೆಗಳ ಒಟ್ಟಾರೆ ಠೇವಣಿ 2.31 ಲಕ್ಷ ಕೋಟಿ ರೂ.ಗಳಿಗೂ ಅಧಿಕ.
ಸೋಶಿಯಲ್ ಮೀಡಿಯಾದಲ್ಲೂ ಕಿಂಗ್: ಇನ್ಸ್ಟಾಗ್ರಾಂ ಮತ್ತು ಯೂಟ್ಯೂಬ್ನಲ್ಲಿ ನರೇಂದ್ರ ಮೋದಿ ಜಗತ್ತಿನ ಅತ್ಯಂತ ಜನಪ್ರಿಯ ನಾಯಕರಾಗಿದ್ದರೆ, ಎಕ್ಸ್ನಲ್ಲಿ 2ನೇ ಜನಪ್ರಿಯ ನಾಯಕರು. ಇನ್ಸ್ಟಾಗ್ರಾಂನಲ್ಲಿ 9.1 ಕೋಟಿ, ಫೇಸ್ಬುಕ್ನಲ್ಲಿ 4.9 ಕೋಟಿ, ಯೂಟ್ಯೂಬ್ ನಲ್ಲಿ 2.5 ಕೋಟಿ ಹಾಗೂ ‘ಎಕ್ಸ್’ನಲ್ಲಿ 10.1 ಕೋಟಿ ಫಾಲೋವರ್ಸ್ಗಳನ್ನು (ಎಕ್ಸ್ನಲ್ಲಿ ಒಬಾಮ ಮೊದಲ ಸ್ಥಾನದಲ್ಲಿದ್ದಾರೆ) ಹೊಂದಿದ್ದಾರೆ.
ಬಿಜೆಪಿ ವಿಶ್ವದ ಅತಿದೊಡ್ಡ ಪಕ್ಷ: ನರೇಂದ್ರ ಮೋದಿ ಅವಧಿಯಲ್ಲಿ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ವಿಶ್ವದ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಬಿಜೆಪಿ 18 ಕೋಟಿ ಸದಸ್ಯರನ್ನು ಹೊಂದುವ ಮೂಲಕ ಚೀನಾದ ಕಮ್ಯುನಿಸ್ಟ್ ಪಾರ್ಟಿಯನ್ನು ಹಿಂದಿಕ್ಕಿದೆ (9.9 ಕೋಟಿ ಸದಸ್ಯರು). ದೇಶಾದ್ಯಂತ ಬಿಜೆಪಿ 563 ಕಾರ್ಯಾಲಯಗಳನ್ನು ಹೊಂದಿದೆ.
3ನೇ ಅವಧಿಯಲ್ಲಿರುವ ಸವಾಲುಗಳು
* ಮಿತ್ರಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಆಡಳಿತ ನಡೆಸುವುದು.
*ಲೋಕಸಭಾ ಚುನಾವಣೆಯ ವೇಳೆ ಪ್ರಣಾಳಿಕೆಯಲ್ಲಿ ನೀಡಿದ ಆಶ್ವಾಸನೆಗಳನ್ನು ಈಡೇರಿಸುವುದು.
*‘ಒಂದು ರಾಷ್ಟ್ರ ಒಂದು ಚುನಾವಣೆ’ ಮತ್ತು ಸಮಾನ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುವುದು.
*ಉದ್ಯೋಗಸೃಷ್ಟಿಗೆ ಒತ್ತು ನೀಡುವುದು.
ಪ್ರಮುಖ ಸಾಧನೆಗಳು
*ತೆರಿಗೆ ವ್ಯವಸ್ಥೆಯಲ್ಲಿ ಮಹತ್ತರ ಸುಧಾರಣೆ ನಿಟ್ಟಿನಲ್ಲಿ 2017ರ ಜುಲೈ 1ರಂದು ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಜಾರಿ.
*ಜಮ್ಮು-ಕಾಶ್ಮೀರಕ್ಕೆ ಪ್ರತ್ಯೇಕ ಸಂವಿಧಾನ, ಪ್ರತ್ಯೇಕ ಧ್ವಜ ಕಲ್ಪಿಸಿದ್ದ ಸಂವಿಧಾನದ 370ನೇ ವಿಧಿಯನ್ನು ಮತ್ತು ಅದರ ಮೂಲಕ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು 2019ರಲ್ಲಿ ಹಿಂಪಡೆಯಲಾಯಿತು. ಆ ಮೂಲಕ ಜಮ್ಮು-ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂಬ ಸ್ಪಷ್ಟ ಸಂದೇಶ ಸಾರಿ, ಅಲ್ಲಿ ಅಭಿವೃದ್ಧಿಯ ಹೊಸ ಪಯಣಕ್ಕೆ ನಾಂದಿ ಹಾಡಲಾಗಿದೆ. ಭಯೋತ್ಪಾದನಾ ಕೃತ್ಯಗಳಿಗೆ ಕಡಿವಾಣ ಬಿದ್ದಿದೆ.
*ಅಯೋಧ್ಯೆಯ ಶ್ರೀರಾಮನ ಜನ್ಮಸ್ಥಾನದಲ್ಲಿ ಶ್ರೀರಾಮನ ಮಂದಿರವನ್ನು ನಿರ್ವಿುಸುವುದು ಐದು ಶತಮಾನಗಳ ಕನಸಾಗಿತ್ತು. 2020ರಲ್ಲಿ ಬಾಲರಾಮನ ಮಂದಿರ ನಿರ್ವಣಕ್ಕೆ ಶಿಲಾನ್ಯಾಸ ನೆರವೇರಿಸಿದ ಮೋದಿ, 2024ರ ಜನವರಿ 22ರಂದು ಮಂದಿರವನ್ನು ಉದ್ಘಾಟಿಸುವ ಮೂಲಕ ಶತಮಾನಗಳ ಕನಸನ್ನು ನನಸಾಗಿಸಿದರು.
*ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜಾರಿ.
*ತ್ರಿವಳಿ ತಲಾಖ್ ರದ್ದು
——————————————————————————————————————-
ಕನಸುಗಳನ್ನು ನನಸಾಗಿಸಿದರು
| ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷರು
ಪ್ರಧಾನಿ ನರೇಂದ್ರ ಮೋದಿ. ಅವರು, ಸಾಮಾನ್ಯ ರಾಜಕಾರಣಿಗಳಂತೆ ಕನಸು ಗಳನ್ನು ಬಿತ್ತಲಿಲ್ಲ. ಬದಲಿಗೆ, ಕನಸುಗಳನ್ನು ನನಸಾಗಿಸುವ ನಿಟ್ಟಿನಲ್ಲಿ ದುಡಿದರು. ತಾವೊಬ್ಬರೇ ದುಡಿಯಲಿಲ್ಲ. ಸಮಾಜ ಜೀವನದ ಎಲ್ಲ ಸಹವರ್ತಿಗಳೂ ದುಡಿಯಲು ಪ್ರೇರಣೆಯಾದರು.
ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಧ್ಯೇಯವನ್ನಾಗಿಸಿಕೊಂಡು ಜಾರಿಗೆ ತಂದಿರುವ ಆಯುಷ್ಮಾನ್ ಭಾರತ್, ಎಲ್ಲ ಭಾರತೀಯರೂ ಬ್ಯಾಂಕ್ ಖಾತೆ ಹೊಂದಿರಬೇಕು ಎಂಬ ಗುರಿಯೊಂದಿಗೆ ಆರಂಭವಾದ ಜನಧನ್, ಬಡ ಜನರಿಗೆ ಉಚಿತ ಅಡುಗೆ ಅನಿಲ ಸಂಪರ್ಕ ಒದಗಿಸಿರುವ ಉಜ್ವಲ, ಪ್ರಧಾನ ಮಂತ್ರಿ ಆವಾಸ್ ಯೋಜನೆ, ಕೃಷಿಕರಿಗೆ ಕಿಸಾನ್ ಸಮ್ಮಾನ್, ಸ್ವಚ್ಛ ಭಾರತ ಮಿಷನ್, ಮೇಕ್ ಇನ್ ಇಂಡಿಯಾ ಎಲ್ಲವೂ ಮೋದಿಯವರ ಕೊಡುಗೆಗಳೇ. ಪ್ರಧಾನಿ ಮೋದಿ ಜನಪರ ಕಾಯಿದೆಗಳನ್ನು ರೂಪಿಸಿ, ಕಾರ್ಯಕ್ರಮ ನೀಡುವ ಮಟ್ಟಕ್ಕೆ ಸೀಮಿತಗೊಳ್ಳಲಿಲ್ಲ. ಬದಲಿಗೆ ಈ ದೇಶದ ಕೋಟಿ ಕೋಟಿ ಜನ ಕೂಡ ತಮ್ಮ ಬದುಕಿನ ಕುರಿತು ಒಳ್ಳೆಯ ಕನಸು ಕಾಣುವಂತೆ ಹಾಗೂ ಅದನ್ನು ನನಸಾಗಿಸುವಂತೆ ಪ್ರೇರಣೆಯಾಗಿ ನಿಂತರು.
ದೇಶದಲ್ಲಿ 35 ವರ್ಷದೊಳಗಿನ ಯುವಕರ ಸಂಖ್ಯೆ 60 ಕೋಟಿಯಷ್ಟಿದೆ. ಈ ಯುವಜನರ ಕನಸು, ಆಕಾಂಕ್ಷೆಗೆ ನೀರೆರೆಯುತ್ತಿರುವುದರಿಂದ, ಬಹುತೇಕ ಯುವಜನರು ಇಂದು ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಮುಂದಕ್ಕೆ ಬರುತ್ತಿದ್ದಾರೆ. ಇದಕ್ಕೆ ಮೋದಿ ಕಟ್ಟಿಕೊಟ್ಟ ಕನಸು ಕಾರಣ.
ಯಾವುದೇ ರಾಜಕೀಯ ಹಿನ್ನೆಲೆ ಇಲ್ಲದ ಕುಟುಂಬಗಳಿಂದ ಒಂದು ಲಕ್ಷ ಯುವಕರನ್ನು ರಾಜಕೀಯ ಕ್ಷೇತ್ರಕ್ಕೆ ಕರೆತರುವುದಾಗಿ ಮೋದಿ ಅವರು ಘೊಷಿಸಿದ್ದಾರೆ. ರಾಜಕೀಯ ಕ್ಷೇತ್ರಕ್ಕೆ ಹೊಸ ಮುಖಗಳು ಬೇಕು ಎಂದು ಪ್ರತಿಪಾದಿಸಿದ್ದಾರೆ. ಹೀಗೆ ಹೇಳಲು ಕೂಡ ಸಮರ್ಥ ನಾಯಕತ್ವವೇ ಬೇಕು. ಯಾವ ರಾಜಕೀಯ ಹಿನ್ನೆಲೆ, ಪ್ರಭಾವ ಇಲ್ಲದೆ ವಿಶ್ವವ್ಯಾಪಿ ಬೆಳೆದು ನಿಂತಿರುವ ಮೋದಿ ನಾಯಕತ್ವವೇ, ರಾಜಕೀಯಕ್ಕೆ ಬರಲು ಉದ್ದೇಶಿಸಿರುವ ಹೊಸ ತಲೆಮಾರಿಗೆ ಹೊಸ ಭರವಸೆ ಆಗಿದ್ದಾರೆ.
ನರೇಂದ್ರ ಮೋದಿ ಅವರ ವಿದೇಶಾಂಗ ನೀತಿ ಈಗಂತೂ ಜಗದ್ವಿಖ್ಯಾತ. ರಷ್ಯಾ-ಯೂಕ್ರೇನ್ ನಡುವಿನ ಸಮರವನ್ನು ನಿಲ್ಲಿಸಲು ಮೋದಿ ನಾಯಕತ್ವವೇ ಬೇಕು ಎಂದು ಅಮೆರಿಕ-ರಷ್ಯಾದಂಥ ದೇಶಗಳು ಬಯಸುವ ಸ್ಥಿತಿಗೆ ಬಂದಿವೆ. ಮೋದಿ ಯಾವುದೇ ದೇಶಕ್ಕೆ ಹೋದರೂ, ಅಲ್ಲಿನ ಅನಿವಾಸಿ ಭಾರತೀಯರು ಸಾವಿರಾರು ಸಂಖ್ಯೆಯಲ್ಲಿ ಸೇರುತ್ತಾರೆ ಮತ್ತು ದೊಡ್ಡ ಹಬ್ಬವನ್ನೇ ಮಾಡುತ್ತಾರೆ. ಯಾವುದೇ ಪೂರ್ವಗ್ರಹವಿಲ್ಲದೆ ಅವರ ಸಂಭ್ರಮವನ್ನು, ಅವರ ಮಾತುಗಳನ್ನು ಕೇಳಿ ಅವರೆಲ್ಲರೂ ದೂರದ ನೆಲದಲ್ಲಿ ‘ನಾವು ಭಾರತೀಯರು’ ಎಂದು ಹೆಮ್ಮೆ ಪಡುತ್ತಿದ್ದಾರೆ ಮತ್ತು ಅದಕ್ಕೆ ನರೇಂದ್ರ ಮೋದಿ ಅವರೇ ಕಾರಣ ಎನ್ನುತ್ತಿದ್ದಾರೆ.
ಮಹಾನಾಯಕರಾದ ಮೋದಿ ಅವರು ಮಾತ್ರ 2047ರ ವೇಳೆಗೆ ಭಾರತ ಹೇಗಿರಬೇಕು ಎಂದು ಕನಸು ಕಾಣುತ್ತ, ಅದಕ್ಕಾಗಿ ದೇಶವನ್ನು ಸಜ್ಜುಗೊಳಿಸುತ್ತಿರುತ್ತಾರೆ. ಮುಂದಿನ ಒಲಿಂಪಿಕ್ಸ್ ಆತಿಥ್ಯವನ್ನು ಭಾರತ ವಹಿಸಿಕೊಂಡರೆ ಹೇಗೆ ಎಂದು ಯೋಚಿಸುತ್ತಿದ್ದಾರೆ. ಭಾರತದ ಹಿರಿಮೆ-ಗರಿಮೆಯ ಪರಂಪರೆಯನ್ನು ಹೇಳುತ್ತಲೇ, ವರ್ತಮಾನ-ಭವಿಷ್ಯತ್ನಲ್ಲೂ ಭಾರತದ ಬಗ್ಗೆ ಭವ್ಯ ಕನಸನ್ನು ಬಿತ್ತಿ, ಅದನ್ನು ನನಸಾಗಿಸುತ್ತಿರುವ ಪ್ರೀತಿಯ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜನುಮ ದಿನದ ಶುಭಾಶಯಗಳು.
———————————————————————————————————-
ವಿಶ್ವಾಸಾರ್ಹ ನಾಯಕ
| ಆರ್. ಅಶೋಕ್, ವಿಧಾನಸಭೆಯ ಪ್ರತಿಪಕ್ಷ ನಾಯಕರು
ಕೇರಳ ರಾಜ್ಯದ ವಯ ನಾಡಿನಲ್ಲಿ ಭೂಕುಸಿತದಿಂದ ಅನೇಕ ಅಮಾಯಕರು ತಮ್ಮವರನ್ನು ಕಳೆದು ಕೊಂಡರು. ಸಂತ್ರಸ್ತರ ಕಷ್ಟ ಆಲಿಸಲು ಆಸ್ಪತ್ರೆಗೆ ಹೋಗಿದ್ದ ಪ್ರಧಾನಿ ನರೇಂದ್ರ ಮೋದಿಯವರನ್ನು ಓರ್ವ ಮಗು ಆಪ್ತವಾಗಿ ಆಲಿಂಗಿಸಿತು. ಮೋದಿ ಕೂಡ ಮಗುವಿನ ಜೊತೆ ಕೆಲವು ಕ್ಷಣ ಕಳೆದರು. 140 ಕೋಟಿ ಜನರ ಬದುಕು ಕಟ್ಟಿಕೊಡುವ ಹುದ್ದೆಯಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಜನರೊಂದಿಗೆ ಹೊತ್ತು ಕಳೆಯುವಾಗ ಮಾತ್ರ ಸಾಮಾನ್ಯರಾಗಿಬಿಡುತ್ತಾರೆ. ಕರ್ತವ್ಯಪ್ರಜ್ಞೆ ರೂಢಿಸಿಕೊಂಡು ದಿನಕ್ಕೆ 18-19 ಗಂಟೆ ದುಡಿಯುವ ಅವರು, ಸಾಮಾನ್ಯ ಜನರ ನಡುವೆ ಬಂದಾಗ ಮಾತ್ರ ತೀರಾ ಸಾಮಾನ್ಯರು. ಇದು ಅವರ ವ್ಯಕ್ತಿತ್ವದ ವೈಶಿಷ್ಟ್ಯ. ಅಮೆರಿಕ ಸೇರಿದಂತೆ ಎಲ್ಲ ದೇಶಗಳ ಅಧ್ಯಕ್ಷರು ಸ್ನೇಹ ಬೆಳೆಸಲು ಬಯಸುವ ದೃಢ ವ್ಯಕ್ತಿತ್ವ ರೂಪುಗೊಳ್ಳಲು, ಅವರ ಈ ಸರಳತೆಯೇ ಕಾರಣ.
ಸತತ ಮೂರು ಬಾರಿ ಭಾರತೀಯರ ಹೃದಯ ಗೆದ್ದ ತ್ರಿವಿಕ್ರಮ ನಾಯಕ ಮೋದಿ ಈಗ 74ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಅವರ ದೇಹಕ್ಕಾಗಲೀ, ಮನಸ್ಸಿಗಾಗಲೀ ವಯಸ್ಸಾದಂತೆ ಎಂದೂ ಕಾಣುವುದಿಲ್ಲ. 2014ರಲ್ಲಿ ಮೊದಲ ಬಾರಿಗೆ ಪ್ರಧಾನಿ ಹುದ್ದೆಗೇರಿದಾಗ ಅವರಲ್ಲಿ ಪುಟಿಯುತ್ತಿದ್ದ ಹುರುಪು, ದೇಶಕ್ಕಾಗಿ ಏನಾದರೂ ಮಾಡಲೇಬೇಕೆಂಬ ತುಡಿತ ಈಗಲೂ ಇದೆ. ವಿರೋಧ ಪಕ್ಷದವರು ಎಷ್ಟೇ ಕಟುಟೀಕೆ ಹಾಗೂ ಸುಳ್ಳು ಆರೋಪ ಮಾಡಿದರೂ, ಜನರು ಅದನ್ನು ನಂಬದಿರುವ ಮಟ್ಟಿಗೆ ಮೋದಿ ವಿಶ್ವಾಸಾರ್ಹವಾಗಿ ಬೆಳೆದಿದ್ದಾರೆ. ವಿಶ್ವಾಸಾರ್ಹತೆಯೇ ಅವರ ಜನಪ್ರಿಯತೆಗೆ ಆಧಾರ.
ಪ್ರಧಾನಿ ಮೋದಿಯವರ ಮಾತಿಗೆ ಜನರು ಸದಾ ಮನ್ನಣೆ ನೀಡುತ್ತಾರೆ. ಎಲ್ಪಿಜಿ ಸಿಲಿಂಡರ್ ಸಬ್ಸಿಡಿ ದುಬಾರಿ ಎಂದು ಗೊತ್ತಾದಾಗ, 2015ರ ಮಾರ್ಚ್ ನಲ್ಲಿ ಸಹಾಯಧನ ಬಿಟ್ಟುಕೊಡಲು ಮೋದಿ ಮನವಿ ಮಾಡಿದರು. ಈವರೆಗೆ ಒಟ್ಟು 1.14 ಕೋಟಿ ಜನರು ಸಬ್ಸಿಡಿ ತೊರೆದಿದ್ದಾರೆ! ಕೋವಿಡ್ನಲ್ಲಿ ಆರೋಗ್ಯ ಸಿಬ್ಬಂದಿಗೆ ವಂದನೆ ಸಲ್ಲಿಸಲು, ಚಪ್ಪಾಳೆ ತಟ್ಟಲು ಕರೆ ನೀಡಿದ್ದರು.
ದೀಪಗಳನ್ನು ಬೆಳಗಿ ಎಂದು ಕರೆ ನೀಡಿದಾಗಲೂ ಜನರು ಅದಕ್ಕೆ ಸ್ಪಂದಿಸಿದರು. ಸ್ವಚ್ಛ ಭಾರತ ಯೋಜನೆ ಯನ್ನು ಜನರ ಅಭಿಯಾನವಾಗಿ ಮಾಡಿದ್ದೇ ಪ್ರಧಾನಿ ಮೋದಿ. ಇದೇ ರೀತಿ ಸ್ವಚ್ಛ ತೀರ್ಥ ಅಭಿಯಾನ, ವೋಕಲ್ ಫಾರ್ ಲೋಕಲ್ ಕೂಡ ಜನಪ್ರಿಯವಾಯಿತು. ಅಭಿವೃದ್ಧಿ ಎಂದರೆ ನಾನೊಬ್ಬ ಮಾಡುವುದಲ್ಲ, ಅದು ಜನರನ್ನು ಒಳಗೊಂಡ ಪ್ರಕ್ರಿಯೆ ಎಂಬುದನ್ನು ಪ್ರಧಾನಿ ಮೋದಿ ತೋರಿಸಿದ್ದಾರೆ. ಆದ್ದರಿಂದ ಅವರು ಕೋಟ್ಯಂತರ ಜನರ ಹೃದಯದಲ್ಲಿ ನೆಲೆಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜನ್ಮದಿನದ ಶುಭಾಶಯಗಳು.
ಸರ್ಕಾರಿ ಅಕ್ರಮ ಪತ್ತೆಗೆ ಎಐ!; ಕೇಂದ್ರ ಸರ್ಕಾರದ ಯೋಜನೆಗಳಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ