ದುಷ್ಕರ್ಮಿಗಳು ಹಚ್ಚಿದ ಬೆಂಕಿಗೆ 28 ಕುರಿಗಳು ಸಾವು

ನಂಜನಗೂಡು: ತಾಲೂಕಿನ ಮುದ್ದಹಳ್ಳಿ ಗ್ರಾಮದಲ್ಲಿ ಮಂಗಳವಾರ ತಡರಾತ್ರಿ ದುಷ್ಕರ್ಮಿಗಳು ಕೊಟ್ಟಿಗೆಗೆ ಬೆಂಕಿ ಹಚ್ಚಿದ ಪರಿಣಾಮ 28 ಕುರಿಗಳು ಮೃತಪಟ್ಟು, ಎರಡು ಕುರಿಗಳು ಅರೆಬೆಂದ ಸ್ಥಿತಿಯಲ್ಲಿವೆ.

ಗ್ರಾಮದ ಮಹದೇವಪ್ಪ ಎಂಬುವರಿಗೆ ಸೇರಿದ ಕೊಟ್ಟಿಗೆಯಲ್ಲಿ ಒಟ್ಟು 32 ಕುರಿಗಳ ರಾಸುಗಳನ್ನು ಕಟ್ಟಿ ಹಾಕಲಾಗಿತ್ತು. ಮಂಗಳವಾರ ರಾತ್ರಿ ಕೊಟ್ಟಿಗೆಯಲ್ಲಿ ಮಹದೇವಪ್ಪ ಮಲಗಿದ್ದರು ಎನ್ನಲಾಗಿದೆ. ಯಾರೋ ಕಿಡಿಗೇಡಿಗಳು ತಡರಾತ್ರಿ ಕೊಟ್ಟಿಗೆಗೆ ಬೆಂಕಿ ಹಾಕಿದ್ದಾರೆ. ಬೆಂಕಿಯಿಂದ ಎಚ್ಚರಗೊಂಡ ಮಹದೇವಪ್ಪ ಹೊರಬಂದು ಕೂಗಿಕೊಂಡರು. ನೆರೆಹೊರೆಯವರು ಸಹಾಯಕ್ಕೆ ಬರುವಷ್ಟರಲ್ಲಿ ಕೊಟ್ಟಿಗೆ ಸಂಪೂರ್ಣ ಬೆಂಕಿಗಾಹುತಿಯಾಗಿದೆ.

ಕೊಟ್ಟಿಗೆಯಲ್ಲಿ ಇಟ್ಟಿದ್ದ ಮರದ ಸಾಮಗ್ರಿಗಳೂ ಭಸ್ಮವಾಗಿವೆ. ಅರೆಬೆಂದ ಸ್ಥಿತಿಯಲ್ಲಿರುವ ಎರಡು ಕುರಿಗಳು ಬದುಕುಳಿಯುವ ಸಾಧ್ಯತೆಯಿಲ್ಲ ಎನ್ನಲಾಗಿದೆ. ಘಟನೆಯಿಂದ ರೈತ ಮಹದೇವಪ್ಪ ಅವರಿಗೆ 2 ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಹಳೆಯ ವೈಷಮ್ಯ ಇಟ್ಟುಕೊಂಡು ಯಾರೋ ಕಿಡಿಗೇಡಿಗಳು ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಬೆಂಕಿಗೆ ಕೊಟ್ಟಿಗೆ ಮೇಲೆ ಹಾದು ಹೋಗಿದ್ದ ವಿದ್ಯುತ್ ತಂತಿ ಕೂಡ ಸುಟ್ಟು ತುಂಡಾಗಿ ನೆಲಕ್ಕುರುಳಿದೆ. ಇದರಿಂದ ಗ್ರಾಮದಲ್ಲಿ ವಿದ್ಯುತ್ ಸಂಪರ್ಕವಿಲ್ಲದೆ ಗ್ರಾಮಸ್ಥರು ಪರದಾಡುವಂತಾಯಿತು. ಸಮೀಪದಲ್ಲೇ ಇದ್ದ ತೆಂಗಿನ ಮರಕ್ಕೂ ಬೆಂಕಿ ತಗುಲಿದೆ.