ಮೋದಿ ಸುನಾಮಿ ಅಲೆ ತಡೆಯುವುದು ಅಸಾಧ್ಯ

ಬೀಳಗಿ: ದೇಶ, ವಿದೇಶದಲ್ಲೂ ಸಹ ಪ್ರಧಾನಿ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಲಿ ಎಂದು ಸಂಕಲ್ಪ ಮಾಡಿರುವಾಗ ಕಾಂಗ್ರೆಸ್ಸಿನ ಮಹಾಘಟಬಂಧನ್ ಯಾವ ಲೆಕ್ಕ. ಮೋದಿಯವರ ಸುನಾಮಿ ಅಲೆಯನ್ನು ದೋಸ್ತಿ ಸರ್ಕಾರದಿಂದ ತಡೆಯಲು ಸಾಧ್ಯವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದರು.

ಬಾಗಲಕೋಟೆ ನಗರಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಸಮಾವೇಶದಲ್ಲಿ ಪಾಲ್ಗೊಳ್ಳಲು ಹೆಲಿಕಾಪ್ಟರ್ ಮೂಲಕ ಬೀಳಗಿಗೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ರಾಹುಲ್ ಗಾಂಧಿಗೆ ದೇಶದ ಅಭಿವೃದ್ಧಿ ಹಾಗೂ ಚಿಂತನೆ ಬಗ್ಗೆ ಗಂಧ, ಗಾಳಿ ಗೊತ್ತಿಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್ ದೋಸ್ತಿ ಸರ್ಕಾರ ತುಘಲಕ್ ದರ್ಬಾರ್ ನಡೆಸುತ್ತಿವೆ. ಜೆಡಿಎಸ್ ಪಕ್ಷ ಅಪ್ಪ, ಮಕ್ಕಳು ಹಾಗೂ ಮೊಮ್ಮಕ್ಕಳ ಪಕ್ಷ. ಕಾಂಗ್ರೆಸ್ ಪಕ್ಷ ಜೆಡಿಎಸ್ ಜತೆಗೆ ಕೈಜೋಡಿಸಿ ತನ್ನ ಅಸ್ತಿತ್ವ ಕಳೆದುಕೊಂಡಿದೆ ಎಂದರು.

ಬೀಳಗಿಯಿಂದ ಪ್ರಯಾಣ
ಇದಕ್ಕೂ ಮುಂಚೆ ಶಿಕಾರಿಪುರದಿಂದ ಹೆಲಿಕಾಪ್ಟರ್ ಮೂಲಕ ನೇರವಾಗಿ ಬೀಳಗಿಗೆ ಆಗಮಿಸಿದ ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ಶಾಸಕ ಮುರುಗೇಶ ಆರ್. ನಿರಾಣಿ ಹಾಗೂ ಸಹೋದರ ಎಂಎಲ್‌ಸಿ ಎಚ್.ಆರ್. ನಿರಾಣಿ ಆತ್ಮೀಯವಾಗಿ ಬರಮಾಡಿಕೊಂಡರು. ಸಮಾವೇಶ ಮುಗಿಸಿ ಬೀಳಗಿಗೆ ಮರಳಿದ ಬಿಎಸ್‌ವೈ ಅವರು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಜತೆಗೆ ಹೆಲಿಕಾಪ್ಟರ್ ಮೂಲಕ ಶಿಕಾರಿಪುರಕ್ಕೆ ಪ್ರಯಾಣ ಬೆಳೆಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಆಗಮಿಸಿದ ಹೆಲಿಕಾಪ್ಟರ್‌ನ್ನು ಚುನಾವಣಾಧಿಕಾರಿಗಳು ತಪಾಸಣೆಗೆ ಒಳಪಡಿಸಿದರು.