ಶೀಘ್ರವೇ ಸೆಟ್ಟೇರಲಿದೆ ರಿಶಿಕಾ ಚಿತ್ರ

ಬೆಂಗಳೂರು: ‘ಕಂಠೀರವ’ ಚಿತ್ರದ ಮೂಲಕ ನಾಯಕಿಯಾಗಿ ಬಣ್ಣದ ಲೋಕಕ್ಕೆ ಪರಿಚಯಗೊಂಡಿದ್ದ ರಿಶಿಕಾ ಸಿಂಗ್, ಸಿನಿಮಾ ನಿರ್ದೇಶನ ಮಾಡಲಿದ್ದಾರೆ ಎಂಬ ವಿಚಾರ ಈ ಮೊದಲೇ ಹರಿದಾಡಿತ್ತು. ನಂತರ ಈ ಬಗ್ಗೆ ಯಾವುದೇ ವಿಚಾರ ಹೊರಬಂದಿರಲಿಲ್ಲ. ಈಗ ಈ ವಿಚಾರವಾಗಿ ಅಪ್​ಡೇಟ್ ಮಾಹಿತಿ ಒಂದು ಕೇಳಿ ಬಂದಿದೆ. ಈ ಚಿತ್ರಕ್ಕೆ ಆ.15ರಂದು ಚಾಲನೆ ಸಿಗಲಿದೆಯಂತೆ.

‘ಇದು ಗೆಳೆತನದ ಕುರಿತ ಚಿತ್ರ. ಹುಡುಗ-ಹುಡಗಿ ನಡುವೆ ಇರುವ ಗೆಳೆತನ ಪ್ರೀತಿ ಆಗಿ ಮಾರ್ಪಟ್ಟರೆ ಏನೆಲ್ಲ ಆಗುತ್ತದೆ ಎಂಬುದು ಚಿತ್ರದ ಒಂದೆಳೆ. ಈ ಚಿತ್ರದಲ್ಲಿ ರೊಮ್ಯಾನ್ಸ್ ಅಂಶಗಳ ಜತೆಗೆ ಹಾಸ್ಯವೂ ಇದೆ. ಕೊಡಗಿನಲ್ಲಿ ಚಿತ್ರದ ಶೂಟಿಂಗ್ ಮಾಡುವ ಯೋಚನೆ ಇದೆ’ ಎಂದು ಮಾಹಿತಿ ನೀಡುತ್ತಾರೆ ರಿಶಿಕಾ.

ಕೆಲ ತಿಂಗಳಿಂದ ಸ್ಕ್ರಿಪ್ಟ್ ಕೆಲಸದಲ್ಲಿ ತೊಡಗಿಕೊಂಡಿರುವ ರಿಷಿಕಾಗೆ ಇನ್ನೂ ಇಬ್ಬರು ಮಹಿಳೆಯರು ಸಹಾಯಕ್ಕೆ ನಿಂತಿದ್ದಾರಂತೆ. ‘ಟೆಂಟ್ ಸಿನಿಮಾಗಳಲ್ಲಿ ತರಬೇತಿ ಹೊಂದಲು ಡೆನ್ಮಾರ್ಕ್​ನಿಂದ ಬಂದ ಮಹಿಳೆ ಹಾಗೂ ಈ ಮೊದಲು ಸಾಕಷ್ಟು ಚಿತ್ರಗಳಲ್ಲಿ ಸಹಾಯಕ ನಿರ್ದೇಶಕಿಯಾಗಿ ಕೆಲಸ ಮಾಡಿದ್ದವರೊಬ್ಬರು ಈ ಚಿತ್ರದ ಸ್ಕ್ರಿಪ್ಟ್ ಕೆಲಸಗಳಲ್ಲಿ ಭಾಗಿಯಾಗುತ್ತಿದ್ದಾರೆ. ಕಳೆದ ಒಂದೂವರೆ ವರ್ಷದಿಂದ ಈ ಚಿತ್ರಕ್ಕಾಗಿ ಸಾಕಷ್ಟು ಶ್ರಮವಹಿಸಿದ್ದೇವೆ. ಸಿನಿಮಾ ಚೆನ್ನಾಗಿ ಮೂಡಿ ಬರಲಿದೆ ಎಂಬ ನಂಬಿಕೆ ಇದೆ’ ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ ಅವರು.

ರಿಶಿಕಾ ಸಿನಿಮಾ ಹಿನ್ನೆಲೆಯಿಂದ ಬಂದವರು. ಅವರ ತಂದೆ ರಾಜೇಂದ್ರ ಸಿಂಗ್ ಬಾಬು ನಿರ್ದೇಶಕರು. ಸಹೋದರ ಆದಿತ್ಯ ನಟ. ಈಗ ರಿಶಿಕಾ ಕೂಡ ನಟನೆಯಿಂದ ನಿರ್ದೇಶನದತ್ತ ಹೊರಳುತ್ತಿರುವುದು ವಿಶೇಷ. ‘ಸಿನಿಮಾ ನಿರ್ದೇಶನ ಮಾಡಬೇಕು ಎಂಬ ಯೋಚನೆ ಈ ಮೊದಲಿನಿಂದಲೂ ಇತ್ತು. ಆದರೆ ಇಷ್ಟು ಬೇಗ ಈ ಕ್ಷೇತ್ರಕ್ಕೆ ಕಾಲಿಡುತ್ತೇನೆ ಎಂದು ನಾನು ಭಾವಿಸಿರಲಿಲ್ಲ. ನನ್ನ ಅನುಭವಗಳನ್ನು ಸೇರಿ ನಿರ್ದೇಶನಕ್ಕೆ ಕೈ ಹಾಕುತ್ತಿದ್ದೇನೆ’ ಎಂದು ಮಾಹಿತಿ ನೀಡುತ್ತಾರೆ.