ಜವಾರಿ ಹುಡ್ಗಿ ಚೈತ್ರಾ ರೆಡ್ಡಿ

ಕನ್ನಡ ಮತ್ತು ತಮಿಳು ಧಾರಾವಾಹಿಗಳಲ್ಲಿ ಗುರುತಿಸಿಕೊಂಡ ಪ್ರತಿಭೆ ಚೈತ್ರಾ ರೆಡ್ಡಿ. ಬೆಳ್ಳಿತೆರೆಯ ಮೇಲೂ ಮಿನುಗಬೇಕೆಂಬ ಬಯಕೆ ಅವರಿಗಿತ್ತು. ಇದೀಗ ಅವರ ಕನಸು ‘ರಗಡ್’ ಚಿತ್ರದ ಮೂಲಕ ಸಾಕಾರಗೊಂಡಿದೆ. ಶ್ರೀ ಮಹೇಶ್ ನಿರ್ದೇಶನದ ಈ ಸಿನಿಮಾದಲ್ಲಿ ವಿನೋದ್ ಪ್ರಭಾಕರ್​ಗೆ ಚೈತ್ರಾ ಜೋಡಿಯಾಗಿದ್ದಾರೆ. ಮೊದಲ ಚಿತ್ರದಲ್ಲಿಯೇ ಉತ್ತರ ಕರ್ನಾಟಕದ ಜವಾರಿ ಭಾಷೆಯಲ್ಲಿ ಡೈಲಾಗ್ ಹೊಡೆದಿದ್ದಾರೆ. ಕಥೆ ಸಿದ್ಧಮಾಡಿಕೊಂಡಿದ್ದಾಗಲೇ ಉತ್ತರ ಕರ್ನಾಟಕ ಭಾಗದ ಭಾಷೆ ಮಾತನಾಡುವ ಹುಡುಗಿಗಾಗಿ ನಿರ್ದೇಶಕರು ಹುಡುಕಾಟ ನಡೆಸಿದ್ದರು. ಆದರೆ, ಆ ರೀತಿ ಹೊಂದಾಣಿಕೆ ಆಗುವ ನಟಿ ಸಿಗದ ಕಾರಣ ಬೆಂಗಳೂರು ಹುಡುಗಿ ಚೈತ್ರಾ ರೆಡ್ಡಿಗೆ ಮಣೆ ಹಾಕಿದ್ದರು. ‘ಹುಬ್ಬಳ್ಳಿಯ ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿ ಬೆಳೆದ ಹುಡುಗಿಯಾಗಿ ಚೈತ್ರಾ ಕಾಣಿಸಿಕೊಂಡಿದ್ದಾರೆ. ಅಲ್ಲಿನ ಭಾಷೆಯ ಸೊಗಡಿನ ಸಂಭಾಷಣೆಯನ್ನೇ ಅವರಿಂದ ಹೇಳಿಸಿದ್ದೇವೆ’ ಎಂದು ಮಾಹಿತಿ ನೀಡುತ್ತಾರೆ ನಿರ್ದೇಶಕರು. ಚಿತ್ರದಲ್ಲಿ ಚೈತ್ರಾ ಅವರ ಪಾತ್ರವೂ ವಿಶೇಷವಾಗಿದೆಯಂತೆ. ಎಸ್​ಎಸ್​ಎಲ್​ಸಿ ಫೇಲಾಗಿ ಮನೆಯಲ್ಲಿಯೇ ಕುಳಿತು, ತಾನು ಮದುವೆಯಾಗುವ ಹುಡುಗನ ಬಗ್ಗೆ ಕನಸು ಕಾಣುತ್ತಿರುತ್ತಾಳೆ. 10ಕ್ಕೂ ಅಧಿಕ ಹುಡುಗರು ಪ್ರಪೋಸ್ ಮಾಡಿದರೂ, ಎಲ್ಲರನ್ನೂ ತಿರಸ್ಕರಿಸಿರುತ್ತಾಳೆ. ಅದೇ ವೇಳೆಗೆ ನಾಯಕನ ಎಂಟ್ರಿಯಾಗುತ್ತದೆ. ಪ್ರೀತಿಯಲ್ಲೂ ಬೀಳುತ್ತಾಳಂತೆ. ಒಟ್ಟಿನಲ್ಲಿ ನಿರ್ದೇಶಕರ ಪ್ರಕಾರ ಇದೊಂದು ವಿಚಿತ್ರವಾದ ಲವ್​ಸ್ಟೋರಿ. ‘ಚಿತ್ರದಲ್ಲಿ ಮೊದಲ ಬಾರಿಗೆ ಲವರ್​ಬಾಯ್ ಗೆಟಪ್​ನಲ್ಲಿ ವಿನೋದ್ ಕಾಣಿಸಿಕೊಳ್ಳಲಿದ್ದಾರೆ. ಪಕ್ಕಾ ಆಕ್ಷನ್ ಜತೆಗೆ ಕೌಟುಂಬಿಕ ಮತ್ತು ಭಾವನಾತ್ಮಕ ಸಿನಿಮಾ ಇದಾಗಲಿದೆ. ಇಬ್ಬರ ನಡುವಿನ ಪ್ರೇಮವನ್ನು ಬೇರೆ ರೀತಿಯಲ್ಲಿ ತೋರಿಸಿದ್ದೇವೆ’ ಎಂಬುದು ಶ್ರೀಮಹೇಶ್ ಮಾತು.

ಕನ್ನಡದಲ್ಲಿ ‘ಅವನು ಮತ್ತು ಶ್ರಾವಣಿ’ ಧಾರಾವಾಹಿಯಲ್ಲಿ ನಾಯಕಿಯಾಗಿದ್ದ ಚೈತ್ರಾ, ತಮಿಳು ಧಾರಾವಾಹಿಯಲ್ಲೂ ನಟಿಸುತ್ತಿದ್ದಾರೆ. ಇನ್ನೂ ಹೆಸರಿಡದ ತಮಿಳು ಚಿತ್ರದಲ್ಲೂ ನಟಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಕನ್ನಡದಲ್ಲಿಯೇ ಹೆಚ್ಚಿನ ಸಿನಿಮಾಗಳನ್ನು ಮಾಡುವ ಹಂಬಲ ಹೊಂದಿದ್ದಾರೆ. ಇತ್ತೀಚೆಗೆ ಟೀಸರ್ ಬಿಡುಗಡೆ ಮಾಡಿಕೊಂಡಿರುವ ಚಿತ್ರತಂಡ, ಶೀಘ್ರದಲ್ಲೇ ಟ್ರೇಲರ್ ರಿಲೀಸ್ ಮಾಡಲು ಪ್ಲಾ್ಯನ್ ಹಾಕಿಕೊಂಡಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲೂ ತೊಡಗಿಸಿಕೊಂಡಿದ್ದು, ಮುಂದಿನವಾರದಿಂದ ಡಬ್ಬಿಂಗ್ ಪ್ರಕ್ರಿಯೆ ಶುರುವಾಗಲಿದೆಯಂತೆ. ಆಗಸ್ಟ್​ನಲ್ಲಿ ‘ರಗಡ್’ತೆರೆಕಾಣುವ ಸಾಧ್ಯತೆ ಇದೆ.

‘ರಗಡ್’ ಬಗ್ಗೆ ತುಂಬ ನಿರೀಕ್ಷೆಗಳಿವೆ. ಅದರಲ್ಲೂ ಚೊಚ್ಚಲ ಚಿತ್ರದಲ್ಲೇ ಹುಬ್ಬಳ್ಳಿ ಭಾಗದ ಜವಾರಿ ಭಾಷೆ ಮಾತನಾಡುವ ಹುಡುಗಿಯಾಗಿದ್ದೇನೆ. ಅಲ್ಲಿನ ಭಾಷೆ ನನಗಿಷ್ಟ. ಅದನ್ನು ಕಲಿಯುವುದಕ್ಕಾಗಿ 3 ದಿನ ಕಾರ್ಯಾಗಾರದಲ್ಲಿ ಭಾಗವಹಿಸಿದ್ದೆ.

| ಚೈತ್ರಾ ರೆಡ್ಡಿ ನಟಿ