More

    ದೀಪಾ ಹೀರೆಗುತ್ತಿ ಅವರ ಅಂಕಣ| ಅಡೆತಡೆಗಳ ನಡುವೆ ಸಾಧನೆಯ ಓಟ…

    ದೀಪಾ ಹೀರೆಗುತ್ತಿ ಅವರ ಅಂಕಣ| ಅಡೆತಡೆಗಳ ನಡುವೆ ಸಾಧನೆಯ ಓಟ...ಚಾಂಪಿಯನ್​ಗಳ ಬಗ್ಗೆ ಬರೆಯುವಾಗ, ಓದುವಾಗ ಯಾವಾಗಲೂ ರೋಮಾಂಚನಗೊಳ್ಳುತ್ತೇನೆ. ಎಲ್ಲರಿಗೂ ಕಾಲಿಡಲಾಗದ, ಏರುವ ಕನಸನ್ನೂ ಕಾಣಲಾಗದ ಸಾಧನೆಯ ಗೌರಿಶಂಕರವನ್ನು ಏರಿ ಗೆಲುವಿನ ಬಾವುಟ ಹಾರಿಸುವ ಧೀಮಂತಿಕೆ ಇರುವ ಅಪರೂಪದ ವ್ಯಕ್ತಿಗಳವರು. ಈ ಸಾಧಕರಲ್ಲೂ ತಮ್ಮದೇ ಆದ ವಿಶೇಷತೆಯುಳ್ಳವರು ಇದ್ದಾರೆ. ಎಲ್ಲ ಬಾಗಿಲುಗಳೂ ಮುಚ್ಚಿಹೋದರೂ ಧೈರ್ಯಗೆಡದೇ ಮುಚ್ಚಿದ ಕಿಟಕಿಯ ಪುಟ್ಟ ಸಂದಿಯೊಂದರಿಂದ ತೂರಿಬರುವ ಬೆಳಕಿನಕೋಲನ್ನೇ ಏಣಿಯಾಗಿಸಿಕೊಂಡು ಆಗಸ ಮುಟ್ಟಿದ ಅಸಾಮಾನ್ಯರವರು. ಸೋಲಿನ, ಸಂಕಟದ, ಅಪಮಾನದ ಸುಳಿ ತಮ್ಮನ್ನು ಆಪೋಶನ ತೆಗೆದುಕೊಳ್ಳುವ ಕೊನೆಯ ಗಳಿಗೆಯಲ್ಲೂ ಸೋಲಿಗೆ, ಸಾವಿಗೆ ಸೆಡ್ಡು ಹೊಡೆದು ಜಗತ್ತೇ ಬೆರಗಾಗುವಂತೆ ಈಜಿ ದಡ ಸೇರಿದವರಿದ್ದಾರೆ.

    ಇಂಥ ಸಾಧಕರ ಕುರಿತು ಯೋಚಿಸುವಾಗಲೆಲ್ಲ ಕ್ಯೂಬಾದ ಅನಾ ಕ್ವಿರಾಟ್ ನೆನಪಾಗುತ್ತಾಳೆ. 1980 ಮತ್ತು 90ರ ದಶಕದ ಜಗತ್ತಿನ ಗಮನ ಸೆಳೆದ ಓಟಗಾರ್ತಿಯಾಕೆ. ಜಗತ್ತಿನ ಪುಟ್ಟ ದ್ವೀಪರಾಷ್ಟ್ರಗಳಲ್ಲೊಂದಾದ ಕ್ಯೂಬಾ ಕ್ರೀಡಾಪಟುಗಳನ್ನು ತನ್ನ ಕೀರ್ತಿಯ ಕಿರೀಟಗಳೆಂದು ಭಾವಿಸುತ್ತದೆ. ದೇಶದ ಹಿರಿಮೆಯನ್ನು ಜಗತ್ತಿಗೆ ಸಾರುವ ಕ್ರೀಡಾಪಟುಗಳಿಗೆ ಆ ದೇಶದಲ್ಲಿ ವಿಶೇಷ ಗೌರವ. ಬರೀ ಒಂದೂಕಾಲು ಕೋಟಿ ಜನಸಂಖ್ಯೆ ಇರುವ ಕ್ಯೂಬಾ 2016 ರ ರಿಯೋ ಡಿ ಜನೈರೋ ಓಲಂಪಿಕ್ಸ್​ನಲ್ಲಿ ಗೆದ್ದದ್ದು ಐದು ಚಿನ್ನವೂ ಸೇರಿದಂತೆ ಹನ್ನೊಂದು ಪದಕಗಳನ್ನು! ಇದನ್ನೂ ಸೇರಿ 1900ರ ನಂತರ ಬೇಸಿಗೆ ಓಲಂಪಿಕ್ಸ್​ನಲ್ಲಿ ಅವರ ಸಾಧನೆ 78 ಚಿನ್ನ, 68 ಬೆಳ್ಳಿ ಮತ್ತು 80 ಕಂಚಿನ ಪದಕಗಳು! ಒಟ್ಟು 226 ಓಲಂಪಿಕ್ಸ್ ಪದಕಗಳು! ಅಲ್ಲಿ ಕ್ರೀಡೆಗೆ ಮತ್ತು ಕ್ರೀಡಾಪಟುಗಳಿಗೆ ಇರುವ ಮಹತ್ವವನ್ನು ಇದರಿಂದ ಊಹಿಸಿಕೊಳ್ಳಬಹುದು.

    ಇಂತಹ ಕ್ರೀಡಾಪ್ರೇಮಿ ಪುಟ್ಟ ದೇಶದ ಅನಾ ಫಿಡೆಲಿಯಾ ಕ್ವಿರಾಟ್ ಜನಿಸಿದ್ದು 1963ರ ಮಾರ್ಚ್ 23ರಂದು. ‘ಫ್ಯಾಟಿ’ ಎಂಬ ನಿಕ್​ನೇಮ್ ಹೊಂದಿದ್ದ ಅನಾಳ ಕುಟುಂಬವೇ ಆಟಗಾರರದ್ದು. ತಂದೆ ಬಾಕ್ಸರ್ ಆಗಿದ್ದರೆ ಅಣ್ಣ 400 ಮೀಟರ್ ಓಟಗಾರ. ಅಕ್ಕ ಕೂಡ ಬಾಸ್ಕೆಟ್​ಬಾಲ್ ಆಟಗಾರ್ತಿ. ಬಾಲ್ಯದಿಂದಲೇ ಓಟಗಾರ್ತಿಯಾಗುವ ಆಸೆ ಇಟ್ಟುಕೊಂಡಿದ್ದ ಅನಾ ಹದಿಮೂರನೇ ವಯಸ್ಸಿಗೇ ಕ್ಯೂಬಾದ ಪ್ರತಿಷ್ಠಿತ ಕ್ರೀಡಾ ಶಾಲೆಯಲ್ಲಿ ಪ್ರವೇಶ ಗಿಟ್ಟಿಸಿಕೊಂಡಳು. ಉಚಿತವಾಗಿ ವಿಶ್ವದರ್ಜೆಯ ಓಟಗಾರ್ತಿಯಾಗುವ ತರಬೇತಿ ಪಡೆದು ವಿದ್ಯಾಭ್ಯಾಸ ಮುಗಿಸಿ ಓಡಲಾರಂಭಿಸಿದಳು. ತನ್ನ ಪ್ರೀತಿಯ 800 ಮೀಟರ್ ಓಟ ಹಾಗೂ 400 ಮೀಟರ್ ಓಟ ಎರಡರಲ್ಲೂ ರಾಷ್ಟ್ರೀಯ ದಾಖಲೆ ನಿರ್ವಿುಸಿದಳು. ಆದರೆ ಕ್ಯೂಬಾ 1984 ಮತ್ತು 1988ರ ಓಲಂಪಿಕ್ಸ್​ಗಳಲ್ಲಿ ಭಾಗವಹಿಸದ ಕಾರಣ ಅನಾ ಎರಡು ಓಲಂಪಿಕ್ಸ್​ನಿಂದ ವಂಚಿತಳಾಗಬೇಕಾಯಿತು. ಆದರೆ ವಿಶ್ವ ಅಥ್ಲೆಟಿಕ್ಸ್​ನಲ್ಲಿ ಬೆಳ್ಳಿ ಗೆದ್ದಳು. 1987ರ ಪಾನ್ ಅಮೆರಿಕನ್ ಗೇಮ್ಸ್​ನಲ್ಲಿ 800 ಮೀಟರ್ ಹಾಗೂ 400 ಮೀಟರ್ ಓಟಗಳೆರಡರಲ್ಲೂ ಚಿನ್ನ ಗೆದ್ದಳು! ಅದಲ್ಲದೇ ಕೆರಿಬಿಯನ್ ಮತ್ತು ಮಧ್ಯ ಅಮೆರಿಕಾದ ಹತ್ತಾರು ಪಂದ್ಯಾವಳಿಗಳಲ್ಲಿ ಚಿನ್ನದ ಹುಡುಗಿಯೂ ಆಗಿದ್ದವಳು.1989ನೇ ಇಸವಿಯಲ್ಲಿ 800 ಮೀಟರ್ ಓಟದಲ್ಲಿ ಸತತ 39 ಸ್ಪರ್ಧೆಗಳನ್ನು ಗೆದ್ದು ಆ ವರ್ಷದ ಅತ್ಯುತ್ತಮ ಮಹಿಳಾ ಕ್ರೀಡಾಪಟು ಎಂಬ ಬಿರುದನ್ನೂ ಅಂತಾರಾಷ್ಟ್ರೀಯ ಅಮೆಚ್ಯೂರ್ ಅಥ್ಲೆಟಿಕ್ಸ್ ಫೆಡರೇಶನ್​ನಿಂದ ಪಡೆದಳು! 1992ರ ಬಾರ್ಸಿಲೋನಾ ಓಲಂಪಿಕ್ಸ್ ನಡೆದಾಗ ಆಕೆ ಕೆಲವು ವಾರಗಳ ಗರ್ಭಿಣಿ. ಆದರೂ ಭಾಗವಹಿಸಿ ಕಂಚಿನ ಪದಕ ಪಡೆದಳು! ಆದರೆ ಆಕೆಯ ಬದುಕಿನಲ್ಲಿ ಅನಿರೀಕ್ಷಿತ ಆಘಾತವೊಂದು ಕಾದಿತ್ತು. ಯಾರೂ ಊಹಿಸದ ಅಪಘಾತವದು. ಆದರೆ ಅಂತಹ ದುರಂತದ ಬಳಿಕವೂ ವಾಪಸಾದ ರೀತಿ ಆಕೆಯನ್ನು ಚಾಂಪಿಯನ್ನರ ಚಾಂಪಿಯನ್ ಎನಿಸಿಕೊಳ್ಳುವಂತೆ ಮಾಡಿತು! ಅನಾ ತನ್ನ ಜೀವಮಾನದ ಅತ್ಯುತ್ತಮ ಸಾಧನೆ ಮಾಡಿದ್ದು ಆ ದುರಂತದ ನಂತರವೇ! ಬದುಕುವುದೇ ಅಸಾಧ್ಯ ಎಂದು ವೈದ್ಯರಿಂದ ಹೇಳಿಸಿಕೊಂಡ ಹುಡುಗಿ ಎರಡೇ ವರ್ಷದಲ್ಲಿ ವಿಶ್ವ ಚಾಂಪಿಯನ್ ಆಗುವುದು ಜಗತ್ತಿನ ಕ್ರೀಡಾ ಇತಿಹಾಸದಲ್ಲಿ ಕಂಡುಕೇಳರಿಯದ ಸಂಗತಿಯೇ ಸೈ. ಹಾಗಾಗಿಯೇ ಅನಾ ಕ್ವಿರಾಟ್ ಎಳೆಯ ಪೀಳಿಗೆಗೊಂದು ಸ್ಪುರ್ತಿಯ ಕಿಡಿ. ಅಪರೂಪದ ರೋಲ್ ಮಾಡೆಲ್!

    1993ರ ಜನವರಿ 23ರ ಆ ಬೆಳಗು ಅನಾಳ ಪಾಲಿಗೆ ಕರಾಳವಾಗಿತ್ತು. ಬಟ್ಟೆ ತೊಳೆಯುವ ರಾಸಾಯನಿಕ ಮಿಶ್ರಣವನ್ನು ಒಲೆಯ ಮೇಲಿರಿಸಿ ತಿರುವಿ ಹದಗೊಳಿಸುತ್ತಿದ್ದ ಅನಾಳ ಮೈಯ್ಯನ್ನು ಉಕ್ಕಿದ ಮಿಶ್ರಣಕ್ಕೆ ಜತೆಯಾದ ಬೆಂಕಿ ಪ್ರಾಣಾಂತಿಕವಾಗಿ ಸುಟ್ಟು ಹಾಕಿತ್ತು. ಯಾರಿಗೂ ಅನಾ ಬದುಕುವ ಭರವಸೆಯಿರಲಿಲ್ಲ. ಅನಾ ಆ ಸಂದರ್ಭದಲ್ಲಿ ಏಳು ತಿಂಗಳ ಗರ್ಭಿಣಿ ಬೇರೆ. ಹುಟ್ಟಿದ ಮಗು ಕೆಲದಿನಗಳಲ್ಲೇ ಇಹಲೋಕದ ವ್ಯಾಪಾರ ಮುಗಿಸಿತು. ಆದರೆ ಅನಾ ಬದುಕಿದಳು. ಎಲ್ಲರೂ ನೋಡನೋಡುತ್ತಿದ್ದಂತೇ ಸಾವನ್ನೇ ಗೆದ್ದಳಾಕೆ. ಅವಳು ಬದುಕಿದ್ದು ಪವಾಡವೇ ಸೈ ಎಂದಿದ್ದು ಬೇರೆ ಯಾರೂ ಅಲ್ಲ, ಸ್ವತಃ ಹವಾನಾ ಆಸ್ಪತ್ರೆಯ ವೈದ್ಯರು! ಅಕಾಸ್ಮಾತ್ ಆಗಿ ಬದುಕಿದರೂ ಆಕೆ ಎಂದಿಗೂ ಓಡಲಾರಳು ಎಂದೂ ಹೇಳಿದ್ದರು ಅವರು! ಆದರೆ ಸುಟ್ಟ ಗಾಯಗಳ ನೋವು, ಮೈತುಂಬಾ ಎದ್ದು ಕಾಣುತ್ತಿದ್ದ ಸುಟ್ಟ ಚರ್ಮ, ಮಗುವನ್ನು ಕಳೆದುಕೊಂಡ ಸಂಕಟ ಹೇಳತೀರದ್ದಾಗಿತ್ತು! ಜತೆಗೆ ಅನಾ ಸೆಲೆಬ್ರಿಟಿ ಆದುದರಿಂದ ಆತ್ಮಹತ್ಯೆಗೆ ಪ್ರಯತ್ನಿಸಿದಳೆಂಬ ಗಾಳಿಸುದ್ದಿ ಬೇರೆ! ಬಹುಶಃ ಇವೆಲ್ಲ ಘಟನೆಗಳ ಪೈಕಿ ಯಾವುದಾದರೂ ಒಂದು ತಮ್ಮ ಬದುಕಿನಲ್ಲಿ ನಡೆದರೂ ಕೈಚೆಲ್ಲುವ ಜನರಿರುವಾಗ ಅನಾ ಫೀನಿಕ್ಸ್​ನಂತೆ ಬೂದಿಯಿಂದ ಎದ್ದು ಬರುವ ನಿರ್ಧಾರ ಕೈಗೊಂಡಳು.

    ಹೇಳಿಕೇಳಿ ಓಟವನ್ನು ಧ್ಯಾನಿಸಿದ, ಪ್ರೀತಿಸಿದ, ಎದೆಗವುಚಿಕೊಂಡ ಜೀವ ಅನಾಳದ್ದು. ಓಟವನ್ನು ಉಸಿರಿನಷ್ಟು ಅನಿವಾರ್ಯವಾಗಿಸಿಕೊಂಡವಳು. ಹಾಗಾಗಿ ರಕ್ತಗತವಾಗಿಹೋಗಿದ್ದ ಓಟದ ಕನಸು ಬೆಂಕಿಯಲ್ಲಿ ಬೆಂದು ಹೋಗಲಿಲ್ಲ. ಈ ದುರಂತ ಘಟನೆ ನಡೆಯುವ ವೇಳೆಗಾಗಲೇ ಹೊಂದಾಣಿಕೆ ಬಾರದೇ ಅವಳ ಪತಿ ಹೈಜಂಪ್ ಪಟು ಜೇವಿಯರ್ ಸೊಟೋಮೇಯರ್ ದೂರವಾಗಿದ್ದ. ಆದರೆ ಅಪಘಾತವಾದ ಮೇಲೆ ಅವಳಿಗೆ ಮಾನಸಿಕ ಬೆಂಬಲ ನೀಡಿದ. ಟ್ರಾŒಕ್ ಅನಾಳನ್ನು ಕೈಬೀಸಿ ಕರೆಯುತ್ತಿತ್ತು. ಮೂವತ್ತರ ನಂತರದ ವಯಸ್ಸು ಓಟಗಾರ್ತಿಯರಿಗೆ ನಿವೃತ್ತಿಯ ಹೊತ್ತು. ಮನಸ್ಸು ಓಡಬೇಕು ಎಂದರೂ ದೇಹ ಸಹಕರಿಸದ ಸಮಯ. ಆದರೆ ಅನಾಳ ಪ್ರಖರ ನಿರ್ಧಾರ ಝುಳಕ್ಕೆ ಅಡೆತಡೆಯ ಗೋಡೆಗಳು ಕರಗಿಹೋದವು! ಏಳು ಚರ್ಮದ ಕಸಿಯ ಶಸ್ತ್ರಚಿಕಿತ್ಸೆಗಳಾದವು. ಆಸ್ಪತ್ರೆಯ ದೀರ್ಘವಾಸ ಮನೋಬಲವನ್ನು ಕುಗ್ಗಿಸದಂತೆ ಆಕೆ ಧೈರ್ಯವನ್ನು ಒಗ್ಗೂಡಿಸಿಕೊಂಡಳು. ಇಂಥ ಸ್ಥಿತಿಯಿಂದ ಎದ್ದುಬಂದ ಅನಾ ಜಗತ್ತಿನ ಅತ್ಯುತ್ತಮ 800 ಮೀಟರ್ ದೂರದ ಓಟಗಾರ್ತಿಯರಲ್ಲಿ ಸ್ಥಾನ ಗಿಟ್ಟಿಸಿಕೊಂಡದ್ದು ಅತ್ಯಪರೂಪದ ಸಂಗತಿ.

    ಹೀಗೆ ಮತ್ತೆ ಟ್ರಾŒಕ್​ಸೂಟ್ ಹಾಕಿದ ಅನಾ ಹಿಂದಿರುಗಿ ನೋಡಲಿಲ್ಲ. 1995ರ ಗೊಥೆನ್​ಬರ್ಗ್ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್​ಶಿಪ್​ನಲ್ಲಿ 800 ಮೀಟರ್ ಓಟದಲ್ಲಿ ಚಿನ್ನ ಗೆದ್ದಳಾಕೆ. ಮೈಯಿಡೀ ಸುಟ್ಟಗಾಯದ ಗುರುತುಗಳು ತುಂಬಿದ್ದ ಅನಾ ಎಂಬ ಮೂವತ್ತೆರಡರ ಕ್ರೀಡಾಪಟು ಬಂಗಾರ ಗೆದ್ದಾಗ ಜಗತ್ತಿನ ಅಚ್ಚರಿಯೆಲ್ಲ ಪ್ರೇಕ್ಷಕರ ಕಂಗಳಲ್ಲಿ. ಅನಾ ಸಾಧಿಸಿದ್ದು ಅಂತಹುದೊಂದು ವಿಕ್ರಮವನ್ನು. 1996ರ ಅಟ್ಲಾಂಟಾ ಓಲಂಪಿಕ್ಸ್​ನಲ್ಲಿ ಬೆಳ್ಳಿ ಗೆದ್ದಳು. 1997ರ ಅಥೆನ್ಸ್ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್​ಶಿಪ್​ನಲ್ಲಿ ಭಾಗವಹಿಸುವಾಗ ಅವಳಿಗೆ 34 ವರ್ಷ! ಅನಾ ಮತ್ತೆ ಚಿನ್ನ ಗೆದ್ದು ವಿಶ್ವಚಾಂಪಿಯನ್ ಕಿರೀಟ ಧರಿಸಿದಳು!.

    ‘ಚಾಂಪಿಯನ್ನರು ಹುಟ್ಟುತ್ತಾರೆ, ಅವರನ್ನು ನಿರ್ವಿುಸಲಾಗುವುದಿಲ್ಲ’ ಎಂಬ ಮಾತಿದೆ. ಆದರೆ ತಮ್ಮನ್ನು ತಾವೇ ಇಂಚಿಂಚಾಗಿ ನಿರ್ವಿುಸಿಕೊಂಡು ಸೃಷ್ಟಿಗೇ ಸವಾಲೊಡ್ಡುವ ಇಂಥವರಿಗೆ ಏನೆನ್ನೋಣ? ಸಣ್ಣಪುಟ್ಟ ಎಡವುವಿಕೆಗೇ ಉಸ್ಸಪ್ಪಾ ಎಂದು ಕುಳಿತುಬಿಡುವ, ಬಾವಿಯೊಳಗಿನ ಕಪ್ಪೆಗಳಂತೆ ಬದುಕಿಡೀ ಒಟಗುಡುತ್ತಾ ಏನನ್ನೂ ಸಾಧಿಸದೇ, ಸಾಧಿಸಿದವರನ್ನು ನೋಡಿ ಖುಶಿಯನ್ನೂ ಪಡದೇ ಹೀಗೆ ಹುಟ್ಟಿ ಹಾಗೆ ಸಾಯುವ ಜನರ ನಡುವಿನಿಂದಲೇ ಬಂದು ತಮ್ಮನ್ನೊಂದು ಮಾದರಿಯಾಗಿ ರೂಪಿಸಿಕೊಂಡ ಅನಾಳಂತಹ ಚಾಂಪಿಯನ್ನರಿಗೆ ಅವರ ಛಲಕ್ಕೆ, ಜೀವನಪ್ರೀತಿಗೆ ಶರಣು. ಮತ್ತೆ ಓಡದಿದ್ದರೆ ತಾನು ಸತ್ತೇಹೋಗುತ್ತಿದ್ದೆ ಎಂಬ ಆಕೆಯ ಮಾತು ಸಾಧನೆಯ ಹಂಬಲದ ತೀವ್ರತೆಗೊಂದು ಉದಾಹರಣೆ!

    ಚಾಂಪಿಯನ್ ಆಗಲು ಸ್ಪರ್ಧಿಸಬೇಕು, ಅತ್ಯುತ್ತಮ ಚಾಂಪಿಯನ್ ಆಗಬೇಕೆಂದರೆ ಅತ್ಯುತ್ತಮರೊಡನೆ ಸ್ಪರ್ಧಿಸಬೇಕು. ಆದರೆ ಅನಾರಂತಹ ಚಾಂಪಿಯನ್ನರು ಇವೆರಡನ್ನೂ ಮೀರಿ ತಮ್ಮ ಜತೆ ತಾವೇ ಸ್ಪರ್ಧಿಸಿ ದಂತಕಥೆಗಳಾದವರು. ಮತ್ತೆ ಏಳಲಾಗದಂತೆ ನೆಲಕಚ್ಚಿದರೂ ಅಪ್ರತಿಮ ಮನೋಬಲದಿಂದ ಎದ್ದು ಇತಿಹಾಸ ನಿರ್ವಿುಸಿದಾಕೆ ಅನಾ. ಛಲಬಿಡದ ಸಾಹಸದಿಂದ ಜಗತ್ತನ್ನು ಬದುಕಲು ಇನ್ನೂ ಉತ್ತಮ ಸ್ಥಳವಾಗಿಸಿದ್ದಕ್ಕಾಗಿ ಅನಾಳಿಗೆ ನಮ್ಮೆಲ್ಲರ ಕೃತಜ್ಞತೆಗಳು ಸಲ್ಲುತ್ತವೆ.

    (ಲೇಖಕರು ಉಪನ್ಯಾಸಕರು, ಕವಯಿತ್ರಿ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts