ಅಜ್ಞಾತವಾಸದಲ್ಲಿ ಶ್ರೀ ರಾಜಕುಮಾರಿ

ಬೆಂಗಳೂರು: ಈಗಷ್ಟೇ ‘ಕನ್ನಡದ ಕೋಟ್ಯಧಿಪತಿ’ ರಿಯಾಲಿಟಿ ಶೋ ಆರಂಭಿಸಿರುವ ಸ್ಟಾರ್ ಸುವರ್ಣ ವಾಹಿನಿ, ಇದೀಗ ‘ಶ್ರೀ’ ಎಂಬ ಹೊಸ ಧಾರಾವಾಹಿಯ ಪ್ರಸಾರ ಶುರುಮಾಡಿದೆ. ಜ್ಯೋತಿಷಿಯೊಬ್ಬನ ಕುತಂತ್ರದಿಂದ ಶ್ರೀಮಂತ ರಾಜ ಮನೆತನದ ಪುಟ್ಟ ಕಂದಮ್ಮ ತನ್ನ ಹೆತ್ತ ತಾಯಿಯಿಂದಲೇ ದೂರವಾಗುವ ಸನ್ನಿವೇಶ ಎದುರಾಗುತ್ತದೆ. ಕಣ್ಣ ಮುಂದೆಯೇ ತನ್ನ ಮಗಳಿದ್ದರೂ ಹೇಳಲಾಗದ ಸಂಕಟದಲ್ಲಿ ಸಿಲುಕುತ್ತಾಳೆ ತಾಯಿ. ಹೀಗೆ ಸಾಗುವ ಕಥೆಯಲ್ಲಿ ಹಲವು ತಿರುವುಗಳು ಎದುರಾಗುತ್ತವೆ. ಸಾಕುತಾಯಿಯ ಮಡಿಲು ಸೇರುವ ಶ್ರೀ ಹೇಗೆ ಬೆಳೆಯುತ್ತಾಳೆ? ಮುಂದೊಂದು ದಿನ ಮತ್ತೆ ಹೆತ್ತ ತಾಯಿ ಮಡಿಲು ಸೇರುತ್ತಾಳಾ? ಇಂಥ ಕುತೂಹಲಗಳನ್ನು ಮೂಡಿಸುತ್ತಲೇ ‘ಶ್ರೀ’ ಧಾರಾವಾಹಿ ಸಾಗಲಿದೆ. ಈ ಹಿಂದೆ ಹಲವು ಧಾರಾವಾಹಿಗಳಲ್ಲಿ ತೊಡಗಿಸಿಕೊಂಡಿದ್ದ ರಮೇಶ್ ಕೃಷ್ಣ, ‘ಶ್ರೀ’ ನಿರ್ದೇಶಿಸುವ ಜವಾಬ್ದಾರಿ ಹೊತ್ತಿದ್ದಾರೆ. ಇಬ್ಬರು ತಾಯಿಯರ ಮಮತೆಯ ಕಥೆಯನ್ನು ಆಯ್ದುಕೊಂಡಿರುವ ರಮೇಶ್, ರಾಜಮನೆತನದ ರಾಣಿ ಮತ್ತು ಸಾಮಾನ್ಯ ಅಗಸಗಿತ್ತಿಯ ಜೀವನವನ್ನು ಭಾವನಾತ್ಮಕವಾಗಿ ಕಟ್ಟಿಕೊಡುತ್ತಿದ್ದಾರೆ. ಧಾರಾವಾಹಿಯಲ್ಲಿ ರಾಣಿ ರೇವತಿಯಾಗಿ ಜಯಶ್ರೀ ನಟಿಸುತ್ತಿದ್ದರೆ, ಈ ಹಿಂದೆಂದೂ ಕಾಣಿಸಿಕೊಳ್ಳದ ರೀತಿಯಲ್ಲಿ, ಅಗಸರ ಮನೆಯ ಅಗಸಗಿತ್ತಿ ಮಾಲಾ ಪಾತ್ರಕ್ಕೆ ಮಾನಸಾ ಜೋಶಿ ಬಣ್ಣಹಚ್ಚಿದ್ದಾರೆ. ಇನ್ನುಳಿದಂತೆ, ಸುನೀಲ್ ಪುರಾಣಿಕ್ ರಾಜ ಚಂದ್ರಶೇಖರ್ ಸಿಂಹ ಆಗಿದ್ದಾರೆ. ರಾಜಮಾತೆ ಪದ್ಮಾವತಿ ದೇವಿಯಾಗಿ ಹಿರಿಯ ನಟಿ ಚಂದ್ರಕಲಾ ಮೋಹನ್, ಶ್ರೀ ಪಾತ್ರದಲ್ಲಿ ಪುಟಾಣಿ ಗ್ರೀಷ್ಮಾ ಕಾಣಿಸಿಕೊಳ್ಳುತ್ತಿದ್ದಾರೆ. ಮಿರಾಕಲ್ ವರ್ಕರ್ಸ್ ಸಂಸ್ಥೆ ‘ಶ್ರೀ’ ಧಾರಾವಾಹಿಯನ್ನು ನಿರ್ಮಾಣ ಮಾಡುತ್ತಿದ್ದು, ಮೈಸೂರು ಅರಮನೆಯಲ್ಲಿ ಧಾರಾವಾಹಿಯ ಚಿತ್ರೀಕರಣ ನಡೆಯುತ್ತಿದೆ. ಜುಲೈ 2ರಂದು ಧಾರಾವಾಹಿ ಪ್ರಸಾರ ಆರಂಭಿಸಿದ್ದು, ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿ ರಾತ್ರಿ 9ಕ್ಕೆ ಸ್ಟಾರ್ ಸುವರ್ಣದಲ್ಲಿ ಬಿತ್ತರಗೊಳ್ಳಲಿದೆ.