More

    ಕರ್ನಾಟಕ ಹರಿದಾಸ ಕೂಟದ ಆದ್ಯಪ್ರವರ್ತಕ ನರಹರಿ ತೀರ್ಥರು

    ದಿಮೂರನೇ ಶತಮಾನದಲ್ಲಿ ಜನ್ಮತಾಳಿದ ಮಹಾನ್ ತತ್ತ್ವಜ್ಞಾನಿಗಳು ಮತ್ತು ದ್ವೈತಸಿದ್ಧಾಂತದ ಪ್ರವರ್ತಕರು ಶ್ರೀಮನ್ಮಧ್ವಾಚಾರ್ಯರು. ಅವರು ಸಂಸ್ಕೃತಭಾಷೆಯಲ್ಲಿ ರಚಿಸಿದ ದ್ವಾದಶಸ್ತೋತ್ರವು ಭಕ್ತರನ್ನು ತಲುಪಿ ಬಹಳ ಜನಪ್ರಿಯವಾಯಿತು. ಈ ದ್ವಾದಶಸ್ತೋತ್ರಗಳೇ ದಾಸವಾಙ್ಮಯದ ಮೂಲವೆಂಬ ಅಭಿಪ್ರಾಯವಿದೆ. ಆದ್ದರಿಂದ ಮಧ್ವಾಚಾರ್ಯರೇ ದಾಸಪಂಥಕ್ಕೂ ಮೂಲಪುರುಷರೆಂದು ಹೇಳಲಾಗುತ್ತದೆ.

    ಮಧ್ವಾಚಾರ್ಯರಿಂದ ಸ್ಥಾಪಿತವಾದ ದ್ವೆ ೖತಸಾಮ್ರಾಜ್ಯದ ತೃತೀಯ ಆಚಾರ್ಯರೆಂದೇ ಗುರುತಿಸಲ್ಪಡುವ ಯತಿವರೇಣ್ಯರು ಶ್ರೀ ನರಹರಿತೀರ್ಥರು. ‘ಶ್ರೀಮಧ್ವಂ ಪದ್ಮನಾಭಂ ನರಹರಿಮುನಿಪಂ ಮಾಧವಾಕ್ಷೋಭ್ಯತೀರ್ಥಂ’ ಎಂಬ ಗುರುಪರಂಪರೆಯ ಶ್ಲೋಕದಲ್ಲಿ ಬಂದಿರುವಂತೆ ಮಧ್ವಾಚಾರ್ಯರ ತರುವಾಯದಲ್ಲಿ ಪದ್ಮನಾಭತೀರ್ಥ, ನರಹರಿತೀರ್ಥ, ಮಾಧವತೀರ್ಥ ಮತ್ತು ಅಕ್ಷೋಭ್ಯತೀರ್ಥರು ಅನುಕ್ರಮವಾಗಿ ದ್ವೈತವೇದಾಂತ ಸಾಮ್ರಾಜ್ಯದಲ್ಲಿ ಅಭಿಷಿಕ್ತರಾಗಿದ್ದರೆಂದು ಹೇಳಿದೆ.

    ಅವರ ಪೂರ್ವಾಶ್ರಮದ ಹೆಸರು ಸ್ವಾಮಿಶಾಸ್ತ್ರಿ. ಜನ್ಮಸ್ಥಳ ಒಡಿಶಾದ ಗಂಜಾಂ ಪ್ರಾಂತದ ಚಿಕಾಕೋಲು. ತಂದೆ ನರಸಿಂಹ ಚಟ್ಟೋಪಾಧ್ಯಾಯ. ಬಾಲ್ಯದಿಂದಲೂ ಪ್ರತಿಭಾವಂತರಾಗಿದ್ದ ಸ್ವಾಮಿಶಾಸ್ತ್ರಿ ಕಳಿಂಗದೇಶದ ಭಾನುದೇವ ರಾಜನ ರಾಜ್ಯದಲ್ಲಿ ಪ್ರತಿಷ್ಠಿತ ಸ್ಥಾನ ಪಂಡಿತರೂ ರಾಜಗುರುಗಳೂ ಆಗಿದ್ದರು. ಅಲ್ಲದೆ ರಾಜ-ಪ್ರಜೆಗಳೆಲ್ಲರಿಂದ ಮಾನ್ಯರಾಗಿದ್ದರು. ಆ ದೇಶದಲ್ಲಿ ಅರಾಜಕತೆ ಉಂಟಾದಾಗ ಮಂತ್ರಿಗಳೂ ಪ್ರಜೆಗಳೂ ಇವರನ್ನು ರಾಜ್ಯಭಾರ ವಹಿಸಿಕೊಂಡು ದೇಶದ ಭದ್ರತೆಯನ್ನು ಕಾಪಾಡಬೇಕೆಂದು ವಿಜ್ಞಾಪಿಸಿದರೆಂದೂ ಆಗ ಇವರು ಜನರ ಪ್ರಾರ್ಥನೆಯನ್ನು ಮನ್ನಿಸಿ ಆಡಳಿತವನ್ನು ವಹಿಸಿಕೊಂಡರೆಂದು ನರಹರಿತೀರ್ಥವಿಜಯದಲ್ಲಿ ಹೇಳಿದೆ. ಕಾಕುಳ ಜಿಲ್ಲೆಯ ಕೂರ್ಮದಲ್ಲಿಯೂ ವಿಶಾಖಪಟ್ಟಣ ಜಿಲ್ಲೆಯ ಸಿಂಹಾಚಲದಲ್ಲಿಯೂ ಇವರು ಕೂರ್ಮ ದೇವಸ್ಥಾನ ಹಾಗೂ ನರಸಿಂಹ ದೇವಸ್ಥಾನಗಳಿಗೂ ದಾನ ನೀಡಿದ ಶಾಸನಗಳು ಸಿಕ್ಕಿವೆ. ಮಧ್ವಾಚಾರ್ಯರು ಬದರೀಯಾತ್ರೆ ಮುಗಿಸಿ ಒಡಿಶಾಕ್ಕೆ ಬಂದಾಗ ಅವರೊಡನೆ ವಾದಕ್ಕಿಳಿದು ಆಚಾರ್ಯರ ಪಾಂಡಿತ್ಯಕ್ಕೂ, ಉಪದೇಶಕ್ಕೂ ಮನಸೋತರು. ಅವರ ಶಿಷ್ಯರಾಗಿ ಸಂನ್ಯಾಸಾಶ್ರಮ ಸ್ವೀಕರಿಸಿ ನರಹರಿತೀರ್ಥರೆಂಬ ಯತಿನಾಮ ಪಡೆದರು.

    ಗಜಪತಿರಾಜನ ಭಂಡಾರದಲ್ಲಿನ ಮೂಲಸೀತಾರಾಮರ ವಿಗ್ರಹಗಳನ್ನು ಪೂಜಿಸುವ ಅಭಿಲಾಷೆ ಮಧ್ವಾಚಾರ್ಯರಿಗಿತ್ತು. ಕಳಿಂಗದ ರಾಜ ಭಾನುದೇವ ಸ್ವರ್ಗಸ್ಥನಾದಾಗ ಆತನ ಪುತ್ರ ನರಸಿಂಹರಾಜ ಶೈಶವಾವಸ್ಥೆಯಲ್ಲಿದ್ದ. ಸಿಂಹಾಸನಕ್ಕೆ ದಾಯಾದಿಗಳಲ್ಲಿ ವಿವಾದವುಂಟಾಗಿತ್ತು. ಆ ಸಮಯದಲ್ಲಿ ಅಲ್ಲಿನ ರಾಣಿ ಗರ್ಭಿಣಿಯಾಗಿದ್ದು, ಆಕೆ ಪ್ರಸವಿಸುವವರೆಗೆ ಆ ರಾಜ್ಯದ ಆಡಳಿತದ ಹೊಣೆಯನ್ನು ನರಹರಿತೀರ್ಥರು ಹೊತ್ತುಕೊಳ್ಳಲು ಮಧ್ವಾಚಾರ್ಯರ ಆದೇಶವಾಯಿತು. ಜನರ ವಿಶ್ವಾಸ, ಗೌರವಕ್ಕೆ ಪಾತ್ರರಾದ ನರಹರಿತೀರ್ಥರೇ ರಾಜಪ್ರತಿನಿಧಿಗಳಾಗಬೇಕೆಂಬ ಕೋರಿಕೆಯನ್ನು ಒಪ್ಪಿಕೊಂಡರು. ಸಂನ್ಯಾಸಾಶ್ರಮಕ್ಕೆ ಚ್ಯುತಿ ಬಾರದಂತೆ ರಾಜಕುಮಾರನ ಪರವಾಗಿ ಹನ್ನೆರಡು ವರ್ಷಗಳ ಕಾಲ ರಾಜ್ಯಭಾರ ಮಾಡಿದರು. 1203ರ ಕೂರ್ಮ ಶಾಸನದಲ್ಲಿ ನರಹರಿತೀರ್ಥರು ಗುರುಗಳಾದ ಮಧ್ವಾಚಾರ್ಯರ ಆಜ್ಞೆಯಿಂದ ಕೈಯಲ್ಲಿ ಕತ್ತಿ ಹಿಡಿದು ಯುದ್ಧಮಾಡಿ ಶಬರಸೈನ್ಯವನ್ನು ಚದರಿಸಿ ದೇಶವನ್ನು ಶತ್ರುಗಳ ಆಕ್ರಮಣದಿಂದ ರಕ್ಷಿಸಿದರೆಂದು ಹೇಳಿದೆ. ನಂತರ ರಾಜಕುಮಾರ ನರಸಿಂಹರಾಜ ಪ್ರೌಢನಾದಾಗ ರಾಜ್ಯಭಾರವನ್ನು ಆತನಿಗೊಪ್ಪಿಸಿದರು. ರಾಜ್ಯಕೋಶಾಗಾರದಲ್ಲಿದ್ದ ಯಾವ ವಸ್ತುವನ್ನಾದರೂ ಕೃತಜ್ಞಾಪೂರ್ವಕವಾಗಿ ಸ್ವೀಕರಿಸಬೇಕೆಂಬ ಆತನ ಪ್ರಾರ್ಥನೆಗೆ ಶ್ರೀ ಮೂಲಸೀತಾರಾಮರ ಪ್ರತಿಮೆಗಳನ್ನು ಸ್ವೀಕರಿಸಿ ಉಡುಪಿಯಲ್ಲಿದ್ದ ಶ್ರೀ ಮಧ್ವಾಚಾರ್ಯರಿಗೆ ಸಮರ್ಪಿಸಿದರು. ಆಚಾರ್ಯರು ಆ ಪ್ರತಿಮೆಗಳನ್ನು ಎಂಬತ್ತು ದಿನಗಳ ಕಾಲ ಪೂಜಿಸಿ ಶ್ರೀ ಪದ್ಮನಾಭತೀರ್ಥರಿಗೆ ಕೊಟ್ಟು, ಅವರು ತಮ್ಮ ಅನಂತರ ನರಹರಿತೀರ್ಥರಿಗೆ ಕೊಡಬೇಕೆಂದು ಆದೇಶಿಸಿದರು.

    ಶ್ರೀಸಾಮಾನ್ಯನ ಆಡುಭಾಷೆಯಲ್ಲಿ ದೇವರನಾಮಗಳನ್ನು ರಚಿಸಿದರೆ ಹರಿಯ ಮಹಿಮೆಯನ್ನು ಎಲ್ಲ ಭಕ್ತರಿಗೂ ತಲುಪಿಸಬಹುದು ಎಂದು ಮನಗಂಡರು. ಕನ್ನಡಿಗರಲ್ಲದಿದ್ದರೂ ಕನ್ನಡದಲ್ಲಿ ಪ್ರಭುತ್ವ ಗಳಿಸಿದ್ದ ಅವರು ಭಾಗವತ ಕೀರ್ತನಪದ್ಧತಿಯಿಂದ ಪ್ರೇರಿತರಾಗಿ ಕನ್ನಡದ ಮೊದಲ ದೇವರನಾಮಗಳನ್ನು ರಚಿಸಿದರು. ‘ ರಘುಕುಲತಿಲಕ, ನರಹರಿ, ನೃಹರಿ, ರಘುಪತಿ’ ಅಂಕಿತನಾಮದಲ್ಲಿ ಹಲವಾರು ಕೀರ್ತನೆಗಳನ್ನು ರಚಿಸಿದ್ದರೂ ಈಗ ಅವುಗಳಲ್ಲಿ ಮೂರು ಮಾತ್ರ ಲಭ್ಯ. ಅವುಗಳೆಂದರೆ – 1). ‘ಎಂತು ಮರುಳಾದೆ ನಾನೆಂತು ಮರುಳಾದೆ ಭವದೊಳು ಬಳಲದೆ ಸಂತತ ಪೊರೆ ರಘುಕುಲ ತಿಲಕ’, 2). ‘ತಿಳಕೊ ನಿನ್ನೊಳಗೆ ನೀನೇ’, 3). ‘ಹರಿಯೇ ಇದು ಸರಿಯೇ ಚರಣಸೇವಕನಲ್ಲಿ ಕರುಣ ಬಾರದ್ಯಾಕೆ ನೀ ರಕ್ಷಿಸದಿರೆ’. ಅವರಿಂದ ಪ್ರಾರಂಭಗೊಂಡ ಈ ಪರಂಪರೆಯನ್ನು, ಹಾಗೆಯೇ ಆ ಬಳಿಕ ದಾಸಸಾಹಿತ್ಯವನ್ನು ಅನೇಕ ದಾಸಶ್ರೇಷ್ಠರು ಮನೆಮನೆಗೂ ತಲುಪಿಸಿದರು. ಶೂರ ಧೀರ ರಾಜ್ಯತಂತ್ರಪಟುಗಳಾಗಿದ್ದರಲ್ಲದೆ ನಿಸ್ಸೀಮ ಗುರುಭಕ್ತರೂ ಮಹಾಪಂಡಿತರೂ ಆಗಿದ್ದರೂ ಅವರು ಕರ್ನಾಟಕ ಹರಿದಾಸ ಕೂಟದ ಆದ್ಯಪ್ರವರ್ತಕರೆಂದು ಪ್ರಸಿದ್ಧರಾಗಿದ್ದಾರೆ.

    ನರಹರಿತೀರ್ಥರು ಮಧ್ವಾಚಾರ್ಯರ ಗೀತಾಭಾಷ್ಯ, ದಶಪ್ರಕರಣ ಹಾಗೂ ಯಮಕಭಾರತಕ್ಕೆ ಟೀಕೆ ಟಿಪ್ಪಣಿಗಳನ್ನು ರಚಿಸಿದ್ದಾರೆ. ಅಲ್ಲದೆ ಭಗವದ್ಗೀತೆಯ ಮೇಲೆ ಸ್ವತಂತ್ರವಾದ ಟೀಕೆಯೊಂದನ್ನು ಬರೆದಿದ್ದಾರೆ. ಕರ್ಮನಿರ್ಣಯ, ತತ್ತೊ್ವೕದ್ಯೋತ, ಖಂಡನತ್ರಯಗಳ ಮೇಲೆ ಅವರ ಗ್ರಂಥಗಳು ಇದ್ದಿರಬೇಕೆಂದು ಗ್ರಂಥಾಂತರದಲ್ಲಿ ಬರುವ ಉಲ್ಲೇಖಗಳಿಂದ ತಿಳಿಯಬಹುದು. ಅವರನ್ನು ಯಕ್ಷಗಾನ ಕಲೆಯ ಪ್ರವರ್ತಕರು ಎಂದೂ ಕೆಲವು ವಿದ್ವಾಂಸರು ಅಭಿಪ್ರಾಯಪಡುತ್ತಾರೆ. ಆಂಧ್ರಪ್ರದೇಶದ ಮಂದಿರಗಳಲ್ಲಿ ಪ್ರಚಾರದಲ್ಲಿರುವ ಕೂಚಿಪುಡಿ ನೃತ್ಯಪದ್ಧತಿಯ ಆದ್ಯ ಪ್ರವರ್ತಕರೆಂದು ನರಹರಿತೀರ್ಥರನ್ನು ಸ್ಮರಿಸುತ್ತಾರೆ. ಅವರು ಆನೆಗೊಂದಿಯ ಜಂಬುಕೇಶ್ವರ ರಾಜ ಹಾಗೂ ಆತನ ರಾಜ್ಯದ ಹಿತಚಿಂತಕರಾಗಿ ಗುರುಗಳಾದ ಪದ್ಮನಾಭತೀರ್ಥರ ಜೊತೆಯಾಗಿ ವಾಸವಾಗಿದ್ದರು. 1324-1333ರ ಅವಧಿಯಲ್ಲಿ ಒಂಬತ್ತು ವರ್ಷಗಳ ಕಾಲ ವೇದಾಂತಸಾಮ್ರಾಜ್ಯದಲ್ಲಿ ವಿರಾಜಿಸಿದ ನರಹರಿತೀರ್ಥರು ಪುಷ್ಯ ಬಹುಳ ಸಪ್ತಮಿಯಂದು (ಕ್ರಿ.ಶ. 1333) ಹಂಪಿಯ ಚಕ್ರತೀರ್ಥದ ಬಳಿ ತುಂಗಾನದಿಯ ತೀರದಲ್ಲಿ ವೃಂದಾವನಸ್ಥರಾದರು. ಇದೇ ಜ. 17ರಂದು ಹಂಪಿಯಲ್ಲಿ ಅವರ ಆರಾಧನೆ ನಡೆಯಲಿದೆ.

    ವಿಜಯಕುಮಾರ್ ಕಟ್ಟೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts