ಪುಸ್ತಕ ಓದುವ ಅಭಿರುಚಿ ಕ್ಷೀಣ

ನಂಜನಗೂಡು: ಪ್ರಸ್ತುತ ಕಾಲಘಟ್ಟದಲ್ಲಿ ಹೆಚ್ಚುತ್ತಿರುವ ತಂತ್ರಜ್ಞಾನ ಬಳಕೆಯಿಂದ ಪುಸ್ತಕ ಓದುವ ಅಭಿರುಚಿ ಕ್ಷೀಣಿಸಿದೆ ಎಂದು ಸಾಹಿತಿ ಬನ್ನೂರು ಕೆ.ರಾಜು ವಿಷಾದ ವ್ಯಕ್ತಪಡಿಸಿದರು.

ನಗರದ ರಾಷ್ಟ್ರಪತಿ ರಸ್ತೆಯ ಬ್ರಾಹ್ಮಣ ಧರ್ಮ ಸಹಾಯ ಸಭಾ ಸಭಾಂಗಣದಲ್ಲಿ ಶೇಷಾದ್ರಿ ಪುಸ್ತಕ ಮನೆ ವತಿಯಿಂದ ವಿಶ್ವ ಪುಸ್ತಕ ದಿನಾಚರಣೆ ಅಂಗವಾಗಿ ಮಂಗಳವಾರ ಆಯೋಜಿಸಿದ್ದ ಪುಸ್ತಕ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.

ಹೆಚ್ಚುತ್ತಿರುವ ಮೊಬೈಲ್ ಮೋಹ ಯುವಕರಲ್ಲಿ ಓದುವ ಆಸಕ್ತಿಯನ್ನು ಕುಗ್ಗಿಸುತ್ತಿದೆ. ಇಡಿ ಜಗತ್ತನ್ನೇ ಅಂಗೈಯಲ್ಲಿ ನೋಡಬಹುದಾದ ತಂತ್ರಜ್ಞಾನ ಯುಗದಲ್ಲಿ ನಾವಿದ್ದೇವೆ. ಅದೆಲ್ಲವೂ ಓದುವ ಅಭಿರುಚಿಗೆ ಸರಿಸಾಟಿಯಲ್ಲ ಎಂಬುದನ್ನು ನಾವು ಗಂಭೀರವಾಗಿ ಚಿಂತಿಸಬೇಕಿದೆ ಎಂದರು.

ಮೊಬೈಲ್‌ನಲ್ಲಿ ಸಿಗುವ ಜ್ಞಾನ ನಮ್ಮ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗುವುದಿಲ್ಲ. ಪುಸ್ತಕ ಓದುವ ಹವ್ಯಾಸದಿಂದ ಭಾಷೆ ಮೇಲೆ ಹಿಡಿತ ಸಾಧಿಸುವ ಜತೆಗೆ ಕೌಶಲ ಹೆಚ್ಚಾಗುತ್ತದೆ. ಇದರಿಂದ ಪರಿಪೂರ್ಣರಾಗಿ ರೂಪುಗೊಳ್ಳಲು ಸಹಕಾರಿಯಾಗುತ್ತದೆ. ಪುಸ್ತಕ ಓದುವ ಸಂತತಿ ವೃದ್ಧಿಯಾಗಬೇಕಿದೆ. ವಿಶೇಷವಾಗಿ ಯುವ ಪೀಳಿಗೆಗೆ ಪುಸ್ತಕಗಳ ಮಹತ್ವ ಸಾರುವ ಅಗತ್ಯವಿದೆ ಎಂದು ಹೇಳಿದರು.

ಸಮಗ್ರ ಅಧ್ಯಯನದಿಂದಲೇ ತಮ್ಮ ಜ್ಞಾನ ಭಂಡಾರವನ್ನು ಹೆಚ್ಚಿಸಿಕೊಂಡ ಅಂಬೇಡ್ಕರ್ ದೇಶದ ಭೌಗೋಳಿಕ ಹಿನ್ನೆಲೆ, ಆರ್ಥಿಕ ಸ್ಥಿತಿಗತಿ, ಸಾಮಾಜಿಕ ಪರಿಸ್ಥಿತಿಯನ್ನು ಅರಿಯಲು ಸಾಧ್ಯವಾಯಿತು. ಇವುಗಳ ಆಧಾರದ ಮೇಲೆಯೇ ಸರ್ವರಿಗೂ ಸಮಬಾಳು, ಸಮಪಾಲು ನೀಡುವ ನಿಟ್ಟಿನಲ್ಲಿ ಸಂವಿಧಾನ ರಚಿಸಲು ನೆರವಾಯಿತು. ಹೀಗಾಗಿ ಪುಸ್ತಕ ಓದುವುದು ನಮ್ಮ ಬದುಕಿನ ಹಲವು ತಿರುವುಗಳಿಗೆ ಸಹಕಾರಿಯಾಗಲಿದೆ ಎಂದರು.

ವಿಶ್ವ ಪುಸ್ತಕ ದಿನಾಚರಣೆ ಅಂಗವಾಗಿ ಎಲ್ಲ ಬಗೆಯ ಪುಸ್ತಕಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಭೇಟಿ ಕೊಟ್ಟ ಸಾರ್ವಜನಿಕರು ಆಸಕ್ತಿದಾಯಕ ಪುಸ್ತಕ ಖರೀದಿಸಿದರು.

ಪ್ರಥಮದರ್ಜೆ ಗುತ್ತಿಗೆದಾರ ಯು.ಎನ್.ಪದ್ಮನಾಭರಾವ್, ಲೇಖಕ ನಂಜನಗೂಡು ಸತ್ಯನಾರಾಯಣ, ಸಾಹಿತಿ ಕೊತ್ತಲವಾಡಿ ಶಿವಕುಮಾರ್, ಸಂಸ್ಕಾರ ಭಾರತಿ ಅಧ್ಯಕ್ಷ ಗೋಪಿನಾಥ್, ವಿಚಾರ ವೇದಿಕೆ ಅಧ್ಯಕ್ಷ ಜಗದೀಶ್, ಸೌಗಂಧಿಕ ಜೋಯಿಸ್, ಲತಾ ಮುದ್ದುಮೋಹನ್ ಇತರರಿದ್ದರು.

Leave a Reply

Your email address will not be published. Required fields are marked *