ಕೈಗೆಟಕುವ ದರಕ್ಕೆ ಆಹಾರ ಪೂರೈಕೆ

ನಂಜನಗೂಡು: ಜನರ ಕೈಗೆಟಕುವ ದರಕ್ಕೆ ಆಹಾರ ಪೂರೈಸಲು ಇಂದಿರಾ ಕ್ಯಾಂಟಿನ್ ತೆರೆಯಲಾಗಿದೆ ಎಂದು ಸಂಸದ ಆರ್.ಧ್ರುವನಾರಾಯಣ್ ತಿಳಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಇಂಜಿನಿಯರಿಂಗ್ ಉಪವಿಭಾಗ ಕಚೇರಿ ಆವರಣದಲ್ಲಿ ನಿರ್ಮಿಸಿರುವ ಇಂದಿರಾ ಕ್ಯಾಂಟಿನ್ ಉದ್ಘಾಟಿಸಿ ಮಾತನಾಡಿ, ನಿತ್ಯ 1300 ಜನರಿಗೆ ಫಲಹಾರ, ಮಧ್ಯಾಹ್ನ, ರಾತ್ರಿ ಅತಿ ಕಡಿಮೆ ಬೆಲೆಗೆ ಊಟ ಸಿಗುವಂತೆ ಮಾಡಲಾಗಿದೆ ಎಂದರು.
ದೇಶದ ಆಹಾರ ಭದ್ರತೆಗೆ ಸ್ವಾತಂತ್ರ್ಯ ನಂತರದಲ್ಲಿ ಕಾಂಗ್ರೆಸ್ ಮಹತ್ತರ ಕೊಡುಗೆ ನೀಡುತ್ತಾ ಬಂದಿದೆ. ಇಂದಿರಾಗಾಂಧಿ ಹಸಿರು ಕ್ರಾಂತಿ ಮೂಲಕ ಅಮೆರಿಕದಿಂದ ಅಕ್ಕಿ, ಗೋಧಿ ಆಮದಿಗೆ ಕಡಿವಾಣ ಹಾಕಿ ದೇಶದಲ್ಲೇ ಉತ್ಪಾದನೆಗೆ ಒತ್ತು ನೀಡಿದರು ಎಂದರು.
ರಾಜ್ಯವನ್ನು ಹಸಿವು ಮುಕ್ತಗೊಳಿಸುವ ಸಲುವಾಗಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆದ ಬಳಿಕ ಅನ್ನಭಾಗ್ಯ ಯೋಜನೆಯಡಿ ಉಚಿತವಾಗಿ ಪಡಿತರ ವಿತರಣೆ ಜಾರಿಗೊಳಿಸಿದರು ಎಂದರು.
ಶಾಸಕ ಬಿ.ಹರ್ಷವರ್ಧನ್ ಮಾತನಾಡಿ, ಇಂದಿರಾ ಕ್ಯಾಂಟೀನ್ ಸ್ವಾಗತಾರ್ಹವಾದರೂ ಕಟ್ಟಡ ನಿರ್ಮಾಣಕ್ಕೆ 27 ಲಕ್ಷ ಹಾಗೂ ಆಹಾರ ತಯಾರಿಕೆಗೆ 63 ಲಕ್ಷ ವಿನಿಯೋಗ ಮಾಡಿರುವುದು ದುಬಾರಿಯಾಗಿದೆ. ನಿತ್ಯ ಟೋಕನ್ ಮಾರಾಟದಲ್ಲೂ ಗೋಲ್‌ಮಾಲ್ ಬಗ್ಗೆ ದೂರು ಕೇಳಿಬರುತ್ತಿದ್ದು, ಈ ಬಗ್ಗೆ ಅಧಿಕಾರಿಗಳು ಕಣ್ಗಾವಲು ಇಡಬೇಕು ಎಂದು ಹೇಳಿದರು.
ಶಾಸಕ ಡಾ.ಎಸ್.ಯತೀಂದ್ರ, ಮಾಜಿ ಶಾಸಕ ಕಳಲೆ ಎನ್.ಕೇಶವಮೂರ್ತಿ, ನಗರಸಭೆ ಅಧ್ಯಕ್ಷೆ ಪಿ.ಪುಷ್ಪಲತಾ ಕಮಲೇಶ್, ಉಪಾಧ್ಯಕ್ಷ ಎಂ.ಪ್ರದೀಪ್, ತಾಪಂ ಅಧ್ಯಕ್ಷ ಬಿ.ಎಸ್.ಮಹದೇವಪ್ಪ, ಉಪಾಧ್ಯಕ್ಷ ಆರ್.ಗೋವಿಂದರಾಜನ್, ಜಿಪಂ ಸದಸ್ಯರಾದ ಎಂ.ಲತಾ ಸಿದ್ದಶೆಟ್ಟಿ, ಪುಷ್ಪನಾಗೇಶ್‌ರಾಜ್ ಮತ್ತಿತರರಿದ್ದರು.
ಕೈ ಕಾರ್ಯಕರ್ತರ ಪ್ರತಿಭಟನೆ: ಕಾರ್ಯಕ್ರಮದ ವೇದಿಕೆಯಲ್ಲಿ ಅಳವಡಿಸಿದ್ದ ಫ್ಲೆಕ್ಸ್‌ನಲ್ಲಿ ಶಿಷ್ಟಾಚಾರದಂತೆ ಶಾಸಕ ಡಾ.ಎಸ್.ಯತೀಂದ್ರ ಭಾವಚಿತ್ರ ಅಳವಡಿಸದೆ ಅವಮಾನ ಎಸಗಲಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಇದರಿಂದ ಗಲಿಬಿಲಿಗೊಂಡ ಅಧಿಕಾರಿಗಳು ಮತ್ತೊಂದು ಫ್ಲೆಕ್ಸ್‌ನಲ್ಲಿ ಡಾ.ಯತೀಂದ್ರ ಭಾವಚಿತ್ರ ಹಾಕಿಸಿ ಕಾರ್ಯಕರ್ತರನ್ನು ಸಮಾಧಾನಗೊಳಿಸಿದರು.

ಬಡವರ ಹಸಿವು ನೀಗಿಸುತ್ತಿರುವ ಇಂದಿರಾ ಕ್ಯಾಂಟಿನ್
ತಿ.ನರಸೀಪುರ: ಕಾಂಗ್ರೆಸ್ ನೇತೃತ್ವದ ಹಿಂದಿನ ಯುಪಿಎ ಸರ್ಕಾರ ದೇಶದಲ್ಲಿ ಆಹಾರ ಭದ್ರತಾ ಕಾಯ್ದೆ ಜಾರಿಗೆ ತಂದಿದ್ದರಿಂದ ರಾಜ್ಯದಲ್ಲಿ ಅನ್ನಭಾಗ್ಯ, ಇಂದಿರಾ ಕ್ಯಾಂಟೀನ್‌ನಂತಹ ಯೋಜನೆಗಳು ಬಡವರ ಹಸಿವನ್ನು ನೀಗಿಸುತ್ತಿವೆ ಎಂದು ಸಂಸದ ಆರ್.ಧ್ರುವನಾರಾಯಣ್ ಹೇಳಿದರು.
ಪಟ್ಟಣದ ಮಾರುಕಟ್ಟೆ ರಸ್ತೆಯಲ್ಲಿ ಇಂದಿರಾ ಕ್ಯಾಂಟಿನ್ ಉದ್ಘಾಟಿಸಿದ ನಂತರ ಮಾತನಾಡಿ, ಮಾಜಿ ಪ್ರಧಾನಿ ಮನಮೋಹನ್‌ಸಿಂಗ್ ನೇತೃತ್ವದಲ್ಲಿ ದೇಶದಲ್ಲಿ ದಶಕಗಳ ಕಾಲ ಅಧಿಕಾರದಲ್ಲಿದ್ದ ಯುಪಿಎ ಕೇಂದ್ರ ಸರ್ಕಾರ ಹಸಿವು ಮುಕ್ತ ರಾಷ್ಟ್ರಕ್ಕಾಗಿ ಆಹಾರ ಭದ್ರತಾ ಕಾಯ್ದೆ ಜಾರಿಗೊಳಿಸಿದರು. ರಾಜ್ಯದಲ್ಲಿಯೂ ಹಿಂದಿನ ಸರ್ಕಾರದಲ್ಲಿ ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ ಅವರು ಹಸಿವು ಮುಕ್ತ ನಾಡು ಮಾಡುವ ಉದ್ದೇಶದಿಂದ ಅನ್ನಭಾಗ್ಯ, ಇಂದಿರಾ ಕ್ಯಾಂಟೀನ್ ಯೋಜನೆಗಳನ್ನು ಆರಂಭಿಸಿದರು ಎಂದರು.
ಬೆಂಗಳೂರು ಮತ್ತು ಮೈಸೂರು ಸೇರಿದಂತೆ ರಾಜ್ಯಾದ್ಯಂತ ತಲೆಯೆತ್ತಿರುವ ಇಂದಿರಾ ಕ್ಯಾಂಟಿನ್ 5 ರೂ.ಗಳಿಗೆ ಉಪಹಾರ, 10 ರೂ.ಗಳಿಗೆ ಊಟ ನೀಡುತ್ತಿದ್ದು, ಬಡವರು, ಕೂಲಿ ಕಾರ್ಮಿಕರಿಗೆ ಉಪಯುಕ್ತವಾಗಿದೆ ಎಂದರು.
ವರುಣ ಶಾಸಕ ಡಾ.ಎಸ್.ಯತೀಂದ್ರ ಮಾತನಾಡಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಳ್ಳಿಗಾಡಿನ ಬಡತನದ ಕುಟುಂಬದಿಂದ ಬಂದವರಾದ್ದರಿಂದ ಬಡತನ, ಅನ್ನದ ಹಾಹಾಕಾರ ತಡೆಗೆ ಅನ್ನಭಾಗ್ಯ ಯೋಜನೆ, ಇಂದಿರಾ ಕ್ಯಾಂಟೀನ್ ಆರಂಭಿಸಿದ್ದರು ಎಂದು ತಿಳಿಸಿದರು.
ಶಾಸಕ ಎಂ.ಅಶ್ವಿನ್‌ಕುಮಾರ್, ವಿಧಾನಪರಿಷತ್ ಸದಸ್ಯ ಆರ್.ಧರ್ಮಸೇನಾ, ಜಿಪಂ ಸದಸ್ಯ ಮಂಜುನಾಥನ್, ಪುರಸಭೆ ಸದಸ್ಯರಾದ ಎಸ್.ಕೆ.ಕಿರಣ್, ಮಂಜು, ಮಹಮ್ಮದ್ ಸಯೀದ್, ಎಲ್.ಮಂಜುನಾಥ್, ವಿ.ಮೋಹನ್, ಸಿದ್ದು, ಮಾದೇವಿ ಇದ್ದರು.
ಪತಿ, ಪುತ್ರರ ಹಾಜರಿಗೆ ಆಕ್ಷೇಪ: ಇಂದಿರಾ ಕ್ಯಾಂಟಿನ್ ಉದ್ಘಾಟನೆ ವೇಳೆ ವೇದಿಕೆ ಮೇಲೆ ಪುರಸಭೆ ಸದಸ್ಯರ ಪತಿ, ಪುತ್ರರು ಆಸೀನರಾಗಿರುವುದಕ್ಕೆ ಕಾಂಗ್ರೆಸ್ ಕಾರ್ಯಕರ್ತೆ ಮಹದೇವಮ್ಮ ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಸ್ಥಳದಲ್ಲಿದ್ದ ಮುಖ್ಯಾಧಿಕಾರಿ ಅಶೋಕ್ ಅವರೂ ಯಾವುದೇ ಪ್ರತಿಕ್ರಿಯೆ ನೀಡದೆ ಸುಮ್ಮನಾದರು.