ಅತಿ ಕೋಪ ಅಸಹಜ

| ಶಾಂತಾ ನಾಗರಾಜ್

  • ನಾನು 68 ವರ್ಷದ ಗೃಹಿಣಿ. ಗಂಡನಿಗೆ 74 ವರ್ಷ, ಅವರು ತುಂಬ ಸಾಧು ಸ್ವಭಾವದವರು. ನಮ್ಮವರು ಚಿಕ್ಕ ಕೆಲಸದಲ್ಲಿ ಇದ್ದುದರಿಂದ ಅವರ ಸಂಬಳ ಸಂಸಾರಕ್ಕೆ ಸಾಲುತ್ತಿರಲಿಲ್ಲ. ನಾನು ಟಿ.ಸಿ.ಎಚ್ ಮಾಡಿ ಸರ್ಕಾರಿ ಶಾಲೆಯಲ್ಲಿ ಕೆಲಸಕ್ಕೆ ಸೇರಿದೆ. ಮಗಳು ಸಹನಶೀಲೆ ಮತ್ತು ಜಾಣೆ. ಬಿ.ಇ. ಮತ್ತು ಎಂ.ಟೆಕ್ ಮಾಡಿ ಒಳ್ಳೆಯ ಕೆಲಸದಲ್ಲಿದ್ದಾಳೆ. ಅವಳ ಸಂಸಾರ ಚೆನ್ನಾಗಿದೆ. ನನ್ನ ಮಗ ಬಾಲ್ಯದಿಂದಲೂ ಕೋಪಿಷ್ಟ. ಮನೆಗೆ ದೊಡ್ಡ ಮಗನಾದರೂ ಯಾವ ಜವಾಬ್ದಾರಿಯನ್ನೂ ತೆಗೆದುಕೊಳ್ಳಲಿಲ್ಲ. ಸದಾ ಸ್ನೇಹಿತರ ಜತೆ ಅಲೆಯುವುದು, ಮನೆಗೆ ಬಂದು ತಂಗಿಯನ್ನು ಹೆದರಿಸಿ ಊಟ, ತಿಂಡಿ ಮಾಡಿ ಹೊರಗೆ ಸುತ್ತುವುದು… ಇದೇ ಅವನ ನಡವಳಿಕೆಯಾಗಿತ್ತು. ಕೋಪ ಬಂದಾಗ ತಿನ್ನುವ ತಟ್ಟೆಯನ್ನೇ ಬೀಸಿ ಗೋಡೆಗೆ ಎಸೆಯುತ್ತಿದ್ದ. ಮನೆಯ ಕಿಟಕಿ ಬಾಗಿಲುಗಳನ್ನೆಲ್ಲ ಕೋಪದಲ್ಲಿ ಒಡೆದುಹಾಕಿದ್ದಾನೆ. ಚಿಕ್ಕವನಿದ್ದಾಗ ತೊಡೆಯ ಮೇಲೆ ಮಲಗಿಸಿಕೊಂಡು ತಲೆ ಸವರುತ್ತ ‘ಹೀಗೆಲ್ಲ ಕೋಪ ಮಾಡಿಕೊಳ್ಳುವುದು ಒಳ್ಳೆಯದಲ್ಲ’ ಎಂದು ಎಷ್ಟೋ ಬುದ್ಧಿ ಹೇಳಿದೆ. ಯಾವುದಕ್ಕೂ ಬಗ್ಗಲಿಲ್ಲ. ಈಗ ಅವನಿಗೆ 30 ವರ್ಷ. ಎಲ್ಲೋ ಕೆಲಸ ಮಾಡುತ್ತೇನೆ ಎಂದು ಹೇಳುತ್ತಾನೆ. ಒಂದು ಪೈಸೆ ಸಹ ಮನೆಗೆ ಕೊಡುವುದಿಲ್ಲ. ಮಧ್ಯೆ ಮಧ್ಯೆ 20,. 30 ಸಾವಿರ ಕೊಡು ಎಂದು ಹಠ ಮಾಡುತ್ತಾನೆ. ಹಣವಿಲ್ಲ ಎಂದರೆ ಜೋರಾಗಿ ಕೂಗಾಡಿ, ರಸ್ತೆಯವರೆಲ್ಲ ಬಂದು ಸೇರುವ ಹಾಗೆ ಅವಮಾನ ಮಾಡುತ್ತಾನೆ. ನನಗಂತೂ ದಿನಾ ಕಣ್ಣೀರಿನಲ್ಲಿ ಕೈತೊಳೆಯುವುದೇ ಆಗಿದೆ. ಇದಕ್ಕೆಲ್ಲಿ ಪರಿಹಾರ ಕಂಡುಕೊಳ್ಳಲಿ?

ನಿಮ್ಮ ಮಗನಿಗೆ ಬಾಲ್ಯದಿಂದಲೂ ಭಾವನೆಗಳನ್ನು ಹತೋಟಿಯಲ್ಲಿ ಇಟ್ಟುಕೊಂಡು ನಿರ್ವಹಿಸಲು ಬಂದಿಲ್ಲ. ಇದು ಕೆಲವು ಮಕ್ಕಳಿಗೆ ವಂಶವಾಹಿನಿಯಿಂದಲೋ ಮಿದುಳಿನ ದೌರ್ಬಲ್ಯದಿಂದಲೋ ಬರುತ್ತದೆ. ಅವನು ಸಣ್ಣವನಿರುವಾಗಲೇ ಮನೋವೈದ್ಯರ ಬಳಿ ಕರೆದುಕೊಂಡು ಹೋಗಬೇಕಾಗಿತ್ತು. ಬಹಳಷ್ಟು ತಂದೆತಾಯಿಯರಿಗೆ ಈ ಬಗ್ಗೆ ಅರಿವು ಇರುವುದಿಲ್ಲ. ‘ಏನೋ ಕೋಪ, ಅದು ಸ್ವಭಾವ, ದೊಡ್ಡವನಾದರೆ ಸರಿಹೋಗುತ್ತಾನೆ’ ಎಂದುಕೊಳ್ಳುತ್ತಾರೆ. ಊಟದ ತಟ್ಟೆ ಎಸೆಯುವುದು, ಕಿಟಕಿ ಬಾಗಿಲನ್ನು ಮುರಿಯುವುದು ಇವೆಲ್ಲ ತೀರಾ ಅಸಹಜ ಕೋಪಗಳು. ದೊಡ್ಡವರಾಗುತ್ತ ಇನ್ನೂ ಹೆಚ್ಚಾಗುತ್ತದೆಯೇ ವಿನಾ ಕಡಿಮೆಯಾಗುವುದಿಲ್ಲ. ಇದೊಂದು ಮಾನಸಿಕ ದೌರ್ಬಲ್ಯ. ಮಕ್ಕಳಾಗಿದ್ದಾಗಲೇ ಮಿದುಳಿಗೆ ತನ್ನ ಭಾವನೆಗಳನ್ನು ಹತೋಟಿಯಲ್ಲಿ ಇಟ್ಟುಕೊಳ್ಳುವ ಗುಣವೂ ಇರುತ್ತದೆ. ಅದು ಆರೋಗ್ಯಕರ ಮಿದುಳು. ಪುಟ್ಟ 3 ವರ್ಷದ ಮಗು ಅಮ್ಮ ಬೈದಾಗ ಆದಷ್ಟು ಅಳು ತಡೆಹಿಡಿಯುವುದನ್ನು ನೀವೂ ನೋಡಿರಬಹುದು. ಅಥವಾ ಸ್ವಲ್ಪ ಅತ್ತು ತಾನೇ ಸಮಾಧಾನ ಮಾಡಿಕೊಳ್ಳುವುದನ್ನೂ ನೋಡಿರಬಹುದು. ಇವೆಲ್ಲ ಆರೋಗ್ಯಕರ ಮಿದುಳಿನ ಲಕ್ಷಣಗಳು. 10-12 ವರ್ಷವಾದರೂ ಸದಾ ಅಳುತ್ತಿದ್ದರೆ ಅಥವಾ ಕೋಪದಿಂದ ಅಸಭ್ಯವಾಗಿ ವರ್ತಿಸಿದರೆ ಆ ಮಿದುಳು ಅನಾರೋಗ್ಯಕರವೆಂದೇ ಭಾವಿಸಬೇಕು. ಅದಕ್ಕೆ ಈಗ ಬೇಕಾದಷ್ಟು ಥೆರಪಿಗಳಿವೆ. ಮತ್ತು ಮನಸ್ಸನ್ನು ಶಾಂತಗೊಳಿಸುವ ಔಷಧಗಳು ಇವೆ. ಗಿಡವಾಗಿ ಬಗ್ಗಿಸದ ರೋಗ ಮುಂದೆ ಮರವಾಗುತ್ತದೆ. ನಿಮ್ಮ ಮಗನ ವಿಷಯದಲ್ಲೂ ಹಾಗೇ ಆಗಿದೆ. ನಿಮಗೀಗ ಎರಡು ದಾರಿಗಳಿವೆ. ನಿಮ್ಮ ಮಗನನ್ನು ಹೇಗಾದರೂ ಮಾಡಿ ಮನೋವೈದ್ಯರ ಹತ್ತಿರ ತಪಾಸಣೆ ಮಾಡಿಸುವುದು. ಮತ್ತು ಔಷಧ, ಥೆರಪಿಗಳನ್ನು ಕೊಡಿಸುವುದು. ಅದು ನಿಮ್ಮಿಂದ ಸಾಧ್ಯವಾಗದಿದ್ದರೆ, ನಿಮ್ಮ ಊರಿನ ಮನೆಯನ್ನು ಮಾರಿ, ಅದನ್ನು ಫಿಕ್ಸೆಡ್ ಡಿಪಾಸಿಟ್ ಮಾಡಿ ಅದರ ಬಡ್ಡಿಹಣ ಮತ್ತು ನಿಮ್ಮ ಪೆನ್ಶನ್ ಸೇರಿಸಿ ಬೆಂಗಳೂರಿನಲ್ಲಿ ಒಳ್ಳೆಯ ವೃದ್ಧಾಶ್ರಮದಲ್ಲಿ ನೀವು ಮತ್ತು ನಿಮ್ಮ ಗಂಡ ಹಾಯಾಗಿ ಇರುವುದು. ಮಗನನ್ನು ಅವನ ಪಾಡಿಗೆ ಬಿಡಿ. 30 ವರ್ಷದ ಹುಡುಗ ತನ್ನ ಬದುಕನ್ನು ತಾನೇ ನೋಡಿಕೊಳ್ಳಲಾರನೇ? ಮಗನಿಂದ ಇವು ಯಾವುದನ್ನೂ ನಿರೀಕ್ಷಿಸುವ ಹಾಗಿಲ್ಲ. ಇಂಥ ಪರಿಸ್ಥಿತಿಯಲ್ಲಿ ನಾವೇ ಪರ್ಯಾಯ ವ್ಯವಸ್ಥೆಗಳನ್ನು ಕಂಡುಕೊಳ್ಳಬೇಕಲ್ಲವೇ?

ಉತ್ತಮ ವೃದ್ಧಾಶ್ರಮಗಳಲ್ಲಿ ವೈದ್ಯರ ವ್ಯವಸ್ಥೆ, ಅಡುಗೆ, ಊಟದ ವ್ಯವಸ್ಥೆ ಎಲ್ಲವೂ ಅಚ್ಚುಕಟ್ಟಾಗಿರುತ್ತದೆ. ನಿಮ್ಮದೇ ವಯಸ್ಸಿನ ಅನೇಕ ಸ್ನೇಹಿತರೂ ಸಿಗುತ್ತಾರೆ. ಎಲ್ಲ ಜಾತಿಯವರೂ ಅವರವರದೇ ವೃದ್ಧಾಶ್ರಮಗಳನ್ನು ನಡೆಸುತ್ತಿದ್ದಾರೆ. ನಿಮಗೆ ಮನಶ್ಯಾಂತಿ ಬೇಕೆಂದರೆ ಬದಲಾವಣೆಗೆ ಒಗ್ಗಿಕೊಳ್ಳಬೇಕು. ದಿನವೂ ಅಳುತ್ತ ರೋಗವನ್ನು ಹೆಚ್ಚು ಮಾಡಿಕೊಳ್ಳುವುದಕ್ಕಿಂತ ಶಾಂತಿ ಹುಡುಕಿ ಬೇರೆ ನೆಲೆಯನ್ನು ಕಂಡುಕೊಳ್ಳುವುದು ಜಾಣತನವಲ್ಲವೇ? ನೆಂಟರೇನೆಂದಾರು, ಸಮಾಜ ಏನೆನ್ನುತ್ತದೆ ಇಂಥ ಪ್ರಶ್ನೆಗಳನ್ನು ದೂರ ಸರಿಸಿ. ನಿಮ್ಮ ಮಗ ಕೋಪದಿಂದ ಕಿಟಕಿ ಬಾಗಿಲುಗಳನ್ನು ಮುರಿಯುತ್ತಿದ್ದಾಗ ಯಾವ ನೆಂಟರೂ ಯಾವ ಸಮಾಜವೂ ನಿಮ್ಮ ರಕ್ಷಣೆಗೆ ಬರುವುದಿಲ್ಲ ಅಲ್ಲವೇ? ನಮ್ಮ ಯೋಗಕ್ಷೇಮವನ್ನು ನಾವೇ ನೋಡಿಕೊಳ್ಳಬೇಕು.