ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ನಾನಾ ಪಾಟೇಕರ್​ ಹೌಸ್​ಫುಲ್​ 4ರಿಂದ ಹೊರಬಂದರೇ?

ನವದೆಹಲಿ: ಲೈಂಗಿಕ ಕಿರುಕುಳ ಆರೋಪದ ತನಿಖೆ ಪೂರ್ಣಗೊಳ್ಳುವವರೆಗೂ ಹೌಸ್​ಫುಲ್​ 4 ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸುವುದಿಲ್ಲ ಎಂದು ಬಾಲಿವುಡ್​ ನಟ ಅಕ್ಷಯ್​ ಕುಮಾರ್​ ಘೋಷಿಸಿದ ಬೆನ್ನಲ್ಲೇ, ಸಹನಟ ನಾನಾ ಪಾಟೇಕರ್​ ಚಿತ್ರದಿಂದ ಹಿಂದೆ ಸರಿದಿದ್ದಾರೆ.

ಹೌದು, ಆರೋಪ ಎದುರಿಸುತ್ತಿರುವವ ಜತೆ ಕೆಲಸ ಮಾಡಲು ಇಷ್ಟವಿಲ್ಲ ಎಂದು ಶುಕ್ರವಾರವಷ್ಟೇ ಅಕ್ಷಯ್​ ತಮ್ಮ ಟ್ವಿಟರ್​ನಲ್ಲಿ ಬರೆದುಕೊಂಡಿದ್ದರು. ಬಳಿಕ ಹೌಸ್​ಫುಲ್​ 4 ಚಿತ್ರ ನಿರ್ದೇಶಕರಾದ ಸಾಜಿದ್​ ಖಾನ್​ ನೈತಿಕ ಹೊಣೆ ಹೊತ್ತು ಚಿತ್ರದಲ್ಲಿ ಮುಂದುವರಿಯುವುದಿಲ್ಲ ಎಂದು ಟ್ವಿಟರ್​ನಲ್ಲಿ ಪೋಸ್ಟ್​ ಮಾಡಿದ್ದರು.

ಎಲ್ಲ ಬೆಳವಣಿಗೆಗಳ ನಂತರ ‘ನಿರ್ಮಾಣ ತಂಡದ ಅನುಕೂಲತೆಗೆ ಚಿತ್ರದಿಂದ ಹೊರ ನಡೆಯುತ್ತಿದ್ದೇನೆ’ ಎಂದು ನಾನಾ ಪಾಟೇಕರ್​ ಹೇಳಿಕೊಂಡಿದ್ದಾರೆ. ನಾನಾ ಪಾಟೇಕರ್​ ಜೈಸಲ್ಮೇರ್​ನಲ್ಲಿ ಹೌಸ್​ಫುಲ್​ 4ರ ಚಿತ್ರೀಕರಣದಲ್ಲಿ ತೊಡಗಿದ್ದಾಗ ನಟಿ ತನುಶ್ರೀ ದತ್ತಾ ಅವರ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು.

ಹೌಸ್​ಫುಲ್​ 4 ಚಿತ್ರ ನಿರ್ದೇಶಕರಾಗಿದ್ದ ಸಾಜಿದ್ ಖಾನ್ ಅವರಿಂದ ಲೈಂಗಿಕ ಕಿರುಕುಳ ಅನುಭವಿಸಿರುವುದಾಗಿ ನಟಿ ರಾಚೆಲ್ ವೈಟ್, ಸಹಾಯಕ ನಿರ್ದೇಶಕಿ ಸಲೊನಿ ಚೋಪ್ರಾ ಮತ್ತು ಪತ್ರಕರ್ತೆ ಕರೀಶ್ಮಾ ಉಪಾಧ್ಯಾಯ್ ಗುರುವಾರ ಸಂಜೆ #MeToo ಅಭಿಯಾನದಲ್ಲಿ ಆರೋಪ ಮಾಡಿದ್ದರು.

ಹೌಸ್​ಫುಲ್​ 4 ಚಿತ್ರದ ಶೇ.70ರಷ್ಟು ಚಿತ್ರೀಕರಣ ಲಂಡನ್​ ಮತ್ತು ಜೈಸಲ್ಮೇರ್​ನಲ್ಲಿ ಪೂರ್ಣಗೊಂಡಿದ್ದು, ಇನ್ನು ಶೇ.30ರಷ್ಟು ಭಾಗ ಮಾತ್ರ ಬಾಕಿಯಿದೆ. ಸಾಜಿದ್​ ನಾಡಿಯಾದ್ವಾಲಾ ಚಿತ್ರ ನಿರ್ಮಿಸುತ್ತಿದ್ದಾರೆ. (ಏಜೆನ್ಸೀಸ್)