ಬರಹಗಾರ್ತಿಯಾಗಿ ಬದಲಾದ ರಶ್ಮಿ

ಬೆಂಗಳೂರು: ‘ದುನಿಯಾ’ ಚಿತ್ರದ ಮೂಲಕ ಚಂದನವನಕ್ಕೆ ಪರಿಚಿತರಾದವರು ನಟಿ ರಶ್ಮಿ. ಚಿತ್ರರಂಗಕ್ಕೆ ಕಾಲಿಟ್ಟು ದಶಕ ಕಳೆದರೂ ಅವರ ಬತ್ತಳಿಕೆಯಿಂದ ಹೊರಬಂದ ಚಿತ್ರಗಳು ಕೆಲವೇ ಕೆಲವು. ಇತ್ತೀಚೆಗೆ ಬಣ್ಣದ ಲೋಕದಿಂದ ಹೆಚ್ಚು ಅಂತರ ಕಾಯ್ದುಕೊಂಡಿದ್ದ ಅವರು, ಇದೀಗ ಬರಹಗಾರ್ತಿಯಾಗಿ ರೀ-ಎಂಟ್ರಿ ಕೊಟ್ಟಿದ್ದಾರೆ! ನಟನೆ ಬಿಟ್ಟು ರಶ್ಮಿ ಬರಹಗಾರ್ತಿಯಾದರಾ? ಹಾಗೆಂದುಕೊಂಡರೆ ನಿಮ್ಮ ಊಹೆ ತಪು್ಪ. ಅವರು ಬರಹಗಾರ್ತಿಯಾಗಿ ಕಾಣಿಸಿಕೊಳ್ಳಲಿರುವುದು ‘ಕಾರ್ನಿ’ ಚಿತ್ರದಲ್ಲಿ. ಈ ಹಿಂದೆ ‘ಲೈಫ್ ಸೂಪರ್’ ಚಿತ್ರ ನಿರ್ದೇಶಿಸಿದ್ದ ವಿನೋದ್ ಕುಮಾರ್ ‘ಕಾರ್ನಿ’ ಚಿತ್ರ ಕೈಗೆತ್ತಿಕೊಂಡಿದ್ದಾರೆ. ಸದ್ದಿಲ್ಲದೆ ಶೂಟಿಂಗ್ ಮುಗಿದಿದ್ದು, ರಶ್ಮಿ ಪ್ರಧಾನ ಪಾತ್ರ ನಿಭಾಯಿಸಿದ್ದಾರೆ. ‘ಕಾರ್ನಿ’ ಎಂಬುದರ ಅರ್ಥವೇನು? ಇದೊಂದು ಸಂಸ್ಕೃತ ಪದ. ಕನ್ನಡದಲ್ಲಿ ಅದಕ್ಕೆ ಆಯುಧ ಎಂಬ ಪರ್ಯಾಯ ಪದವಿದೆ. ಚಿತ್ರದ ಕಥೆಯೂ ಆ ಪದಕ್ಕೆ ಹೋಲಿಕೆ ಆಗುವುದರಿಂದ ಅದನ್ನೇ ಶೀರ್ಷಿಕೆ ಮಾಡಲಾಗಿದೆಯಂತೆ. ‘ಈ ಸಿನಿಮಾದ ಕಥೆ ಕೇಳಿ ನಾನು ಥ್ರಿಲ್ ಆದೆ. ಅದೇ ಕಾರಣಕ್ಕೆ ಒಪ್ಪಿಕೊಂಡೆ. ನಾಲ್ಕು ಹುಡುಗಿಯರ ಸುತ್ತ ಸುತ್ತುವ ಕಥೆಯಿದು. ನಿಗೂಢವಾಗಿ ಕಾಣೆಯಾದ ನಾಲ್ವರು ಹುಡುಗಿಯರ ಶೋಧ ಕಾರ್ಯಕ್ಕೆ ನಾನು ಕೈ ಹಾಕಿರುತ್ತೇನೆ. ಆಗ ಏನೆಲ್ಲ ಅವಘಡಗಳು ಸಂಭವಿಸುತ್ತವೆ? ಕಾಣೆಯಾದವರು ಸಿಗುತ್ತಾರಾ? ಹೀಗೆ ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಶೈಲಿಯಲ್ಲಿಯೇ ಇಡೀ ಸಿನಿಮಾ ಸಾಗಲಿದೆ’ ಎಂದು ಮಾಹಿತಿ ನೀಡುತ್ತಾರೆ ರಶ್ಮಿ. ಚಿತ್ರದ ಸಂಪೂರ್ಣ ಚಿತ್ರೀಕರಣ ಚಿಕ್ಕಮಗಳೂರು ಸುತ್ತಮುತ್ತ ನಡೆದಿದೆ. ಅದರಲ್ಲೂ ರಾತ್ರಿ ದೃಶ್ಯಗಳನ್ನೇ ಹೆಚ್ಚು ಸೆರೆಹಿಡಿದಿದ್ದಾರಂತೆ ನಿರ್ದೇಶಕರು. ‘ಸಂಜೆ 4ಗಂಟೆಯಿಂದ ಬೆಳಗಿನ 7ರವರೆಗೆ ಚಿತ್ರೀಕರಣ ಮಾಡಿದ್ದೇವೆ. ರಾತ್ರಿಯಿಡಿ ಶೂಟ್​ನಲ್ಲಿ ಪಾಲ್ಗೊಂಡಿದ್ದು ನನಗೆ ಹೊಸದು. ಮೇಕಿಂಗ್​ನಲ್ಲೂ ಸಿನಿಮಾ ಹಾಲಿವುಡ್ ಮಟ್ಟಕ್ಕಿದೆ’ ಎಂಬುದು ರಶ್ಮಿ ಮಾತು.

ಸಿನಿಮಾ ಆಯ್ಕೆಯಲ್ಲಿ ಅವಸರ ಬೇಡ ಎಂಬುದು ನನ್ನ ಅಭಿಪ್ರಾಯ. ಹಾಗಾಗಿಯೇ ನನಗೆ ಇಷ್ಟವೆನಿಸುವ ಕಥೆಯನ್ನಷ್ಟೇ ಒಪ್ಪಿಕೊಳ್ಳುತ್ತಿದ್ದೇನೆ. ಕಡಿಮೆ ಸಿನಿಮಾ ಮಾಡಿದ್ದೇನೆ ಎಂಬ ಬೇಸರ ನನಗಿಲ್ಲ.

| ರಶ್ಮಿ ನಟಿ