ಕೊಟ್ಟಿಗೆಗೆ ಬೆಂಕಿ ಇಟ್ಟಿದ್ದ ಆರೋಪಿಗಳಿಗೆ ಶಿಕ್ಷೆ

ನಂಜನಗೂಡು: ತಾಲೂಕಿನ ಮುದ್ದಹಳ್ಳಿ ಗ್ರಾಮದಲ್ಲಿ ಕೊಟ್ಟಿಗೆಗೆ ಬೆಂಕಿ ಹಚ್ಚಿ ಮೂರು ಹಸುಗಳು ಸಜೀವ ದಹನಗೊಂಡಿದ್ದ ಪ್ರಕರಣದ ಮೂವರು ಆರೋಪಿಗಳಿಗೆ ಐದು ವರ್ಷ ಕಠಿಣ ಜೈಲು ಶಿಕ್ಷೆ, 55 ಸಾವಿರ ರೂ. ದಂಡ ವಿಧಿಸಿ ಜಿಲ್ಲಾ ಅಧಿಕ ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
ಗ್ರಾಮದ ಚಿಕ್ಕಸ್ವಾಮಿ(48), ಪುಟ್ಟಸ್ವಾಮಿ(55) ಮಹದೇವಪ್ಪ(55) ಶಿಕ್ಷೆಗೆ ಗುರಿಯಾದವರು. ಮಹೇಶ್, ನಾಗಣ್ಣ, ರೇವಣ್ಣ ಅವರ ಮೇಲಿನ ಆರೋಪ ಸಾಬೀತಾಗದ ಹಿನ್ನೆಲೆಯಲ್ಲಿ ಪ್ರಕರಣವನ್ನು ಖುಲಾಸೆಗೊಳಿಸಿ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.
ಏನಿದು ಪ್ರಕರಣ: ಜೂ.4, 2016ರಲ್ಲಿ ಗ್ರಾಮದ ಎನ್.ರೇವಣ್ಣ ಎಂಬುವರ ಕೊಟ್ಟಿಗೆಗೆ ಬೆಂಕಿ ಹಚ್ಚಿದ ಪರಿಣಾಮ ಎರಡು ಹಸು, ಒಂದು ಕರು ಸಜೀವ ದಹನಗೊಂಡು ಮರದ ಸಾಮಗ್ರಿಗಳು ಸುಟ್ಟುಹೋಗಿ 2 ಲಕ್ಷ ರೂ. ನಷ್ಟ ಉಂಟಾಗಿತ್ತು. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ತನಿಖೆ ಕೈಗೊಂಡ ಸರ್ಕಲ್ ಇನ್ಸ್‌ಪೆಕ್ಟರ್ ರವಿಕುಮಾರ್ ತಂಡ ಏಳು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಎಂ.ವಿಜಯಕುಮಾರ್, ಆನಂದ್‌ಶೆಟ್ಟಿ ತೀರ್ಪು ನೀಡಿದ್ದಾರೆ.
ಸಂತ್ರಸ್ತ ಎನ್.ರೇವಣ್ಣ ಅವರಿಗೆ ದಂಡದ ಮೊತ್ತದಲ್ಲಿ 1.6 ಲಕ್ಷ ರೂ. ಪರಿಹಾರ ರೂಪದಲ್ಲಿ ಭರಿಸುವಂತೆ ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ಅಭಿಯೋಜಕ ಎಚ್.ಡಿ.ಆನಂದ್‌ಕುಮಾರ್ ವಾದ ಮಂಡಿಸಿದ್ದರು.