Monday, 19th November 2018  

Vijayavani

ರಾಜಧಾನಿಯಲ್ಲಿ ಹಸಿರು ಕ್ರಾಂತಿ-ಸಿಎಂ ಎಚ್​ಡಿಕೆ, ಡಿಸಿಎಂ ಪರಮೇಶ್ವರ್​ಗೆ ಡೆಡ್​​ಲೈನ್-ಕೂಡಲೇ ಸ್ಥಳಕ್ಕೆ ಬರುವಂತೆ ರೈತರ ಪಟ್ಟು        ಸೈಟ್ ಕೇಳ್ತಿಲ್ಲ, BMW ಕಾರೂ ಕೇಳ್ತಿಲ್ಲ-ನಾವು ಕೇಳ್ತಿರೋದು ಬೆಳೆದ ಬೆಲೆಗೆ ಬೆಲೆಯಷ್ಟೇ-ಸಚಿವ ಕಾಶಂಪೂರ್​​ಗೆ ಮನವಿ ಸಲ್ಲಿಕೆ        ರೈತರು, ಹೆಣ್ಮಕ್ಕಳ ವಿಚಾರದಲ್ಲಿ ಗೌರವ ಇದೆ-ನನ್ನ ಹೇಳಿಕೆಯಲ್ಲಿ ಯಾವುದೇ ದುರುದ್ದೇಶ ಇಲ್ಲ-ಸಿಎಂ ಹೇಳಿಕೆ ಬಿಡುಗಡೆ        ಸಿಎಂ ಕೂಡಲೇ ಕ್ಷಮೆ ಕೇಳಬೇಕು-ನಾಳಿನ ಕೋರ್​​​ ಕಮಿಟಿ ಸಭೆಯಲ್ಲಿ ಹೋರಾಟದ ನಿರ್ಧಾರ-ಸರ್ಕಾರದ ವಿರುದ್ಧ ಗುಡುಗಿದ ಬಿಜೆಪಿ        ₹3,300 ಕೋಟಿ, 132 ಕಿ.ಮೀ. ದೂರ-ಗುರಗಾಂವ್​​ನಲ್ಲಿ ಎಕ್ಸ್​​ಪ್ರೆಸ್​​ ಹೈವೇ ಲೋಕಾರ್ಪಣೆಗೊಳಿಸಿದ ಪ್ರಧಾನಿ        ರೈಲು ಬರುವ ವೇಳೆ ಹಳಿ ಮಧ್ಯೆ ಮಲಗಿದ ಭೂಪ-ಪ್ರಾಣದ ಹಂಗು ತೊರೆದು ಹುಚ್ಚು ಸಾಹಸ-ಹೈದ್ರಾಬಾದ್​ನಲ್ಲೊಂದು ಮಿರ‍್ಯಾಕಲ್       
Breaking News

ಮಾತು ಮನಸನ್ನು ಕದಡದಿರಲಿ

Thursday, 29.03.2018, 3:04 AM       No Comments

ಮಾತು ಆಡಲೇಬೇಕಾದ ಸಂದರ್ಭದಲ್ಲೂ ಕೆಲವರು ಮೌನವಾಗಿದ್ದು, ಹೇಡಿತನ ತೋರುತ್ತಾರೆ. ಆ ಸಂದರ್ಭದಿಂದ ಪಾರಾಗಲು ಯತ್ನಿಸುತ್ತಾರೆ. ಮತ್ತೆ ಕೆಲವರು ಮಾತು ಮಾತ್ರ ಆಡುತ್ತಾರೆ. ಆದರೆ ವೈಯಕ್ತಿಕ ಜೀವನದಲ್ಲಿ ಅದಕ್ಕೆ ಸಂಬಂಧವಿಲ್ಲದಂತೆ ಬದುಕುತ್ತಾರೆ! ಬಹುಶಃ ಇಂಥವರ ಸಂಖ್ಯೆಯೇ ಇಂದು ಹೆಚ್ಚಿರುವುದು!

ಒಮ್ಮೆ ಅರಸನೊಬ್ಬನ ಭೇಟಿಗೆ ಬಂದ ಸಾಧುವೊಬ್ಬ ರಾಜಕುಮಾರನಿಗೆ ಮೂರು ಗೊಂಬೆಗಳನ್ನು ಕೊಟ್ಟ. ರಾಜಕುಮಾರ ನಕ್ಕು ಕೇಳಿದ, ‘ಅಲ್ಲ ಗುರುಗಳೇ ನಾನೇನು ಚಿಕ್ಕ ಮಗುವೇ, ನನಗೆ ಗೊಂಬೆಗಳನ್ನು ಉಡುಗೊರೆಯಾಗಿ ಕೊಟ್ಟಿದ್ದೀರಲ್ಲಾ’ ಎಂದು. ಆಗ ಸಾಧು, ‘ಇದು ಮುಂದಿನ ರಾಜನಿಗೆ ನಾನು ಕೊಡುತ್ತಿರುವ ಉಡುಗೊರೆ. ನೀನಿದನ್ನು ಗಮನವಿಟ್ಟು ನೋಡಿದರೆ ಈ ಎಲ್ಲ ಗೊಂಬೆಗಳ ಎಡಕಿವಿಯಲ್ಲಿ ಒಂದು ತೂತು ಇರುವುದನ್ನು ನೋಡಬಹುದು. ಈ ದಾರವನ್ನು ತೆಗೆದುಕೋ, ಎಲ್ಲ ಗೊಂಬೆಗಳ ಕಿವಿಯಲ್ಲಿಯೂ ಈ ದಾರವನ್ನು ಹಾಕಿ ಹೊರತೆಗೆ’ ಎಂದ. ರಾಜಕುಮಾರ ಆಯಿತು ಎಂದು ಮೊದಲ ಗೊಂಬೆಯ ಕಿವಿಯಲ್ಲಿ ದಾರ ಹಾಕಿದ. ಅದು ಇನ್ನೊಂದು ಕಿವಿಯಿಂದ ಹೊರಬಂತು. ಆಗ ಸಾಧು ಹೇಳಿದ, ‘ಇದೊಂದು ರೀತಿಯ ವ್ಯಕ್ತಿ, ನೀನು ಏನೇ ಹೇಳು, ಒಂದು ಕಿವಿಯಿಂದ ಕೇಳಿ ಇನ್ನೊಂದು ಕಿವಿಯಿಂದ ಬಿಟ್ಟುಬಿಡುತ್ತಾನೆ, ಇವನು ಜವಾಬ್ದಾರಿ ಇಲ್ಲದವನು. ಇಂತಹವರಿಂದ ಯಾವ ಕೆಲಸವೂ ಆಗದು, ಬದುಕನ್ನು ಬಹಳ ಹಗುರವಾಗಿ ತೆಗೆದುಕೊಳ್ಳುವ ವ್ಯಕ್ತಿಗಳು ಇಂತಹವರು’.

ರಾಜಕುಮಾರ ಎರಡನೇ ಗೊಂಬೆಯ ಕಿವಿಯಲ್ಲಿ ದಾರ ಹಾಕಿದ, ಅದು ಗೊಂಬೆಯ ಬಾಯಿಂದ ಹೊರಬಂತು. ಸಾಧು ನಗುತ್ತ ಹೇಳಿದ, ‘ಇದು ಇನ್ನೊಂದು ರೀತಿಯ ಮನುಷ್ಯ. ನೀನೇನೇ ಹೇಳು ಅದನ್ನು ಆತ ಬೇರೆಯವರಿಗೆ ಹೇಳುತ್ತಾನೆ, ಇವನನ್ನು ನಂಬುವುದೇ ಕಷ್ಟ. ಕಿವಿಯಲ್ಲಿ ಕೇಳಿದ ಮಾತು ಬಾಯಿಂದ ಹೊರಬರದಿದ್ದರೆ ಇಂತಹ ವ್ಯಕ್ತಿಗಳಿಗೆ ಉಂಡ ಅನ್ನ ಅರಗದು!’ ಮೂರನೆಯ ಗೊಂಬೆಯ ಕಿವಿಯಲ್ಲಿ ರಾಜಕುಮಾರ ಹಾಕಿದ ದಾರ ಹೊರಬರಲೇ ಇಲ್ಲ, ಆಗ ಸಾಧು ಎಂದ, ‘ಈ ಥರದ ವ್ಯಕ್ತಿಗೆ ನೀನು ಏನೇ ಹೇಳಿದರೂ ಅದು ಅವನಲ್ಲೇ ಭದ್ರವಾಗಿರುತ್ತದೆ. ಎಂದೂ ಹೊರಬರುವುದಿಲ್ಲ. ಇವನನ್ನು ನೀನು ನಂಬಬಹುದು’.

‘ಹಾಗಾದರೆ ಇವರಲ್ಲಿ ಅತ್ಯುತ್ತಮವಾದ ವ್ಯಕ್ತಿ ಯಾರು, ಮೂರನೇ ಗೊಂಬೆಯಂತೆ ಗುಟ್ಟನ್ನು ತನ್ನಲ್ಲೇ ಇಟ್ಟುಕೊಳ್ಳುವವನೇ?’ ಕೇಳಿದ ರಾಜಕುಮಾರ. ಆಗ ಸಾಧು ಮುಗುಳ್ನಕ್ಕು ಮತ್ತೊಂದು ಗೊಂಬೆಯನ್ನು ತೆಗೆದು ರಾಜಕುಮಾರನಿಗೆ ಕೊಟ್ಟ. ರಾಜಕುಮಾರ ಆ ನಾಲ್ಕನೇ ಗೊಂಬೆಯ ಕಿವಿಯಲ್ಲಿ ದಾರ ಹಾಕಿದಾಗ ಅದು ಇನ್ನೊಂದು ಕಿವಿಯಿಂದ ಹೊರಬಂತು. ‘ಮತ್ತೊಮ್ಮೆ ದಾರ ಹಾಕು’ ಎಂದ ಸಾಧು. ಆಗ ಅದು ಬಾಯಿಂದ ಹೊರಬಂತು. ಮತ್ತೊಮ್ಮೆ ಅದೇ ಕೆಲಸ ಮಾಡಿದಾಗ ಅದು ಹೊರಬರಲೇ ಇಲ್ಲ. ಆಗ ಸಾಧು ಹೇಳಿದ, ‘ನೋಡು, ಈ ಥರದವನು ಅತ್ಯುತ್ತಮ ವ್ಯಕ್ತಿ. ಒಬ್ಬ ವ್ಯಕ್ತಿ ನಂಬಿಕೆಗೆ ಅರ್ಹನಾಗಬೇಕೆಂದರೆ ಆತನಿಗೆ ಯಾವಾಗ ಕೇಳಿಸಿಕೊಂಡಿರುವುದನ್ನು ಮರೆತುಬಿಡಬೇಕು, ಯಾವಾಗ ಸುಮ್ಮನಿರಬೇಕು ಯಾವಾಗ ಮಾತನಾಡಬೇಕು, ಗುಟ್ಟಿನ ವಿಚಾರಗಳನ್ನು ಹೇಗೆ ಕಾಪಾಡಿಕೊಳ್ಳಬೇಕು ಎಲ್ಲವೂ ಗೊತ್ತಿರುತ್ತದೆ. ಇಂತಹ ವ್ಯಕ್ತಿಗಳು ರಾಜ್ಯವೊಂದರ ಆಸ್ತಿ. ನೀನು ಈ ನಾಲ್ಕನೇ ಗೊಂಬೆಯ ಗುಣಗಳನ್ನು ಬೆಳೆಸಿಕೋ. ಮತ್ತು ಮುಂದೆ ರಾಜನಾದಾಗ ಇಂತಹುದೇ ವ್ಯಕ್ತಿಗಳನ್ನು ಮಂತ್ರಿಮಂಡಲಕ್ಕೆ ಆಯ್ಕೆ ಮಾಡಿಕೋ. ಸಮಯ ಸಂದರ್ಭ ಅರಿತು ಮಾತನಾಡುವ, ಬೇಡವಾದುದನ್ನು ಮರೆಯುವ, ಅವಶ್ಯವಾದುದನ್ನು ನೆನಪಿನಲ್ಲಿಟ್ಟುಕೊಳ್ಳುವ ಗುಣ ಎಂದಿಗೂ ಅತ್ಯುತ್ತಮವಾದದ್ದು. ಇದು ರಾಜ್ಯವನ್ನು ನಡೆಸಲು ಮಾತ್ರವಲ್ಲ, ಸುಖಕರ ಜೀವನ ನಡೆಸಲೂ ಅತ್ಯವಶ್ಯಕವಾದುದು’.

ಬಹುಶಃ ನಮ್ಮೆಲ್ಲರಿಗೂ ಬಹು ಮುಖ್ಯವಾದ ಪಾಠವಿದು. ‘ಬುದ್ಧಿವಂತರು ಏನಾದರೂ ಹೇಳುವುದಿದ್ದಾಗ ಮಾತ್ರ ಮಾತನಾಡುತ್ತಾರೆ, ಮೂರ್ಖರು ಏನನ್ನಾದರೂ ಹೇಳಬೇಕೆಂದು ಮಾತನಾಡುತ್ತಾರೆ’ ಎಂಬ ಪ್ಲೇಟೋನ ಮಾತು ಬಹಳ ಸಂದರ್ಭದಲ್ಲಿ ನಮ್ಮ ಅನುಭವಕ್ಕೂ ಬರುತ್ತಿರುತ್ತದೆ. ಭಯಾನಕ ರೋಗಗಳಿಂದ ಆಗುವ ಸಾವುಗಳಿಗಿಂತ ಬೇಡದ ಮಾತುಗಳಿಂದ ಆದ ಸಾವುಗಳು ಹೆಚ್ಚೇನೋ! ಮಾತಿಗೆ ಮಾತು ಬೆಳೆದು ಆಗುವ ಕೊಲೆ ಆತ್ಮಹತ್ಯೆಗಳ ಸಂಖ್ಯೆ ದಿನದಿನವೂ ಏರುಮುಖವನ್ನೇ ಕಾಣುತ್ತಿದೆ. ಅಷ್ಟೇ ಅಲ್ಲ, ಅದರ ನೂರು ಪಟ್ಟು ಮನಸ್ಸುಗಳು ಮಾತಿನಿಂದಲೇ ಒಡೆದುಹೋಗಿವೆ! ಪರಸ್ಪರರ ಮುಖ ನೋಡದಿದ್ದರೆ ದಿನ ಕಳೆಯಲಾಗದಂತಿದ್ದ ಅದೆಷ್ಟೋ ಆಪ್ತರು ಶತ್ರುಗಳಾಗಿಹೋಗಿದ್ದಾರೆ! ಇವೆಲ್ಲಕ್ಕೂ ಕಾರಣ ನಮಗೆ ಮಾತನಾಡಲು ಬರುತ್ತದೆಯೇ ವಿನಃ ಯಾವಾಗ ಹೇಗೆ ಎಷ್ಟು ಮಾತನಾಡಬೇಕು, ಯಾವಾಗ ಮೌನವಹಿಸಬೇಕು ಎಂಬುದು ಗೊತ್ತಿಲ್ಲದೇ ಇರುವುದು!

ತಮಗಾಗಿ ಮಾತನಾಡುವುದು ಸಲೀಸು. ಆದರೆ ಬೇರೆಯವರಿಗಾಗಿ ಮಾತನಾಡುವುದು ಕಷ್ಟ. ಮೌನವಾಗಿರುವುದು ಗೋಜಲಿಗೆ ಸಿಕ್ಕಿ ಹಾಕಿಕೊಳ್ಳದಿರುವ ಉಪಾಯ ಕೆಲವರಿಗೆ. ಬಹಳಷ್ಟು ಸಂದರ್ಭಗಳಲ್ಲಿ ಮಾತನಾಡಲೇಬೇಕಾದವರು ಮೌನವಾಗಿರುವುದನ್ನು ನೋಡುತ್ತೇವೆ. ಉತ್ತರಕುಮಾರನಿಗಿಂತಲೂ ಹೇಡಿಗಳಿವರು. ತಮ್ಮ ಅನುಕೂಲ ನೋಡಿಕೊಂಡು ಅಳೆದು ಸುರಿದು ಮಾತನಾಡುವ ಇಂಥವರು ಯಾರ ಆಪ್ತರೂ ಆಗಲಾರರು. ಅವಶ್ಯಕತೆಯಿದ್ದಾಗ ನ್ಯಾಯದ ಪರ ಮಾತನಾಡುವ ಅಭ್ಯಾಸ ಮಾಡಿಕೊಂಡರೆ ನಾವು ನಂಬಿಕೆಗೆ ಅರ್ಹ ವ್ಯಕ್ತಿಗಳಾಗುತ್ತೇವೆ. ಹಾಂ, ತಮಗಾಗಿ ಮಾತನಾಡುವ ಧೈರ್ಯವೇ ಇಲ್ಲದ ಕೋಟ್ಯಂತರ ದುರ್ಬಲರು ಇನ್ನೂ ಇದ್ದಾರೆ. ಅವರಿಗೋಸ್ಕರ ದನಿಯೆತ್ತಿದ ಮಹನೀಯರು ಇಂದು ಪ್ರಾತಃಸ್ಮರಣೀಯರಾಗಿದ್ದಾರೆ. ಜಗತ್ತಿನ ಇತಿಹಾಸದ ಪುಟಗಳಲ್ಲಿ ದನಿಯಿಲ್ಲದವರಿಗಾಗಿ ಮಾತನಾಡಿದವರು ಮಹಾತ್ಮರೆನಿಸಿಕೊಂಡಿದ್ದಾರೆ, ವಿಶ್ವ ನಾಯಕರಾಗಿದ್ದಾರೆ! ತಮ್ಮ ಮತ್ತು ತಮ್ಮಂತಹುದೇ ತುಳಿತಕ್ಕೊಳಗಾದವರ ಪರವಾಗಿ ದನಿಯೆತ್ತಿದವರು ಅದ್ಭುತಗಳನ್ನು ಸಾಧಿಸಿದ್ದಾರೆ! ಇಂತಹವರು ಮಾಡಿದ ಮಹಾತ್ಕಾರ್ಯಗಳು ಮನುಕುಲಕ್ಕೆ ತಮ್ಮ ಸಾಧನೆಯನ್ನು ಸಾರಿ ಸಾರಿ ಹೇಳುತ್ತವೆ! ದೊಡ್ಡವರ ದೊಡ್ಡ ಕೆಲಸಗಳನ್ನೇ ನಾವೂ ಸಣ್ಣ ಪ್ರಮಾಣದಲ್ಲಾದರೂ ಮಾಡುವುದರಿಂದ ಸಮಾಜದ ಋಣ ತೀರಿಸಬಹುದು. ನತದೃಷ್ಟರ ಮೋಡಕವಿದ ಬಾಳಿಗೆ ಕಾಮನಬಿಲ್ಲಾಗುವ ಅವಕಾಶ ಎಲ್ಲರ ಪಾಲಿಗೆ ಇರುತ್ತದೆ! ಅದನ್ನು ಸರಿಯಾದ ಸಂದರ್ಭದಲ್ಲಿ ಉಪಯೋಗಿಸಿಕೊಳ್ಳಬೇಕಷ್ಟೇ! ಎರಡು ಕಿವಿ ಒಂದು ಬಾಯಿ ಇರುವುದು ಹೆಚ್ಚು ಕೇಳಿಸಿಕೊಂಡು ಕಡಿಮೆ ಮಾತನಾಡಲು ಎಂಬ ಮಾತು ಸತ್ಯವಾದರೂ ಆಡಬೇಕಾದಾಗ ಆಡದ ಮಾತುಗಳಿಗೂ, ವ್ಯಕ್ತಿಗೂ ಬೆಲೆ ಇಲ್ಲ! ಮತ್ತೂ ಕೆಲವರು ಮಾತು ಮಾತ್ರ ಆಡುತ್ತಾರೆ ಆದರೆ ವೈಯಕ್ತಿಕ ಜೀವನದಲ್ಲಿ ಅದಕ್ಕೆ ಸಂಬಂಧವಿಲ್ಲದಂತೆ ಬದುಕುತ್ತಾರೆ! ಬಹುಶಃ ಇಂಥವರ ಸಂಖ್ಯೆಯೇ ಇಂದು ಹೆಚ್ಚಿರುವುದು!

‘ಎದ್ದುನಿಂತು ಮಾತಾಡುವುದಕ್ಕೆ ಎಷ್ಟು ಧೈರ್ಯ ಬೇಕೋ ಅದಕ್ಕಿಂತ ಹೆಚ್ಚು ಧೈರ್ಯ ಸುಮ್ಮನೆ ಕುಳಿತು ಮಾತುಗಳನ್ನು ಕೇಳಿಸಿಕೊಳ್ಳಲು ಬೇಕು’ ಎಂದಿದ್ದರು ವಿನ್​ಸ್ಟನ್ ರ್ಚಚಿಲ್. ಕೆಲವರು ಮಾತಾಡಲೇಬೇಕಾದಾಗಲೂ ಸುಮ್ಮನುಳಿದರೆ ಇನ್ನು ಕೆಲವರು ಮೌನ ವಹಿಸಬೇಕಾದಾಗಲೂ ಬೇಡದ ಮಾತನಾಡಿ ತಾವೂ ತೊಂದರೆಗೆ ಸಿಕ್ಕಿ ಹಾಕಿಕೊಂಡು ಇತರರನ್ನೂ ಇಕ್ಕಟ್ಟಿಗೆ ಸಿಲುಕಿಸುತ್ತಾರೆ. ಕುಟುಂಬದಲ್ಲೋ, ಕೆಲಸದ ಸ್ಥಳದಲ್ಲೋ ಕೆಲವರು ಏನೇನೋ ಮಾತಾಡುವಾಗ ಸುಮ್ಮನಿರುವುದು ಬಹಳ ಕಷ್ಟ. ಮಾತನಾಡಿದರೆ ಏನೂ ಪ್ರಯೋಜನವಿಲ್ಲ ಮತ್ತು ತೊಂದರೆಯೇ ಜಾಸ್ತಿ ಎಂದು ಗೊತ್ತಿದ್ದರೂ ಮಾತನಾಡುವ ತುರ್ತಿಗೆ ಒಳಗಾಗಿ ಸಂಯಮ ಕಳೆದುಕೊಂಡು ಬಿಡುತ್ತೇವೆ. ಆದರೆ ಅಂತಹ ಸಂದರ್ಭದಲ್ಲಿ ತಾಳ್ಮೆ ಕಾಯ್ದುಕೊಂಡರೆ ಹಲವಾರು ಅನಾಹುತಗಳನ್ನು ತಡೆಗಟ್ಟಬಹುದು.

ಅರ್ಥರಹಿತ ಮಾತುಗಳು ಕಾಗದದ ಚೂರುಗಳಂತೆ. ಅವು ಎಲ್ಲೆಂದರಲ್ಲಿ ಹಾರಾಡಿ ಮಣ್ಣಾಗಿ ಹೋಗುತ್ತವೆ. ‘ಮಾತಾಡುವಾಗ ಎರಡು ಸಲ ಯೋಚಿಸಿ ಮಾತನಾಡು, ಏಕೆಂದರೆ ನಿನ್ನ ಮಾತುಗಳು ಎದುರಿಗಿರುವವನ ಮನಸ್ಸಿನಲ್ಲಿ ಯಶಸ್ಸಿನ ಅಥವಾ ಸೋಲಿನ ಬೀಜ ಬಿತ್ತಬಹುದು’ ಎಂಬ ನೆಪೋಲಿಯನ್ ಹಿಲ್ ಮಾತು ಎಲ್ಲ ಕಾಲಕ್ಕೂ ಸತ್ಯ. ಅದರಲ್ಲೂ ನಾವೇನಾದರೂ ಶಿಕ್ಷಕವೃತ್ತಿಯಲ್ಲಿದ್ದರೆ ಬಹು ಎಚ್ಚರಿಕೆ ವಹಿಸಲೇಬೇಕು, ಕಾರಣ ನಮ್ಮ ಒಂದೆರಡು ವಾಕ್ಯಗಳು ಎದುರಿಗಿರುವ ಸಾವಿರಾರು ಮನಸ್ಸುಗಳನ್ನು ಕಟ್ಟಬಹುದು ಅಥವಾ ಒಡೆಯಬಹುದು!

ಬಹಳ ಮಂದಿಗೆ ಮಾತು ಸಮಯಕಳೆಯುವ ಸಾಧನ. ತಪ್ಪೇನಲ್ಲ, ಆದರೆ ಎದುಗಿರುವ ವ್ಯಕ್ತಿಯ ಸಮಯದ ಬಗ್ಗೆ ಕೊಂಚ ಗೌರವವೂ ಇಲ್ಲದೇ ಸಮಯವನ್ನು ಸಾಯಿಸುವವರು ಬಹಳವಿದ್ದಾರೆ. ಬೇರೆಯವರ ಬಗ್ಗೆ ಬೇಡದ ಮಾತುಗಳನ್ನಾಡುತ್ತ, ಚಾಡಿ ಹೇಳುತ್ತ ಸಮಯ ಕಳೆವ ಇಂತಹ ಜನರಿಂದ ಉಪಾಯದಿಂದ ತಪ್ಪಿಸಿಕೊಳ್ಳಬೇಕೇ ಹೊರತು ಅವರನ್ನು ಬದಲಾಯಿಸುವುದು ಸಾಧ್ಯವಿಲ್ಲ! ಇತರರ ಸಮಯಕ್ಕೆ ಬೆಲೆ ಕೊಡುವ ವ್ಯಕ್ತಿಗಳು ಸ್ವಾಭಾವಿಕವಾಗಿ ತಮ್ಮ ಸಮಯಕ್ಕೂ ಮಹತ್ವ ಕೊಡುತ್ತಾರೆ. ಮತ್ತು ಸಮಯದ ಮಹತ್ವವನ್ನು ಅರಿತ ಜನರು ಸಾಧನೆಯ ಹಾದಿಯಲ್ಲಿ ಮುಂದಿರುತ್ತಾರೆ. ಸಮಯ ಸಂದರ್ಭ ಅರಿತು ಆಡುವ ಹಿತಮಿತವಾದ ಮಾತು ಎಂದಿಗೂ ಜ್ಯೋತಿರ್ಲಿಂಗವೇ!

Leave a Reply

Your email address will not be published. Required fields are marked *

Back To Top