More

    ಹಾಡು ಗೆಳೆಯನೆ ಹಾಡು, ಹಾಡಿನಿಂದಲೆ ನಾಡು ಕಣ್ದೆರೆದು…

    ಹಾಡು ಗೆಳೆಯನೆ ಹಾಡು, ಹಾಡಿನಿಂದಲೆ ನಾಡು ಕಣ್ದೆರೆದು...‘ಸಾಮಯಿಕ’ ಎಂಬ ಹೆಸರಿನ ಈ ಅಂಕಣದ ಮೊದಲ ಲೇಖನ ಪ್ರಕಟವಾದದ್ದು 2016ರ ಆಗಸ್ಟ್ 28ರಂದು. ಕಳೆದ ಐದು ವರ್ಷಗಳಿಂದ ಈ ಅಂಕಣವನ್ನು ಬರೆಯುತ್ತ ಬಂದಿದ್ದೇನೆ. ಅನಿವಾರ್ಯ ಸಂದರ್ಭ ದಲ್ಲಿ ಒಂದೆರಡು ಸಲ ಪ್ರಕಟವಾಗಿಲ್ಲವೆನ್ನುವುದನ್ನು ಹೊರತುಪಡಿಸಿ ನಿಯಮಿತವಾಗಿ ಪ್ರತಿ ಹದಿನೈದು ದಿನಗಳಿಗೊಮ್ಮೆ ಪ್ರಕಟವಾಗಿದೆ.

    ಈ ಅಂಕಣ ಕುರಿತು ಮೊದಲಿಗೇ ಹೇಳಬೇಕಾದ ಸಂಗತಿಯೆಂದರೆ ‘ವಿಜಯವಾಣಿ’ ಪತ್ರಿಕೆಯ ಸಂಪಾದಕ ಬಳಗ ನೀಡಿದ ಸ್ವಾತಂತ್ರ್ಯ; ಎಂದೂ ಅವರು ಈ ವಿಷಯ ಬರೆಯಬೇಕು, ಇದನ್ನು ಬರೆಯಬಾರದು ಎಂದು ನಿರ್ಬಂಧಿಸಿಲ್ಲ. ವಿಷಯದ ಆಯ್ಕೆಯನ್ನು ಸಂಪೂರ್ಣ ನನಗೇ ಬಿಟ್ಟಿದ್ದರು. ಇದು ಒಂದು ಪತ್ರಿಕೆ ಲೇಖಕರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗೌರವಿಸುವ ಕ್ರಮ. ಒಂದೆರಡು ಸಲ ಅಂಕಣದ ಪ್ರಾಮುಖ್ಯತೆಯಿಂದಾಗಿಯೋ ಏನೋ ಕೆಲವರು ಸಂಪಾದಕ ಮಂಡಲಿಯ ಮೂಲಕ ತಮ್ಮ ಹಿತಾಸಕ್ತಿಯ ಲೇಖನ ಬರೆಯಲು ಸೂಚಿಸಿದ್ದುಂಟು. ಆದರೆ ನಾನು ಅದಕ್ಕೆ ಒಪ್ಪದಿದ್ದಾಗ ಪತ್ರಿಕೆ ನನ್ನ ನಿಲುವನ್ನು ಗೌರವಿಸಿತು. ಪದಗಳ ಮಿತಿಯೊಂದನ್ನು ಬಿಟ್ಟರೆ ಬೇರಾವ ಮಿತಿಯೂ ಅಂಕಣ ಬರೆಯುವಾಗ ಇರಲಿಲ್ಲ.

    ‘ಮಾತಿನ ಘನತೆ’ ಈ ಸಾಮಯಿಕ ಅಂಕಣ ಮಾಲೆಯ ಮೊದಲ ಲೇಖನ. ಅದರಲ್ಲಿ ‘ಇವತ್ತು ನಮ್ಮ ಸಮಾಜದಲ್ಲಿ ಮಾತು ತನ್ನ ಘನತೆಯನ್ನು ಕಳೆದುಕೊಂಡಿದೆ ಎಂಬ ಆತಂಕ ನಮ್ಮೆಲ್ಲರನ್ನೂ ಕಾಡುತ್ತಿದೆ. ಸಂವಾದ ಸಾಧ್ಯವಾಗದ ಸ್ಥಿತಿಯಲ್ಲಿ ನಾವಿದ್ದೇವೆ. ಮಾತು ಜಗಳವಾಗುತ್ತಿದೆ. ಭಿನ್ನಾಭಿಪ್ರಾಯ ಆಕ್ರಮಣಕಾರಿಯಾಗುತ್ತಿದೆ; ಇಂತಹ ಹೊತ್ತಿನಲ್ಲಿ ನಾವಾಡುವ ಮಾತಿಗೆ ಮತ್ತೆ ಘನತೆ ತರಬೇಕಾಗಿದೆ’ ಎಂದು ಪ್ರಸ್ತಾಪಿಸಿದ್ದೆ. ಆ ಮಾತುಗಳು ಅಂದಿಗಿಂತಲೂ ಇಂದು ಹೆಚ್ಚು ಪ್ರಸ್ತುತವೆನ್ನಿಸುತ್ತಿದೆ. ಸಾರ್ವಜನಿಕ ವಲಯದಲ್ಲಿರುವ ವ್ಯಕ್ತಿಗಳು ಮಾತನಾಡುತ್ತಿರುವ ಧಾಟಿ, ಅದನ್ನು ನಮ್ಮ ಸಮೂಹ ಮಾಧ್ಯಮಗಳು ರೋಮಾಂಚಕಾರಿಯಾಗಿ ಪ್ರಚಾರ ಮಾಡುತ್ತಿರುವ ರೀತಿ ಸಂವೇದನಾಶೀಲ ಸಮಾಜ ತಲೆತಗ್ಗಿಸುವಂತಿದೆ. ‘ಎಲುಬಿಲ್ಲದ ನಾಲಗೆ ಹೇಗೆ ಬೇಕಾದರೂ ಹೊರಳಬಲ್ಲುದು’ ಎಂಬ ನಮ್ಮ ಹಳ್ಳಿಯ ಕಡೆಯ ರೂಢಿಮಾತು ನೆನಪಾಗುತ್ತಿದೆ. ‘ಆಚಾರವಿಲ್ಲದ ನಾಲಗೆ’ ಎಂಬ ದಾಸರ ವಾಣಿಯೂ ನೆನಪಿಗೆ ಬರುತ್ತಿದೆ. ಮಾತಿನ ಘನತೆ ಒಂದು ಸಮಾಜದ ಘನತೆಯೂ ಹೌದು ಎಂಬ ಅರಿವಿದ್ದಾಗ ನಾವು ಎಚ್ಚರದಿಂದ, ಜವಾಬ್ದಾರಿಯಿಂದ ಮಾತನಾಡುವ ಸಾಮಾಜಿಕ ಹೊಣೆಗಾರಿಕೆ ಇರುತ್ತದೆ. ಇಂತಹ ಹೊಣೆಗಾರಿಕೆಯನ್ನು ನೆನಪಿಸುವ ರೀತಿಯಲ್ಲಿ ಇದುವರೆಗಿನ ಅಂಕಣದ ಬರಹಗಳ ವಿನ್ಯಾಸವಿರುವುದನ್ನು ಸಹೃದಯರು ಗಮನಿಸಬಹುದು.

    ಕೆ.ಎಸ್.ನರಸಿಂಹಸ್ವಾಮಿ ತಮ್ಮದೊಂದು ಕವಿತೆಯಲ್ಲಿ ಸೃಜನಶೀಲತೆ, ಪ್ರಭುತ್ವ ಹಾಗೂ ಬಾಹ್ಯ ಒತ್ತಡಗಳನ್ನು ಕುರಿತು ಹೀಗೆ ಹೇಳುತ್ತಾರೆ: ‘ಅದನಿದನೆ ಹಾಡೆಂಬ ಕಡ್ಡಾಯವೇಕೆ?/ವೇದಿಕೆಯ ಮೇಲಿನುಂದುಪದೇಶವೇಕೆ?/ಕಬ್ಬಿಗನು ಬೆದರುವನೆ ಸ್ವಾತಂತ್ರ್ಯಪ್ರೇಮಿ?/ತಾರೆಗಳನಾಳುವನು, ಸಾಲದೀ ಭೂಮಿ.’ ನನ್ನ ಅಂಕಣದಲ್ಲೂ ಯಾವ ನಿರ್ಬಂಧಕ್ಕೂ ಒಳಗಾಗದೆ ಸ್ಥಳೀಯ ಸಂಗತಿಗಳಿಂದ ಮೊದಲ್ಗೊಂಡು ಜಾಗತಿಕ ನೆಲೆಯವರೆಗೆ, ಕೆಲವೊಮ್ಮೆ ಅದನ್ನೂ ಮೀರಿ ಅನೂಹ್ಯ ಜಗತ್ತಿನತ್ತ ಕೈ ಚಾಚಿ ಎಲ್ಲ ವಲಯಗಳನ್ನೂ ಒಳಗೊಳ್ಳುತ್ತ ಬರೆದಿದ್ದೇನೆ. ಆದರೆ ಯಾವ ವಿಷಯವನ್ನು ಕುರಿತು ಬರೆದರೂ ಸಾಹಿತ್ಯ ಕೇಂದ್ರಿತವಾಗಿಯೇ ಅದರ ವಿನ್ಯಾಸವಿರುವುದನ್ನು ಸಹೃದಯರು ಗಮನಿಸಬಹುದು. ಅದಕ್ಕೆ ಕಾರಣವೂ ಇದೆ.

    ಇಂದು ಜಗತ್ತನ್ನು ಗಾಢವಾಗಿ ಪ್ರಭಾವಿಸುತ್ತಿರುವ ಮೂರು ಪ್ರಭಾವೀ ಶಕ್ತಿಗಳೆಂದರೆ ರಾಜಕೀಯ, ಧರ್ಮ ಹಾಗೂ ತಂತ್ರಜ್ಞಾನ. ಇವುಗಳಲ್ಲಿ ರಾಜಕೀಯ ಹಾಗೂ ಧರ್ಮ ಅಧಿಕಾರಕೇಂದ್ರಗಳಾಗಿದ್ದು, ಅಧೀನ ಮನೋವೃತ್ತಿಯನ್ನು ಮಾತ್ರ ಪೋಷಿಸುತ್ತಿವೆ. ಸ್ವತಂತ್ರ ಚಿಂತನೆಯಿಂದ, ಸೃಜನಶೀಲ ಮನೋಭಾವದಿಂದ ಇವು ಬಹುದೂರ; ಪ್ರಕೃತಿಯ ಜೊತೆ ಶೋಷಣಾತ್ಮಕ ಸಂಬಂಧ ಹೊಂದಿರುವ ತಂತ್ರಜ್ಞಾನ ಅಭಿವೃದ್ಧಿಯ ಹೆಸರಿನಲ್ಲಿ ಆತ್ಮಸಂಯಮವಿರದ ಭೋಗಾಸಕ್ತಿಗೆ ಕಾರಣವಾಗಿ, ಸ್ಪರ್ಧಾಜಗತ್ತೊಂದನ್ನು ಸೃಷ್ಟಿಸಿದೆ. ಬಹುಮುಖಿ ನೆಲೆಯ ಬೆಳವಣಿಗೆಗೆ ಬದಲಾಗಿ ಅಧಿಕಾರ ಸಂಪತ್ತುಗಳ ಕೇಂದ್ರೀಕರಣ ಹಾಗೂ ಮಾರುಕಟ್ಟೆ ಆಧಾರಿತ ಅಭಿವೃದ್ಧಿಪಥದತ್ತ ನಾವು ಸಾಗುತ್ತಿದ್ದೇವೆ. ಇಂತಹ ಹೊತ್ತಿನಲ್ಲಿ ‘ಸ್ವಾಯತ್ತಪ್ರಜ್ಞೆ’ಯ ಸಾಹಿತ್ಯ ಮಾತ್ರ ನಾವು ಎದುರಿಸುತ್ತಿರುವ ಬಿಕ್ಕಟ್ಟುಗಳಿಂದ ನಮ್ಮನ್ನು ಪಾರು ಮಾಡಬಲ್ಲುದು. ಸೂಕ್ಷ್ಮಸಂವೇದನಾಶೀಲತೆ ಹಾಗೂ ಮಾನವೀಯತೆಯನ್ನು ಮೂಲದ್ರವ್ಯವಾಗುಳ್ಳ ಸಾಹಿತ್ಯದ ಮೂಲಕ ಸಮಸ್ಯೆಗಳನ್ನು ಪ್ರವೇಶಿಸಿದರೆ ಪರಿಹಾರದ ಸಾಧ್ಯತೆಗಳು ಇತ್ಯಾತ್ಮಕವಾಗಿರುತ್ತವೆ ಎಂಬ ನಂಬಿಕೆಯೂ ಇದಕ್ಕೆ ಕಾರಣ.

    ‘ಹಾಡು ಗೆಳೆಯನೆ ಹಾಡು/ಹಾಡಿನಿಂದಲೆ ನಾಡು/ಕಣ್ದೆರೆದು ನೆಚ್ಚುದಿಸಿ ಕೆಚ್ಚಿನಿಂ ನಿನ್ನ ಹಿಂಬಾಲಿಪಂತೆ/ಹಾಡೆ ಬಾಳಿಗೆ ಭಕ್ತಿ/ಹಾಡೆ ಜೀವಕೆ ಶಕ್ತಿ/ಹಾಡು ಜನ್ಮದ ಭಾರವಳಿದು ಕರ್ಮದ ಹೊರೆಯು ಕರಗುವಂತೆ’- ಇದು ಕುವೆಂಪು ಅವರು ಸಾಹಿತ್ಯದ ಬಗ್ಗೆ ಹೊಂದಿದ್ದ ಗಾಢವಾದ ನಂಬಿಕೆ. ಒಳ್ಳೆಯ ಸಾಹಿತ್ಯ ಸದ್ದುಗದ್ದಲ ಮಾಡದೆ ತನ್ನ ಅಂತಃಶಕ್ತಿಯಿಂದಲೇ ಜನಮಾನಸದಲ್ಲಿ ಇತ್ಯಾತ್ಮಕ ಬದಲಾವಣೆ ತರುತ್ತದೆಂಬುದೆಂಬುದನ್ನು ಇತಿಹಾಸ ಹೇಳುತ್ತದೆ. ಲೇಖಕನಿಗೆ ತನ್ನ ಬರವಣಿಗೆಯ ಬಗ್ಗೆ ಇಂತಹ ನಂಬಿಕೆಯಿರಬೇಕು. ತಕ್ಷಣದ ಪರಿಣಾಮದ ನಿರೀಕ್ಷೆ ಸಲ್ಲದು. ‘ಸಾಮಯಿಕ’ ಅಂಕಣದ ಲೇಖನಗಳ ಹಿಂದೆ ಈ ನಂಬಿಕೆಯಿದೆ.

    ಈ ಅಂಕಣದ ಲೇಖನಮಾಲೆ ನನಗೆ ಅನೇಕ ಸಹೃದಯ ಸ್ನೇಹಿತರನ್ನು ದೊರಕಿಸಿಕೊಟ್ಟಿದೆ. ‘ಒಬ್ಬ ಹೊಸ ಗೆಳೆಯ ಸಿಕ್ಕಿದರೆ ಅದೇ ನಿಜವಾದ ಸಂಪಾದನೆ’ ಎಂದು ತೀನಂಶ್ರೀ ಹೇಳುತ್ತಿದ್ದರು. ಪತ್ರಿಕೆಯ ಈ ಅಂಕಣದ ಮೂಲಕ ನಾನು ಅಪಾರ ಸ್ನೇಹಸಂಪತ್ತನ್ನು ಸಂಪಾದಿಸಿದ್ದೇನೆ. ಬಹಳಷ್ಟು ಸಲ ನಾವು ಪರಿಚಿತರಿಂದ ಪ್ರತಿಕ್ರಿಯೆ ನಿರೀಕ್ಷಿಸುತ್ತೇವೆ; ಅದು ಲಭ್ಯವಾಗುವುದಿಲ್ಲ. ಅದಕ್ಕೆ ಬೇರೆ ಬೇರೆ ಕಾರಣಗಳಿರುತ್ತವೆ. ಆದರೆ ಅಪರಿಚಿತ ಸಹೃದಯರ ಸ್ಪಂದನವನ್ನು ಈ ಅಂಕಣ ನನಗೆ ಧಾರಾಳವಾಗಿ ನೀಡಿದೆ. ಈ ಎಲ್ಲ ಅಂಕಣಬರಹಗಳನ್ನೂ ಸಂಗ್ರಹಿಸಿ ಪುಸ್ತಕ ರೂಪದಲ್ಲಿ ಬೈಂಡ್ ಮಾಡಿಸಿ ನಾನು ಅಕಸ್ಮಾತ್ ಭೇಟಿಯಾದಾಗ ತೋರಿಸಿದ ಸಹೃದಯರಿದ್ದಾರೆ. ಅವರ ಊರಿಗೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಹೋದಾಗ ತಮ್ಮ ಮನೆಯಲ್ಲಿ ಆತಿಥ್ಯ ಸ್ವೀಕರಿಸಬೇಕೆಂದು ಆಗ್ರಹಿಸುವ ಅಭಿಮಾನಿಗಳಿದ್ದಾರೆ. ಕೆಲವು ಲೇಖನಗಳಿಂದ ತಾವು ಪ್ರಭಾವಿತರಾಗಿ ಅಲ್ಲಿಯ ಚಿಂತನೆಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸಿದ್ದೇವೆ ಎಂದು ಹೇಳಿದ ಓದುಗರಿದ್ದಾರೆ. ಈ ಅಂಕಣದ ಪ್ರಭಾವದಿಂದಾಗಿ ತಮ್ಮ ಮಗುವಿಗೆ ತಿಂಗಳಿಗೊಂದು ಪುಸ್ತಕ ಉಡುಗೊರೆ ನೀಡುತ್ತಿದ್ದೇವೆ ಎಂದು ಹೇಳಿದ ತಂದೆತಾಯಂದಿರಿದ್ದಾರೆ. ಇದು ಬರವಣಿಗೆಯ ಶಕ್ತಿಯೆಂದು ನಾನು ಭಾವಿಸಿದ್ದೇನೆ. ಅಂಕಣಬರಹ ಹೀಗೆ ಓದುಗ ಬಳಗವನ್ನು ಸೃಷ್ಟಿಸುವುದು ಸಮೂಹಮಾಧ್ಯಮದ ಪ್ರಭಾವಕ್ಕೆ ನಿದರ್ಶನ.

    ಹೀಗೆಲ್ಲ ಬರೆಯುವಾಗ ಯಾರು ಏನೇ ಬರೆದರೂ, ಎಷ್ಟೇ ಹೇಳಿದರೂ ದಿನೇ ದಿನೇ ಭ್ರಷ್ಟತೆಯ ಭೂತ ಎಲ್ಲರನ್ನೂ ಆವರಿಸಿಕೊಳ್ಳುತ್ತಿದೆ; ಯಾವ ಬಗೆಯ ಪ್ರತಿಭಟನೆಯೂ ಇಲ್ಲದೆ ಯಥಾಸ್ಥಿತಿಯನ್ನು ಜನಸಾಮಾನ್ಯರು ತೆಪ್ಪಗೆ ಒಪ್ಪಿಕೊಂಡು ದಿನನಿತ್ಯ ಸಮಸ್ಯೆಗಳ ಜೊತೆಗೇ ಹೆಣಗಾಡುತ್ತ ನಿಟ್ಟುಸಿರು ಬಿಡುತ್ತಿದ್ದಾರೆ; ದುಷ್ಟರ ಅಟ್ಟಹಾಸ ಹೆಚ್ಚಾಗುತ್ತಲೇ ಇದೆ; ಸಜ್ಜನರೆನಿಸಿಕೊಂಡವರು ಅಸಹಾಯಕತೆ ವ್ಯಕ್ತಪಡಿಸುತ್ತ ಸಿಟ್ಟೇ ಇಲ್ಲದವರಂತಾಗಿ ಸಿನಿಕರಾಗುತ್ತಿದ್ದಾರೆ. ಸಂವೇದನಾಶೀಲರೆನ್ನಿಸಿಕೊಂಡವರು ಪ್ರಭುತ್ವದ ಹಿಂದೆ ಪರಾಕು ಹೇಳುತ್ತಾ ಅಡ್ಡಾಡುತ್ತಿರುವುದಂತೂ ನಮ್ಮ ಕಾಲದ ಅತ್ಯಂತ ಶೋಚನೀಯ ಸ್ಥಿತಿ. ಈ ವಿಷಾದ ಇದ್ದೇ ಇದೆ. ಆದರೆ ಪ್ರಜ್ಞಾವಂತ ಮನಸ್ಸು ಭರವಸೆ ಕಳೆದುಕೊಳ್ಳುವುದಿಲ್ಲ. ಸಮಾಜವನ್ನೇ ಆವರಿಸಿಕೊಂಡಿರುವ ‘ಇಲ್ಲಿ ಏನೂ ಸಾಧ್ಯವಿಲ್ಲ; ಎಲ್ಲರೂ ಭ್ರಷ್ಟರೇ!’ ಎಂಬ ಸಿನಿಕತನದ ನಡುವೆಯೂ ಆಶಾವಾದದ ಬೆಳ್ಳಿಗೆರೆ ಮಿನುಗುತ್ತಲೇ ಇರುತ್ತದೆ. ಜನಜಾಗೃತಿಯ ದನಿಗೆ ಪ್ರಭುತ್ವವೂ ಬೆಚ್ಚುತ್ತದೆ ಎಂಬುದಕ್ಕೆ ನಿದರ್ಶನಗಳು ಇತಿಹಾಸದಲ್ಲಿ ಮಾತ್ರವಲ್ಲ, ನಮ್ಮ ಕಾಲದಲ್ಲೂ ಸಾಕಷ್ಟಿದೆ. ಜನಸಾಮಾನ್ಯರ ಒಳಚೈತನ್ಯ ಕುಗ್ಗದಂತೆ ಕಾಪಾಡುವುದು ಪ್ರಜ್ಞಾವಂತರ ಸಾಮಾಜಿಕ ಜವಾಬ್ದಾರಿ. ಈ ನಂಬಿಕೆಯೇ ಇಲ್ಲಿನ ಬರವಣಿಗೆಯ ಹಿಂದಿನ ತಾತ್ವಿಕ ಹಿನ್ನೆಲೆ.

    ಸಿನಿಕತನದಂತೆಯೇ ಭಟ್ಟಂಗಿತನವೂ ಎಲ್ಲ ಕಾಲದ ಸಮಾಜವನ್ನೂ ಆವರಿಸಿರುವ ಮತ್ತೊಂದು ರೋಗ. ಈ ಭಟ್ಟಂಗಿತನಕ್ಕೆ ಬಲಿಯಾಗದಿರುವುದು ಸುಲಭವೇನಲ್ಲ! ಭಟ್ಟಂಗಿತನಕ್ಕೆ ಒಲಿಸಿಕೊಳ್ಳುವ ಮೋಹಿನಿಯ ಗುಣವಿದೆ. ಆ ವಯ್ಯಾರಕ್ಕೆ ಬಲಿಯಾದರೆ ಆತ್ಮನಾಶ ನಿಶ್ಚಿತ. ಸಭ್ಯತೆಯ ಸೋಗಿನಲ್ಲಿ ಸಿನಿಕರೂ ಆಗದೆ, ಭಟ್ಟಂಗಿತನದ ಬಲೆಗೂ ಸಿಲುಕದೆ ಇವೆರಡರ ನಡುವೆ ಅಂತರ ಕಾಯ್ದುಕೊಳ್ಳುವ ಎಚ್ಚರ ಇಂದಿನ ಅಗತ್ಯವಾಗಿದೆ.

    ಸತ್ಯ ಹೇಳುವುದು ಯಾವತ್ತಿಗೂ ಪ್ರಿಯವಾದ ಸಂಗತಿಯೇನಲ್ಲ. ಸಾಮಾಜಿಕ ಸೌಜನ್ಯ ಅದಕ್ಕೆ ಅಡ್ಡಿಯಾಗುತ್ತಲೇ ಇರುತ್ತದೆ. ಸತ್ಯ ನಮಗೆ ಗೊತ್ತಿದ್ದರೂ ಸೌಜನ್ಯದ ಮುಖವಾಡದಲ್ಲಿ ಅದನ್ನು ಮರೆಮಾಚುತ್ತೇವೆ. ನಿಸ್ಸಂದೇಹವಾಗಿ ಸೌಜನ್ಯ ಸುಸಂಸ್ಕೃತನ ಲಕ್ಷಣ, ಆದರೆ ಅದು ಸತ್ಯದರ್ಶನ ಮಾಡಿಸಲು ಅಡ್ಡಿಯಾಗುವುದಾದರೆ ಅದು ಸಮಾಜಕ್ಕೆ ಅಪಾಯಕಾರಿಯೇ ಹೊರತು ಉಪಯುಕ್ತವಲ್ಲ. ಎಲ್ಲಿ ಪ್ರಜೆಯು ಸೌಜನ್ಯದ ಹೆಸರಿನಲ್ಲಿ ಮೂಕನಾಗಿರುತ್ತಾನೆಯೋ, ವಿಚಾರಹೀನನಾಗಿ ಹೌದಪ್ಪನಾಗಿರುತ್ತಾನೆಯೋ ಅಲ್ಲಿ ದೈವತ್ವಸಿದ್ಧಿ ಬಹು ಸುಲಭ. ಅಜ್ಞಾನದ ಲಾಭವೆಲ್ಲ ಸ್ತುತಿಯ ರೂಪದಲ್ಲಿ ಗೊಂಬೆದೇವರುಗಳಿಗೆ ದೊರಕುತ್ತದೆ. ನಮ್ಮ ಕಾಲದಲ್ಲಿ ಹೀಗೆ ಗೊಂಬೆದೇವರಾಗಿ ಮೆರೆಯುವುದು ತುಂಬ ಸುಲಭವಾಗಿಬಿಟ್ಟಿದೆ. ನಮ್ಮ ಸಮೂಹ ಮಾಧ್ಯಮಗಳೂ ಇದನ್ನು ಪೋಷಿಸುತ್ತಿರುವುದು ಆತಂಕಕಾರಿಯಾದ ಸಂಗತಿ.

    ಸಹೃದಯರೇ, ಇದುವರೆಗೆ ಈ ಅಂಕಣದ ಮೂಲಕ ನನ್ನಲ್ಲಿ ಮೂಡಿದ ಇಂತಹ ಅನೇಕ ಚಿಂತನೆಗಳನ್ನು ನಿಮ್ಮೊಡನೆ ಹಂಚಿಕೊಳ್ಳಲು ‘ವಿಜಯವಾಣಿ’ ಅವಕಾಶ ಮಾಡಿಕೊಟ್ಟಿದೆ. ‘ವಿಜಯವಾಣಿ ಬಳಗ’ಕ್ಕೆ ನನ್ನ ಕೃತಜ್ಞತೆಗಳು. ಐದು ವರ್ಷಗಳು ಸತತವಾಗಿ ಬರೆದಿರುವುದರಿಂದ ಸದ್ಯಕ್ಕೆ ‘ಬಿಡುವು’ ತೆಗೆದುಕೊಳ್ಳೋಣವೆನ್ನಿಸಿದೆ. ಅವಕಾಶ ಒದಗಿ ಬಂದರೆ ಇಲ್ಲಿಯೇ ಮತ್ತೆ ಭೇಟಿಯಾಗೋಣ. ನಮಸ್ಕಾರ.

    (ಲೇಖಕರು ಖ್ಯಾತ ವಿಮರ್ಶಕರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts