ಮಂಗಳೂರು ಜೋಶ್​ಗೆ ಮೋದಿ ಫುಲ್​ಖುಷ್

ಮಂಗಳೂರು: ಕರ್ನಾಟಕದಲ್ಲಿ ನಡೆದ ರ್ಯಾಲಿಗಳ ಪೈಕಿ ಮಂಗಳೂರು ಸಮಾವೇಶದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಫುಲ್ ಖುಷ್ ಆಗಿದ್ದಾರೆ. ಸಮಾವೇಶಕ್ಕೆ ಸೇರಿದ್ದ ಜನರ ಬಗ್ಗೆ ಟ್ವಿಟ್ಟರ್ ಖಾತೆಯಲ್ಲಿ ಮೋದಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಸಮಾವೇಶ ಮುಗಿದು ತೆರಳುವ ವೇಳೆ ಹಂಪನಕಟ್ಟೆ ಬಳಿ ಇಕ್ಕೆಲಗಳಲ್ಲೂ ಸೇರಿದ್ದ ಅಭಿಮಾನಿಗಳಿಗಾಗಿ ಶಿಷ್ಟಾಚಾರವನ್ನೂ ಕಡೆಗಣಿಸಿ ಕಾರಿನ ಬಾಗಿಲು ತೆರೆದು ಬಾಗಿಲಲ್ಲೇ ನಿಂತು ಕಾರು ಸಾಗುವಾಗಲೂ ಜನರಿಗೆ ಕೈ ಬೀಸಿ ಖುಷಿಪಟ್ಟಿದ್ದರು. ಈ ದೃಶ್ಯಗಳು ಶನಿವಾರವೇ ಮೊಬೈಲ್​ಗಳಲ್ಲಿ, ಮಾಧ್ಯಮಗಳಲ್ಲಿ ಹರಿದಾಡಿದರೆ ಸ್ವತಃ ಮೋದಿಯವರ ಜತೆಗಿದ್ದ ಸಿಬ್ಬಂದಿಯೇ ಕಾರಿನೊಳಗಿನಿಂದ ಚಿತ್ರೀಕರಣ ಮಾಡಲಾದ ವಿಡಿಯೋವನ್ನು ತಮ್ಮ ಫೇಸ್​ಬುಕ್ ಖಾತೆಯಲ್ಲೂ ಹರಿಯಬಿಟ್ಟಿರುವುದಕ್ಕೆ ಸಾವಿರಾರು ಕಮೆಂಟ್​ಗಳು ಬಂದಿವೆ. ಭದ್ರತೆಯ ಹೊಣೆ ಹೊತ್ತಿರುವ ಸಿಬ್ಬಂದಿಯ ದೃಷ್ಟಿಯಲ್ಲಿ ಪ್ರಧಾನಿಯವರ ಈ ಕ್ರಮ ಕಳವಳಕಾರಿಯಾದರೂ ಅಭಿಮಾನಿಗಳ ಜೋಶ್ ಕಂಡು ಈ ರೀತಿ ಖುಷಿ ವ್ಯಕ್ತಪಡಿಸಿದ್ದಾರೆ. ದಾರಿಯುದ್ದಕ್ಕೂ ಕಾರಿಗಡ್ಡವಾಗಿರುವ ಅಭಿಮಾನಿಗಳನ್ನು ಭದ್ರತಾ ಸಿಬ್ಬಂದಿ ಬದಿಗೆ ಸರಿಸಿ ಮೋದಿ ಕಾರಿಗೆ ಜಾಗ ಮಾಡಿಕೊಡುತ್ತಿರುವುದು, ಅವರೆಲ್ಲರಿಗೆ ಮೋದಿ ನಗುತ್ತಲೇ ಕೈಯಾಡಿಸಿರುವುದು ವಿಡಿಯೋದಲ್ಲಿದೆ.

ಪ್ರತ್ಯೇಕ ಪ್ರಧಾನಿ ಬಗ್ಗೆ ಕಾಂಗ್ರೆಸ್ ನಿಲುವೇನು?

ಕಠುವಾ: ಜಮ್ಮು ಕಾಶ್ಮೀರದ ಅಭಿವೃದ್ಧಿಗಾಗಿ ಅಬ್ದುಲ್ಲಾ ಹಾಗೂ ಮುಫ್ತಿ ಕುಟುಂಬಗಳನ್ನು ಅಧಿಕಾರದಿಂದ ದೂರವಿಡಬೇಕಿದೆ. ಈ ಕುಟುಂಬಗಳು ಕಾಶ್ಮೀರದ ಮೂರು ತಲೆಮಾರುಗಳ ಬದುಕನ್ನು ನಾಶಪಡಿಸಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಉಧಮ್ುರದಿಂದ ಮರು ಆಯ್ಕೆ ಬಯಸಿರುವ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಪರ ಪ್ರಚಾರ ನಡೆಸಿದ ಮೋದಿ, ತಮ್ಮ ಕುಟುಂಬದವರನ್ನೆಲ್ಲ ಕಣಕ್ಕಿಳಿಸಿದರೂ, ಮೋದಿ ವಿರುದ್ಧ ಎಷ್ಟೇ ಹರಿಹಾಯ್ದರೂ, ದೇಶವನ್ನು ಪ್ರತ್ಯೇಕಿಸುವುದು ಇವರಿಗೆ ಸಾಧ್ಯವಿಲ್ಲ. ಜಮ್ಮು ಕಾಶ್ಮೀರಕ್ಕೆ ಪ್ರತ್ಯೇಕ ಪ್ರಧಾನಿ ಬಯಸುವವವರ ಜತೆ ಮೈತ್ರಿ ಹೊಂದಿರುವ ಕಾಂಗ್ರೆಸ್ ತನ್ನ ನಿಲುವು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.

ಅಮರಿಂದರ್​ಗೆ ಕುಟುಂಬ ನಿಷ್ಠೆ

ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್​ಗೆ ದೇಶಭಕ್ತಿಗಿಂತಲೂ ಕುಟುಂಬ ನಿಷ್ಠೆ ಹೆಚ್ಚಾಗಿದೆ. ಜಲಿಯನ್​ವಾಲಾ ಬಾಗ್ ಹತ್ಯಾಕಾಂಡದ ಹುತಾತ್ಮರಿಗೆ ಗೌರವ ಸಲ್ಲಿಸಲು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಜತೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದೆ, ರಾಹುಲ್ ಗಾಂಧಿ ಜತೆ ಅಮರಿಂದರ್ ಸಿಂಗ್ ಅಲ್ಲಿಗೆ ತೆರಳಿದ್ದರು ಎಂದು ಟೀಕಿಸಿದರು.

ಕಾಶ್ಮೀರಿ ಪಂಡಿತರ ವಲಸೆಗೆ ಕೈ ಕಾರಣ

ಅನ್ಯಾಯವನ್ನೇ ಎಸಗಿರುವ ಕಾಂಗ್ರೆಸ್ ‘ಈಗ ನ್ಯಾಯ ಸಿಗಲಿದೆ’ ಎಂದು ಹೇಳುತ್ತಿದೆ. ಆದರೆ, ಕಾಶ್ಮೀರಿ ಪಂಡಿತರು ರಾಜ್ಯವನ್ನು ತೊರೆಯಲು ಕಾಂಗ್ರೆಸ್ ನೀತಿಯೇ ಕಾರಣವಾಗಿದೆ. ಕಾಶ್ಮೀರಿ ಪಂಡಿತರು, ಸಿಖ್ ವಿರುದ್ಧದ ದಂಗೆಯ ಸಂತ್ರಸ್ತರಿಗೆ ನ್ಯಾಯ ಒದಗಿಸುವವರಾರು ಎಂದು ಪ್ರಶ್ನಿಸಿದ ಮೋದಿ, ಮತ ಬ್ಯಾಂಕ್ ಒಲೈಕೆಯಲ್ಲಿ ತೊಡಗಿದ್ದ ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳು ಈ ಅನ್ಯಾಯವನ್ನು ಸರಿಪಡಿಸಲು ಮುಂದಾಗಲಿಲ್ಲ ಎಂದು ದೂರಿದರು. ಕಾಶ್ಮೀರಿ ಪಂಡಿತರನ್ನು ಅವರ ನಾಡಿನಲ್ಲಿ ನೆಲೆಗೊಳಿಸಲು ಬಿಜೆಪಿ ಬದ್ಧವಾಗಿದೆ. ಈ ನಿಟ್ಟಿನಲ್ಲಿ ಕಾರ್ಯಗಳು ಈಗಾಗಲೇ ನಡೆದಿವೆ ಎಂದು ಮೋದಿ ಹೇಳಿದರು.