More

  ನಂದಿಯ ಶ್ರೀ ಭೋಗನಂದೀಶ್ವರ ಸ್ವಾಮಿ ದೇಗುಲದ ರಸ್ತೆ ಸಂಚಾರಿ ರೂಲ್ಸ್ ಬದಲಾವಣೆ

  ಚಿಕ್ಕಬಳ್ಳಾಪುರ: ವಾಸ್ತು ಶಿಲ್ಪ ಕಲಾ ವೈಭವದ ಮೂಲಕ ಮೂಕಸ್ಮಿತರನ್ನಾಗಿಸುವ ನಂದಿಯ ಶ್ರೀ ಭೋಗನಂದೀಶ್ವರ ದೇವಾಲಯದ ಸುತ್ತಲಿನ ವಾಹನ ದಟ್ಟಣೆಯ ನಿಯಂತ್ರಣಕ್ಕೆ ಜಿಲ್ಲಾಡಳಿತವು ಸುಧಾರಣಾ ಕ್ರಮ ಕೈಗೊಂಡಿದೆ.
  ನಂದಿ ಗ್ರಾಮದ ಅಶ್ವತ್ಥಕಟ್ಟೆಯಿಂದ ಸುಲ್ತಾನ್ ಪೇಟ್ ಕಡೆಗೆ ಪೂರ್ವದಿಂದ ಪಶ್ಚಿಮ ಮಾರ್ಗದ ರಸ್ತೆಯನ್ನು ಹಾಗೂ ಸುಲ್ತಾನ್ ಪೇಟೆ ಕಡೆಯಿಂದ ಬರುವ ವಾಹನಗಳು ದೇವಾಲಯದ ಹಿಂಭಾಗದಿಂದ ಉತ್ತರದ ಗೇಟ್ ಮೂಲಕ ಚಿಕ್ಕಬಳ್ಳಾಪುರ ಕಡೆಗೆ ಹಾಗೂ ನಂದಿ ಕ್ರಾಸ್, ಕಾರಹಳ್ಳಿ ಕಡೆಗೆ ಸಂಚರಿಸಲು ದೇವಾಲಯದ ಪೂರ್ವ ರಸ್ತೆಯನ್ನು ಏಕಮುಖ ರಸ್ತೆಯನ್ನಾಗಿ ಘೋಷಿಸಿದೆ.
  ಜಿಲ್ಲಾ ಕೇಂದ್ರದಿಂದ ಏಳೆಂಟು ಕಿ.ಮೀ ದೂರದಲ್ಲಿರುವ ನಂದಿಯಲ್ಲಿನ ಶ್ರೀ ಭೋಗನಂದೀಶ್ವರ ದೇವಾಲಯವು ರಾಜಮಹಾರಾಜರ ಕಾಲದಲ್ಲಿ ನಿರ್ಮಾಣವಾಗಿದೆ. ಇಲ್ಲಿ ಪ್ರತಿ ವರ್ಷ ಮಹಾಶಿವರಾತ್ರಿ ಜಾಗರಣೆ ಮತ್ತು ಮಾರನೇ ದಿನ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಬ್ರಹ್ಮ ರಥೋತ್ಸವ ನಡೆಯುತ್ತದೆ. ಮಾಘ ಮಾಸ, ಕಾರ್ತಿಕ ಮಾಸದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಲಾಗುತ್ತದೆ. ಇದರ ನಡುವೆ ಪ್ರತಿನಿತ್ಯ ಇಲ್ಲಿಗೆ ದೇಶ ವಿದೇಶಗಳಿಂದ ಪ್ರವಾಸಿಗರು ಆಗಮಿಸುತ್ತಾರೆ.

  *ದಟ್ಟಣೆಯ ಸಮಸ್ಯೆ
  ನಂದಿ ಗ್ರಾ.ಪಂ.ಕೇಂದ್ರ ಸ್ಥಾನ. ಇಲ್ಲಿನ ಭೋಗನಂದೀಶ್ವರಸ್ವಾಮಿ ದೇಗುಲದ ಮುಂಭಾಗವಿರುವ ರಸ್ತೆಯು ಪ್ರಮುಖ ಪ್ರವಾಸಿ ತಾಣಗಳು, ನಗರ ಪಟ್ಟಣ ಪ್ರದೇಶಗಳ ಜತೆಗೆ ಗ್ರಾಮಗಳನ್ನು ಸಂಪರ್ಕಿಸುತ್ತದೆ. ಕೋಲಾರದಿಂದ ನಂದಿ ಕ್ರಾಸ್ ಮತ್ತು ಕುಪ್ಪಹಳ್ಳಿ, ಕಣಿವೆ ಬಸವಣ್ಣ, ಚಿಕ್ಕಬಳ್ಳಾಪುರದಿಂದ ದೊಡ್ಡಬಳ್ಳಾಪುರ, ಕಾರಹಳ್ಳಿ ಕ್ರಾಸ್‌ನಿಂದ ಚಿಕ್ಕಬಳ್ಳಾಪುರದ ಕಡೆಗೆ ಪ್ರತಿನಿತ್ಯ ನೂರಾರು ವಾಹನಗಳು ಸಂಚರಿಸುತ್ತಿರುತ್ತವೆ. ಅದರಲ್ಲೂ ಕಣಿವೆನಾರಾಯಣಪುರ, ಮುದ್ದೇನಹಳ್ಳಿಯ ಸುತ್ತಲಿನ ಕಲ್ಲು ಗಣಿಗಾರಿಕೆ ಕೇಂದ್ರಗಳಿಂದ ಜಲ್ಲಿಕಲ್ಲುಗಳು, ಎಂ.ಸ್ಯಾಂಡ್ ಸೇರಿದಂತೆ ಭಾರದ ಉತ್ಪನ್ನಗಳನ್ನು ಟಿಪ್ಪರ್ ಲಾರಿಗಳು ಸಾಗಿಸಲಾಗುತ್ತಿರುತ್ತದೆ. ಇದೇ ವೇಳೆ ಪ್ರವಾಸಿ ತಾಣಗಳಿಗೆ ಭೇಟಿ, ಸ್ಥಳೀಯರು ವಿವಿಧ ಕೆಲಸ ಕಾರ್ಯಗಳಿಗೆ ವಾಹನಗಳ ಸಂಚಾರ ಜಾಸ್ತಿ. ಇದರಿಂದ ಟ್ರಾಫಿಕ್ ಜಾಮ್, ಸುಗಮ ಓಡಾಟಕ್ಕೆ ಕಿರಿಕಿರಿಯ ಸಮಸ್ಯೆಗಳು ಕಾಡುತ್ತಿದ್ದವು.

  * ಅಪಾಯ ತಿರುವುಗಳು
  ದೇಗುಲದ ಅಂಚಿಗೆ ಹೊಂದಿಕೊಂಡಂತೆ ಪ್ರಮುಖ ರಸ್ತೆಗಳು ಇವೆ. ಅದರಲ್ಲೂ ನಾಲ್ಕು ಕಡೆಯೂ ಅಪಾಯಕಾರಿ ತಿರುವುಗಳು. ಇದರ ನಡುವೆ ಅತಿ ವೇಗದ ವಾಹನಗಳ ಚಾಲನೆಯ ದೃಶ್ಯಗಳು ಕಂಡು ಬರುತ್ತಿರುತ್ತದೆ. ಇದರಿಂದ ಆಗಾಗ ಅಪಘಾತಗಳು ಸಂಭವಿಸುತ್ತಿದ್ದು ಮೊದಲಿನಿಂದಲೂ ಭಾರಿ ತೂಕದ ವಸ್ತುಗಳನ್ನು ಸಾಗಿಸುವ ಸರಕು ಸಾಗಾಣೆಯ ವಾಹನಗಳು ಸಂಚಾರವು ದೇಗುಲ ತಳಪಾಯಕ್ಕೆ ಧಕ್ಕೆ ತರುವ ಆತಂಕದ ಮಾತುಗಳು ಕೇಳಿ ಬರುತ್ತಿವೆ. ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ರಾಜಕೀಯ ಪಕ್ಷವೊಂದು ಅಪಾಯಕಾರಿ ತಿರುವಿನಲ್ಲಿ ಜನರನ್ನು ಸೇರಿಸಿ ಪ್ರಚಾರ ವೇದಿಕೆ ಕಾರ್ಯಕ್ರಮ ಕೈಗೊಂಡಿದ್ದಾಗ ಭಾರಿ ಅನಾಹುತವೊಂದು ಅದೃಷ್ಟವಶಾತ್ ತಪ್ಪಿತ್ತು. ಜನರು ರಸ್ತೆಯ ನಡುವೆ ನಿಂತಿದ್ದಾಗ ವೇಗವಾಗಿ ಬಂದ ಲಾರಿ ದಿಢೀರನೇ ನಿಯಂತ್ರಣ ಕಳೆದುಕೊಂಡು ಮರಕ್ಕೆ ಡಿಕ್ಕಿ ಹೊಡೆದಿತ್ತು.

  *ವಾಹನ ನಿಲುಗಡೆ ನಿಷೇಧ
  ಏಕಮುಖ ಸಂಚಾರ ರಸ್ತೆಗಳನ್ನಾಗಿ ಘೋಷಿಸಿರುವುದರ ನಡುವೆ ವಾಹನ ನಿಲುಗಡೆ ನಿಷೇಧಕ್ಕೂ ಆದೇಶ ಹೊರಡಿಸಲಾಗಿದೆ.
  ದೇಗುಲದ ಮುಂಭಾಗದ ಕಾಂಪೌಂಡ್ ಗೋಡೆಯ ಸುತ್ತಲು ವಾಹನಗಳನ್ನು ನಿಲ್ಲಿಸಲಾಗಿರುತ್ತದೆ. ಇದರಿಂದ ರಸ್ತೆಯಲ್ಲಿ ಓಡಾಡಲು ಸಮಸ್ಯೆಯಾಗಿದೆ. ಇದರ ಬಗ್ಗೆ ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳ ಗಮನ ಸೆಳೆದರೂ ಪರಿಹಾರವಾಗಿರಲಿಲ್ಲ. ಈಗಲಾದರೂ ವಾಹನ ನಿಲುಗಡೆ ನಿಷೇಧಿತ ರಸ್ತೆ ಎಂಬುದಾಗಿ ಘೋಷಿಸಿರುವುದು ಸ್ವಾಗತಾರ್ಹ. ಹಾಗೆಯೇ ದೇಗುಲದ ಸುತ್ತಲು ಸ್ವಚ್ಛತೆ ನಿರ್ವಹಣೆಗೆ ಕ್ರಮ ಕೈಗೊಳ್ಳಬೇಕು. ಎಲ್ಲೆಂದರಲ್ಲಿ ಕಸವನ್ನು ಎಸೆಯಲು, ತ್ಯಾಜ್ಯದ ರಾಶಿ ದಿನಗಟ್ಟಲೇ ಬಿದ್ದಿರುವುದಕ್ಕೆ ಕಡಿವಾಣ ಹಾಕಬೇಕೆಂಬ ಒತ್ತಾಯ ಕೇಳಿ ಬಂದಿದೆ.

  *ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಗ್ರಾಮದ ಶ್ರೀ ಭೋಗನಂದೀಶ್ವರ ದೇವಾಲಯದ ದಕ್ಷಿಣದ ರಸ್ತೆಯಲ್ಲಿ ಜನ ಸಂದಣಿ ಹಾಗೂ ವಾಹನದ ದಟ್ಟಣೆ ಹೆಚ್ಚಾಗಿರುವುದರಿಂದ ಸಾರ್ವಜನಿಕರು ಓಡಾಡಲು ಹಾಗೂ ವಾಹನಗಳು ಸುಗಮವಾಗಿ ಸಂಚರಿಸುವ ಸಲುವಾಗಿ ಏಕಮುಖ ರಸ್ತೆ ಘೋಷಣೆ ಮತ್ತು ವಾಹನಗಳ ನಿಲುಗಡೆ ನಿಷೇಧ ಆದೇಶವನ್ನು ಹೊರಡಿಸಲಾಗಿದೆ.

  ಪಿ.ಎನ್.ರವೀಂದ್ರ, ಜಿಲ್ಲಾಧಿಕಾರಿ, ಚಿಕ್ಕಬಳ್ಳಾಪುರ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts