Thursday, 13th December 2018  

Vijayavani

Breaking News

ನಿರಾಶಾವಾದವನ್ನು ಆಚೆ ನೂಕೋಣ…

Thursday, 13.07.2017, 3:00 AM       No Comments

ಒಂದೂರಿನಲ್ಲಿ ಒಬ್ಬ ರೈತನಿದ್ದ. ಆತನ ಹತ್ತಿರ ಒಂದು ನಾಯಿ ಮತ್ತು ಒಂದು ಮೊಲ ಇದ್ದವು. ಒಂದು ದಿನ ಆತ ಅವೆರಡರ ನಡುವೆ ಸ್ಪರ್ಧೆ ಏರ್ಪಡಿಸಿದ. ಮನೆಯೆದುರಿನ ದೊಡ್ಡ ಮೈದಾನದಲ್ಲಿ ಹೊಂಡ ತೋಡಿ ಅದರಲ್ಲಿ ಒಂದು ಮೂಳೆ ಮತ್ತು ಕ್ಯಾರೆಟ್ ಅನ್ನು ಅಡಗಿಸಿ ಅದನ್ನು ಮುಚ್ಚಿದ. ಯಾವ ಪ್ರಾಣಿ ಅದನ್ನು ಮೊದಲು ಹುಡುಕುತ್ತದೆ ಎಂಬುದೇ ಆ ಸ್ಪರ್ಧೆ. ರೈತ ಹೇಳಿದ್ದೇ ನಾಯಿ ಆ ಕಡೆ ಈ ಕಡೆ ನೋಡಿ ಒಂದು ಕಡೆ ಒಳ್ಳೆಯ ಜಾಗ ಹುಡುಕಿ ಹೋಗಿ ಕುಳಿತುಬಿಟ್ಟಿತು. ಅಬ್ಬ ಇಷ್ಟು ದೊಡ್ಡ ಮೈದಾನದಲ್ಲಿ ಹುಡುಕುವುದು ಹೇಗೆ? ಇದೇನು ಆಗುವ ಕೆಲಸವಾ? ನಮ್ಮ ಯಜಮಾನನಿಗೆ ಬೇರೆ ಕೆಲಸವಿಲ್ಲ ಎಂದು ಗೊಣಗುತ್ತಾ ‘ನನ್ನಿಂದ ಸಾಧ್ಯವಿಲ್ಲಪ್ಪಾ, ಅದರ ಬದಲು ಸುಮ್ಮನೆ ಕುಳಿತುಕೊಳ್ಳುವುದು ಒಳ್ಳೆಯದು‘ ಎಂದು ದೂರುತ್ತಲೇ ಕುಳಿತುಕೊಂಡಿತದು.

ಆದರೆ ಮೊಲ ತಕ್ಷಣ ಒಂದು ಕಡೆಯಿಂದ ಮೈದಾನವನ್ನು ಅಗೆಯಲು ಶುರು ಮಾಡಿತು. ಅಲ್ಲಿ ಇಲ್ಲಿ ಜಿಗಿದು ತಾನು ಹುಡುಕಿಯೇ ಹುಡುಕುತ್ತೇನೆ ಎಂದು ಉತ್ಸಾಹದಿಂದ ಕೆಲಸ ಮಾಡಲಾರಂಭಿಸಿತು. ನೆಲವನ್ನೆಲ್ಲ ಮೂಸಿ ನೋಡುವುದು, ಅಗೆಯುವುದು ಮಾಡತೊಡಗಿತು. ಆದರೆ ಎಷ್ಟು ಅಗೆದರೂ ರೈತ ಕ್ಯಾರೆಟ್ ಅಡಗಿಸಿಟ್ಟ ಜಾಗ ಸಿಗುತ್ತಲೇ ಇಲ್ಲ! ಆದರೂ ಮೊಲ ಛಲ ಬಿಡಲಿಲ್ಲ. ಸರಿಸುಮಾರು ಇಡೀ ಮೈದಾನದ ಎಲ್ಲ ಕಡೆಯೂ ನೆಲ ಅಗೆದು ನೋಡಲು ಪ್ರಯತ್ನಿಸಿತು. ಕೊನೆಗೆ ಮೊಲ ನಾಯಿ ಕುಳಿತಿರುವ ಕಡೆಗೇ ಹೊಂಡ ತೋಡುತ್ತ ಬಂತು. ಅದು ನಾಯಿ ಕೂತ ಜಾಗಕ್ಕೆ ಸುರಂಗ ತೋಡಿದ ಹಾಗಾಯಿತು. ಅರೇ! ಎಲ್ಲಿ ನಾಯಿ ಕುಳಿತಿತ್ತೋ ಆ ಜಾಗದ ಕೆಳಗೇ ಮೂಳೆ ಮತ್ತು ಕ್ಯಾರೆಟ್ ಇದ್ದವು!

ಮೊದಲೇ ಮೂಳೆ ಇರುವ ಜಾಗವನ್ನು ಅಂದಾಜು ಮಾಡಿದ್ದು ನಾಯಿ. ನಾಯಿಯ ವಾಸನಾಶಕ್ತಿ ಮೊಲಕ್ಕಿಂತ ಚುರುಕು. ಅದು ಮೊದಲು ಯಾವ ಜಾಗಕ್ಕೆ ಬಂತೋ ಅಲ್ಲಿ ಚೂರು ಪ್ರಯತ್ನಿಸಿದ್ದರೂ ನಾಯಿ ಗೆದ್ದುಬಿಡುತ್ತಿತ್ತು! ಆದರೆ ಅದರ ನಿರಾಶಾವಾದ ಅದು ಕುಳಿತ ಜಾಗದಲ್ಲೇ ಇರುವ ಮೂಳೆಯನ್ನು ಸಿಗದ ಹಾಗೆ ಮಾಡಿತು. ಅದೇ ಮೊಲದ ಆಶಾವಾದವನ್ನು ನೋಡಿ! ಎಷ್ಟೇ ಕಷ್ಟವಾದರೂ ಛಲಬಿಡದೇ ಹುಡುಕುವ ಹಾಗೆ ಮಾಡಿತು.

ಒಂದು ವಿಷಯ ನಮ್ಮೆಲ್ಲರ ಗಮನಕ್ಕೂ ಬಂದಿದೆ. ಅದೆಂದರೆ ಜೀವನದಲ್ಲಿ ಬಹಳ ಬುದ್ಧಿವಂತರು ಮಾತ್ರ ಯಶಸ್ವಿಯಾಗುತ್ತಾರೆ ಎಂದು ಹೇಳಲು ಬರುವುದಿಲ್ಲ! ಮೇಲಿನ ಕಥೆಯ ನಾಯಿಯ ಹಾಗೆ ಎಷ್ಟೇ ಜಾಣರಾದರೂ ನಿರಾಶಾವಾದವೊಂದಿದ್ದರೆ ಯಶಸ್ಸು ಕನ್ನಡಿಯೊಳಗಿನ ಗಂಟೇ. ಸಾಮರ್ಥ್ಯವಿದ್ದರೂ ಸೋಲುವ ಈ ನಾಯಿ ಒಂದು ಉದಾಹರಣೆ ಮಾತ್ರ! ಅಂತಹ ಜನರಿಗೆ ಕೊರತೆಯೇ ಇಲ್ಲ. ಉಹು, ಅಂತಹವರೇ ಜಗತ್ತಿನಲ್ಲಿ ಹೆಚ್ಚಿಗೆ ಇರುವುದು! ಆದರೆ ಮೊಲ! ಭರವಸೆಯನ್ನೇ ನಂಬಿತು. ಜಗತ್ತಿನಲ್ಲಿರುವ ಸಾಧಕರಿಗೆ ಉದಾಹರಣೆ ಈ ಮೊಲ!! ಆಶಾವಾದ ಅಸಾಧ್ಯವನ್ನು ಸಾಧ್ಯವಾಗಿಸಿದರೆ ನಿರಾಶಾವಾದ ಕಣ್ಣೆದುರಿಗಿರುವ ಸಾಧ್ಯತೆಯನ್ನೂ ನಾಶಗೊಳಿಸಿತು!

‘ನೀನು ಏನನ್ನಾದರೂ ತೀವ್ರವಾಗಿ ಬಯಸಿದರೆ ಇಡೀ ಜಗತ್ತೇ ನಿನ್ನೊಡನೆ ಸೇರಿ ಅದನ್ನು ನಿನಗೆ ದೊರಕಿಸಿಕೊಡಲು ಹೊಂಚುಹಾಕುತ್ತದೆ‘ ಎಂಬ ಸಾಲು ಪಾವ್ಲೋ ಕೊಯೆಲೋನ ‘ಆಲ್ಕೆಮಿಸ್ಟ್‘ (ಈ ಪುಸ್ತಕವನ್ನು ಓದದವರು ಖಂಡಿತ ಓದಿ. ‘ರಸವಾದಿ‘ ಎಂದು ಕನ್ನಡ ಅನುವಾದವೂ ಲಭ್ಯವಿದೆ)ನಲ್ಲಿ ಬರುತ್ತದೆ. ಕೊಯೆಲೋ ಹೇಳುವಂತೆ ಕನಸು ನನಸಾಗುವ ಸಾಧ್ಯತೆ ಬದುಕನ್ನು ಆಸಕ್ತಿದಾಯಕವಾಗಿಸುತ್ತದೆ. ಆ ಭರವಸೆಯ ಕಿರಣವೇ ಎಂತಹ ಕತ್ತಲಲ್ಲೂ ನಡೆವ ಹಾದಿ ತೋರುತ್ತದೆ, ಕೈ ಹಿಡಿದು ಮುನ್ನಡೆಸುತ್ತದೆ. ಏಳು ಸಲ ಬಿದ್ದರೂ ಎಂಟನೆಯ ಸಲ ಎದ್ದು ನಡೆಯುವುದರಲ್ಲಿಯೇ ಬದುಕಿನ ಸೌಂದರ್ಯದ ಗುಟ್ಟಿದೆ ಎನ್ನುತ್ತಾನೆ ಕೊಯೆಲ್ಲೋ.

ಭರವಸೆ ಎಂದರೆ ನಂಬಿಕೆ. ಎರಡು ಸಾವಿರ ವಸ್ತುಗಳನ್ನು ಉಪಯೋಗಿಸಿದರೂ ಬಲ್ಬ್ ತಯಾರಿಕೆ ವಿಫಲವಾದಾಗ ಎಡಿಸನ್ ತನ್ನ ಪ್ರಯತ್ನ ನಿಲ್ಲಿಸದಂತೆ ಮಾಡಿದ್ದು ಈ ಭರವಸೆಯೇ! ಇಷ್ಟು ವಸ್ತುಗಳನ್ನು ಉಪಯೋಗಿಸಿದರೂ ಆಗಲಿಲ್ಲವಲ್ಲ ಎಂದು ಅವರು ಕೈಚೆಲ್ಲಿದ್ದರೆ ಜಗತ್ತು ಬೆಳಕು ಕಾಣುತ್ತಿರಲಿಲ್ಲ. ಯಾವಾಗಲೂ ಬದುಕು ನಮ್ಮೆದುರು ಎರಡು ಆಯ್ಕೆಗಳನ್ನಿಡುತ್ತದೆ. ಒಂದು ಗೆಲುವಿನ ಗುಟ್ಟುಗಳನ್ನು ಹೇಳುವುದು, ಇನ್ನೊಂದು ಸೋಲಿಗೆ ನೆಪಗಳನ್ನು ಹೇಳುವುದು! ಮತ್ತು ಇವೆರಡೂ ಆಯ್ಕೆಗಳು ಯಾವಾಗಲೂ ನಮ್ಮವೇ ಆಗಿರುತ್ತವೆ!! ದುರಂತವೆಂದರೆ ನಾನು ಹೇಗೆ ಗೆಲ್ಲಬಹುದು ಎಂದು ಯೋಚಿಸುವವರಿಗಿಂತ ನಾನು ಹೇಗೆ ಸೋಲಬಹುದು, ನನ್ನಿಂದ ಯಾಕೆ ಸಾಧ್ಯವಿಲ್ಲ ಯೋಚಿಸುವವರೇ ಹೆಚ್ಚು! ಇಡುವ ಮೊದಲ ಹೆಜ್ಜೆಯಲ್ಲಿಯೇ ಅಳುಕಿದ್ದರೆ ದಾರಿ ಸಾಗೀತಾದರೂ ಹೇಗೆ? ಹೆದರದೇ ಸಣ್ಣ ಪುಟ್ಟ ಸೋಲುಗಳನ್ನು ಕಡೆಗಣಿಸಿ ಮುನ್ನಡೆದರೆ ಯಶಸ್ಸು ಖಂಡಿತ. ಆದರೆ ನಾವು ಅದನ್ನು ಬಿಟ್ಟು ಆರಂಭಿಕ ಸೋಲುಗಳ ಪೋಸ್ಟ್​ಮಾರ್ಟಮ್ ಪ್ರಾರಂಭಿಸಿಬಿಡುತ್ತೇವೆ. ನಮ್ಮ ಕನಸುಗಳನ್ನು ನಾವೇ ಕೈಯ್ಯಾರೆ ಕೊಂದಿದ್ದರೂ ‘ಆತ್ಮಹತ್ಯೆ‘ ಎಂದು ಶರಾ ಬರೆದು ಬಿಡುತ್ತೇವೆ!

ನಿರಾಶಾವಾದ ಇವತ್ತಿನವರೆಗೂ ಯಾರಿಗೂ ಒಳ್ಳೆಯದನ್ನು ಮಾಡಿಲ್ಲ. ಬದಲು ಗೆಲುವಿನ ಹತ್ತಿರ ಬಂದವರ ದಾರಿ ತಪ್ಪಿಸಿದೆ! ಇನ್ನೇನು ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಮಾಡಿದೆ! ಅಷ್ಟೇ ಅಲ್ಲ, ತಟ್ಟೆಯಲ್ಲಿ ಅನ್ನವನ್ನಿಟ್ಟುಕೊಂಡು ಉಪವಾಸ ಇರುವಂತೆ ಮಾಡಬಲ್ಲ ಅಪಾರ ಸಾಮರ್ಥ್ಯ ಈ ನಿರಾಶಾವಾದಕ್ಕಿದೆ. ಎಲ್ಲವನ್ನು ಸಾಧಿಸಬಲ್ಲ ಅಪರೂಪದ ತಾಕತ್ತಿರುವ ವ್ಯಕ್ತಿಗಳೂ ನಿರಾಶೆಯ ತೆಕ್ಕೆಗೆ ಸಿಕ್ಕಿ ಬರೀ ನೆಪ ಹೇಳುವುದಕ್ಕೆ ಸೀಮಿತರಾಗುತ್ತಾರೆ.

ನಾವೆಲ್ಲ ವಾಲ್ಟ್ ಡಿಸ್ನಿಯ ಹೆಸರು ಕೇಳಿದ್ದೇವೆ. ವೃತ್ತಿಜೀವನದ ಆರಂಭದಲ್ಲಿ ಆತನನ್ನು ಒಂದು ವೃತ್ತಪತ್ರಿಕೆಯಿಂದ ಹೊರಹಾಕಲಾಗಿತ್ತು! ಡಿಸ್ನಿಯ ಹತ್ತಿರ ಒಳ್ಳೆಯ ಐಡಿಯಾಗಳಿಲ್ಲ ಮತ್ತು ಉತ್ತಮ ಕಲ್ಪನಾಶಕ್ತಿ ಇಲ್ಲ ಎಂಬುದು ಅದಕ್ಕೆ ಸಂಪಾದಕ ಕೊಟ್ಟ ಕಾರಣವಾಗಿತ್ತು! ಅದಾದ ನಂತರ ಡಿಸ್ನಿ ಆರಂಭಿಸಿದ ಹಲವು ವ್ಯವಹಾರಗಳು ವಿಫಲವಾದವು. ಆತ ದಿವಾಳಿಯೂ ಆದ! ನೆಪಗಳಲ್ಲ, ವಾಸ್ತವವೇ ಆತನನ್ನು ನಿರಾಶಾವಾದಕ್ಕೆ ದೂಡಬಹುದಾದ ಕ್ಲಿಷ್ಟ ಸಮಯವದು!! ಆದರೆ ವಾಲ್ಟ್ ಡಿಸ್ನಿಯನ್ನು ನಿರಂತರ ಸೋಲು, ದಿವಾಳಿತನ, ಜನರ ಅಪಹಾಸ್ಯ, ಅವಮಾನ, ಅನುಮಾನ ಯಾವುದೂ ನಿರಾಶಾವಾದದ ಸುಳಿಯಲ್ಲಿ ನೂಕಲು ಯಶಸ್ವಿಯಾಗಲಿಲ್ಲ! ಆತ ತನ್ನ ಪ್ರಯತ್ನಗಳನ್ನು ಬಿಡಲೂ ಇಲ್ಲ. ಕೇವಲ ಇಪ್ಪತ್ತು ಡಾಲರ್​ಗಳನ್ನು ಇಟ್ಟುಕೊಂಡು ಮತ್ತೆ ಹೊಸದಾಗಿ ಜೀವನ ಆರಂಭಿಸಲು ಹಾಲಿವುಡ್ ಕಡೆ ಪ್ರಯಾಣ ಬೆಳೆಸಿದ ಆತನ ಮುಂದಿನ ಬದುಕು ಈಗ ಇತಿಹಾಸ. ಹಾಲಿವುಡ್​ನಲ್ಲಿ ಹೊಸ ಅಧ್ಯಾಯವನ್ನೇ ಬರೆದ ಸ್ನೋ ವೈಟ್ ಮತ್ತು ಏಳು ಕುಳ್ಳರು ಆನಿಮೇಟೆಡ್ ಸಿನಿಮಾ, ಮಿಕಿ ಮೌಸ್, ಡಿಸ್ನಿ ಲ್ಯಾಂಡ್ ಪ್ರತಿಯೊಂದೂ ಆತನ ಅದ್ಭುತ ಕಲ್ಪನಾಶಕ್ತಿಗೆ ಅತ್ಯುತ್ತಮ ಉದಾಹರಣೆಗಳು! ತಾನು ಒಂದೇ ಯಶಸ್ಸನ್ನು ಪುನರಾವರ್ತಿಸುವುದಿಲ್ಲ ಎಂದು ಹೇಳುತ್ತಿದ್ದ ಡಿಸ್ನಿ ಅದೇ ಛಲದಿಂದ ಹತ್ತು ಹಲವು ಸಾಧನೆಗಳನ್ನು ಮಾಡಲು ಸಾಧ್ಯವಾಯಿತು. ಆತನ ಆಶಾವಾದ ಆತನನ್ನು ಏರಿಸಿದ ಎತ್ತರ ಕೆಲವರಿಗೆ ಮಾತ್ರ ಏರಲು ಸಾಧ್ಯವಾಗುವಂತಹುದು. ಹಣವಿಲ್ಲದ ಮನುಷ್ಯ ದಿವಾಳಿಯಲ್ಲ, ಎದೆಯಲ್ಲಿ ಭರವಸೆಯ ನಿಧಿ ಇರುವವನಷ್ಟು ಶ್ರೀಮಂತರು ಯಾರೂ ಇಲ್ಲ. ಅದಕ್ಕೆ ಅತ್ಯುತ್ತಮ ಉದಾಹರಣೆ ಡಿಸ್ನಿ. ಕೈಲಿ ಹಣವಿಲ್ಲದಾಗಲೂ ಆತನ ಆಶಾವಾದ ಸೋಲೊಪ್ಪಿಕೊಳ್ಳಲು ಬಿಡಲಿಲ್ಲ. ಆದರೆ ನಾವೇನು ಮಾಡುತ್ತಿದ್ದೇವೆ? ಸಾಧಿಸಲು ಎಲ್ಲ ಅವಕಾಶ ಇದ್ದರೂ ದೂರದ ಅಥವಾ ಇಲ್ಲದ ಕಾರಣವೊಂದನ್ನು ಸೋಲಿಗೆ ನೆಪವಾಗಿಸಲು ಮುಂಚೆಯೇ ಗಟ್ಟಿಯಾಗಿ ಹಿಡಿದಿಟ್ಟುಕೊಂಡಿರುತ್ತೇವೆ!

ಸೋಲು ಎಂದರೆ ವೈಫಲ್ಯವಲ್ಲ. ಆದರೆ ಸೋತು ಪ್ರಯತ್ನ ಕೈಬಿಡುವುದು ಮತ್ತು ಆಶಾವಾದವನ್ನು ಕಳೆದುಕೊಳ್ಳುವುದು ನಿಜವಾದ ವಿಫಲತೆ. ಖ್ಯಾತ ಪೋಲ್ ವಾಲ್ಟರ್ ಒಲಂಪಿಯನ್ ಬಾಬ್ ರಿಚರ್ಡ್ಸ್ ಹೇಳುತ್ತಾರೆ: ‘ಶ್ರೇಷ್ಠತೆಯೆನ್ನುವುದು ನಮ್ಮ ಸುತ್ತಮುತ್ತಲೂ ಇದೆ. ಒಲಿಂಪಿಕ್ ಚಾಂಪಿಯನ್ ಆಗಬಲ್ಲ ಆದರೆ ಪ್ರಯತ್ನ ಪಡದ ಎಷ್ಟೋ ಜನ ನಮ್ಮ ಜತೆಯೇ ಇದ್ದಾರೆ. ನನಗಿಂತ ಬಲಿಷ್ಠರಾದ, ಪ್ರತಿಭಾನ್ವಿತರಾದ ಎಷ್ಟೋ ಜನರು ನನ್ನನ್ನು ಸೋಲಿಸಬಹುದಿತ್ತು. ಅಂಥವರು ಐವತ್ತು ಲಕ್ಷ ಮಂದಿ ಇರಬಹುದು. ಆದರೆ ಅವರು ಯಾರೂ ಫೀಲ್ಡಿಗೆ ಇಳಿಯಲಿಲ್ಲ, ಪೋಲ್ ಅನ್ನು ಮುಟ್ಟಲೇ ಇಲ್ಲ. ಇಳಿದವರಲ್ಲಿ ಬಹುತೇಕರು ಆರಂಭದಲ್ಲಿಯೇ ಸುಸ್ತಾಗಿ ಮರಳಿಹೋದರು.

ಇದು ಪೋಲ್ ವಾಲ್ಟ್​ಗೆ ಮಾತ್ರ ಸಂಬಂಧಿಸಿದ ಕತೆಯಲ್ಲ. ಬದುಕಿನ ಪ್ರತೀ ಯಶೋಗಾಥೆಗೂ ಸಂಬಂಧಿಸಿದ್ದು. ನಮಗೆ ಹೇಗೆ ಅನ್ವಯವಾಗುತ್ತದೆ ಎಂಬುದನ್ನು ಮಾತ್ರ ನಾವು ಹುಡುಕಿಕೊಳ್ಳಬೇಕಾಗಿದೆ. ಅಷ್ಟೇ.

(ಲೇಖಕರು ಉಪನ್ಯಾಸಕಿ, ಕವಯಿತ್ರಿ)

Leave a Reply

Your email address will not be published. Required fields are marked *

Back To Top