ಸಿರಿಜಾತ್ರೆಯಲ್ಲಿ ನಂದಿ ಹಿಡಿವ ಕ್ರೈಸ್ತ ಯುವಕ

ಹರಿಪ್ರಸಾದ್ ನಂದಳಿಕೆ ಬೆಳ್ಮಣ್
ವಿಶೇಷ ಪ್ರಚಾರ ಫಲಕ ಹಾಗೂ ಅಚ್ಚುಕಟ್ಟಿನ ವ್ಯವಸ್ಥೆಯಿಂದ ನಂದಳಿಕೆ ಸಿರಿಜಾತ್ರೆ ನಾಡಿನಲ್ಲೆಡೆ ಪ್ರಸಿದ್ಧಿ ಪಡೆದಿದ್ದರೆ, ಸರ್ವಧರ್ಮೀಯರು ಇಲ್ಲಿನ ದೇವರ ಸೇವೆಯಲ್ಲಿ ತೊಡಗಿರುವುದು ಮತ್ತೊಂದು ವಿಶೇಷ.
ಇಲ್ಲಿ ಜಾತ್ರೆ ಹಾಗೂ ದೇವರ ಬಲಿ ಪೂಜೆ ಸಂದರ್ಭ ದೇವರ ನಂದಿ ಹಿಡಿಯುವುದು ಒಬ್ಬ ಕ್ರೈಸ್ತ ಯುವಕ. ಕಳೆದ ಒಂಬತ್ತು ವರ್ಷಗಳಿಂದ ಈ ಸೇವೆಯನ್ನು ವಿಕ್ಟರ್ ನೊರೋನ್ಹ ನಿಷ್ಠೆಯಿಂದ ಮಾಡುತ್ತಿದ್ದಾರೆ. ನಂದಳಿಕೆ ಶ್ರೀಕಾಂತ್ ಭಟ್ ಅವರ ನಂದಿಯನ್ನು ತಂದು ತಾವೇ ಸ್ವತಃ ಸಾಕುತ್ತಿದ್ದು, ದೇವಾಲಯದಲ್ಲಿ ದೇವರ ಉತ್ಸವ ಬಲಿ, ಅಂಬೋಡಿ ಬಲಿ, ಹೀಗೆ ದೇವರ ಬಲಿ ಸೇವೆಯಲ್ಲಿ ಬಲಿ ಮೂರ್ತಿಯ ಎದುರು ನಂದಿ ಹಿಡಿಯುವ ಕಾಯಕ ಮಾಡುತ್ತಿದ್ದಾರೆ. ಧರ್ಮ ಬೇರೆಯಾದರೂ ದೇವರೊಬ್ಬನೇ… ನಂದಳಿಕೆ ದೇವರ ಸೇವೆ ಮಾಡುವುದು ತುಂಬ ಖುಷಿ ತರುತ್ತದೆ ಎನ್ನುತ್ತಾರೆ ವಿಕ್ಟರ್ ನೊರೋನ್ಹ.

ಕ್ರೈಸ್ತ ಧರ್ಮೀಯರೂ ಭಾಗಿ: ನಂದಿ ಹಿಡಿಯುವ ಕಾಯಕದಲ್ಲಿ ವಿಕ್ಟರ್ ನೊರೋನ್ಹ ತೊಡಗಿಕೊಂಡರೆ, ದೇವಾಲಯದ ಲೆಕ್ಕಪತ್ರಗಳನ್ನು ಬರೆಯುವ ಕೆಲಸದಲ್ಲಿ ಅಂಥೋನಿ ಮೆಂಡೋನ್ಸಾ, ಫೌಸ್ಟೀನ್ ಡಿಸೋಜ ತೊಡಗಿಸಿಕೊಂಡಿದ್ದಾರೆ. ಜೋಯ್ಸ ಟೆಲ್ಲಿಸ್ ಕೂಡ ಶ್ರೀ ದೇವರ ಸೇವೆಯಲ್ಲಿ ಭಾಗಿಯಾಗುತ್ತಾರೆ.

ನಿತ್ಯ ಸೇವೆಯಲ್ಲಿ ವಿಕ್ಟರ್: ಸಿರಿ ಜಾತ್ರೆ ಎಂದರೆ ಎರಡು ತಿಂಗಳ ಪೂರ್ವದಲ್ಲೇ ನಂದಳಿಕೆಯ ಮಹಿಳಾ ಹಾಗೂ ಯುವಕರ ತಂಡ ಅಚ್ಚುಕಟ್ಟಿನ ವ್ಯವಸ್ಥೆಯಲ್ಲಿ ತೊಡಗಿಕೊಳ್ಳುತ್ತಾರೆ. ಅದರಂತೆ ವಿಕ್ಟರ್ ನೊರೋನ್ಹ ಕೂಡ ದೇವಾಲಯದ ಸುತ್ತ ಶುಚಿತ್ವದ ಕೆಲಸ, ತಳಿರು ತೋರಣ ಕಟ್ಟುವ ಕೆಲಸದಲ್ಲೂ ಭಾಗಿಯಾಗುತ್ತಾರೆ.

ದೇವರ ಸೇವೆ ಮಾಡುವುದೆಂದರೆ ತುಂಬ ಖುಷಿಯಾಗುತ್ತದೆ. ನಂದಿ ಹಿಡಿಯುವ ಕಾಯಕವನ್ನು ಕಳೆದ ಒಂಬತ್ತು ವರ್ಷಗಳಿಂದ ಮಾಡುತ್ತ ಬಂದಿದ್ದೇನೆ. ಮುಂದೆಯೂ ನಿರಂತರ ಮಾಡುತ್ತೇನೆ.
ವಿಕ್ಟರ್ ನೊರೋನ್ಹ ನಂದಳಿಕೆ ಸಿರಿಜಾತ್ರೆಯಲ್ಲಿ ನಂದಿ ಹಿಡಿಯುವ ಯುವಕ

One Reply to “ಸಿರಿಜಾತ್ರೆಯಲ್ಲಿ ನಂದಿ ಹಿಡಿವ ಕ್ರೈಸ್ತ ಯುವಕ”

Comments are closed.