ಶಿಗ್ಗಾಂವಿ: ರೈತರ ಜಮೀನು ಮುಟ್ಟಿದವರು ಯಾರೂ ಕುರ್ಚಿ ಮೇಲೆ ಕೂಡಲು ಆಗುವುದಿಲ್ಲ. ರಾಜ್ಯದಲ್ಲಿ ಮತ್ತೊಮ್ಮೆ ನರಗುಂದ ಮಾದರಿ ರೈತ ಬಂಡಾಯ ಆಗಲಿದೆ. ಸಿಎಂ ಸಿದ್ದರಾಮಯ್ಯ ತಕ್ಷಣ ವಕ್ಪ್ ನೋಟಪಿಫಿಕೇಶನ್ ರದ್ದು ಪಡಿಸಬೇಕು ಎಂದು ಸಂಸದ ಬಸವರಾಜ ಬೊಮ್ಮಾಯಿ ತಾಕೀತು ಮಾಡಿದರು.
ರಾಜ್ಯ ಸರ್ಕಾರ ವಕ್ಪ್ ಬೋರ್ಡ್ ಮೂಲಕ ರೈತರಿಗೆ ನೋಟಿಸ್ ನೀಡಿರುವುದನ್ನು ಖಂಡಿಸಿ ಶಿಗ್ಗಾಂವಿ ಮಂಡಲ ಬಿಜೆಪಿ ವತಿಯಿಂದ ಸೋಮವಾರ ಏರ್ಪಡಿಸಿದ್ದ ಬೃಹತ್ ಪ್ರತಿಭಟನೆ ಉದ್ದೇಶಿಸಿ ಅವರು ಮಾತನಾಡಿದರು.
ಶಿಗ್ಗಾಂವಿ ತಾಲೂಕಿನ ಸರ್ವೆ ನಂಬರ್ 417 ರಲ್ಲಿ ನೂರಾರು ಜನ ಬಡವರಿಗೆ ಸ್ಲಮ್ ಬೋರ್ಡ್ ನಿಂದ ಮನೆ ಕಟ್ಟಲು ಅನುಮತಿ ನೀಡಿದ್ದೇವೆ. ಆದರೆ, ಅದು ವಕ್ಪ್ ಆಸ್ತಿ ಅಂತ ದಾವೆ ಹೂಡಿದ್ದಾರೆ. ಬಡವರ ಸೂರನ್ನೂ ಕಸಿಯುವ ಕುತಂತ್ರ ನಡೆದಿದೆ ಎಂದು ಆರೋಪಿಸಿದರು.
ಶಿಗ್ಗಾಂವಿಯಲ್ಲಿ 220 ಕೆವಿ ವಿದ್ಯುತ್ ಸ್ಟೇಷನ್ ಮಾಡಲು ಹೋದಾಗ ಅದು ವಕ್ಪ್ ಆಸ್ತಿ ಎಂದು ಅದರ ವಿರುದ್ಧ ಕೋರ್ಟ್ಗೆ ಹೊಗಿದ್ದಾರೆ. ಕೋರ್ಟಿನಲ್ಲಿ ಹೋರಾಡಿ ಗೆದ್ದು, ವಿದ್ಯುತ್ ಸ್ಟೇಷನ್ ಮಾಡಿದ್ದೇವೆ. ಕಿತ್ತೂರು ರಾಣಿ ಚನ್ನಮ್ಮನ ಮೂರ್ತಿ ಸ್ಥಾಪನೆ ಮಾಡಲು ಅಡ್ಡಿ ಮಾಡಿದರು. ಅದರ ವಿರುದ್ಧವೂ ಹೋರಾಡಿ ಚನ್ನಮ್ಮ ಮೂರ್ತಿ ಸ್ಥಾಪನೆ ಮಾಡಿದ್ದೇವೆ. ಸಂಗೊಳ್ಳಿ ರಾಯಣ್ಣನ ಮೂರ್ತಿ ಸ್ಥಾಪನೆ ಮಾಡಲೂ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ, ಕೆಲವೇ ದಿನಗಳಲ್ಲಿ ಸಂಗೊಳ್ಳಿ ರಾಯಣ್ಣನ ಮೂರ್ತಿ ಸ್ಥಾಪನೆ ಮಾಡುತ್ತೇನೆ ಎಂದು ಭರವಸೆ ನೀಡಿದರು. ತಡಸ ಬಳಿ ಲಂಬಾಣಿ ತಾಂಡಾ ಇರುವ 19 ಎಕರೆ ಜಮೀನು ವಕ್ಪ್ ಆಸ್ತಿ ಎಂದು ಮಾಡಿದ್ದಾರೆ ಎಂದರು.
ನನ್ನ ಆಡಳಿತ ಅವಧಿಯಲ್ಲಿ ವಕ್ಪ್ ಬೋರ್ಡ್ ಕಾರ್ಯಕ್ರಮಕ್ಕೆ ಹೋದಾಗ ಅಲ್ಲಿದ್ದವರು ಕಾಂಗ್ರೆಸ್ ನವರು ವಕ್ಪ್ ಆಸ್ತಿ ನುಂಗಿದ್ದಾರೆ ಎಂದು ಚೀಟಿ ಕೊಟ್ಟರು. ಕಾಂಗ್ರೆಸ್ನ ದೊಡ್ಡ ದೊಡ್ಡ ನಾಯಕರೇ ವಕ್ಪ್ ಆಸ್ತಿ ನುಂಗಿದ್ದಾರೆ. ಅದನ್ನು ವಾಪಸ್ ಪಡೆಯಬೇಕು ಎಂದು ವಕ್ಪ್ ಬೋರ್ಡ್ಗೆ ಹೇಳಿದ್ದೆ, ಅದನ್ನು ಈಗ ತಿರುಚಿ, ನಾನು ರೈತರ ಜಮೀನು ವಾಪಸ್ ಪಡೆಯಲು ಹೇಳಿದ್ದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ನಾನು ಹಾಗೆ ಹೇಳಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಸಿಎಂ ಸಿದ್ದರಾಮಯ್ಯ ಅವರು ರೈತರಿಗೆ ನೀಡಿರುವ ನೋಟಿಸ್ ವಾಪಸ್ ಪಡೆದರೆ ಸಾಲದು, ವಕ್ಪ್ ಗೆಜೆಟ್ ನೋಟಿಫಿಕೇಶನ್ ವಾಪಸ್ ಪಡೆಯಬೇಕು, ಅಷ್ಟೇ ಅಲ್ಲ, ವಕ್ಪ್ ಕಾಯ್ದೆ ರದ್ದಾಗಬೇಕು ಎಂದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು. ಪ್ರಧಾನಿ ಮೋದಿಯವರು ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ ಎಂದರು.
ನಿಮ್ಮ ಜಮೀನಿನ ರಕ್ಷಣೆ ನನ್ನದು
ಶಿಗ್ಗಾಂವಿ ಸವಣೂರು ರೈತರು ನಿಮಗೆ ವಕ್ಪ್ ಬೋರ್ಡ್ನಿಂದ ಬಂದ ನೋಟಿಸನ್ನು ನನ್ನ ಕಚೇರಿಗೆ ತಲುಪಿಸಿ. ನಿಮ್ಮ ಪರವಾಗಿ ನ್ಯಾಯಾಲಯದಲ್ಲಿ ಹೊರಾಟ ಮಾಡುತ್ತೇನೆ. ಶಿಗ್ಗಾಂವಿ ಸವಣೂರಿನ ರೈತರ ಒಂದಿಂಚು ಜಮೀನು ಬಿಡುವುದಿಲ್ಲ. ನಿಮ್ಮ ಜಮೀನಿನ ರಕ್ಷಣ ನನ್ನ ಜವಾಬ್ದಾರಿ ಎಂದು ಭರವಸೆ ನೀಡಿದರು.
ಈಗ ಉಪ ಚುನಾವಣೆ ನಡೆಯುತ್ತಿರುವುದು ಬಿಜೆಪಿ ಹಾಗೂ ಲ್ಯಾಂಡ್ ಜಿಹಾದ್ ನಡೆಸುತ್ತಿರುವ ಕಾಂಗ್ರೆಸ್ ವಿರುದ್ಧ. ಈ ಕ್ಷೇತ್ರದಲ್ಲಿ ಸೌಹಾರ್ದ ಇರಬೇಕು. ಪೊಲೀಸ್ ದೌರ್ಜನ್ಯ ನಿಲ್ಲಬೇಕು. ಅದಕ್ಕಾಗಿ ಈ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸಿ ಕಾಂಗ್ರೆಸ್ಗೆ ತಕ್ಕ ಪಾಠ ಕಲಿಸಬೇಕು ಎಂದರು.
ಮಾಜಿ ಸಂಸದ ಪ್ರತಾಪ ಸಿಂಹ ಮಾತನಾಡಿ, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವುದು ತಾಲಿಬಾನ್ ಮನಸ್ಥಿತಿಯ ಕಾಂಗ್ರೆಸ್ ಸರ್ಕಾರ. ಒಸಾಮಾ ಬಿನ್ ಲಾಡೆನ್, ಮುಲ್ಲಾ ಉಮರ್ ತರ, ರಾಜ್ಯದಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರು ಲವ್ ಜಿಹಾದ್ ಬಳಿಕ, ಲ್ಯಾಂಡ್ ಜಿಹಾದಿ ಆಡಳಿತ ನಡೆಸುತ್ತಿದ್ದಾರೆ. ಹಿಂದುಗಳೆಲ್ಲರೂ ಒಗ್ಗಟ್ಟಾಗಿ ನಮ್ಮ ಒಳಪಂಗಡಗಳ ಭೇದಗಳನ್ನು ಮರೆತು ಜಿಹಾದಿ ಮನಸ್ಥಿತಿಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಡಬೇಕಿದೆ ಎಂದರು.
ಮಾಜಿ ಸಚಿವ ಸಿ.ಟಿ. ರವಿ ಮಾತನಾಡಿ, ಸಂವಿಧಾನ ಬಾಹಿರವಾಗಿರುವ ಕಾಯ್ದೆ ತಿದ್ದುಪಡಿ ಮಾಡುವ ಮೂಲಕ ವಕ್ಪ್ ಮಂಡಳಿಗೆ ಕಾಂಗ್ರೆಸ್ ಬಲ ತುಂಬಿದೆ. ರಾಕ್ಷಸರಿಗೆ ಬಲ ತುಂಬುವ ಮೂಲಕ ದೇಶದ ಹಿಂದು ದೇವರುಗಳನ್ನು ಬಲಹೀನರನ್ನಾಗಿ ಮಾಡಿದ್ದಾರೆ ಎಂದು ಆರೋಪಿಸಿದರು.
ಮಾಜಿ ಸಚಿವ ಸಿ.ಸಿ. ಪಾಟೀಲ್, ಮಾಜಿ ಶಾಸಕರಾದ ಪಿ. ರಾಜೀವ, ರಾಜುಗೌಡ, ದತ್ತಾತ್ರೇಯ ಪಾಟೀಲ್ ರೇವೂರ, ಸ್ಥಳೀಯ ಬಿಜೆಪಿ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.
ನಂತರ ರೈತರೊಂದಿಗೆ ತಹಸೀಲ್ದಾರ್ ಕಾರ್ಯಾಲಯಕ್ಕೆ ತೆರಳಿ ತಹಸೀಲ್ದಾರ್ ಸಂತೋಷ ಹಿರೇಮಠ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.