ಅಂತರರಾಜ್ಯ ಗಡಿಯಲ್ಲಿ ಅಗತ್ಯ ಸಹಕಾರ

ಯಾದಗಿರಿ: ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ತೆಲಂಗಾಣ ರಾಜ್ಯದ ನಾರಾಯಣಪೇಟ್ ಜಿಲ್ಲೆಯ ಜಲಾಲಪುರ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶುಕ್ರವಾರ ಯಾದಗಿರಿ ಮತ್ತು ನಾರಾಯಣಪೇಟ್ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಅಂತರರಾಜ್ಯ ಗಡಿಯಲ್ಲಿ ಚುನಾವಣಾ ಮಾದರಿ ನೀತಿ ಸಂಹಿತೆ ಕಟ್ಟುನಿಟ್ಟಿನ ಜಾರಿಗಾಗಿ ಜಂಟಿ ಸಭೆ ನಡೆಸಿದರು.

ಜಿಲ್ಲಾಧಿಕಾರಿ ಎಂ.ಕೂಮರ್ಾರಾವ್ ಮಾತನಾಡಿ, ರಾಯಚೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಯಾದಗಿರಿ ಜಿಲ್ಲೆಯ ಯಾದಗಿರಿ, ಶಹಾಪುರ ಹಾಗೂ ಸುರಪುರ ವಿಧಾನಸಭಾ ಕ್ಷೇತ್ರಗಳು ಬರುತ್ತವೆ. ಗುರುಮಠಕಲ್ ವಿಧಾನಸಭಾ ಕ್ಷೇತ್ರ ಮಾತ್ರ ಕಲಬುರಗಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಕಳೆದ ಮಾ.10ರಿಂದ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಾಗಿದೆ. ಭಾರತ ಚುನಾವಣಾ ಆಯೋಗದ ವೇಳಾಪಟ್ಟಿಯಂತೆ ಯಾದಗಿರಿ ಜಿಲ್ಲೆಯಲ್ಲಿ ಏಪ್ರಿಲ್ 23ರಂದು ಮತದಾನ ನಡೆಯಲಿದೆ ಎಂದು ಹೇಳಿದರು.

ನಾರಾಯಣಪೇಟ್ ಜಿಲ್ಲಾ ಕಲೆಕ್ಟರ್ ಎಸ್.ವೆಂಕಟರಾವ್ ಮಾತನಾಡಿ, ತೆಲಂಗಾಣ ರಾಜ್ಯದಾದ್ಯಂತ ಏಪ್ರಿಲ್ 11ರಂದು ಚುನಾವಣೆ ನಡೆಯಲಿದೆ. ನಾರಾಯಣಪೇಟ್ ಜಿಲ್ಲೆಯಲ್ಲಿ ಚುನಾವಣೆ ಮುಗಿದರೂ ಕೂಡ ಯಾದಗಿರಿ ಜಿಲ್ಲೆಯಲ್ಲಿ ಮತದಾನ ನಡೆಯುವವರೆಗೂ ಅಂತರರಾಜ್ಯ ಗಡಿಯಲ್ಲಿ ಅಗತ್ಯ ಸಹಕಾರ ನೀಡುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಉಭಯ ಜಿಲ್ಲೆಗಳ ಗಡಿಯಲ್ಲಿ ಕೈಗೊಂಡ ಮತ್ತು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚೆ ನಡೆಸಿದರು. ನಂತರ ಜಂಟಿಯಾಗಿ ಕುಂಠಿಮರಿ ಚೆಕ್ಪೋಸ್ಟ್ಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಯಾದಗಿರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷಿಕೇಶ್ ಭಗವಾನ್ ಸೋನಾವಣೆ, ನಾರಾಯಣಪೇಟ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಚೇತನಾ, ಯಾದಗಿರಿ ಅಬಕಾರಿ ಉಪ ಆಯುಕ್ತ ಜಿ.ಪಿ.ನರೇಂದ್ರಕುಮಾರ ಇದ್ದರು.