ಮೋದಿ ಜೀ, ಪಾಕಿಸ್ತಾನಕ್ಕೆ ಲವ್​ ಲೆಟರ್​ ಬರೆಯುವುದನ್ನು ನಿಲ್ಲಿಸಿ: ಕಾಂಗ್ರೆಸ್​ ವ್ಯಂಗ್ಯ

ನವದೆಹಲಿ: ಪಾಕಿಸ್ತಾನದ ರಾಷ್ಟ್ರೀಯ ದಿನಾಚರಣೆಗೆ ಪ್ರಧಾನಿ ಮೋದಿಯವರು ಶುಭ ಹಾರೈಸಿದ್ದಾರೆ ಎಂದು ಪಾಕ್​ ಪ್ರಧಾನಿ ಇಮ್ರಾನ್ ಟ್ವೀಟ್​ ಮಾಡಿದ್ದನ್ನು ಉಲ್ಲೇಖಿಸಿ ಕಾಂಗ್ರೆಸ್​ ಮೋದಿಯವರ ವಿರುದ್ಧ ಟೀಕೆ ಮಾಡಿದೆ. ಪಾಕಿಸ್ತಾನಕ್ಕೆ ಲವ್​ ಲೆಟರ್​ (ಪ್ರೇಮ ಪತ್ರ) ಬರೆಯುವುದನ್ನು ನಿಲ್ಲಿಸಿ ಎಂದು ವ್ಯಂಗ್ಯವಾಡಿದೆ.

ಪಾಕಿಸ್ತಾನಕ್ಕೆ ಶುಭ ಹಾರೈಸಿರುವ ವಿಚಾರವನ್ನು ನರೇಂದ್ರ ಮೋದಿಯವರು ಗುಟ್ಟಾಗಿ ಇಟ್ಟಿದ್ದಾರೆ ಎಂದು ಆರೋಪಿಸಿ ಟ್ವೀಟ್​ ಮಾಡಿರುವ ಕಾಂಗ್ರೆಸ್​ ವಕ್ತಾರ ರಣದೀಪ್​ ಸಿಂಗ್​ ಸರ್ಜೇವಾಲಾ, ಚೌಕಿದಾರ್​ ಅವರು ಪಾಕ್​ ಪ್ರಧಾನಿಗೆ ಶುಭ ಹಾರೈಸಿದ್ದಾರೆ. ಭಯೋತ್ಪಾದನೆ ನಿರ್ಮೂಲನೆ ಬಗ್ಗೆ ಎಲ್ಲಿಯೂ ಉಲ್ಲೇಖಿಸದೆ ವಿಶ್​ ಮಾಡಿದ್ದಾರೆ. ಮೋದಿಯವರು ಸಾಮಾನ್ಯ ಜನರು ಮತ್ತು ಮಾಧ್ಯಮದವರನ್ನು ಗುರಿಯಾಗಿಸಿಕೊಂಡು ನಾಟಕದ ರಾಜಕೀಯವಾಡುತ್ತಿದ್ದಾರೆ ಎಂದಿದ್ದಾರೆ.

ಯುಪಿಎ ಸರ್ಕಾರದ ಅವಧಿಯಲ್ಲಿ ಅಂದಿನ ಪ್ರಧಾನಿ ಮನಮೋಹನ್​ ಸಿಂಗ್​ ಅವರು ಪಾಕಿಸ್ತಾನಕ್ಕೆ ಪತ್ರಗಳನ್ನು ಬರೆಯುತ್ತಾರೆ ಎಂದು ಮೋದಿಯವರು ಟಿವಿ ಚಾನಲ್​ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಟೀಕಿಸಿದ್ದರು. ಪಾಕ್​ಗೆ ಲವ್​ ಲೆಟರ್​ಗಳನ್ನು ಬರೆಯಬಾರದು. ಆ ದೇಶಕ್ಕೆ ಅರ್ಥವಾಗುವ ಭಾಷೆಯಲ್ಲೇ ಉತ್ತರಿಸಬೇಕು ಎಂದು ಹೇಳಿದ್ದರು. ಈಗ ಮೋದಿ ಮಾಡುತ್ತಿರುವುದೇನು? ಮೋದಿ ಜೀ ನೀವು ಪಾಕ್​ಗೆ ಪ್ರೇಮ ಪತ್ರಬರೆಯುವುದನ್ನು ನಿಲ್ಲಿಸಿ ಎಂದು ವ್ಯಂಗ್ಯವಾಡಿದ ಸರ್ಜೇವಾಲಾ ಆ ವಿಡಿಯೋವನ್ನೂ ಶೇರ್​ ಮಾಡಿದ್ದಾರೆ.

ಪಾಕ್​ ರಾಷ್ಟ್ರೀಯ ದಿನಾಚರಣೆಗೆ ಪ್ರಧಾನಿ ಮೋದಿ ಶುಭ ಹಾರೈಸಿದ್ದಾರೆ ಎಂದು ಪಾಕ್​ ಪ್ರಧಾನಿ ಇಮ್ರಾನ್​ ಖಾನ್​ ನಿನ್ನೆ ಟ್ವೀಟ್​ ಮಾಡಿದ್ದರು.