ಧವನ್​ ಬ್ಯಾಟಿಂಗ್​, ಕುಲದೀಪ್​ ಸ್ಪಿನ್​ ಮೋಡಿಗೆ ಶರಣಾದ ಕಿವೀಸ್​ ಪಡೆ

ನೇಪಿಯರ್: ಇಲ್ಲಿನ ಮೆಕ್ಲೀನ್ ಪಾರ್ಕ್ ಕ್ರೀಡಾಂಗಣದಲ್ಲಿ ಆತಿಥೇಯ ನ್ಯೂಜಿಲೆಂಡ್ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತ 8 ವಿಕೆಟ್​​ಗಳ ಭರ್ಜರಿ ಜಯ ದಾಖಲಿಸಿದೆ. ಈ ಮೂಲಕ ಐದು ಏಕದಿನ ಪಂದ್ಯದ ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆ ಕಾಯ್ದುಕೊಂಡಿದೆ.

ಓಪನರ್​ ಶಿಖರ್​ ಧವನ್​ (75) ಹಾಗೂ ಸ್ಪಿನ್ನರ್​ ಕುಲ್ದೀಪ್(4ವಿಕೆಟ್​)​ ಮೋಡಿಗೆ ನಲುಗಿದ ನ್ಯೂಜಿಲೆಂಡ್, ಭಾರತಕ್ಕೆ ಶರಣಾಯಿತು.

ಟಾಸ್​ ಗೆದ್ದ ನ್ಯೂಜಿಲೆಂಡ್ ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡಿತು. ಟೀಂ ಇಂಡಿಯಾ ದಾಳಿಗೆ ನಲುಗಿದ ಕಿವೀಸ್ ಪಡೆ ಸತತ ವಿಕೆಟ್​ ಕಳೆದುಕೊಳ್ಳುತ್ತಾ ಸಾಗಿತು. ನಾಯಕ ಕೇನ್​ ವಿಲಿಯಮ್ಸನ್​(64) ಬಿಟ್ಟರೆ ಯಾವೊಬ್ಬ ಬ್ಯಾಟ್ಸ್​ಮನ್​ ಕೂಡ ತಂಡಕ್ಕೆ ನೆರವಾಗಲಿಲ್ಲ. ಅಂತಿಮವಾಗಿ ನ್ಯೂಜಿಲೆಂಡ್ 38 ಓವರ್​ಗಳಲ್ಲಿ​ 157 ರನ್​ ಗಳಿಸಿ ಸರ್ವಪತನ ಕಂಡಿತು.

ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಉತ್ತಮ ಆರಂಭ ಪಡೆದುಕೊಂಡಿತು. ಈ ವೇಳೆ ಪ್ರಖರವಾದ ಸೂರ್ಯ ಕಿರಣಗಳು ಪಂದ್ಯಕ್ಕೆ ಅಡ್ಡಿಪಡಿಸಿತು. ಬಳಿಕ ಪಂದ್ಯವನ್ನು ಕೊಂಚ ಹೊತ್ತು ಸ್ಥಗಿತಗೊಳಿಸಲಾಯಿತು. ಜತೆಗೆ ಡಕ್​ವರ್ತ್​ ಲೂಯಿಸ್​ ನಿಯಮದ ಪ್ರಕಾರ 1 ಓವರ್​ ಕಡಿತಗೊಳಿಸಿ 156 ರನ್​ ಟಾರ್ಗೆಟ್​ ನೀಡಲಾಯಿತು. ಓಪನರ್​ ಶಿಖರ್​​​ ಧವನ್​​ರ ಬೊಂಬಾಟ್ ಬ್ಯಾಟಿಂಗ್​ ನೆರವಿನಿಂದ ಭಾರತ 34.5 ಓವರ್​​ಗಳಲ್ಲಿ ಗೆಲುವಿನ ಗುರಿ ತಲುಪಿತು. ಧವನ್​ 75 ರನ್​ ಸಿಡಿಸಿ ಮಿಂಚಿದರು.(ಏಜೆನ್ಸೀಸ್​)