ಸಮನಾದ ಅವಕಾಶ ಸಿಕ್ಕರೆ ಭವ್ಯ ಭಾರತ ನಿರ್ಮಾಣ

ನಂಜನಗೂಡು: ಸರ್ವಧರ್ಮ ಸಮನ್ವಯ ದೇಶವಾಗಿರುವ ಭಾರತದಲ್ಲಿ ಸರ್ವರಿಗೂ ಸಮನಾದ ಅವಕಾಶ ಸಿಕ್ಕರೆ ಮಾತ್ರ ಭವ್ಯ ಭಾರತ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದು ಆಧ್ಯಾತ್ಮಿಕ ಚಿಂತಕ ಜಿ.ಕೆ.ಮಂಜುನಾಥ್ ಅಭಿಪ್ರಾಯ ವ್ಯಕ್ತಪಡಿಸಿದರು.

ಪಟ್ಟಣದ ಕನಕದಾಸ ಪ್ರೌಢಶಾಲೆಯ ಸಭಾಂಗಣದಲ್ಲಿ ಸ್ಪಂದನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆ ವತಿಯಿಂದ ಬುಧವಾರ ಆಯೋಜಿಸಿದ್ದ ಮಕ್ಕಳ ಕೂಟ ಹಾಗೂ ವ್ಯಕ್ತಿತ್ವ ವಿಕಸನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಗ್ರಾಮೀಣ ಭಾಗದ ಮಕ್ಕಳು ಕೌಶಲ ಹಾಗೂ ವ್ಯಕ್ತಿತ್ವ ವಿಕಸನ ಹೊಂದದೆ ಜೀವನದಲ್ಲಿ ಗುರಿ ಮುಟ್ಟಲು ಸಾಧ್ಯವಾಗದೆ ಅತಂತ್ರರಾಗುವ ಆತಂಕವಿದೆ. ಹಾಗಾಗಿ ಸಾಮಾಜಿಕ ಪ್ರಜ್ಞೆ, ಕೌಶಲ, ಸಂಸ್ಕಾರ ಕಲಿಸುವುದು ಪ್ರಸ್ತುತ ಕಾಲಘಟ್ಟದಲ್ಲಿ ಅಗತ್ಯವಾಗಿದೆ ಎಂದು ತಿಳಿಸಿದರು.

ಕ್ರೈಸ್ತ ಧರ್ಮಗುರು ಫಾದರ್ ಜಾನ್ ಟೆಕ್ಸೇರಾ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಫಲಿತಾಂಶಕ್ಕಾಗಿ ಶಾಲೆಗಳ ನಡುವೆ ಪೈಪೋಟಿ ಏರ್ಪಟ್ಟಿದೆಯೇ ಹೊರತು ಮಕ್ಕಳ ಸರ್ವತೋಮುಖ ಬೆಳವಣಿಗೆ ಕಾಣುವಂಥ ಶಿಕ್ಷಣ ನೀಡಬೇಕೆಂಬ ಸದುದ್ದೇಶ ಮರೆಯಾಗಿರುವುದು ದುರಂತ ಎಂದು ಬೇಸರ ವ್ಯಕ್ತಪಡಿಸಿದರು.

ಮೂರು ದಿನ ಆಯೋಜಿಸಿರುವ ಶಿಬಿರದಲ್ಲಿ ಗ್ರಾಮೀಣ ಭಾಗದಿಂದ ಸರ್ಕಾರಿ ಶಾಲೆಗಳ 150ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದಾರೆ.ಸಂಸ್ಥೆ ನಿರ್ದೇಶಕಿ ಸಿಸ್ಟರ್ ತೆರೇಸಾ ಮಸ್ಕರಿನೇಸಸ್, ಕರುಣಾಲಯ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಹೆಲೆನ್, ಸಮುದ್ರ ಶಾಲೆ ಶಿಕ್ಷಕಿ ಕುಮುದಾ, ಕನಕದಾಸ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ನೀಲಿಸಿದ್ದು, ಶಿಬಿರದ ಸಂಚಾಲಕರಾದ ಮಾನಸ, ಮಮತಾ, ಜ್ಯೋತಿ ಹಾಜರಿದ್ದರು.