ನಿಷ್ಪಕ್ಷಪಾತ ತನಿಖೆಗೆ ಒತ್ತಾಯ

ನಂಜನಗೂಡು: ಬಾಲಕಿ ಹತ್ಯೆ ಪ್ರಕರಣವನ್ನು ನಿಷ್ಪಕ್ಷಪಾತ ತನಿಖೆ ನಡೆಸಿ ಸತ್ಯಾಂಶ ಬಯಲಿಗೆಳೆಯುವಂತೆ ಒತ್ತಾಯಿಸಿ ದಲಿತ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಸಾವಿರಾರು ವಿದ್ಯಾರ್ಥಿಗಳು ಗುರುವಾರ ಬೃಹತ್ ಪ್ರತಿಭಟನಾ ರ‌್ಯಾಲಿ ನಡೆಸಿ, ಮಿನಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಮುಂಭಾಗದ ದಲಿತ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು, ಬಾಲಕರ ಹಾಗೂ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಸಾವಿರಾರು ವಿದ್ಯಾರ್ಥಿಗಳು ಸಮಾವೇಶಗೊಂಡು ಎಂಜಿಎಸ್ ರಸ್ತೆ, ಮೈಸೂರು-ಗುಂಡ್ಲುಪೇಟೆ ಹೆದ್ದಾರಿ ಮೂಲಕ ಮಿನಿವಿಧಾನ ಸೌಧಕ್ಕೆ ತೆರಳಿ ಮೃತ ಬಾಲಕಿ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿದರು.

ದಸಂಸ ಜಿಲ್ಲಾ ಸಂಚಾಲಕ ಚುಂಚನಹಳ್ಳಿ ಮಲ್ಲೇಶ್ ಮಾತನಾಡಿ, ಅಮಾಯಕ ಬಾಲಕಿ ಮೇಲೆ ಅತ್ಯಾಚಾರ ನಡೆದು ಕೊಲೆ ಮಾಡಿರುವ ಪ್ರಕರಣವನ್ನು ಪೊಲೀಸ್ ಇಲಾಖೆ ಸಂಪೂರ್ಣ ದಿಕ್ಕು ತಪ್ಪಿಸುತ್ತಿದೆ. ಹತ್ಯೆಯಾದ ದಿನವೇ ಜಿಲ್ಲಾ ಪ್ರಭಾರ ಎಸ್ಪಿ ಧರ್ಮೇದ್ರಕುಮಾರ್ ಮೀನಾ ಅತ್ಯಾಚಾರ ಆಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಹೇಳಿಕೆ ನೀಡಿದ್ದರು. ಇದೀಗ ಮರಣೋತ್ತರ ಪರೀಕ್ಷೆಯಲ್ಲಿ ವ್ಯತಿರಿಕ್ತ ವರದಿ ಬಂದಿದೆ. ಬಾಲಕಿ ಮೇಲೆ ಅತ್ಯಾಚಾರ ನಡೆದಿರುವ ಕುರುಹುಗಳ ಬಗ್ಗೆ ಪಾಲಕರು ಪೊಲೀಸರ ಗಮನಕ್ಕೆ ತಂದರೂ ಗಂಭೀರವಾಗಿ ಪರಿಗಣಿಸದ ಪೊಲೀಸರು ಸತ್ಯಾಂಶವನ್ನು ಬಯಲಿಗೆಳೆಯುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.

ಪ್ರತಿಭಟನಾ ಸ್ಥಳಕ್ಕಾಗಮಿಸಿದ ಉಪ ತಹಸೀಲ್ದಾರ್ ಬಾಲಸುಬ್ರಹ್ಮಣ್ಯ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಮಲ್ಲಹಳ್ಳಿ, ಮುಖಂಡರಾದ ಕಾರ್ಯ ಬಸವಣ್ಣ, ಬೊಕ್ಕಳ್ಳಿ ಲಿಂಗಯ್ಯ, ಮಂಜು ಶಂಕರಪುರ, ಶಂಕರಪುರ ಸುರೇಶ್, ದೇವರಸನಹಳ್ಳಿ ಬಸವರಾಜು ಇನ್ನಿತರರು ಇದ್ದರು.

ಮಾನವ ಸರಪಳಿ: ಬಾಲಕಿ ಹತ್ಯೆ ಪ್ರಕರಣವನ್ನು ಖಂಡಿಸಿ ಪ್ರತ್ಯೇಕ ಪ್ರತಿಭಟನೆ ನಡೆಸಿದ ತಾಲೂಕು ಉಪ್ಪಾರ ಸಂಘದ ಪದಾಧಿಕಾರಿಗಳು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಾನವ ಸರಪಳಿ ನಿರ್ಮಿಸಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನಾಕಾರರು ಅಪೋಲೋ ವೃತ್ತದಿಂದ ಮೆರವಣಿಗೆಯಲ್ಲಿ ಸಾಗಿ ಹುಲ್ಲಹಳ್ಳಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿದರು.

ಅನೈತಿಕ ಸಂಬಂಧ ಬಯಲಾಗುತ್ತದೆ ಎಂಬ ಕಾರಣಕ್ಕೆ ಸಿದ್ದರಾಜು ಹಾಗೂ ರಾಜಮ್ಮ ಇಬ್ಬರು ಸೇರಿ ಬಾಲಕಿಯನ್ನು ಹತ್ಯೆ ಮಾಡಿರುವುದು ಸತ್ಯಕ್ಕೆ ದೂರವಾಗಿದೆ. ಇವರಿಬ್ಬರ ನಡುವೆಯಿದ್ದ ಅನೈತಿಕ ಸಂಬಂಧದ ಬಗ್ಗೆ ಬಡಾವಣೆಯಲ್ಲಿ ಕಳೆದ ನಾಲ್ಕು ವರ್ಷದಿಂದೆಯೇ ಜಗಜ್ಜಾಹೀರಾಗಿತ್ತು. ಬಾಲಕಿ ಹತ್ಯೆ ಹಿಂದೆ ಬೇರೆಯೇ ಒಳಮರ್ಮವಿದೆ. ಪೊಲೀಸರು ಪ್ರಕರಣದ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಉಪ್ಪಾರ ಸಮುದಾಯದ ಮುಖಂಡರು ಆರೋಪಿಸಿದರು.

ಪ್ರಕರಣದ ಮರು ತನಿಖೆ ನಡೆಸುವಂತೆ ಉಪ ತಹಸೀಲ್ದಾರ್ ಬಾಲಸುಬ್ರಹ್ಮಣ್ಯ ಅವರ ಮೂಲಕ ಸರ್ಕಾರವನ್ನು ಒತ್ತಾಯಿಸಿದರು. ತಾಲೂಕು ಉಪ್ಪಾರ ಸಂಘದ ಅಧ್ಯಕ್ಷ ಎಚ್.ಎಸ್.ಮೂಗಶೆಟ್ಟಿ, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಹೆಮ್ಮರಗಾಲ ಶಿವಣ್ಣ, ಬಾಲಚಂದ್ರು, ಸಿದ್ದಶೆಟ್ಟಿ, ನಿಂಗಪ್ಪ, ಮಹದೇವು ಇದ್ದರು.