ಮನೆಗೆ ನುಗ್ಗಿ ಎರಡು ಮಾಂಗಲ್ಯ ಸರ ಕಳವು

ನಂಜನಗೂಡು: ಪಟ್ಟಣದ ತಮ್ಮಡಗೇರಿ ಬಡಾವಣೆಯಲ್ಲಿ ಮಂಗಳವಾರ ತಡರಾತ್ರಿ ಮನೆಗೆ ನುಗ್ಗಿದ ಆಗಂತುಕರು ಇಬ್ಬರು ಮಹಿಳೆಯರ ಮಾಂಗಲ್ಯ ಸರವನ್ನು ಕಸಿದು ಪರಾರಿಯಾಗಿದ್ದಾರೆ.

ಶ್ರೀಕಂಠೇಶ್ವರಸ್ವಾಮಿ ದೇವಾಲಯದ ಕಾವಲುಗಾರರಾಗಿ ಕರ್ತವ್ಯ ನಿರ್ವಹಿಸುತ್ತಿರುವ ರವಿಕುಮಾರ್ ನಿವಾಸದಲ್ಲಿ ಪತ್ನಿ ಎಚ್.ಎಂ.ಕವಿತಾಕುಮಾರಿ ಅವರಿಂದ 30 ಗ್ರಾಂ ಹಾಗೂ ತಾಯಿ ನಾಗರತ್ನಮ್ಮ ಅವರಿಂದ 10 ಗ್ರಾಂ ಮಾಂಗಲ್ಯ ಸರ ಕಸಿದುಕೊಂಡಿದ್ದಾರೆ.

ರವಿಕುಮಾರ್ ಮಂಗಳವಾರ ರಾತ್ರಿ ಪಾಳಿ ಕೆಲಸಕ್ಕೆ ತೆರಳಿದ್ದರಿಂದ ಕವಿತಾಕುಮಾರಿ ಹಾಗೂ ನಾಗರತ್ನಮ್ಮ ಇಬ್ಬರೇ ಮನೆಯಲ್ಲಿದ್ದರು. ತಡರಾತ್ರಿ ಮನೆ ಹಿಂದಿನ ಬಾಗಿಲು ತೆರೆಯುವ ಶಬ್ದ ಕೇಳಿ ಕವಿತಾಕುಮಾರಿ, ನಾಗರತ್ನಮ್ಮ ಎಚ್ಚರಗೊಂಡು ನೋಡಲು ಮುಂದಾದಾಗ ಇಬ್ಬರು ಆಗಂತುಕರು ಸರ ಕಸಿದು ಕಾಲ್ಕಿತ್ತಿದ್ದಾರೆ.
ಕವಿತಾಕುಮಾರಿ ಅವರಿಂದ 30 ಗ್ರಾಂ ಸರವನ್ನು ಪೂರ್ತಿ ಕಸಿದಿದ್ದು, ನಾಗರತ್ನಮ್ಮ ಅವರಿಂದ 40 ಗ್ರಾಂ ಮಾಂಗಲ್ಯ ಸರದಲ್ಲಿ 10 ಗ್ರಾಂನಷ್ಟು ಮಾತ್ರ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಘಟನೆ ಬಳಿಕ ಕಂಗಾಲಾದ ಇಬ್ಬರೂ ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಕೂಡಲೇ ಸ್ಥಳಕ್ಕಾಗಮಿಸಿ, ಪರಿಶೀಲನೆ ನಡೆಸಿದರು. ಬೆರಳಚ್ಚು ಹಾಗೂ ಶ್ವಾನದಳ ಸಿಬ್ಬಂದಿ ತಪಾಸಣೆ ನಡೆಸಿದರು.

ಎರಡು ತಿಂಗಳ ಹಿಂದೆಯಷ್ಟೆ ಈ ಬಡಾವಣೆಯಲ್ಲಿ ದರೋಡೆ ಪ್ರಕರಣ ನಡೆದಿತ್ತು. ಸ್ಥಳಕ್ಕೆ ಡಿವೈಎಸ್ಪಿ ವೈದ್ಯನಾಥ್, ಸಿಪಿಐ ಶೇಖರ್, ಪಿಎಸ್‌ಐ ಲೋಕೇಶ್ ಭೇಟಿ ನೀಡಿ ಮಹಜರು ನಡೆಸಿದರು. ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಂಡವಪುರದಲ್ಲಿ ಕಳವು
ತಾಲೂಕಿನ ತಾಂಡವಪುರ ಗ್ರಾಮದ ಮೈಸೂರು-ನಂಜನಗೂಡು ಮುಖ್ಯರಸ್ತೆಯ ಹಾರ್ಡ್‌ವೇರ್ ಮಳಿಗೆಯಲ್ಲಿ ಮಂಗಳವಾರ ರಾತ್ರಿ ರೋಲಿಂಗ್ ಶೆಲ್ಟರ್ ಮುರಿದು 1 ಲಕ್ಷ ರೂ. ಮೌಲ್ಯದ ವಸ್ತುಗಳು ಕಳುವಾಗಿದೆ.
ಗಿರೀಶ್ ಎಂಬುವರಿಗೆ ಸೇರಿದ ಹಾರ್ಡ್‌ವೇರ್ ಮಳಿಗೆಯಲ್ಲಿ ಬುಧವಾರ ಬೆಳಗ್ಗೆ ಎಂದಿನಂತೆ ಅಂಗಡಿ ತೆರೆಯಲು ಮುಂದಾದಾಗ ಕಳುವಾಗಿರುವುದು ಬೆಳಕಿಗೆ ಬಂದಿದೆ. ನೀರೆತ್ತುವ ಮೋಟಾರ್ ಹಾಗೂ ಹಾರ್ಡ್‌ವೇರ್ ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಪರಿಶೀಲನೆ ನಡೆಸಿದರು. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.