ಕೃಷಿ ಹೊಂಡ ನಿರ್ವಣಕ್ಕೆ ರೈತರ ನಿರಾಸಕ್ತಿ

ಶೃಂಗೇರಿ: ಉದ್ಯೋಗ ಖಾತ್ರಿ ಯೋಜನೆಯಡಿ ಕಾಮಗಾರಿ ಮಾಡಿಸಿಕೊಳ್ಳಲು ರೈತರು ಕೃಷಿ ಇಲಾಖೆಗೆ ಸಲ್ಲಿಸಿರುವ ಅರ್ಜಿಗಳು ಸಾಕಷ್ಟಿದ್ದರೂ ನರೇಗಾ ಯೋಜನೆ ಪ್ರಗತಿ ತೀವ್ರ ಕುಸಿದಿದೆ ಎಂದು ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರವೀಣ್ ಆಕ್ಷೇಪಿಸಿದರು.

ಬುಧವಾರ ತಾಪಂ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಉದ್ಯೋಗ ಖಾತ್ರಿಗಾಗಿ ಅರ್ಜಿ ಸಲ್ಲಿಸಿ ನಂತರ ಆಸಕ್ತಿ ವಹಿಸದ ರೈತರ ಅರ್ಜಿಯನ್ನು ಅವರಿಗೆ ಮಾಹಿತಿ ನೀಡಿ ವಜಾಗೊಳಿಸಬೇಕು ಎಂದು ತಿಳಿಸಿದರು.

ಕೃಷಿ ಅಧಿಕಾರಿ ರವಿಶಂಕರ್ ಮಾತನಾಡಿ, ಕೃಷಿ ಹೊಂಡಕ್ಕಾಗಿ ಅರ್ಜಿ ಸಲ್ಲಿಸಿದ್ದ ರೈತರು ಈಗ ಕಾಮಗಾರಿ ಮಾಡಿಸಲು ಹಿಂದೇಟು ಹಾಕುತ್ತಿದ್ದಾರೆ. ಕೃಷಿ ಹೊಂಡ ಮಲೆನಾಡಿಗೆ ಅನುಕೂಲವಿಲ್ಲ ಎಂಬುದು ರೈತರ ಅಭಿಪ್ರಾಯ. ಇದರಿಂದ ಹೊಂಡ ಮಾಡಿಸುತ್ತಿಲ್ಲ. ಬಸಿಗಾಲುವೆಗೆ ಅರ್ಜಿ ನೀಡಿದ್ದ ರೈತರ ಕಾಮಗಾರಿ ಪ್ರಗತಿಯಲ್ಲಿದೆ ಎಂದರು.

ಸಿಡಿಪಿಒ ಉಮೇಶ್ ಮಾತನಾಡಿ, ಅಂಗನವಾಡಿಯಲ್ಲಿ ಪ್ರತಿದಿನವೂ ಮಕ್ಕಳ ಹಾಜರಾತಿಗೆ ತಕ್ಕಂತೆ ಆಹಾರ ಧಾನ್ಯ ಬಳಸಲಾಗುತ್ತದೆ. ಯಾವುದೇ ಅಂಗನವಾಡಿಯಲ್ಲಿ ಇಂತಹ ವ್ಯತ್ಯಾಸ ಕಂಡುಬಂದಲ್ಲಿ ಸದಸ್ಯರು ಸೂಚಿಸಿದರೆ ತನಿಖೆ ಮಾಡಲಾಗುವುದು. ಈ ವರ್ಷ 45 ಅಂಗನವಾಡಿಗಳಿಗೆ ಕುಕ್ಕರ್ ಮತ್ತು ಗ್ಯಾಸ್ ಸ್ಟೌ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದರು.

ಅಧ್ಯಕ್ಷೆ ಜಯಶೀಲಾ ಮಾತನಾಡಿ, ಅಂಗನವಾಡಿಗಳಿಗೆ ಕುಕ್ಕರ್ ಪೂರೈಸುವ ಮೊದಲು ಅಂಗನವಾಡಿಗಳ ಅಗತ್ಯತೆ ಪರಿಶೀಲಿಸಬೇಕು. ಕಡಿಮೆ ಸಂಖ್ಯೆಯ ಮಕ್ಕಳು ಇರುವ ಅಂಗನವಾಡಿಗೆ ದೊಡ್ಡ ಕುಕ್ಕರ್ ಅಗತ್ಯವಿಲ್ಲ. ಕೆಲ ಅಂಗನವಾಡಿಯಲ್ಲಿ ಪಾತ್ರೆ ಕೊರತೆಯೂ ಇದೆ. ಮಕ್ಕಳ ಹಾಜರಾತಿ, ಗರ್ಭಿಣಿ, ಬಾಣಂತಿಯರಿಗೆ ಊಟದ ವ್ಯವಸ್ಥೆ ಹೇಗೆ ನಡೆಯುತ್ತಿದೆ ಎಂಬುದನ್ನು ಆಗಾಗ್ಗೆ ಅಧಿಕಾರಿಗಳು ಪರಿಶೀಲಿಸಬೇಕು ಎಂದು ಸೂಚಿಸಿದರು.