ಕಾಲುವೆ ಸ್ವಚ್ಛತೆಗೆ ಮುಂದಾದ ರೈತರು

ಹೂವಿನಹಿಪ್ಪರಗಿ: ಸಮೀಪದ ನರಸಲಗಿ ಕ್ರಾಸ್ ಬಳಿ ಇರುವ ಹೂವಿನಹಿಪ್ಪರಗಿ ಉಪ ಕಾಲುವೆಗೆ ನೀರು ಬರುವುದನ್ನರಿತು ಆ ಭಾಗದ ರೈತರು ಗುರುವಾರ ಸ್ವಯಂ ಪ್ರೇರಿತರಾಗಿ ಕಾಲುವೆ ಸ್ವಚ್ಛತೆಗೆ ಮುಂದಾಗಿದ್ದಾರೆ.

ತಾಪಂ ಮಾಜಿ ಅಧ್ಯಕ್ಷ ಶ್ರೀಶೈಲಗೌಡ ಹೊಸಳ್ಳಿ ಮಾತನಾಡಿ, ಜಿಲ್ಲೆಯಲ್ಲಿ ಬರಗಾಲ ತಾಂಡವವಾಡುತ್ತಿದೆ. ಜನ-ಜಾನುವಾರುಗಳಿಗೆ ನೀರು ಸಿಗಲೆಂಬ ಉದ್ದೇಶದಿಂದ ವಿಜಯಪುರ ಮುಖ್ಯ ಕಾಲುವೆಯಿಂದ ಪ್ರಾಯೋಗಿಕವಾಗಿ ನೀರು ಹರಿಸಿ ಕೆಲ ಗ್ರಾಮಗಳ ಕೆರೆಗಳನ್ನು ತುಂಬಿಸಲು ಸಚಿವ ಶಿವಾನಂದ ಪಾಟೀಲರು ಮುಂದಾಗಿದ್ದಾರೆ ಎಂದರು.

ಈಗಾಗಲೇ ಕಾಲುವೆಗಳಿಗೆ ನೀರು ಹರಿದು ಬರುತ್ತಿದೆ. ಹೂವಿನಹಿಪ್ಪರಗಿ ಉಪ ಕಾಲುವೆಯು ಉಪ್ಪಲದಿನ್ನಿಯಿಂದ ನರಸಲಗಿ ಕ್ರಾಸ್, ಕಣಕಾಲ, ಬಸರಕೊಡ, ಆಲಕೂಪ್ಪರ, ಢವಳಗಿ ಗ್ರಾಮದ ಮಾರ್ಗವಾಗಿ ಮುಂದೆ ಸಾಗಲಿದೆ. ಕೆಲ ರೈತರ ತಕರಾರಿನಿಂದ ನರಸಲಗಿ ಕ್ರಾಸ್ ಬಳಿ ಕಾಲುವೆಯ 100 ಮೀ.ನಷ್ಟು ಕಾಮಗಾರಿ ಉಳಿದುಕೊಂಡಿದೆ. ಈಗ ಕೆಬಿಜೆಎನ್​ಎಲ್ ಇಲಾಖೆ ಪ್ರಾಯೋಗಿಕವಾಗಿ ನೀರು ಹರಿಬಿಡುತ್ತಿರುವುದರಿಂದ ಅಪೂರ್ಣ ಕಾಮಗಾರಿಯಿಂದ ಹರಿದು ಬಂದ ನೀರು ಅರ್ಧಕ್ಕೆ ನಿಲ್ಲುವ ಸಾಧ್ಯತೆ ಇದೆ. ಅದಕ್ಕಾಗಿ ರೈತರು ಸ್ವಯಂ ಪ್ರೇರಣೆಯಿಂದ ಕಾಲುವೆಯಲ್ಲಿನ ಮಣ್ಣು ತೆಗೆಯಲು ಮುಂದಾಗಿದ್ದಾರೆ. ಮಣ್ಣು ತೆಗೆಯುವ ಕಾರ್ಯ ಒಂದೆರಡು ದಿನಗಳಲ್ಲಿ ಮುಗಿಯಬಹುದು. ಅಷ್ಟರಲ್ಲಿ ಕಾಲುವೆಗೆ ನೀರು ಹರಿದು ಬರುವ ಸಾಧ್ಯತೆ ಇದೆ ಎಂದು ಹೇಳಿದರು.

ಮಣ್ಣು ತೆಗೆಯುವ ಕಾರ್ಯದಲ್ಲಿ ಸಿದ್ದನಗೌಡ ಬಿರಾದಾರ, ನೀಲರಾಜ ಹಾಲಿಹಾಳ, ರಮೇಶ ಗುಡಗುಂಟಿ, ಅಬ್ದುಲ್ ಚಪ್ಪರಬಂದ್, ರಾಮನಗೌಡ ಬಿರಾದಾರ, ಹೊನ್ನಪ್ಪ ಕಂದಗಲ್ಲ, ಮುತ್ತುರಾಜ ಹಾಲಿಹಾಳ, ಗುರುನಾಥ ದಳವಾಯಿ, ಸಿದ್ದು ಗೋನಾಳ, ದಾದು ರಾಠೋಡ, ಕುಮಾರ ರಾಠೋಡ, ಉಮೇಶ ರಾಠೋಡ, ಶಿವಮಾನಪ್ಪ ಗುಡಗುಂಟಿ, ದೇವೇಂದ್ರ ಗೋನಾಳ ಸೇರಿದಂತೆ ನೂರಾರು ರೈತರು ಪಾಲ್ಗೊಂಡಿದ್ದರು.