ಶ್ರೀಕಂಠೇಶ್ವರಸ್ವಾಮಿಗೆ ಕಾರ್ತಿಕ ಮಾಸದ ಪೂಜೆ

ನಂಜನಗೂಡು: ಕಾರ್ತಿಕ ಮಾಸದ ಮೂರನೇ ಸೋಮವಾರ ನಗರದ ಶ್ರೀಕಂಠೇಶ್ವರಸ್ವಾಮಿ ದೇವಾಲಯಕ್ಕೆ ಭಕ್ತ ಜನ ಸಾಗರವೇ ಹರಿದು ಬಂತು.

ವಾರಾಂತ್ಯ ಹಾಗೂ ಕನಕ ಜಯಂತಿ ರಜೆಯಿಂದ ಬೆಳಗಿನಿಂದ ಸಂಜೆವರೆಗೂ ಸಾವಿರಾರು ಜನರು ದೇವಾಲಯಕ್ಕೆ ಆಗಮಿಸಿ ದೇವರ ದರ್ಶನ ಪಡೆದರು.

ಸೋಮವಾರ ಬೆಳಗ್ಗೆ 4ರ ಸಮಯದಲ್ಲಿ ದೇವಾಲಯದ ಪ್ರಧಾನ ಅರ್ಚಕ ನಾಗಚಂದ್ರ ದೀಕ್ಷಿತ್ ನೇತೃತ್ವದಲ್ಲಿ ಶ್ರೀಕಂಠೇಶ್ವರಸ್ವಾಮಿಗೆ ಫಲಪಂಚಾಮೃತಾಭಿಷೇಕ ನೆರವೇರಿಸಿ ಮಹಾಮಂಗಳಾರತಿಯೊಂದಿಗೆ ಭಕ್ತರ ದರ್ಶನಕ್ಕೆ ಅನುವು ಮಾಡಿಕೊಡಲಾಯಿತು. ಕಪಿಲಾ ನದಿಯಲ್ಲಿ ಪುಣ್ಯಸ್ನಾನ ಮಾಡಿ ದೇವಾಲಯ ಪ್ರವೇಶಿಸಿದ ಭಕ್ತರು ವಿಶೇಷ ಪೂಜೆ ಸಲ್ಲಿಸಿ ಕೃತಾರ್ಥರಾದರು.

ಇನ್ನು ಬೆಳಗ್ಗೆ 7ರ ನಂತರ ದೇವಾಲಯ ಪ್ರವೇಶಕ್ಕಾಗಿ ಆಗಮಿಸಿದ ಜನರ ಸಂಖ್ಯೆ ತೀರಾ ಹೆಚ್ಚಾಗಿದ್ದರಿಂದ ಸಾಮಾನ್ಯ ಸಾಲಿನಲ್ಲಿ ತೆರಳಿ ದೇವರ ದರ್ಶನ ಪಡೆಯಲು ಕನಿಷ್ಟ 5ಗಂಟೆ ಸಮಯ ಬೇಕಾಯಿತು. ಇದರಿಂದ ಸರತಿ ಸಾಲಿನಲ್ಲಿ ನಿಂತಿದ್ದ ಮಹಿಳೆಯರು, ಮಕ್ಕಳು ದೇವರ ದರ್ಶನಕ್ಕೆ ಗಂಟೆಗಟ್ಟಲೆ ಸಾಲಿನಲ್ಲಿ ನಿಂತು ಬಸವಳಿದರು. ಇನ್ನು 100, 30ರೂ.ಗಳ ವಿಶೇಷ ಟಿಕೇಟ್ ಖರೀದಿಸಿ ದೇವಾಲಯದ ಒಳ ಪ್ರವೇಶ ಮಾಡಿ ದೇವರ ದರ್ಶನ ಮಾಡಲು ಕನಿಷ್ಟ 3ಗಂಟೆ ಸಮಯ ಬೇಕಾಗುತ್ತಿತ್ತು. ಇದರಿಂದ ಕೆಲವರು ದೇವಾಲಯದ ಹೊರ ಭಾಗದಲ್ಲೇ ಕೈಮುಗಿದು ವಾಪಸ್ ಮರಳಿದರು.