ಮೋದಿ ಜಗತ್ತು ಮೆಚ್ಚಿನ ನಾಯಕ

ಜಮಖಂಡಿ: ಮಹಾತ್ಮ ಗಾಂಧಿ ದೇಶದ ಸ್ವಾತಂತ್ರೃ ನಂತರ ಕಾಂಗ್ರೆಸ್‌ನ್ನು ವಿಸರ್ಜಿಸಿ ಎಂದಿದ್ದರು. ಆದರೆ, ಕಾಂಗ್ರೆಸ್ ಮುಖಂಡರು ಅಧಿಕಾರಕ್ಕಾಗಿ ಅದನ್ನು ಮಾಡಲಿಲ್ಲ. ಇಂದು ಗಾಂಧೀಜಿ ಅವರ ಮಾತಿನಂತೆ ನರೇಂದ್ರ ಮೋದಿ ಅವರು ಕಾಂಗ್ರೆಸ್‌ನ್ನು ವಿಸರ್ಜಿಸುತಿದ್ದಾರೆ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಹೇಳಿದರು.

ತಾಲೂಕಿನ ಹುನ್ನೂರು ಗ್ರಾಮದಲ್ಲಿ ಜಮಖಂಡಿ ಭಾರತೀಯ ಜನತಾ ಪಕ್ಷ ಬುಧವಾರ ಆಯೋಜಿಸಿದ್ದ ಚುನಾವಣೆ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ ಅವರನ್ನು ಜಮ್ಮು ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ ಯಾರೂ ಜಾತಿವಾದಿ ಎಂದು ಕರೆಯುವುದಿಲ್ಲ. ಆದರೆ, ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಾವು ಕುರುಬರಿಗೆ ಮೂರು ಟಿಕೆಟ್ ಕೊಟ್ಟಿದ್ದೇವೆ ಎನ್ನುತ್ತಾರೆ. ಜೆಡಿಎಸ್ ನಾಯಕರು ಸುಮಲತಾ ಅವರ ಜಾತಿ ಬಗ್ಗೆ ಮಾತನಾಡಿ ಪ್ರಚಾರ ಮಾಡಿಕೊಳ್ಳುತಿದ್ದಾರೆ. ಇಲ್ಲಿ ಯಾರು ಜಾತೀಯತೆ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.

ಜಿಲ್ಲಾಧ್ಯಕ್ಷ, ತೇರದಾಳ ಶಾಸಕ ಸಿದ್ದು ಸವದಿ, ಬಿಜೆಪಿ ಅಭ್ಯರ್ಥಿ ಪಿ.ಸಿ. ಗದ್ದಿಗೌಡರ, ಮಹಾಲಿಂಗಪುರದ ಸ್ಮೀತಾ ಕೌಜಲಗಿ ಮಾತನಾಡಿದರು. ಗ್ರಾಮದ ಮರಾಠ ಸಮಾಜ, ಹಾಲು ಮತ ಸಮಾಜ, ಬೀರಸಿದ್ಧೇಶ್ವರ ಕಮಿಟಿ, ದೇವಾಂಗ ಸಮಿತಿಯ ಪದಾಧಿಕಾರಿಗಳು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಅವರನ್ನು ಸನ್ಮಾನಿಸಿದರು.

ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ, ಮುಖಂಡರಾದ ಜಗದೀಶ ಗುಡಗುಂಟಿ, ಬಿ.ಎಸ್.ಸಿಂಧೂರ, ಡಾ.ವಿಜಯಲಕ್ಷ್ಮೀ ತುಂಗಳ, ಟಿ.ಎ. ಬಿರಾದಾರ, ಮಲ್ಲು ಮಲಘಾಣ, ನಾಗಪ್ಪ ಸನದಿ ಇತರರು ಇದ್ದರು.

Leave a Reply

Your email address will not be published. Required fields are marked *