8 ಪ್ಯಾಕ್ ಧನ್​ವೀರ್

ಸಿಂಪಲ್’ ಸುನಿ ನಿರ್ದೇಶನದ ‘ಬಜಾರ್’ ಚಿತ್ರದ ಮೂಲಕ ಬಣ್ಣದ ಬದುಕು ಆರಂಭಿಸುತ್ತಿರುವ ಧನ್​ವೀರ್​ಗೆ ಫಿಟ್​ನೆಸ್ ಗುಂಗು ಹಿಡಿದಿದೆ. ಚಿತ್ರದ ಒಂದೇ ಒಂದು ಹಾಡಿಗಾಗಿ ಅವರು 8 ಪ್ಯಾಕ್ ಮಾಡಿಕೊಂಡಿದ್ದಾರೆ. ಅದಕ್ಕಾಗಿ 22 ದಿನ ಜಿಮ್ಲ್ಲಿ ಬೆವರು ಹರಿಸಿದ್ದಾರೆ! ಕಾಲೇಜು ದಿನಗಳಿಂದಲೂ ಫಿಟ್​ನೆಸ್ ಬಗ್ಗೆ ಕಾಳಜಿ ಹೊಂದಿದ್ದ ಧನ್​ವೀರ್, ಚಿತ್ರರಂಗಕ್ಕೆ ಎಂಟ್ರಿ ಕೊಡುವಾಗಲೇ 6 ಪ್ಯಾಕ್ ಮಾಡಿಕೊಂಡಿದ್ದರು. ‘ನನಗೆ 6 ಪ್ಯಾಕ್ ಇದ್ದರೂ ಸಿನಿಮಾದಲ್ಲಿ ಅದನ್ನು ತೋರಿಸಲು ಅವಕಾಶ ಇರಲಿಲ್ಲ. ಆದರೆ, ಒಂದು ದಿನ ನಿರ್ದೇಶಕರು ‘ಹಾಡೊಂದರಲ್ಲಿ ಬಾಡಿ ತೋರಿಸಬಹುದು. ವರ್ಕ್​ಔಟ್ ಮಾಡ್ತೀರಾ? ಒಂದು ತಿಂಗಳು ಅವಕಾಶ ಇದೆ’ ಎಂದರು. ಹಾಗೆ ಹೇಳಿದ ದಿನದಿಂದಲೇ ನಾನು ದೇಹ ದಂಡಿಸಲು ಆರಂಭಿಸಿದೆ. ‘ಏಕಲವ್ಯ’ ಪ್ರಶಸ್ತಿ ವಿಜೇತ ಪ್ರಸಾದ್ ಬಳಿ ಬರೋಬ್ಬರಿ 22 ದಿನಗಳು ತರಬೇತಿ ಪಡೆದು 8 ಪ್ಯಾಕ್​ನಲ್ಲಿ ಸಿದ್ಧನಾಗಿ ಬಿಟ್ಟೆ’ ಎಂದು ತಯಾರಿ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಾರೆ ಧನ್​ವೀರ್. 22 ದಿನಗಳಲ್ಲಿ ಪ್ರತಿ ಕ್ಷಣವೂ ಧನ್ವೀರ್​ಗೆ ಸವಾಲಾಗಿತ್ತಂತೆ. ‘ಬಾಡಿ ಫಿಟ್ ಆಗಿಟ್ಟುಕೊಳ್ಳುವುದು ಸುಲಭದ ಮಾತಲ್ಲ. ನಾನು 8 ಪ್ಯಾಕ್ ಮಾಡುವಾಗ ತುಂಬ ಸುಸ್ತು ಆಗುತ್ತಿತ್ತು. ಈ ರೀತಿ ಪ್ಯಾಕ್ಸ್ ಮಾಡಿಕೊಳ್ಳುವಾಗ ಆಹಾರ ಪ್ರಮುಖವಾಗುತ್ತದೆ. ವಿದೇಶದಲ್ಲಿ ಹಾಡಿನ ಶೂಟಿಂಗ್ ಇತ್ತು. ಅಲ್ಲಿಗೆ ಹೋಗುವುದಕ್ಕೂ 9 ದಿನ ಮೊದಲು ಒಂದು ಹನಿ ನೀರು ಕುಡಿದಿಲ್ಲ! ತುಟಿಗೆ ನೀರು ಸವರಿಕೊಂಡು ದಿನ ಕಳೆದಿದ್ದೆ. ರಾತ್ರಿ ನಿದ್ರೆ ಮಾಡುವಾಗ ಬಾಯಾರಿಕೆ ಆಗುತ್ತಿತ್ತು. ಆದರೆ ನೀರು ಕುಡಿಯುವ ಹಾಗಿಲ್ಲ. ಈ ರೀತಿ ಕಸರತ್ತು ಮಾಡುವುದು ತುಂಬ ಚಾಲೆಂಜಿಂಗ್’ ಎಂದು ಸವಾಲಿನ ಹಾದಿ ಬಗ್ಗೆ ವಿವರಿಸುತ್ತಾರವರು.‘ಬಜಾರ್’ ಚಿತ್ರದಲ್ಲಿ ಕಲ್ಕಿ ಪಾತ್ರಕ್ಕೆ ಧನ್ವೀರ್ ಬಣ್ಣ ಹಚ್ಚುತ್ತಿದ್ದಾರೆ. ಎಲ್ಲ ವರ್ಗದ ಪ್ರೇಕ್ಷಕರಿಗೂ ಚಿತ್ರ ಇಷ್ಟ ವಾಗಲಿದೆ ಎಂಬುದು ಅವರ ಅಭಿಪ್ರಾಯ.

ಅಂಗವಿಕಲರು ಕೂಡ ಫಿಟ್​ನೆಸ್ ಕಾಯ್ದು ಕೊಳ್ಳಬಹುದು. ಬಾಡಿ ಬಿಲ್ಡಿಂಗ್ ಮಾಡುವಾಗ ಬದ್ಧತೆ ತುಂಬ ಮುಖ್ಯ. ಜತೆಗೆ ನಾವು ತಿನ್ನುವ ಆಹಾರದ ಮೇಲೆ ನಿಯಂತ್ರಣ ಇರಬೇಕು. ಆದರೆ, ಒಂದೇ ದಿನಕ್ಕೆ ಮಸಲ್ಸ್ ಬೆಳೆಯಬೇಕು ಎಂದು ಅಡ್ಡದಾರಿ ಹಿಡಿಯುವುದು ಸರಿಯಲ್ಲ.

| ಧನ್​ವೀರ್ ನಟ