ಶ್ರೀಕಂಠೇಶ್ವರಸ್ವಾಮಿಗೆ ಪೂಜೆ ಸಲ್ಲಿಸಿದ ಬಿಎಸ್‌ವೈ

ನಂಜನಗೂಡು: ಹುಣ್ಣಿಮೆ ಅಂಗವಾಗಿ ಇಲ್ಲಿನ ಪ್ರಸಿದ್ಧ ಶ್ರೀಕಂಠೇಶ್ವರಸ್ವಾಮಿ ದೇವಾಲಯಕ್ಕೆ ಸೋಮವಾರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ದೇವಾಲಯಕ್ಕೆ ಆಗಮಿಸಿದ ಅವರನ್ನು ಆಡಳಿತ ಮಂಡಳಿ ಪೂರ್ಣಕುಂಭ ಸ್ವಾಗತ ಕೋರಿ ಬರಮಾಡಿಕೊಂಡಿತು. ಗರ್ಭಗುಡಿಯಲ್ಲಿ 20 ನಿಮಿಷಕ್ಕೂ ಹೆಚ್ಚು ಸಮಯ ಹಾಜರಿದ್ದು, ಸಹಸ್ರ ಬಿಲ್ವಾರ್ಚನೆ ಹಾಗೂ ಅಭಿಷೇಕದಲ್ಲಿ ಪಾಲ್ಗೊಂಡರು. ವಿಶೇಷ ಪೂಜೆ ಸಲ್ಲಿಸಿದ ನಂತರ ಮಹಾಮಂಗಳಾರತಿ ಸ್ವೀಕರಿಸಿದರು.

ಬಳಿಕ ಪಾರ್ವತಿ ದೇವಿ ಅಮ್ಮನ ಗುಡಿಯಲ್ಲೂ ಪೂಜೆ ಸಲ್ಲಿಸಿ ವಸಂತ ಮಂಟಪದಲ್ಲಿ ಕೆಲಹೊತ್ತು ವಿರಮಿಸಿದರು. ದೇವಾಲಯ ವತಿಯಿಂದ ಬಿಎಸ್‌ವೈಗೆ ಶ್ವೇತವಸ್ತ್ರ ಹಾಗೂ ಪ್ರಸಾದ ನೀಡಿ ಸತ್ಕರಿಸಲಾಯಿತು. ನಗರಸಭೆ ಸದಸ್ಯರಾಗಿ ಆಯ್ಕೆಗೊಂಡಿರುವ ಸದಸ್ಯರು ಹೂಗುಚ್ಛ ನೀಡಿ ಅಭಿನಂದನೆ ಸಲ್ಲಿಸಿದರು.

ಪೂಜೆ ಸಂದರ್ಭ ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿ ನೂಕುನುಗ್ಗಲು ಉಂಟಾಯಿತು. ಹುಣ್ಣಿಮೆ ಹಿನ್ನೆಲೆ ದೇಗುಲಕ್ಕೆ ಭಕ್ತಸಾಗರವೇ ಆಗಮಿಸಿದ್ದರಿಂದ ಜನದಟ್ಟಣೆ ಹೆಚ್ಚಾಗಿ ಪರಿಸ್ಥಿತಿ ನಿಭಾಯಿಸಲು ಪೊಲೀಸರು ಹರಸಾಹಸ ಪಡುವಂತಾಯಿತು.

‘ಬಿಜೆಪಿ ಜಿಲ್ಲಾಧ್ಯಕ್ಷ ಕೋಟೆ ಎಂ.ಶಿವಣ್ಣ ಅವರ ಪುತ್ರಿಯ ವಿವಾಹ ಕಾರ್ಯಕ್ರಮಕ್ಕೆ ಮೈಸೂರಿಗೆ ಆಗಮಿಸಿದ್ದೆ. ಸೋಮವಾರ ಹುಣ್ಣಿಮೆ ಆಗಿರುವುದರಿಂದ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದೆ’ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

ಶಾಸಕ ಬಿ.ಹರ್ಷವರ್ಧನ್, ಜಿಪಂ ಸದಸ್ಯೆ ಮಂಗಳಾ ಸೋಮಶೇಖರ್, ಮುಖಂಡರಾದ ಕಾ.ಪು.ಸಿದ್ದಲಿಂಗಸ್ವಾಮಿ, ಎಂ.ರಾಜೇಂದ್ರ, ಎಸ್.ಮಹದೇವಯ್ಯ, ನಗರಸಭಾ ಸದಸ್ಯರಾದ ಮೀನಾ ನಾಗರಾಜು, ಮಹದೇವಮ್ಮ ಬಾಲಚಂದ್ರು, ಮಹದೇವಸ್ವಾಮಿ, ದೇವಾಲಯದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಆರ್.ಇಂದನ್‌ಬಾಬು, ಮಂಜುಳ ಮಧು, ಶಶಿರೇಖಾ, ಎನ್.ವಿ.ವಿನಯಕುಮಾರ್, ಎನ್.ಸಿ.ಬಸವಣ್ಣ ಸೇರಿದಂತೆ ಇತರರಿದ್ದರು.

ದೇವಾಲಯಕ್ಕೆ ಭಕ್ತರ ದಂಡು: ಹುಣ್ಣಿಮೆ ಅಂಗವಾಗಿ ಸೋಮವಾರ ಶ್ರೀಕಂಠೇಶ್ವರಸ್ವಾಮಿ ದೇವಾಲಯಕ್ಕೆ ಭಕ್ತಸಾಗರವೇ ಹರಿದು ಬಂದಿತ್ತು. ದರ್ಶನಕ್ಕಾಗಿ ದೇವಾಲಯ ಸುತ್ತಲೂ ಭಕ್ತರ ಸರತಿ ಸಾಲು ನಿಂತಿತ್ತು. ದೇವಾಲಯ ಸುತ್ತ ಉರುಳು ಸೇವೆ ಮಾಡಿದ ಭಕ್ತರು ಕಪಿಲಾ ನದಿಯಲ್ಲಿ ಪುಣ್ಯಸ್ನಾನ ಮಾಡಿದರು. ತಿರುಪತಿ ರೈಲು ಹೊರತುಪಡಿಸಿ ಉಳಿದೆಲ್ಲ ರೈಲುಗಳ ಸಂಚಾರ ಸ್ಥಗಿತಗೊಂಡಿರುವುದರಿಂದ ಪ್ರಯಾಣಕ್ಕಾಗಿ ಭಕ್ತರು ಹೆಣಗಾಡುವಂತಾಯಿತು. ಸಾರಿಗೆ ಸಂಸ್ಥೆ ಬಸ್‌ಗಳ ಮೊರೆ ಹೋಗಿದ್ದರಿಂದ ಬಸ್‌ಗಳಲ್ಲಿ ನೂಕುನುಗ್ಗಲು ಉಂಟಾಗಿ ಪರದಾಡಿದರು.

Leave a Reply

Your email address will not be published. Required fields are marked *