ಬಾಲಕಿ ಹತ್ಯೆ ಆರೋಪಿಗಳನ್ನು ಗಲ್ಲಿಗೇರಿಸಿ

ನಂಜನಗೂಡು: ನಗರದ ಸುಜಾತಪುರಂ ಬಡಾವಣೆಯಲ್ಲಿ ಬಾಲಕಿ ಹತ್ಯೆ ಪ್ರಕರಣದ ಆರೋಪಿಗಳಿಗೆ ಗಲ್ಲು ಶಿಕ್ಷೆ ನೀಡುವಂತೆ ಒತ್ತಾಯಿಸಿ ಸ್ಪಂದನಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆ ಸದಸ್ಯರು ಶುಕ್ರವಾರ ಪ್ರತಿಭಟನೆ ನಡೆಸಿದರು.

ನಗರದ ಮಿನಿ ವಿಧಾನಸೌಧದ ಮುಂಭಾಗ ಸಮಾವೇಶಗೊಂಡ ನೂರಾರು ಪದಾಧಿಕಾರಿಗಳು ಮಹಿಳೆ ಮತ್ತು ಮಕ್ಕಳಿಗೆ ರಕ್ಷಣೆ ನೀಡುವಂತೆ ಒತ್ತಾಯಿಸಿ ಘೋಷಣೆ ಕೂಗಿದರು.

ಸ್ಪಂದನಾ ಸಂಸ್ಥೆ ಮುಖ್ಯಸ್ಥೆ ಸಿಸ್ಟರ್ ತೆರೇಸಾ ಮಾತನಾಡಿ, ಸಮಾಜದಲ್ಲಿ ಮಹಿಳೆ ಮತ್ತು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ, ಅತ್ಯಾಚಾರ ಹಾಗೂ ಕೊಲೆ ಪ್ರಕರಣಗಳು ಅನಾಗರಿಕ ಸಂಸ್ಕೃತಿಯನ್ನು ಬಿಂಬಿಸುತ್ತಿವೆ. ಮಹಿಳೆಯರು ಮುಕ್ತವಾಗಿ ಜೀವನ ನಿರ್ವಹಣೆ ಮಾಡುವಂತೆ ಸಮಾಜ ನೋಡಿಕೊಳ್ಳಬೇಕಿದೆ. ಹೆಣ್ಣು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಹಾಗೂ ಕೊಲೆ ಪ್ರಕರಣವನ್ನು ತಡೆಗಟ್ಟುವ ಸಲುವಾಗಿ ಆರೋಪಿಗಳ ವಿರುದ್ಧ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಹಾಗೂ ಸಂತ್ರಸ್ತ ಬಡ ಕುಟುಂಬಕ್ಕೆ ಸರ್ಕಾರದಿಂದ ಸೂಕ್ತ ನೆರವು ನೀಡಬೇಕು ಎಂದು ಒತ್ತಾಯಿಸಿದರು.

ಕಿಡ್ಸ್ ಪ್ಯಾರಡೈಸ್ ಸಂಸ್ಥೆಯ ಕಾವ್ಯಾ ಮಾತನಾಡಿ, ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ನಿಯಂತ್ರಿಸುವ ಸಲುವಾಗಿ ಈಗ ಜಾರಿಯಲ್ಲಿರುವ ಕಾನೂನಿನ ನಿಯಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು. ಪಾಲಕರೂ ಕೂಡ ತಮ್ಮ ಮಕ್ಕಳ ಭವಿಷ್ಯಕ್ಕೆ ನೆರವಾಗುವಂತೆ ಬಾಲ್ಯದಿಂದಲೇ ಕರಾಟೆಯಂತಹ ರಕ್ಷಣಾತ್ಮಕ ಕಲೆಗಳನ್ನು ಕಲಿಸುವ ಮೂಲಕ ಹೆಣ್ಣು ಮಕ್ಕಳು ಸ್ವಯಂರಕ್ಷಣೆಗೆ ಸನ್ನದ್ಧರಾಗುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

ಸ್ಥಳಕ್ಕಾಗಮಿಸಿದ ಉಪ ತಹಸೀಲ್ದಾರ್ ಬಾಲಸುಬ್ರಹ್ಮಣ್ಯಂ ಅವರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಸ್ಪಂದನಾ ಸಂಸ್ಥೆಯ ಮಮತಾ, ಜ್ಯೋತಿ, ಹೇಮಶ್ರೀ, ರಂಜಿತಾ, ಭಾಗ್ಯಾ ಇದ್ದರು.