ನಂದಿನಿಗೆ ಬೇಕಿದೆ ಆರ್ಥಿಕ ನೆರವು

ರಬಕವಿ/ಬನಹಟ್ಟಿ: ತುತ್ತಿನ ಚೀಲ ತುಂಬಿಸಿಕೊಳ್ಳಲು ಕಷ್ಟದ ಜೀವನ ನಡೆಸುತ್ತಿರುವ ಬಡ ಕುಟುಂಬವೊಂದು ಅನಾರೋಗ್ಯದಿಂದ ಬಳಲುತ್ತಿರುವ ಮಗಳ ಚಿಕಿತ್ಸೆ ವೆಚ್ಚ ಹೊಂದಿಸಲಾಗದೆ ಪರದಾಡುತ್ತಿದೆ.

ಬನಹಟ್ಟಿಯ ದೇವರ ದಾಸಿಮಯ್ಯ ಕಾಲನಿಯ ಮಲ್ಲಿಕಾರ್ಜುನ ಹುನ್ನೂರ ರಾಜೇಶ್ವರಿ ದಂಪತಿಯ 11 ವರ್ಷದ ಪುತ್ರಿ ನಂದಿನಿ ಹುಟ್ಟಿನಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದಾಳೆ. ಮಲ್ಲಿಕಾರ್ಜುನ ಸೀರೆ ನೇಯ್ಗೆ ಮಾಡುತ್ತ ದಿನಕ್ಕೆ 150-200 ರೂ. ಸಂಪಾದಿಸುತ್ತಿದ್ದು, ಅವರ ಸಂಪಾದನೆ ಕುಟುಂಬ ನಿರ್ವಹಣೆಗೆ ಸಾಲುತ್ತಿಲ್ಲ. ರಾಜೇಶ್ವರಿ ಅವರೂ ಸೀರೆ ಉತ್ಪಾದನೆಗೆ ಬೇಕಾದ ಖಂಡಿಕೆ ಸುತ್ತುವ ಕಾಯಕದಲ್ಲಿ ತೊಡಗಿಕೊಂಡಿದ್ದರೂ ಬರುವ ಆದಾಯ ಅಷ್ಟಕಷ್ಟೆ.

ಪುತ್ರಿ ನಂದಿನಿಯ ಕಿಡ್ನಿ ಕಾಯಿಲೆಗೆ ತಿಂಗಳಿಗೆ 3 ರಿಂದ 4 ಸಾವಿರ ರೂ.ಖರ್ಚಾಗುತ್ತಿದ್ದು, ಕುಟುಂಬ ಆರ್ಥಿಕವಾಗಿ ತೀವ್ರ ಸಮಸ್ಯೆ ಎದುರಿಸುತ್ತಿದೆ. ಅನಾರೋಗ್ಯ ಸಮಸ್ಯೆಯಿಂದ ನಂದಿನಿ ನಿತ್ಯ ನರಳಾಟ ಅನುಭವಿಸುವಂತಾಗಿದೆ. ಕಿಡ್ನಿ ವೈಫಲ್ಯದಿಂದ ಹೆಚ್ಚುತ್ತಿರುವ ಮೈಭಾರ ಸೇರಿ ಹಲವು ತೊಂದರೆ ಎದುರಾಗುತ್ತಿವೆ ಎಂದು ವೈದ್ಯರು ತಿಳಿಸಿದ್ದಾರೆ.

ಮಗಳ ಚಿಕಿತ್ಸೆಗಾಗಿ 9 ವರ್ಷಗಳಿಂದ ವಿಜಯಪುರ, ಮಿರಜ್ ಆಸ್ಪತ್ರೆಗಳಿಗೆ ತೆರಳಿ ಸುಸ್ತಾಗಿರುವ ಕುಟುಂಬ ಇದೀಗ ಸಹಾಯ ಹಸ್ತದ ನಿರೀಕ್ಷೆಯಲ್ಲಿದೆ. ಈ ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡಲಿಚ್ಚಿಸುವವರು ಮಲ್ಲಿಕಾರ್ಜುನ ಹುನ್ನೂರ, ದೇವರ ದಾಸಿಮಯ್ಯ ಕಾಲನಿ, ಬನಹಟ್ಟಿ. ಮೊ.87312-88369 ಅಥವಾ ಎಸ್​ಬಿಐನ ಎಸ್.ಬಿ. ಖಾತೆ ಸಂಖ್ಯೆ: 34498884035 (ಐಎಫ್​ಎಸ್​ಸಿ ಕೋಡ್- ಎಸ್​ಬಿಐಎನ್0004757)ಗೆ ಹಣ ಸಂದಾಯ ಮಾಡಬಹುದು.