ಮತ್ತೆ ಕೂಲಿಯಾಗುವತ್ತ ಗ್ರಾ.ಪಂ ಸದಸ್ಯೆಯರು!

< ಕೈ ತಪ್ಪಿದ ನರೇಗಾ ಉದ್ಯೋಗ ಖಾತರಿ * ಸುತ್ತೋಲೆ ವಾಪಸ್ ಪಡೆಯಲು ಒತ್ತಾಯ>

– ವೇಣುವಿನೋದ್ ಕೆ.ಎಸ್. ಮಂಗಳೂರು

ಗ್ರಾಮ ಪಂಚಾಯಿತಿ ಸದಸ್ಯೆಯರಾಗುವ ಅವಕಾಶ ಪಡೆದು, ಜೊತೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೂಲಿ ಪಡೆದು ಗೌರವಯುತ ಜೀವನ ನಡೆಸುತ್ತಿದ್ದ ಸಾವಿರಾರು ಮಹಿಳೆಯರಿಗೆ ಸರ್ಕಾರ ಹೊಡೆತ ನೀಡಿದೆ.

ಮೊದಲು ಶೋಷಣೆಗೊಳಗಾಗುತ್ತಾ ಧಣಿಗಳ ಬಳಿ ಕೂಲಿ ಕೆಲಸ ಮಾಡಿಕೊಂಡಿದ್ದವರು, ಸರಿಯಾಗಿ ಸಂಬಳವಿಲ್ಲದೆ ಒದ್ದಾಡುತ್ತಿದ್ದವರು, ಆರೋಗ್ಯಕ್ಕೆ ತೊಂದರೆ ಉಂಟು ಮಾಡುವ ಬೀಡಿ ಕಟ್ಟುವ ಕೆಲಸ ಮಾಡುತ್ತಿದ್ದವರಿಗೆ ನರೇಗಾ ಆಶಾಕಿರಣವಾಗಿ ಮೂಡಿಬಂದು ಜೀವನಕ್ಕೆ ಭದ್ರತೆಯನ್ನೊದಗಿಸಿತ್ತು.
ಅಷ್ಟೇ ಅಲ್ಲದೆ ಅಂತಹ ಮಹಿಳೆಯರಿಗೆ ದೀರ್ಘಕಾಲ ಬಾಳಿಕೆ ಬರುವ ಆಸ್ತಿಗಳನ್ನು ಸೃಷ್ಟಿಸಲು, ಜೀವನೋಪಾಯದ ಮಾರ್ಗಗಳನ್ನು ಬಲಪಡಿಸಲು 2006-07ರಿಂದಲೇ ನರೇಗಾ ನೆರವಾಯಿತು. ಉದ್ಯೋಗ ಚೀಟಿ ಪಡೆದು ಕೂಲಿಯನ್ನೇ ನಂಬಿದ್ದ ಗ್ರಾಮ ಪಂಚಾಯಿತಿ ಸದಸ್ಯೆಯರಿಗೆ ರಾಜ್ಯ ಸರ್ಕಾರದ ಇತ್ತೀಚೆಗಿನ ಆದೇಶ ಆಘಾತ ನೀಡಿದೆ.

ಏನಿದು ಆದೇಶ?: ನರೇಗಾ ಯೋಜನೆಯಡಿ ಹಲವು ಮಹಿಳಾ ಸದಸ್ಯೆಯರೂ ಕೂಲಿ ಪಡೆಯುತ್ತಿರುವುದನ್ನು ಗಮನಿಸಿದ್ದ ಕೆಲವು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಇದು ಸರಿಯೇ ಎನ್ನುವ ಬಗ್ಗೆ ಸರ್ಕಾರಕ್ಕೆ ಸ್ಪಷ್ಟನೆ ಕೇಳಿದ್ದರು.

ರಾಜ್ಯ ಸರ್ಕಾರ ಇದರ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಸೂಕ್ತ ನಿರ್ದೇಶನಕ್ಕೆ ತಿಳಿಸಿತ್ತು. ಅದರಂತೆ ಈ ಬಗ್ಗೆ ಕೇಂದ್ರ ಸರ್ಕಾರ ಕರ್ನಾಟಕ ಪಂಚಾಯತ್‌ರಾಜ್ ಕಾಯಿದೆ 1993ರ ಸೆಕ್ಷನ್ 12(ಎಚ್) ಪ್ರಕಾರ ಗ್ರಾ.ಪಂ ಮಾಡುವ ಯಾವುದೇ ಕಾಮಗಾರಿಯಲ್ಲಿ ನೇರ ಅಥವಾ ಪರೋಕ್ಷವಾಗಿ ಯಾವುದೇ ಸದಸ್ಯರೂ ಪಾಲು ಹೊಂದುವಂತಿಲ್ಲ, ಅಥವಾ ಗ್ರಾಪಂ ಪರವಾಗಿ ಕೆಲಸ ಮಾಡುವಂತಿಲ್ಲ, ಒಂದು ವೇಳೆ ಅಂತಹ ಪ್ರಕರಣದಲ್ಲಿ ಸದಸ್ಯತ್ವ ರದ್ದಾಗಬೇಕು ಎನ್ನುವ ಅಂಶವನ್ನು ಉಲ್ಲೇಖಿಸಿತ್ತು.

ಇದರ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಎಲ್ಲ ಗ್ರಾ.ಪಂಗಳಿಗೂ ಸುತ್ತೋಲೆ ಹೊರಡಿಸಿ ಗ್ರಾ.ಪಂ ಸದಸ್ಯರು ಉದ್ಯೋಗ ಖಾತ್ರಿ ಕೂಲಿ ಪಡೆಯುವಂತಿಲ್ಲ ಎಂದು ಆದೇಶಿಸಿತು. ಇದರಿಂದಾಗಿ ಮುಖ್ಯವಾಗಿ ತೊಂದರೆಗೀಡಾದ ಮಹಿಳೆಯರೀಗ ರಾಜ್ಯ ಸರ್ಕಾರದ ಮೊರೆ ಹೋಗುವಂತಾಗಿದೆ.

ವೇತನವಿಲ್ಲ, ಭದ್ರತೆಯೂ ಇಲ್ಲ: ಗ್ರಾಪಂ ಸದಸ್ಯರಾದ ಕೂಡಲೇ ಅವರ ಬದುಕಿನ ಆರ್ಥಿಕ ಮಟ್ಟವೇನೂ ಬದಲಾಗುವುದಿಲ್ಲ. ಯಾಕೆಂದರೆ ಮಾಸಿಕ ಕೇವಲ 1000 ರೂ. ಗೌರವ ಧನ ನೀಡಲಾಗುತ್ತದೆ. ಸಾಮಾನ್ಯ ಸಭೆಗೆ ಹೋದರೆ 100 ರೂ. ಭತ್ಯೆ ಸಿಗುತ್ತದೆ. ಅದು ಬಿಟ್ಟರೆ ಯಾವುದೇ ವೇತನ ಅವರಿಗಿಲ್ಲ. ಹಾಗಾಗಿ ಗ್ರಾ.ಪಂ ಸದಸ್ಯರಾದರೂ ಮಹಿಳೆಯರು ಉದ್ಯೋಗ ಖಾತರಿ ಯೋಜನೆ ಮೂಲಕ ಸಾಮೂಹಿಕ, ವೈಯುಕ್ತಿಕ ಕಾಮಗಾರಿಗಳನ್ನು ನಿರ್ವಹಿಸುತ್ತಾ ಬಂದಿದ್ದರು. ಈಗ ಅವರು ಮತ್ತೆ ಉದ್ಯೋಗ ರಹಿತರಾಗಿ ಕೆಲಸಕ್ಕೆ ಯಾರ‌್ಯಾರ ಮನೆ ಬಾಗಿಲಿಗೆ ಹೋಗುವಂತಾಗಿದೆ.

ಕಳೆದ ಕೆಲವು ತಿಂಗಳಿನಿಂದ ನಮಗೆ ಉದ್ಯೋಗ ಖಾತರಿಯಡಿ ಕೆಲಸ ಮಾಡಲಾಗುತ್ತಿಲ್ಲ, ಇದನ್ನೇ ನಂಬಿಕೊಂಡ ನನ್ನಂತಹ ಹಲವು ಪಂಚಾಯಿತಿ ಸದಸ್ಯೆಯರ ದುಡಿದು ತಿನ್ನುವ ಹಕ್ಕು ಕಿತ್ತುಕೊಂಡಂತಾಗಿದೆ. ಈ ಆದೇಶದ ಸುತ್ತೋಲೆ ವಾಪಸ್ ಪಡೆಯಬೇಕು, ಅಥವಾ ನರೇಗಾದಡಿ ನೋಂದಾಯಿತ ಗ್ರಾ.ಪಂ ಸದಸ್ಯೆಯರಿಗೆ ಕನಿಷ್ಠ ವೇತನ ನಿಗದಿ ಪಡಿಸಬೇಕು.
– ಪ್ರೇಮಲತಾ ರೈ, ‘ಸುಗ್ರಾಮ’ ಗ್ರಾ.ಪಂ ಚುನಾಯಿತ ಮಹಿಳಾ ಪ್ರತಿನಿಧಿಗಳ ಸಂಘದ ಸದಸ್ಯೆ