ನಂಚಾರು ಶಾಲೆಗೆ ದೊರೆತಿಲ್ಲ ಸರ್ಕಾರಿ ಮಂಜೂರಾತಿ

<ಇತ್ತೀಚೆಗೆ ಸರ್ಕಾರಿ ಶಾಲೆಯಾಗಿ ಮಾರ್ಪಾಡು ಸೌಲಭ್ಯಗಳಿಲ್ಲದೆ ಅತಂತ್ರದಲ್ಲಿ ವಿದ್ಯಾರ್ಥಿಗಳು>

ಕೊಕ್ಕರ್ಣೆ:  ನಾಲ್ಕೂರು ಗ್ರಾಪಂ ವ್ಯಾಪ್ತಿಯ ನಂಚಾರು ಶಾಲೆ ಸರ್ಕಾರಿ ಶಾಲೆಯಾಗಿ ಘೋಷಣೆಯಾಗಿದ್ದರೂ ಸರ್ಕಾರಿ ಮಂಜೂರಾತಿ ಆದೇಶ ದೊರೆಯದ ಕಾರಣ ಅತಂತ್ರ ಸ್ಥಿತಿಯಲ್ಲಿದೆ.

ಶಾಲೆಗೆ ಡೈಸ್ ಕೋಡ್ ಇನ್ನೂ ದೊರೆತಿಲ್ಲ. ಇದರಿಂದ ಮಕ್ಕಳ ಮಾಹಿತಿಗಳನ್ನು ಆನ್ ಲೈನ್‌ನಲ್ಲಿ ದಾಖಲಿಸಲು, ವಿದ್ಯಾರ್ಥಿಗಳು ವಿವಿಧ ಸರ್ಕಾರಿ ಸೌಲಭ್ಯ ಪಡೆಯಲು, ಎಸ್‌ಡಿಎಂಸಿ ರಚಿಸಲು, ಕಾಯಂ ಸರ್ಕಾರಿ ಶಿಕ್ಷಕರ ನೇಮಕಕ್ಕೆ ತೊಂದರೆಯಾಗಿದೆ. ಇವೆಲ್ಲದಕ್ಕೂ ಸರ್ಕಾರಿ ಆದೇಶ ಅಗತ್ಯವಾಗಿದೆ.

ಅನುದಾನಿತ ಶಾಲೆಗಳನ್ನು ಸರ್ಕಾರ ತನ್ನ ತೆಕ್ಕೆಗೆ ತೆಗೆದುಕೊಂಡು ಸರ್ಕಾರಿ ಶಾಲೆಯಾಗಿ ಪರಿವರ್ತಿಸುವ ಯೋಜನೆ ಈ ಹಿಂದೆ ಚಾಲ್ತಿಯಲ್ಲಿತ್ತು. ಆದರೆ ಈಗ ಆ ಯೋಜನೆ ಇಲ್ಲದಿರುವುದರಿಂದ ಹೊಸ ಸರ್ಕಾರಿ ಶಾಲೆ ಪ್ರಾರಂಭಿಸುವ ಪೂರ್ಣ ಪ್ರಕ್ರಿಯೆ ನಡೆಯಬೇಕಿದೆ.ಪ್ರಸ್ತುತ ನಂಚಾರು ಶಾಲೆಯಲ್ಲಿ 25 ವಿದ್ಯಾರ್ಥಿಗಳು ವ್ಯಾಸಾಂಗ ಮಾಡುತ್ತಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿ ಓರ್ವ ಸರ್ಕಾರಿ ಶಿಕ್ಷಕರನ್ನು ಹಾಗೂ ಓರ್ವ ಗೌರವ ಶಿಕ್ಷಕರನ್ನು ನಿಯೋಜನೆ ಮಾಡಿದ್ದಾರೆ.

ನಂಚಾರು ಸರ್ಕಾರಿ ಶಾಲೆ ರಚನೆ ಹಿನ್ನೆಲೆಯಲ್ಲಿ ಡೈಸ್ ಕೋಡ್‌ಗೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸರ್ಕಾರಿ ಸೌಲಭ್ಯ ಕಲ್ಪಿಸಲು ಸಕಲ ಪ್ರಯತ್ನ ಮಾಡುತ್ತಿದ್ದೇವೆ.
ಒ.ಆರ್.ಪ್ರಕಾಶ್, ಕ್ಷೇತ್ರ ಶಿಕ್ಷಣಾಧಿಕಾರಿ ಬ್ರಹ್ಮಾವರ

ಪ್ರಸ್ತುತ ಶಾಲಾ ಉಳಿವಿನ ದೃಷ್ಟಿಯಿಂದ ಗ್ರಾಮಸ್ಥರು, ವಿದ್ಯಾಭಿಮಾನಿಗಳು ಹಾಗೂ ಹಳೇ ವಿದ್ಯಾರ್ಥಿಗಳ ಒಗ್ಗೂಡುವಿಕೆಯೊಂದಿಗೆ ಹಳೇ ವಿದ್ಯಾರ್ಥಿ ಸಂಘ ಕಾರ್ಯೋನ್ಮುಖವಾಗಿದೆ. ಸರ್ಕಾರ, ಶಿಕ್ಷಣ ಇಲಾಖೆ ತಕ್ಷಣ ಸ್ಪಂದಿಸಿ ಮಂಜೂರಾತಿ ಆದೇಶ, ಸೌಲಭ್ಯಗಳನ್ನು ನೀಡಬೇಕು.
ರಾಮಮೂರ್ತಿ ಅಡಿಗ ನಂಚಾರು, ಅಧ್ಯಕ್ಷರು, ಹಳೇ ವಿದ್ಯಾರ್ಥಿ ಸಂಘ

ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ ಹಲವು ಸಮಸ್ಯೆಗಳಿಂದ ಮುಚ್ಚುವ ಸ್ಥಿತಿಗೆ ತಲುಪಿತ್ತು. ಆದರೆ ಗ್ರಾಮಸ್ಥರು, ಜನಪ್ರತಿನಿಧಿಗಳು, ಹಳೇ ವಿದ್ಯಾರ್ಥಿಗಳು, ಶಿಕ್ಷಕರು ಸೇರಿ ಸರ್ಕಾರದ ತೆಕ್ಕೆಗೆ ನೀಡಿದ್ದೇವೆ. ಇನ್ನೂ ಹೆಚ್ಚಿನ ಸವಲತ್ತುಗಳು ದೊರೆಯಬೇಕಾಗಿದೆ.
ಪ್ರವೀಣ ಶೆಟ್ಟಿ, ಮುಖ್ಯಶಿಕ್ಷಕ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ನಂಚಾರು

Leave a Reply

Your email address will not be published. Required fields are marked *