More

    ಅರಾಜಕತೆ ಸೃಷ್ಟಿಸುವವರು ನಿಜವಾದ ದೇಶದ್ರೋಹಿಗಳು

    ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ಅಭಿಮತ

    ವಿಜಯವಾಣಿ ಸುದ್ದಿಜಾಲ ನಂಜನಗೂಡು
    ಧರ್ಮದ ಹೆಸರಿನಲ್ಲಿ ದೇಶವನ್ನು ಛಿದ್ರಗೊಳಿಸಿ ಸಂವಿಧಾನದ ಐಕ್ಯತೆಯನ್ನು ಬುಡಮೇಲು ಮಾಡುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಪಾಯಕ್ಕೆ ಸಿಲುಕಿಸಿ, ಅರಾಜಕತೆ ಸೃಷ್ಟಿಸಿದವರು ನಿಜವಾದ ದೇಶದ್ರೋಹಿಗಳು ಎಂದು ಉರಿಲಿಂಗಿ ಪೆದ್ದಿಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ಹೇಳಿದರು.
    ನಗರದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದ ಆವರಣದಲ್ಲಿ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಭೀಮ ಕೋರೇಗಾಂವ್ ವಿಜಯೋತ್ಸವ ಅಂಗವಾಗಿ ಭಾನುವಾರ ಆಯೋಜಿಸಿದ್ದ ಜಾಗೃತಿ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
    ದೇಶ ಕಟ್ಟುವಲ್ಲಿ ಮೂಲನಿವಾಸಿಗಳು ದೇಹ ಸವೆಸಿದ್ದಾರೆ. ಆದರೆ ಅವರಿಗೆ ಸಮಾನ ಅವಕಾಶ ಸಿಗದಂತೆ ತಡೆಯುವುದು ಸಂಘ ಪರಿವಾರದ ಹುನ್ನಾರವಾಗಿದೆ. ದೇಶದಲ್ಲಿ ತಲೆದೋರಿರುವ ಆರ್ಥಿಕತೆ ಕುಸಿತ, ನಿರುದ್ಯೋಗದಂತಹ ಜ್ವಲಂತ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಎನ್‌ಆರ್‌ಸಿ, ಸಿಎಎಯಂತಹ ಕಾಯ್ದೆಯನ್ನು ಜಾರಿಗೆ ತಂದು ಸಂವಿಧಾನವನ್ನು ಬಲಹೀನಗೊಳಿಸುವ ಷಡ್ಯಂತ್ರಕ್ಕೆ ಮುಂದಾಗಿ ಧರ್ಮ ಧರ್ಮಗಳ ನಡುವೆ ಕಂದಕ ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿದರು.
    ಮೈಸೂರಿನಲ್ಲಿ ‘ಫ್ರೀ ಕಾಶ್ಮೀರ’ ಎಂಬ ಭಿತ್ತಿಪತ್ರ ಪ್ರದರ್ಶಿಸಿದ ವಿದ್ಯಾರ್ಥಿನಿ ವಿರುದ್ಧ ಪೊಲೀಸರು ದೇಶದ್ರೋಹದಡಿ ಸ್ವಯಂ ಪ್ರೇರಿತ ದೂರು ದಾಖಲಿಸುವುದಾದರೆ, ಅಂಬೇಡ್ಕರ್ ಒಬ್ಬರೇ ಸಂವಿಧಾನ ಬರೆದಿಲ್ಲ ಎಂದು ಬಹಿರಂಗ ಹೇಳಿಕೆ ನೀಡಿದವರ ವಿರುದ್ಧ ಏಕೆ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಲಿಲ್ಲ. ದಲಿತ ಮಹಿಳೆ ಎಂಬ ಕಾರಣಕ್ಕೆ ಸಮವಸ್ತ್ರಧಾರಿ ಪೇದೆಯನ್ನು ದೇವಾಲಯದಿಂದ ಹೊರಗಿಟ್ಟ ಹಾಗೂ ಸಂವಿಧಾನ ಪ್ರತಿ ಸುಟ್ಟವರ ವಿರುದ್ಧವೂ ಕಾನೂನು ಕ್ರಮ ಜರುಗಿಸಲಿ ಎಂದು ಆಗ್ರಹಿಸಿದರು.
    ಆಡಳಿತಾರೂಢ ಕೇಂದ್ರ ಸರ್ಕಾರ ದೇಶ ಕಟ್ಟುವ ಬದಲಾಗಿ ದ್ವೇಷ ಬೀಜವನ್ನು ಸಮಾಜದಲ್ಲಿ ಬಿತ್ತುತ್ತಿದೆ. ಆದರ್ಶಗಳು ಮಾತನಾಡಬೇಕಿದ್ದ ಭಾರತದಲ್ಲಿ ಆಯುಧಗಳು ಘರ್ಜಿಸುವಂತೆ ಅಶಾಂತಿ ಸೃಷ್ಟಿಸುತ್ತಿದ್ದಾರೆ. ನಾವೆಲ್ಲರೂ ಒಂದು ಎನ್ನುವ ಮತೀಯರು ದಲಿತರನ್ನು ಅಸ್ಪಶ್ಯರನ್ನಾಗಿ ಕಾಣುತ್ತಿದ್ದಾರೆ. ದೀನ ದಲಿತರ ಮೇಲೆ ಹಿಂದು ಧರ್ಮ ದಬ್ಬಾಳಿಕೆ ಮಾಡಿದ್ದಷ್ಟೂ ಯಾವುದೇ ಧರ್ಮವೂ ಮಾಡಿಲ್ಲ ಎಂದು ಸ್ವತಃ ಸ್ವಾಮಿ ವಿವೇಕಾನಂದರೇ ಹೇಳಿದ್ದಾರೆ ಎಂದರು.
    ಎನ್‌ಪಿಆರ್, ಎನ್‌ಆರ್‌ಸಿಗಾಗಿ ದಾಖಲೆ ಸಂಗ್ರಹಿಸಲು ಅಧಿಕಾರಿಗಳು ಮನೆ ಮುಂದೆ ಬಂದರೆ ಯಾವುದೇ ದಾಖಲೆ ನೀಡುವುದಿಲ್ಲ ಎಂದು ಎಲ್ಲರೂ ಒಕ್ಕೊರಲಿನಿಂದ ಬಹಿಷ್ಕರಿಸುವಂತೆ ಕರೆ ನೀಡಿದರು.
    ಪ್ರಗತಿಪರ ಚಿಂತಕ ಮಹೇಂದ್ರಕುಮಾರ್ ಮಾತನಾಡಿ, ಎನ್‌ಆರ್‌ಸಿ, ಸಿಎಎ ಮುಸ್ಲಿಂ ಸಮುದಾಯದ ವಿಷಯ ಎಂಬುದಾಗಿ ಬಿಂಬಿಸುತ್ತಿರುವುದು ಸರಿಯಲ್ಲ. ಇದು ಇಡೀ ದೇಶದ ವಿಚಾರವಾಗಿದೆ. ಎನ್‌ಆರ್‌ಸಿಗೆ ಏನೇನು ದಾಖಲೆ ಕೊಡಬೇಕು ಎಂಬುದನ್ನು ಪ್ರಕಟಿಸದೆ ಸರ್ಕಾರ ಗೊಂದಲ ಸೃಷ್ಟಿಸಿ ಧರ್ಮ ಧರ್ಮಗಳ ನಡುವೆ ವೈಷಮ್ಯ ಬೀಜ ಬಿತ್ತುತ್ತಿದೆ ಎಂದು ಆಪಾದಿಸಿದರು.
    ಸ್ವಾಮಿ ವಿವೇಕಾನಂದರ ಹೆಸರು ಬಳಸಿಕೊಂಡು ಆರ್‌ಎಸ್‌ಎಸ್ ಹಿಂದುತ್ವ ಮಾರ್ಕೆಟಿಂಗ್ ಮಾಡುತ್ತಿದೆ. ಧರ್ಮದ ಹೆಸರಲ್ಲಿ ಆಡಳಿತ, ಶೋಷಣೆ ಮಾಡಿ ಸುಳ್ಳು ಹಾಗೂ ಭ್ರಮೆಯಲ್ಲಿ ಜನರನ್ನು ಇರಿಸಿದ್ದಾರೆ. ಸ್ವಾತಂತ್ರ್ಯ ಪೂರ್ವದ ಪರಿಸ್ಥಿತಿಯನ್ನು ನಿರ್ಮಾಣ ಮಾಡುವ ಎಲ್ಲ ಷಡ್ಯಂತ್ರಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ. ಸರ್ಕಾರದ ಯಾವುದೇ ನಡೆ ಬಗ್ಗೆಯೂ ನಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ. ಹೀಗಾಗಿ ನಾವು ದನಿ ಎತ್ತದಿದ್ದಲ್ಲಿ ಅಪಾಯಕ್ಕೆ ಸಿಲುಕುವುದು ನಿಶ್ಚಿತ ಎಂದರು.
    ಸಾಹಿತಿ ವಡ್ಡಗೆರೆ ನಾಗರಾಜಯ್ಯ, ಸಿಐಟಿಯು ಅಧ್ಯಕ್ಷೆ ವರಲಕ್ಷ್ಮೀ, ಉದ್ಯಮಿ ನೂರ್ ಮಹಮದ್ ಮರ್ಚೆಂಟ್, ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಮಲ್ಲಹಳ್ಳಿ ನಾರಾಯಣ, ಗೌರವಾಧ್ಯಕ್ಷ ಚುಂಚನಹಳ್ಳಿ ಮಲ್ಲೇಶ್, ಉಪಾಧ್ಯಕ್ಷ ಕಾರ್ಯ ಬಸವಣ್ಣ, ಸುರೇಶ್ ಶಂಕರಪುರ, ದೇವರಸನಹಳ್ಳಿ ಬಸವರಾಜು, ಮಂಜು ಶಂಕರಪುರ, ನಗರ್ಲೆ ವಿಜಯಕುಮಾರ್, ಬೊಕ್ಕಹಳ್ಳಿ ಲಿಂಗಯ್ಯ, ಅಭಿನಾಗಭೂಷಣ್, ಪುಟ್ಟಸ್ವಾಮಿ, ಯೋಗೀಶ್, ಹರದನಹಳ್ಳಿ ರಾಜೇಶ್ ಉಪಸ್ಥಿತರಿದ್ದರು.
    ಮೆರವಣಿಗೆ:
    ಇದಕ್ಕೂ ಮುನ್ನ ಭೀಮ ಕೋರೇಗಾಂವ್ ವಿಜಯೋತ್ಸವ ಸ್ತಬ್ಧಚಿತ್ರ ಹಾಗೂ ಕಲಾತಂಡಗಳ ಮೆರವಣಿಗೆಯಲ್ಲಿ ಸಾವಿರಾರು ಜನರು ಪಾಲ್ಗೊಂಡರು. ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜು ಆವರಣದಿಂದ ಹೊರಟ ಮೆರವಣಿಗೆ ರಾಷ್ಟ್ರಪತಿ ರಸ್ತೆ, ಬ್ರಾಡ್‌ವೇ ರಸ್ತೆ ಮೂಲಕ ಅಂಬೇಡ್ಕರ್ ಸಮುದಾಯ ಭವನ ಬಳಿ ಅಂತ್ಯಗೊಂಡಿತು. ನಗಾರಿ, ಡೊಳ್ಳು ಕುಣಿತ, ದೊಣ್ಣೆ ವರಸೆ ಸೇರಿದಂತೆ ಜಾನಪದ ಕಲಾತಂಡಗಳ ಪ್ರದರ್ಶನ ಮೆರುಗು ಹೆಚ್ಚಿಸಿತು. ಮಾರ್ಗದುದ್ದಕ್ಕೂ ನೀಲಿ ಬಂಟಿಂಗ್ಸ್‌ಗಳು ರಾರಾಜಿಸಿದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts