ಮೋದಿ ಮತ್ತೆ ಪ್ರಧಾನಿಯಾದರೆ ಚುನಾವಣೆ ನಡೆಯಲ್ಲ

ಬಾಗಲಕೋಟೆ: ನರೇಂದ್ರ ಮೋದಿ ಮತ್ತೆ ಈ ದೇಶದ ಪ್ರಧಾನಿಯಾದರೆ ಅವರು ಸರ್ವಾಧಿಕಾರಿ ಹಿಟ್ಲರ್‌ನಂತೆ ಆಗುತ್ತಾರೆ. ಚುನಾವಣೆಯೇ ನಡೆಯಲ್ಲ. ಬೀ ಕೇರ್‌ುಲ್ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಮತದಾರರನ್ನು ಎಚ್ಚರಿಸಿದರು.

ಬಹಿರಂಗ ಮತಯಾಚನೆಯ ಕೊನೆಯ ದಿನ ಭಾನುವಾರ ಬಾಗಲಕೋಟೆ ಜಿಲ್ಲೆಯಲ್ಲಿ ಕಾಂಗ್ರೆಸ್, ಮೈತ್ರಿ ಪಕ್ಷಗಳ ಅಭ್ಯರ್ಥಿ ವೀಣಾ ಕಾಶಪ್ಪನವರ ಪರವಾಗಿ ಹುನಗುಂದ, ರಬಕವಿ-ಬನಹಟ್ಟಿ, ಮುಧೋಳ ಹಾಗೂ ಕೆರೂರ ಪಟ್ಟಣದಲ್ಲಿ ಮತಶಿಕಾರಿ ನಡೆಸಿದ ಸಿದ್ದರಾಮಯ್ಯ ಪ್ರಚಾರ ಸಭೆಯಲ್ಲಿ ಮಾತನಾಡಿದರು.

ಹುನಗುಂದ ಪಟ್ಟಣದ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಸಂವಿಧಾನ ಬದಲಾವಣೆ ಮಾಡಲು ಹೊರಟಿದ್ದಾರೆ. ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಸಂವಿಧಾನ ಬದಲಾಯಿಸಲೆಂದೇ ನಾವು ಅಧಿಕಾರಕ್ಕೆ ಬಂದಿದ್ದೇವೆ ಅಂತಾರೆ. ಅವನ್ಯಾವನೋ ಬೆಂಗಳೂರು ಸೌಥ್ ನಲ್ಲಿ ನಿಂತಿದ್ದಾನಲ್ಲ ತೇಜಸ್ವಿ ಸೂರ್ಯ ಬಾಬಾಸಾಹೇಬ ಅಂಬೇಡ್ಕರ್ ಪ್ರತಿಮೆ ಧ್ವಂಸ ಮಾಡಿ ಸಂವಿಧಾನ ಸುಟ್ಟುಹಾಕಿ ಅಂತಾರೆ. ಇಂತಹವರು ರಾಜಕಾರಣದಲ್ಲಿ ಇರಬೇಕಾ ಎಂದು ಪ್ರಶ್ನಿಸಿದರು.

ಸಾಧನೆ ಪಟ್ಟಿ ಕೊಡಿ
ಐದು ವರ್ಷ ಪ್ರಧಾನಿ ಆಗಿ ಏನು ಮಾಡಿದ್ದೇನೆ. ಮುಂದಿನ ಐದು ವರ್ಷ ಏನು ಮಾಡುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಬೇಕಿತ್ತು. ಮೋದಿಗೆ ದಂ ಇದ್ದರೆ ಸಾಧನೆ ಪಟ್ಟಿ ಕೊಡಲಿ ನೋಡೋಣ ಎಂದು ಸವಾಲು ಹಾಕಿದರು.

ಬಾಗಲಕೋಟೆಗೆ ಬಂದಿದ್ದ ಮೋದಿ ಅವರು ಬಾಲಾಕೋಟ್ ಬಿಟ್ಟು ಏನು ಮಾತನಾಡಿದರು. ಇಲ್ಲಿಗೇಕೆ ಬಂದಿದ್ದರು? ಬಣ್ಣದ ನಾಟಕ ಮಾಡುತ್ತೀರಾ? ನಿಮ್ಮಿಂದ ನಾವು ದೇಶಭಕ್ತಿ ಕಲಿಬೇಕಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಬಾಲಾಕೋಟ್ ಮೇಲೆ ಏರ್ ಸ್ಟ್ರೈಕ್ ಮಾಡಿದ್ದೇವೆ ಎಂದು ಮೋದಿ ಹೇಳುತ್ತಾನೆ. ಸರ್ಜಿಕಲ್ ಸ್ಟ್ರೈಕ್ ನಮ್ಮ ಯೋಧರು ಮಾಡಿದ್ದಾರೆ. ಆ ಸೈನಿಕರಿಗೆ ನಾವು ಸೆಲ್ಯೂಟ್ ಮಾಡೋಣ. ಆದರೆ, ಈ ಗಿರಾಕಿ(ಮೋದಿ) ನಾನು ಮಾಡಿದ್ದೇನೆ ಅಂತಾನೆ. ಮೋದಿ ಏನು ಮಷಿನ್ ಗನ್ ಹಿಡಿದು ಯುದ್ಧ ಮಾಡಿದ್ದಾನಾ ಎಂದು ಪ್ರಶ್ನಿಸಿದರು.

ಮುಧೋಳ ನಗರದಲ್ಲಿ ಹಮ್ಮಿಕೊಂಡ ಪ್ರಚಾರ ಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ನರೇಂದ್ರ ಮೋದಿ ಏನಾದರೂ ಸಂವಿಧಾನ ಬದಲಾವಣೆ ಮಾಡೋಕೆ ಮುಂದಾದರೆ ಈ ದೇಶದಲ್ಲಿ ರಕ್ತಪಾತವಾಗುತ್ತದೆ. ಆ ಹೋರಾಟದ ನೇತೃತ್ವವನ್ನು ನಾನು ವಹಿಸುತ್ತೇನೆ ಎಂದು ಘೋಷಿಸಿದರು.

ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದು ಹುಡುಗಾಟ ಆಡುತ್ತೀರಾ? ಸಂವಿಧಾನ ಈ ದೇಶದ ಧರ್ಮಶಾಸ. ನಮಗೆ ಭಗವದ್ಗೀತೆ, ಮುಸ್ಲಿಮರಿಗೆ ಕುರಾನ್, ಕ್ರಿಶ್ಚಿಯನ್‌ರಿಗೆ ಬೈಬಲ್ ಇದೆ. ಆದರೆ, ಈ ದೇಶದ ಎಲ್ಲ ಜನರಿಗೆ ಸಂವಿಧಾನವೇ ಭಗವದ್ಗೀತೆ, ಬೈಬಲ್, ಕುರಾನ್ ಎಂದರು.

ಬಿಜೆಪಿಯವರು ರೈತರು, ಬಡವರು, ಹಿಂದುಳಿದವರು, ಅಲ್ಪಸಂಖ್ಯಾತರು, ದಲಿತರಿಗೆ ವಿರುದ್ಧವಾಗಿದ್ದಾರೆ. ಅದಕ್ಕೆ ಅವರು ಸಂವಿಧಾನ ಬದಲಾಯಿಸಲು ಹೊರಟಿದ್ದಾರೆ ಎಂದರು.