ನಂಜನಗೂಡು: ಹನಿ ನೀರಾವರಿ ಪದ್ಧತಿಯಿಂದ ಭತ್ತದ ಫಸಲು ತೆಗೆಯುವ ಮೂಲಕ ಮಣ್ಣಿನ ಫಲವತ್ತತೆ ಕಾಪಾಡುವ ಹಾಗೂ ನೀರಿನ ಸಂಪನ್ಮೂಲ ಸಂರಕ್ಷಣೆ ಮಾಡುವ ಜತೆಗೆ ಮಳೆಯಾಶ್ರಿತ ಪ್ರದೇಶದಲ್ಲೂ ಭತ್ತ ಬೆಳೆಯಲು ರೈತರನ್ನು ಉತ್ತೇಜಿಸುವ ನಿಟ್ಟಿನಲ್ಲಿ ಸುತ್ತೂರು ಜಾತ್ರಾ ಮಹೋತ್ಸವದ ಕೃಷಿಮೇಳ ಮುಂದಾಗಿದೆ.
ಜಲಾನಯನ ಪ್ರದೇಶದಲ್ಲಿ ಮಾತ್ರ ಭತ್ತ ಬೆಳೆ ತೆಗೆಯಬಹುದು ಎಂಬುದನ್ನು ಸುಳ್ಳು ಮಾಡಿ ಹನಿ ನೀರಾವರಿ ಪದ್ಧತಿಯಿಂದಲೂ ಭತ್ತದ ಫಸಲು ತೆಗೆಯಬಹುದಾದ ಪದ್ಧತಿಯನ್ನು ರೈತರಿಗೆ ಪರಿಚಯಿಸುವ ನಿಟ್ಟಿನಲ್ಲಿ ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರ ಭತ್ತ ನಾಟಿ ಮಾಡಿ ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಿರುವ ಪ್ರಾತ್ಯಕ್ಷಿಕೆ ಎಲ್ಲರ ಗಮನಸೆಳೆಯುತ್ತಿದೆ.
ಇದರಿಂದ ಶೇ.50ರಷ್ಟು ನೀರಿನ ಸಂಪನ್ಮೂಲ ಸಂರಕ್ಷಣೆ, ಶೇ.30ರಷ್ಟು ಹೆಚ್ಚಿನ ಇಳುವರಿ ನಿರೀಕ್ಷಿಸಬಹುದಾಗಿದೆ. ಜತೆಗೆ ಕಡಿಮೆ ರಸಗೊಬ್ಬರ ಬಳಕೆ ಹಾಗೂ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಲು ಈ ಪದ್ಧತಿ ನೆರವಾಗಲಿದೆ ಎನ್ನುತ್ತಾರೆ ಕೆವಿಕೆ ಮುಖ್ಯಸ್ಥ ಎಸ್.ಸತೀಶ್.
ಇದೇ ಮಾದರಿಯಲ್ಲಿ ಕಬ್ಬಿನ ಬೆಳೆಯ ನಾಟಿಗೆ ಹೊಸ ರೂಪವನ್ನು ನೀಡಿರುವ ಪ್ರಾತ್ಯಕ್ಷಿಕೆ ಕೃಷಿ ಮೇಳದಲ್ಲಿ ರೈತರನ್ನು ಆಕರ್ಷಿಸುತ್ತಿದೆ. ಸಾಮಾನ್ಯವಾಗಿ ಮೂರು ಕಣ್ಣು(ಗಿನ್ನು) ಇರುವ ಕಬ್ಬಿನ ತುಂಡನ್ನು ನಾಟಿ ಮಾಡುವುದು ವಾಡಿಕೆ. ಕೃಷಿಮೇಳದಲ್ಲಿ ಕೇವಲ ಒಂದು ಕಣ್ಣಿನ ಕಬ್ಬಿನ ತುಂಡನ್ನು ನಾಟಿ ಮಾಡಿ ಅಂತರ ಬೆಳೆ ಬೆಳೆದು ರೈತರು ಆರ್ಥಿಕವಾಗಿ ಬಲಿಷ್ಠರಾಗುವ ಪದ್ಧತಿಯನ್ನು ಪರಿಚಯಿಸಲಾಗಿದೆ. ಒಂದು ಕಣ್ಣಿನ ಕಬ್ಬಿನ ತುಂಡನ್ನು ನಾಟಿ ಮಾಡುವುದರಿಂದ ಆರ್ಥಿಕ ನಷ್ಟವನ್ನು ತಪ್ಪಿಸಬಹುದು. ಜತೆಗೆ ಕಬ್ಬಿನ ಫಸಲಿನ ಮಧ್ಯೆಯೇ ದ್ವಿದಳ ಧಾನ್ಯದಂತಹ ಬೆಳೆ ತೆಗೆಯಲು ಸಹಕಾರಿಯಾಗುತ್ತದೆ. ಇದರಿಂದ ರೈತರು ಆರ್ಥಿಕವಾಗಿ ಚೈತನ್ಯ ಹೊಂದಲು ನೆರವಾಗುತ್ತದೆ ಎಂಬುದನ್ನು ಈ ಬಾರಿ ಕೃಷಿ ಮೇಳದಲ್ಲಿ ಸಾದರಪಡಿಸಲಾಗಿದೆ.
ತಾರಸಿ ತೋಟ, ಪಾರಂಪರಿಕ ಬೆಳೆ: ಮನೆಯ ತಾರಸಿಯಲ್ಲಿ ಬೆಳೆಯಬಹುದಾದ ತರಕಾರಿ ಬೆಳೆಗಳ ಬಗ್ಗೆ ಮೇಳದಲ್ಲಿ ಅರಿವು ಮೂಡಿಸಲಾಗಿದೆ. ವಿಶೇಷವಾಗಿ ಕೆಂಪುಬೆಂಡೆ, ನೇರಳೆ ಬೀನ್ಸ್, ಕಪ್ಪು ಬಣ್ಣದ ಕ್ಯಾರೆಟ್ ಬೆಳೆಯುವ ವಿಧಾನ ಹಾಗೂ 20 ಬಗೆಯ ಅಲಂಕಾರಿಕ ಹೂ ಪ್ರಭೇದಗಳನ್ನು ಬೆಳೆದಿರುವುದು ಎಲ್ಲರನ್ನು ಸೆಳೆಯುತ್ತಿದೆ. ನಂಜನಗೂಡು ರಸಬಾಳೆ, ಈರನಗೆರೆ ಬದನೆ, ಮೈಸೂರು ವೀಳ್ಯದೆಲೆ, ಮೈಸೂರು ಮಲ್ಲಿಗೆ, ಹಾಸನದ ಬಿಳಿಸೌತೆಕಾಯಿಯಂತಹ ಪಾರಂಪರಿಕ ಬೆಳೆಗಳನ್ನು ಇಲ್ಲಿ ಪರಿಚಯಿಸಲಾಗಿದೆ.
ವಿಷಯಾಧಾರಿತ ಮೇಳ: ಕೃಷಿಯಲ್ಲಿ ಹೆಚ್ಚು ಸಿರಿಧಾನ್ಯ ಬೆಳೆಗೆ ಒತ್ತು ನೀಡಲು ರೈತರನ್ನು ಪ್ರೇರೇಪಿಸಲಾಗುತ್ತಿದೆ. ರಾಗಿ, ಸಾಮೆ, ನವಣೆ, ಹಾರಕ, ಊದಲು, ಬರಗು ಹಾಗೂ ಸಜ್ಜೆ ಸಿರಿಧಾನ್ಯಗಳನ್ನು ಬೆಳೆಯಲಾಗಿದೆ. ವಿಶೇಷವಾಗಿ ರೈತರಿಗೆ ರಾಗಿ ತಳಿಯ ದೇಸಿ ಬೆಳೆಗಳ ಪರಿಚಯವನ್ನು ಮಾಡಲಾಗಿದೆ. ಸಿರಿಧಾನ್ಯಗಳ ಮಾರಾಟಕ್ಕಾಗಿ 22 ಮಳಿಗೆಗಳನ್ನು ತೆರೆಯಲಾಗಿದೆ. ಮಾರಾಟದ ಜತೆಗೆ ಸಿರಿ ಧಾನ್ಯ ಬೆಳೆಯಲು ರೈತರು ಅನುಸರಿಸಬೇಕಾದ ಬೇಸಾಯ ಕ್ರಮಗಳ ಬಗ್ಗೆ ಮನವರಿಕೆ ಮಾಡುವ ಪ್ರಯತ್ನವನ್ನೂ ಮಾಡಲಾಗುತ್ತಿದೆ. ಸಿರಿಧಾನ್ಯ ಆಹಾರದಿಂದಾಗುವ ಆರೋಗ್ಯ ಪ್ರಯೋಜನ ಕುರಿತು ಜನರಿಗೆ ಮನದಟ್ಟು ಮಾಡಲಾಗುತ್ತಿದೆ.
ಕಡಿಮೆ ನೀರಿನಿಂದ ಬೆಳೆಯಬಹುದಾದ ತೋಟಗಾರಿಕೆ ಬೆಳೆಗಳ ಪ್ರಾತ್ಯಕ್ಷಿಕೆ ಇಲ್ಲಿ ಕಾಣಬಹುದಾಗಿದೆ. ವಿದೇಶಿ ಬೆಳೆಗಳಾದ ಚಿಯಾ ಹಾಗೂ ಟೆಫ್ ಬೆಳೆಗಳನ್ನು ಪರಿಚಯಿಸಲಾಗಿದೆ. ದೇಸಿ ತಳಿಗಳ ಸಂರಕ್ಷಣೆಗಾಗಿ ಪ್ರಗತಿಪರ ರೈತರು ದೇಸಿ ಹಸು, ಮೇಕೆ, ಕುರಿ, ಕೋಳಿ, ಜೇನು ಸಾಕಣೆ ಕುರಿತು ರೈತರಿಗೆ ಅರಿವು ಮೂಡಿಸಲಾಗುತ್ತಿದೆ.
ಕೃಷಿ ಬ್ರಹ್ಮಾಂಡ: ಸಣ್ಣ ಹಾಗೂ ಅತಿ ಸಣ್ಣ ರೈತರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಒಂದು ಎಕರೆ ಕೃಷಿ ಬ್ರಹ್ಮಾಂಡದಲ್ಲಿ 117 ಬೆಳೆಗಳನ್ನು ಪರಿಚಯ ಮಾಡಲಾಗಿದೆ. ಮೇವಿನ ಬೆಳೆ, ಸೊಪ್ಪು, ತರಕಾರಿ, ದ್ವಿದಳ ಧಾನ್ಯ, ಸಾಂಬರ್ ಪದಾರ್ಥ, ಎರೆಗೊಬ್ಬರ ಉತ್ಪಾದನಾ ಘಟಕ, ಸ್ವಾವಲಂಬಿ ರೈತನ ಮನೆ ನಿರ್ಮಿಸಲಾಗಿದೆ. ಎಷ್ಟು ಪ್ರಮಾಣದ ವಿಸ್ತೀರ್ಣದಲ್ಲಿ ಯಾವ ಬಗೆಯ ಕೃಷಿ ಕೈಗೊಳ್ಳಬಹುದೆಂಬುದರ ಬಗ್ಗೆ ರೈತರಿಗೆ ಮನದಟ್ಟು ಮಾಡುವುದು ಇದರ ಹಿಂದಿನ ಉದ್ದೇಶವಾಗಿದೆ.
ವರದಾನವಾಗಲಿದೆ ವಸ್ತುಪ್ರದರ್ಶನ: ಕೃಷಿಮೇಳದಲ್ಲಿ ಕೃಷಿ ವಸ್ತುಪ್ರದರ್ಶನ ಗಮನ ಸೆಳೆಯುತ್ತಿದ್ದು, ಕೃಷಿ, ತೋಟಗಾರಿಕೆ, ರೇಷ್ಮೆ, ಪಶುಸಂಗೋಪನೆ, ಮೀನುಗಾರಿಕೆ, ಕೃಷಿ ಆಧಾರಿತ ಯಂತ್ರೋಪಕರಣಗಳ ಮಾಹಿತಿ ಹಾಗೂ ಖರೀದಿಸಲು ಸರ್ಕಾರದಿಂದ ಸಿಗುವ ಸಬ್ಸಿಡಿ ಸಾಲಸೌಲಭ್ಯ ಸೇರಿ ಹಲವು ಉಪಯುಕ್ತ ಮಾಹಿತಿ ಕಣಜವಾಗಿ ಕೃಷಿಮೇಳ ರೂಪು ತಳೆದಿದೆ. ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರ, ಮಂಡ್ಯದ ವಲಯ ಕೃಷಿ ಸಂಶೋಧನಾ ಕೇಂದ್ರ, ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯ, ಖಾಸಗಿ ಸಂಘ ಸಂಸ್ಥೆಗಳು ರೈತರಿಗೆ ಮಾಹಿತಿ ಒದಗಿಸಲು ಟೊಂಕಕಟ್ಟಿ ನಿಂತಿವೆ.
ಆದಾಯ ಹೆಚ್ಚಿಸುವ ಹೊಸಬಗೆಯ ಕೃಷಿ ಪದ್ಧತಿಗಳನ್ನು ಕೇಂದ್ರೀಕರಿಸಿಕೊಂಡು ಹಾಗೂ ರೈತರಿಗೆ ಕೃಷಿ ಮೇಲೆ ಆಸಕ್ತಿ ಹೆಚ್ಚಿಸುವ ನಿಟ್ಟಿನಲ್ಲಿ ಕೃಷಿ ಮೇಳದಲ್ಲಿ ಅನೇಕ ಬೆಳೆಗಳನ್ನು ಬೆಳೆಯಲಾಗಿದೆ. ಮಿತವಾಗಿ ನೀರು ಬಳಸಿ ಆದಾಯ ತರುವ ಬೆಳೆಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ವಿಶೇಷವಾಗಿ ಸಿರಿಧಾನ್ಯ, ತಾರಸಿ ತೋಟದಲ್ಲಿ ಬೆಳೆಯುವ ತರಕಾರಿಗಳನ್ನು ಪರಿಚಯಿಸಲಾಗಿದೆ. ಹನಿ ನೀರಾವರಿಯಲ್ಲಿ ಭತ್ತದ ಬೆಳೆ ತೆಗೆಯುವ ವಿಧಾನವನ್ನು ತಿಳಿಸಲಾಗುತ್ತಿದೆ.
ಎಸ್.ಸತೀಶ್, ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರ. ಮುಖ್ಯಸ್ಥ