More

    ಆವಿಷ್ಕಾರಗಳು ಸಮಾಜಕ್ಕೆ ಪೂರಕವಾಗಿರಲಿ

    ನಂಜನಗೂಡು: ಸಮಾಜಕ್ಕೆ ಪೂರಕವಾಗಿ ವಿಜ್ಞಾನದ ಆವಿಷ್ಕಾರಗಳು ಬಳಕೆಯಾಗಬೇಕೆ ಹೊರತು ಮಾರಕವಾಗಬಾರದು ಎಂದು ಶಾಸಕ ಬಿ.ಹರ್ಷವರ್ಧನ್ ಹೇಳಿದರು.

    ನಗರದ ಶ್ರಾವಣ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಏಳುಮಲೆ ಪ್ರಕಾಶನ ಹೊರತಂದಿರುವ ಸಾಹಿತಿ ಕಳಲೆ ಜವರನಾಯಕ ರಚಿತ ವಿಜ್ಞಾನ ಲೋಕದ ಶಿಖರಗಾಮಿಗಳು ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದರು.

    ತಂತ್ರಜ್ಞಾನ ಬೆಳೆದಂತೆ ಹೊಸ ಹೊಸ ಆವಿಷ್ಕಾರಗಳು ಬೆಳಕಿಗೆ ಬರುತ್ತಿವೆ. ಆದರೂ ಅವುಗಳು ಸಮಾಜಕ್ಕೆ ಪೂರಕವಾಗಿರಬೇಕು. ಆಳುವ ವರ್ಗ ವಿಜ್ಞಾನದ ಆವಿಷ್ಕಾರಗಳನ್ನು ಸರಿಯಾದ ರೀತಿಯಲ್ಲಿ ಸಮಾಜಕ್ಕೆ ಕೊಡುಗೆಯಾಗಿ ನೀಡುವಲ್ಲಿ ಎಚ್ಚರವಹಿಸಬೇಕು ಎಂದರು.
    ಅಗೋಚರ ಶಕ್ತಿಯ ಸಂಶೋಧನೆಯು ವಿಜ್ಞಾನ ಲೋಕಕ್ಕೆ ಸವಾಲಾಗಿ ಪರಿಣಮಿಸಿದೆ. ತಂತ್ರಜ್ಞಾನ ಎಷ್ಟೆ ಮುಂದುವರಿದಿದ್ದರೂ ದೇವಾಲಯಗಳಿಗೆ ಭೇಟಿ ಕೊಟ್ಟಾಗ ನೆಮ್ಮದಿ, ಮನಃಶಾಂತಿ ಸಿಗುತ್ತದೆ. ಧಾರ್ಮಿಕ ಕ್ಷೇತ್ರಗಳಲ್ಲಿ ತನ್ನದೇ ಆದ ಪ್ರಭಾವಳಿಯನ್ನು ಹೊಂದಿರುತ್ತವೆ. ಇದನ್ನು ವಿಜ್ಞಾನ ಅಲ್ಲಗೆಳೆಯಬಾರದು ಎಂದರು.

    ಜನಪದ ವಿದ್ವಾಂಸ ಡಾ.ಪಿ.ಕೆ.ರಾಜಶೇಖರ ಮಾತನಾಡಿ, ಸಾಹಿತಿ ಕಳಲೆ ಜವರನಾಯ್ಕ ಎಲೆಮರೆ ಕಾಯಿಯಂತೆ ಹಲವಾರು ಪುಸ್ತಕಗಳನ್ನು ಹೊರತಂದು ಅಹರ್ನಿಶಿ ಸೇವೆ ಸಲ್ಲಿಸುತ್ತಿದ್ದಾರೆ. ಪರಭಾಷಾ ವ್ಯಾಮೋಹದ ನಡುವೆಯೂ ಮಾತೃಭಾಷೆಯಲ್ಲಿ ಸ್ಪರ್ಧಾತ್ಮಕ ಪುಸ್ತಕಗಳನ್ನು ಹೊರತರುವ ಮೂಲಕ ವಿದ್ಯಾರ್ಥಿಗಳಿಗೆ ನೆರವಾಗಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಅಭ್ಯರ್ಥಿಗಳಿಗೆ ಪೂರಕವಾಗಿ ಪುಸ್ತಕಗಳನ್ನು ತರಬೇಕಾದ ಅನಿವಾರ್ಯತೆಯಿದೆ ಎಂದರು.

    ಸಾಹಿತಿ ಕಳಲೆ ಗುರುಸ್ವಾಮಿ ಮಾತನಾಡಿ, ಪ್ರಕೃತಿದತ್ತವಾದ ಅನೇಕ ಕೌತುಕ ವಿಚಾರಗಳ ಬಗ್ಗೆ ನಮಗೆ ಅರಿವೇ ಇರುವುದಿಲ್ಲ. ಅವುಗಳ ಬಗ್ಗೆ ಹೆಚ್ಚು ಅಧ್ಯಯನ ನಡೆಸಿರುವ ವಿಜ್ಞಾನಿಗಳ ಸಂಶೋಧನೆಗಳ ಕುರಿತು ನಾವು ಅರಿತುಕೊಳ್ಳಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ವಿಜ್ಞಾನ ಲೋಕದ ಶಿಖರಗಾಮಿಗಳು ಪುಸ್ತಕ ವೈಜ್ಞಾನಿಕ ವಿಷಯಾಧಾರಿತ ಕಲಿಕೆಗೆ ಪ್ರೇರಣದಾಯಕವಾಗಿದೆ ಎಂದು ಬಣ್ಣಿಸಿದರು.

    ಸಾಹಿತಿ ಕಳಲೆ ಜವರನಾಯಕ ಮಾತನಾಡಿ, ವಿಜ್ಞಾನ ಲೋಕದ ಶಿಖರಗಾಮಿಗಳು ಪುಸ್ತಕವನ್ನು ವಿಜ್ಞಾನ ಸಾಹಿತ್ಯ ಪರಿಷತ್ ಬಹುಮಾನಕ್ಕೆ ಆಯ್ಕೆ ಮಾಡಿಕೊಂಡಿದೆ. 25 ಸಾವಿರ ರೂ.ನಗದು ಹಾಗೂ 300 ಪ್ರತಿಗಳನ್ನು ಖರೀದಿಸುವುದಾಗಿ ಘೋಷಿಸಿದೆ. 164 ವಿಜ್ಞಾನಿಗಳ ಆವಿಷ್ಕಾರ ಹಾಗೂ ಹಿನ್ನೆಲೆ ಕುರಿತು ಈ ಪುಸ್ತಕದಲ್ಲಿ ದಾಖಲಿಸಲಾಗಿದೆ ಎಂದರು.

    ಕವಯತ್ರಿ ಆರ್.ರೇಖಾ, ಕಲಾವಿದ ಅ.ಪು.ರಂಗಸ್ವಾಮಿ, ಸಿರಿಗನ್ನಡ ವೇದಿಕೆ ಉಪಾಧ್ಯಕ್ಷೆ ಸೌಗಂಧಿಕ ಜೋಯಿಷ್, ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ಮಹದೇವು ಅವರನ್ನು ಸನ್ಮಾನಿಸಲಾಯಿತು. ಮಾಜಿ ಶಾಸಕ ಕಳಲೆ ಎನ್.ಕೇಶವಮೂರ್ತಿ, ಎಸ್ಟಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಸ್.ಸಿ.ಬಸವರಾಜು, ಬಿಜೆಪಿ ಎಸ್ಟಿ ಮೋರ್ಚಾ ಉಪಾಧ್ಯಕ್ಷ ಸಿ.ಚಿಕ್ಕರಂಗನಾಯ್ಕ, ಉದ್ಯಮಿ ಭಾಸ್ಕರ್, ಮುಖಂಡರಾದ ಸಿ.ಭೈರನಾಯ್ಕ, ಎನ್.ಹರೀಶ್‌ಕುಮಾರ್ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts