ಪ್ರಾದೇಶಿಕ ಅಸಮಾನತೆ ನಿವಾರಣೆಗೆ ನಂಜುಂಡಪ್ಪ ವರದಿ ಮದ್ದು

ಧಾರವಾಡ: ಪ್ರಾದೇಶಿಕ ಅಸಮಾನತೆ ವಿಶ್ವಮಟ್ಟದಲ್ಲಿದೆ. ಇದನ್ನ ವಿಸõತ ನೆಲೆಗಟ್ಟಿನಲ್ಲಿ ನೋಡಬೇಕು. ಪ್ರಾದೇಶಿಕ ಅಸಮಾನತೆಯ ನಿವಾರಣೆಗೆ ಸಿದ್ಧವಾಗಿದ್ದೇ ನಂಜುಂಡಪ್ಪ ವರದಿ ಎಂದು ಎಂದು ಸಮಾಜ ಪರಿವರ್ತನಾ ಸಮಿತಿ ಅಧ್ಯಕ್ಷ ಎಸ್.ಆರ್. ಹಿರೇಮಠ ಹೇಳಿದರು.

84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಮುಖ್ಯ ವೇದಿಕೆಯಲ್ಲಿ ಆರಂಭವಾದ ಮೊದಲ ಗೋಷ್ಠಿಯ ಉತ್ತರ ಕರ್ನಾಟಕ: ಅಭಿವೃದ್ಧಿಯ ಸವಾಲುಗಳು ಎಂಬ ವಿಷಯದ ಕುರಿತು ಚರ್ಚೆಯಲ್ಲಿ ವಿಷಯ ಮಂಡಿಸಿ ಅವರು ಮಾತನಾಡಿದರು.

1000 ಪುಟಗಳ ವಿವರವನ್ನ ಡಾ. ಡಿ.ಎಂ. ನಂಜುಂಡಪ್ಪ ಸರ್ಕಾರಕ್ಕೆ ಸಲ್ಲಿಸಿದ್ದರು. 175 ತಾಲೂಕಗಳ ಪೈಕಿ 114 ತಾಲೂಕು ಹಿಂದುಳಿದಿವೆ ಅಂತ ನಂಜುಂಡಪ್ಪ ವರದಿ ಹೇಳಿದೆ. 2007-08ರಲ್ಲಿ ವರದಿ ಅನುಷ್ಠಾನ ಆರಂಭವಾಗಿದೆ. ಜವಾಬ್ದಾರಿಯುತ ಸರ್ಕಾರಗಳು ಡಾ. ಡಿ.ಎಂ. ನಂಜುಂಡಪ್ಪ ವರದಿನ್ನು ಗಂಭೀರವಾಗಿ ಪರಿಗಣಿಸಬೇಕು. ಈ ಬಗ್ಗೆ ನಾವು ನೀವೆಲ್ಲ ಸೇರಿಕೊಂಡು ಜಾರಿಗೊಳಿಸಬೇಕಾಗಿದೆ. ಅಂದಾಗ ಮಾತ್ರ ಕರ್ನಾಟಕ ಅಭಿವೃದ್ಧಿ ಪಥದತ್ತ ಸಾಗುತ್ತೆ ಎಂದು ಅಭಿಪ್ರಾಯಪಟ್ಟರು.

ಬರಗಾಲ ಮತ್ತು ವಲಸೆ ಕುರಿತು ವಿಷಯ ಮಂಡಿಸಿದ ನಿವೃತ್ತ ಐಎಎಸ್ ಅಧಿಕಾರಿ, ಎಸ್.ಎಂ. ಜಾಮದಾರ, ಬರಗಾಲ ಅಂದ್ರೆ ನಮ್ಮ ಜನರಿಗೆ ಹೊಸದಲ್ಲ. ಅದು ನಮ್ಮ ಜೀವನದಲ್ಲಿ ಹಾಸು ಹೊಕ್ಕಾಗಿದೆ. 29 ರಾಜ್ಯಗಳಲ್ಲಿ ಅತಿ ಹೆಚ್ಚು ಒಣ ಭೂಮಿ ಹೊಂದಿರೋದು ರಾಜಸ್ಥಾನ. ಎರಡನೇ ಸ್ಥಾನದಲ್ಲಿ ನಿಲ್ಲೋದೇ ಕರ್ನಾಟಕ. ಇದರಲ್ಲಿ ಉತ್ತರ ಕರ್ನಾಟಕದ್ದೇ ಸಿಂಹ ಪಾಲು ಎಂದರು.

ಬರಗಾಲ ಅಂದ್ರೆ ಹತ್ತಾರು ಸಮಸ್ಯೆಗಳ ಸಮುಚ್ಚಯ. ನೀರಾವರಿ ಯೋಜನೆ ಅನುಷ್ಠಾನದಿಂದ ಬರಗಾಲವನ್ನ ತಡೆಯಬಹುದು. ಸುಮಾರು 65 ಪ್ರತಿಶತ ಜಲಸಂಪನ್ಮೂಲ ಉತ್ತರ ಕರ್ನಾಟಕದಲ್ಲಿದೆ. ಬರಗಾಲ ಕೇವಲ ಕೃಷಿಕರ ಮೇಲೆ ಮಾತ್ರ ಪರಿಣಾಮ ಬೀರಲ್ಲ. ಇದನ್ನು ತಡೆಯಲು ಸಾಧ್ಯವಿಲ್ಲ. ಆದರೆ, ನಿಯಂತ್ರಿಸಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ನನ್ನ ತಾರತಮ್ಯ ಪುಸ್ತಕದಲ್ಲಿ ನಂಜುಂಡಪ್ಪ ವರದಿಯನ್ನ ಕಟುವಾಗಿ ಟೀಕಿಸಿದ್ದೇನೆ. ನಮ್ಮ ಹಿರಿಯರು ಕಟ್ಟಿ ಬೆಳಿಸಿದ್ದ ಅಖಂಡ ಕರ್ನಾಟಕವನ್ನ ಯಾವ ಕಾಲಕ್ಕೂ ಒಡೆಯಬಾರದು. ಪ್ರತ್ಯೇಕ ರಾಜ್ಯದ ಕೂಗಿಗೆ ನನ್ನ ಬೆಂಬಲ ಇಲ್ಲ. ಉಕವನ್ನ ಪ್ರತ್ಯೇಕ ರಾಜ್ಯ ಮಾಡಿದ್ರೆ ಅದು, ಬರಗಾಲದ ಹಾಗೂ ಬರಗೈ ರಾಜ್ಯ ಆಗುತ್ತೆ. ರಾಜ್ಯದಲ್ಲಿ ಶೇಕಡಾವಾರು ಹೆಚ್ಚಿನ ಆದಾಯ ಬರೋದು ದಕ್ಷಿಣ ಕರ್ನಾಟಕದಿಂದ. ಉತ್ಪಾದನಾ ಔದ್ಯೋಗಿಕ ಕ್ಷೇತ್ರದಲ್ಲಿ ನಾವು ಮುಂದುವರಿದಿಲ್ಲ. ಉತ್ತರ ಕರ್ನಾಟಕದಲ್ಲಿ ಐಟಿ ಹಬ್ ಇಲ್ಲ. ಇಲ್ಲಿಯವರೇ ಆ ಖಾತೆಯ ಮಂತ್ರಿ ಆಗಿದ್ರೂ ಪ್ರಯೋಜನವಾಗಿಲ್ಲ. ದಯವಿಟ್ಟು ರಾಜ್ಯ ಒಡೆಯುವ ಕಾಯಕ ನಿಲ್ಲಿಸಿ ಎಂದು ಮನವಿ ಮಾಡಿದರು. ಡಾ. ಗುರುಪಾದಪ್ಪ ಮರಿಗುದ್ದಿ ಅವರು ಸಾಂಸ್ಕೃತಿಕ ಪ್ರಾತಿನಿಧ್ಯ ಕುರಿತು ವಿಷಯ ಮಂಡಿಸಿದರು. ಮಾಜಿ ಸಚಿವ ಎಚ್.ಕೆ. ಪಾಟೀಲ ಅಧ್ಯಕ್ಷತ ವಹಿಸಿದ್ದರು.