ಪಕ್ಷಕ್ಕೆ ನಂಜಯ್ಯನಮಠ ಕೊಡುಗೆ ಶೂನ್ಯ

ಬಾಗಲಕೋಟೆ: ಮಾಜಿ ಶಾಸಕ ಎಸ್.ಜಿ. ನಂಜಯ್ಯನಮಠ ಕೀಳುಮಟ್ಟದ ರಾಜಕೀಯ ಮಾಡುತ್ತಿದ್ದಾರೆ. ಪಕ್ಷದ ಹಿರಿಯ ನಾಯಕರಾಗಿ ಕಿರಿಯರಿಗೆ ಬುದ್ಧಿ ಹೇಳದೆ ತಾವೇ ಇರಿಸು-ಮುರಿಸಿನ ರಾಜಕಾರಣಕ್ಕೆ ಇಳಿದಿ ದ್ದಾರೆ. ಇದು ಅವರ ಹಿರಿತನಕ್ಕೆ ಶೋಭೆ ತರುವುದಿಲ್ಲ ಎಂದು ಕಾಂಗ್ರೆಸ್ ವಿಧಾನಸಭೆ ಮತಕ್ಷೇತ್ರದ ಪ್ರಚಾರ ಸಮಿತಿ ಕಾರ್ಯಾಧ್ಯಕ್ಷ ಬಸವರಾಜ ಹೊಸಮನಿ ಹೇಳಿದರು.

ಮಾಜಿ ಶಾಸಕ ನಂಜಯ್ಯನಮಠ ಅವರು ಕಾಂಗ್ರೆಸ್ ಪಕ್ಷದ ಹಿರಿಯರು, ಪಕ್ಷಕ್ಕೆ ಅವರ ಕೊಡುಗೆ ಶೂನ್ಯ. ಆದರೂ ಪಕ್ಷವು ಸಿದ್ದರಾಮಯ್ಯರ ಸರ್ಕಾರಾವಧಿಯಲ್ಲಿ ಕುಡಿವ ನೀರಿನ ಸೌಕರ್ಯಗಳ ಪರಿಶೀಲನೆ ಸಮಿತಿ ಅಧ್ಯಕ್ಷ, ಆಶ್ರಯ ವಸತಿ ನಿಗಮದ ಅಧ್ಯಕ್ಷ ಸೇರಿ ವಿವಿಧ ಹುದ್ದೆಗಳನ್ನು ನೀಡಿದೆ. ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಪರ ಕೆಲಸ ಮಾಡಿಲ್ಲ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಗುಡೂರು ಜಿಪಂ ಕ್ಷೇತ್ರ ಹಾಗೂ ಸ್ವಗ್ರಾಮ ಸೂಳೇ ಬಾವಿಯಲ್ಲಿ ಕಾಂಗ್ರೆಸ್ ನೆಲಕಚ್ಚಿದೆ. ಗುಡೂರು ಜಿಪಂ ಅಭ್ಯರ್ಥಿ ಖಾಜೇಸಾಬ ಬಾಗವಾನರ ಸೋಲಿಗೆ ಕಾರಣ ಯಾರೆಂದು ಆತ್ಮಾವಲೋಕನ ಮಾಡಿಕೊಳ್ಳಬೇಕು. ತಮ್ಮ ಪುತ್ರನಿಗೆ ಜಿಪಂ ಟಿಕೆಟ್ ದೊರೆಯಲಿಲ್ಲ ಎನ್ನುವ ಕಾರಣಕ್ಕೆ ಪಕ್ಷದ ಪರ ಕೆಲಸ ಮಾಡಿಲ್ಲ. ಹೀಗಾಗಿ ವಿಜಯಾನಂದ ಕಾಶಪ್ಪನವರ ವಿರುದ್ಧ ಆರೋಪಿಸುವ ನೈತಿಕ ಹಕ್ಕು ಅವರಿಗಿಲ್ಲ ಎಂದರು.

ಹುನಗುಂದ ಕ್ಷೇತ್ರದಲ್ಲಿ 26 ಗ್ರಾಪಂ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು ಕಾಂಗ್ರೆಸ್ ಹಿಡಿತದಲ್ಲಿವೆ. ಕಾಂಗ್ರೆಸ್​ಗೆ ಬಾಗಲಕೋಟೆ ಜಿಪಂ ನಲ್ಲಿ ಅಧಿಕಾರ ಹಿಡಿಯಲು ಸ್ಪಷ್ಟ ಬಹುಮತ ಇರಲಿಲ್ಲ. ಮಾಜಿ ಶಾಸಕ ವಿಜಯಾನಂದ ಕಾಶಪ್ಪ ನವರ ಕಾರ್ಯತಂತ್ರ ರೂಪಿಸಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ತಂದರು. ಇದೀಗ ಅವರ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ ಎಂದರು.

ತಮ್ಮ ಸೋಲಿಗೆ ಪಕ್ಷದ ಹಿರಿಯರು ಕಾರಣ ಎಂದು ವಿಜಯಾನಂದ ಕಾಶಪ್ಪನವರ ಹೇಳಿದ್ದರು. ಎಸ್.ಜಿ. ನಂಜಯ್ಯನಮಠ ಕಾಶಪ್ಪನವರ ಸೋಲಿಗೆ ಅವರ ಕೈ, ಬಾಯಿ ಚಟವೇ ಕಾರಣ ಎಂದು ತೇಜೋ ವಧೆಗೆ ಮುಂದಾಗಿರುವುದು ಒಳ್ಳೆಯ ಬೆಳವಣಿಗೆ ಅಲ್ಲ ಎಂದರು. ಚಂದಪ್ಪ ಮಾದರ, ಅನ್ನದಾನೇಶ್ವರ ನಾಡಗೌಡ, ದಾನಮ್ಮ ಹಾದಿಮನಿ, ಸತೀಶಕುಮಾರ ಪೂಜಾರಿ, ಶರಣಪ್ಪಗೌಡ ಅರಶಿ ಬೀಡಿ, ಸಂಗಪ್ಪಗೋತಗಿ, ಮಹಾಂತೇಶ ಭಜಂತ್ರಿ ಇದ್ದರು.