ನಂದಮೂರಿ ಹರಿಕೃಷ್ಣ ಜತೆಗಿನ ಒಡನಾಟ ಸ್ಮರಿಸಿಕೊಂಡ ಶಿವಣ್ಣ

ಬೆಂಗಳೂರು: ತೆಲುಗು ನಟ ನಂದಮೂರಿ ಹರಿಕೃಷ್ಣ ಅವರ ಅಕಾಲಿಕ ನಿಧನಕ್ಕೆ ನಟ ಶಿವರಾಜ್ ಕುಮಾರ್ ತೀವ್ರ​ ಸಂತಾಪ ವ್ಯಕ್ತಪಡಿಸಿದ್ದಾರೆ.
ಮಾಧ್ಯಮದವರ ಜತೆ ಮಾತನಾಡಿ, ನಮ್ಮ ಕುಟುಂಬಕ್ಕೆ ತುಂಬ ಹತ್ತಿರವಾಗಿದ್ದರು. ಕೆಲವು ದಿನಗಳ ಹಿಂದೆ ಹೈದರಾಬಾದ್​ನಲ್ಲಿ ಭೇಟಿಯಾಗಿದ್ದೆ. ನನ್ನ ದೊಡ್ಡ ಮಗಳ ಮದುವೆಗೂ ಬಂದಿದ್ದರು. ಈಗ ಇಲ್ಲ ಎಂಬುದನ್ನು ನಂಬಲು ಕಷ್ಟವಾಗುತ್ತಿದೆ ಎಂದು ಹೇಳಿದರು.

ಬಾಲಕೃಷ್ಣ, ಹರಿಕೃಷ್ಣ ಇಬ್ಬರಿಗೂ ನಮ್ಮ ಅಪ್ಪಾಜಿ ಎಂದರೆ ತುಂಬ ಗೌರವ. ಅವರ ಮನೆಯಲ್ಲಿ ಅಪ್ಪಾಜಿ ಫೋಟೋ ಇಟ್ಟು ಪೂಜೆ ಮಾಡುತ್ತಾರೆ. ಅವರ ಹೈದರಾಬಾದ್ ಮನೆಗೆ ಹೋದಾಗ ತಿಳಿಸಿದ್ದರು. ಅವರನ್ನು ಕಳೆದುಕೊಂಡಿದ್ದು ವೈಯಕ್ತಿಕವಾಗಿ ತುಂಬ ನೋವಾಗಿದೆ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದಿದ್ದಾರೆ.

ನಂದಮೂರಿ ಹರಿಕೃಷ್ಣ ಅವರ ಒಬ್ಬ ಮಗ ಆ್ಯಕ್ಸಿಡೆಂಟ್​ನಲ್ಲಿ ತೀರಿಕೊಂಡಿದ್ದಾರೆ. ಎನ್​ಟಿಆರ್​ ಅವರ ಇನ್ನೊಬ್ಬ ಮಗನಿಗೂ ಹಿಂದೆ ಆಕ್ಸಿಡೆಂಟ್​ ಆಗಿತ್ತು. ಜ್ಯೂನಿಯರ್​ ಎನ್​ಟಿಆರ್​ಗೆ ಕೂಡ ಅಪಘಾತವಾಗಿತ್ತು. ಅವರ ಕುಟುಂಬದವರು ಆದಷ್ಟೂ ಎಚ್ಚರಿಕೆಯಿಂದ ಇರಬೇಕು. ಕಾರಿಗೆ ಚಾಲಕರನ್ನು ನೇಮಕ ಮಾಡಿಕೊಳ್ಳಿ, ರಾತ್ರಿ ಪ್ರಯಾಣವನ್ನು ಮಾಡಬೇಡಿ ಎಂದು ಕಳಕಳಿ ವ್ಯಕ್ತಪಡಿಸಿದರು.