‘ಕೈ’ ಕಾರ್ಯಕರ್ತರ ಭಿನ್ನಮತ ಸ್ಫೋಟ

ನಂಜನಗೂಡು: ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಬೂದಿ ಮುಚ್ಚಿದ ಕೆಂಡದಂತಿದ್ದ ಭಿನ್ನಮತೀಯ ಒಳಬೇಗುದಿ ಶನಿವಾರ ಎಐಸಿಸಿ ಕಾರ್ಯದರ್ಶಿ ಸತೀಶ್ ಜಾರಕಿಹೊಳಿ ಸಮ್ಮುಖದಲ್ಲಿ ಬಟಾಬಯಲಾಯಿತು.

ನಗರದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಕಾರ್ಯಕರ್ತರ ಸಮಾಲೋಚನಾ ಸಭೆಯಲ್ಲಿ ಹುಲ್ಲಹಳ್ಳಿ ಬ್ಲಾಕ್ ಎಸ್ಸಿ ಘಟಕದ ಅಧ್ಯಕ್ಷ ಹರದನಹಳ್ಳಿ ಸೋಮೇಶ್ ಮಾತನಾಡಿ, ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ನಂಜನಗೂಡಿಗೆ ಆಗಮಿಸುವಾಗ ಬ್ಲಾಕ್ ಕಾಂಗ್ರೆಸ್ ಸಮಿತಿಗೆ ಮಾಹಿತಿ ನೀಡದೆ ಕೇವಲ ತಮ್ಮ ಬೆಂಬಲಿಗರಿಗಷ್ಟೆ ತಿಳಿಸುತ್ತಾರೆ. ಬ್ಲಾಕ್ ಸಮಿತಿಗೆ ಮಾಹಿತಿ ನೀಡಿದರೆ ನಾವೇ ಖುದ್ದು ಹಾಜರಿದ್ದು ಸ್ವಾಗತ ಕೋರುತ್ತೇವೆ. ಪಕ್ಷದ ಪದಾಧಿಕಾರಿಗಳನ್ನು ಗಣನೆಗೆ ತೆಗೆದುಕೊಳ್ಳದೆ ಗುಂಪುಗಾರಿಕೆ ಮಾಡುತ್ತಿದ್ದಾರೆ. ಇದರಿಂದ ಪದಾಧಿಕಾರಿಗಳು ಮುಜುಗರಕ್ಕೀಡಾಗುತ್ತಿದ್ದು, ಪಕ್ಷದ ಆಂತರಿಕ ಶಿಸ್ತು ಕಾಯ್ದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ದೂರಿದರು.

ಪಕ್ಷದ ಸಂಘಟನೆ ಛಿದ್ರಗೊಳಿಸುವ ಸಲುವಾಗಿ ಗುಂಪುಗಾರಿಕೆಗೆ ಹೆಚ್ಚು ಮನ್ನಣೆ ನೀಡುತ್ತಿದ್ದಾರೆ. ಈ ವೈಫಲ್ಯದಿಂದಲೇ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಕಳಲೆ ಕೇಶವಮೂರ್ತಿ ಅವರಿಗೆ ಸೋಲಾಯಿತು. ಹೀಗಾಗಿ ಗುಂಪುಗಾರಿಕೆ ಮಾಡುವವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಇವರ ಮಾತಿಗೆ ಮತ್ತಷ್ಟು ಕಾರ್ಯಕರ್ತರು ದನಿಗೂಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಎಐಸಿಸಿ ಕಾರ್ಯದರ್ಶಿ ಸತೀಶ್ ಜಾರಕಿಹೊಳಿ, ಸಾರ್ವತ್ರಿಕ ಚುನಾವಣೆಯಲ್ಲಿ ಆಂತರಿಕ ಭಿನ್ನಾಭಿಪ್ರಾಯದಿಂದಲೇ ಪಕ್ಷಕ್ಕೆ ಪರಾಜಿತಗೊಳ್ಳಲು ಕಾರಣ ಎಂಬುದು ತಿಳಿದಿದೆ. ಇಂತಹ ತಪ್ಪುಗಳು ಮರುಕಳಿಸದಂತೆ ಲೋಕಸಭಾ ಚುನಾವಣೆಗೆ ಈಗಿಂದಲೇ ಸನ್ನದ್ಧರಾಗಬೇಕು. ತಳಮಟ್ಟದಲ್ಲಿ ಪಕ್ಷ ಸಂಘಟನೆ ದೃಷ್ಟಿಯಿಂದ ಶಕ್ತಿ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಯಶಸ್ವಿಗೊಳಿಸುವಂತೆ ಕಾರ್ಯಕರ್ತರಿಗೆ ಹೇಳಿದರು.

ಅಪಪ್ರಚಾರಕ್ಕೆ ಆಸ್ಪದ ನೀಡಬೇಡಿ:
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಜನರ ಬಳಿ ಮತ ಕೇಳಲು ತಮ್ಮ ಆಡಳಿತಾವಧಿಯಲ್ಲಿ ಯಾವುದೇ ಜನಪರ ಯೋಜನೆ ಜಾರಿಗೊಳಿಸಿದ ನಿದರ್ಶನವಿಲ್ಲ. ಹೀಗಾಗಿ ಸುಳ್ಳಿನ ಕಂತೆ ಸೃಷ್ಟಿಸಿ ಅಪಪ್ರಚಾರದ ಮೂಲಕ ಜನರ ಮನ ಗೆಲ್ಲಲು ಬಿಜೆಪಿ ಮುಂದಾಗುವ ಸಾಧ್ಯತೆಯಿದ್ದು, ಇದಕ್ಕೆ ಕಾರ್ಯಕರ್ತರು ಆಸ್ಪದ ನೀಡದೆ ಸತ್ಯಾಂಶ ಮನದಟ್ಟು ಮಾಡುವ ಪ್ರಯತ್ನ ಮಾಡಬೇಕು ಎಂದು ಸಂಸದ ಆರ್.ಧ್ರುವನಾರಾಯಣ್ ಕಿವಿಮಾತು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ತಮ್ಮ ಆಡಳಿತಾವಧಿಯಲ್ಲಿ ಸರ್ದಾರ್ ವಲ್ಲಭಬಾಯಿ ಪಟೇಲ್ ಪ್ರತಿಮೆ ಅನಾವರಣ ಬಿಟ್ಟರೆ ಯಾವುದೇ ಜನಪರ ಯೋಜನೆ ಜಾರಿಗೊಳಿಸಿದ ಉದಾಹರಣೆ ಇಲ್ಲ. ಯುಪಿಎ ಅವಧಿಯಲ್ಲಿ ನರೇಗಾ, ಉಚಿತ ಶಿಕ್ಷಣ, 72 ಸಾವಿರ ಕೋಟಿ ರೈತರ ಸಾಲ ಮನ್ನಾ ಸೇರಿದಂತೆ ಹಲವು ಮಹತ್ತರ ಯೋಜನೆಗಳನ್ನು ಅನುಷ್ಠಾನಗೊಳಿಸಿದ ಕೀರ್ತಿ ಕಾಂಗ್ರೆಸ್ ಪಕ್ಷಕ್ಕೆ ಸಲ್ಲುತ್ತದೆ. ಇಂತಹ ವಾಸ್ತವ ವಿಚಾರಗಳನ್ನು ಜನರಿಗೆ ಮನವರಿಕೆ ಮಾಡುವ ನಿಟ್ಟಿನಲ್ಲಿ ಈಗಿಂದಲೇ ಕಾರ್ಯಪ್ರವೃತ್ತರಾಗಬೇಕು ಎಂದು ತಿಳಿಸಿದರು.

ಮಾಜಿ ಶಾಸಕ ಕಳಲೆ ಎನ್.ಕೇಶವಮೂರ್ತಿ ಮಾತನಾಡಿ, ಬ್ಲಾಕ್ ಅಧ್ಯಕ್ಷರ ಆಯ್ಕೆ ಗೊಂದಲವನ್ನು ಇತ್ಯರ್ಥ ಪಡಿಸಲಾಗಿದೆ. ನಗರಸಭೆಯ 31 ವಾರ್ಡ್‌ಗಳಿಗೆ ಕಾರ್ಯಕರ್ತರ ಅಭಿಪ್ರಾಯ ಕ್ರೂಢೀಕರಿಸಿ ಅಭ್ಯರ್ಥಿಗಳನ್ನು ಅಂತಿಮ ಮಾಡಲಾಗುವುದು. ಪಕ್ಷ ವಿರೋಧಿಗಳ ಬಗ್ಗೆ ಕಾರ್ಯಕರ್ತರು ಚಿಂತಿಸಬೇಕಿಲ್ಲ. ಈ ಬಗ್ಗೆ ಪಕ್ಷದ ವರಿಷ್ಠರು ಕ್ರಮ ಕೈಗೊಳ್ಳಲಿದ್ದಾರೆ ಎಂದು ಹೇಳಿದರು.

ನಗರಸಭಾಧ್ಯಕ್ಷೆ ಪಿ.ಪುಷ್ಪಲತಾ, ಎಸ್ಟಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಸ್.ಸಿ.ಬಸವರಾಜು, ಕೆಪಿಸಿಸಿ ಸದಸ್ಯ ಅಕ್ಬರ್ ಅಲೀಂ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಚ್.ಎಸ್.ಮೂಗಶೆಟ್ಟಿ, ಶೆಟ್ಟಹಳ್ಳಿ ಗುರುಸ್ವಾಮಿ, ಪಿ.ಶ್ರೀನಿವಾಸ್, ತಾಪಂ ಮಾಜಿ ಅಧ್ಯಕ್ಷ ಬಿ.ಎಂ.ನಾಗೇಶ್‌ರಾಜ್ ಇತರರಿದ್ದರು.