ಕನ್ನಡ ಕಲಿಯುತ್ತಿರುವ ಆಯುಷ್ಮಾನ್

ಬೆಂಗಳೂರು: ಚಂದನವನಕ್ಕೆ ಕಾಲಿಡುವ ಪರಭಾಷಾ ನಟ-ನಟಿಯರು ಕನ್ನಡ ಕಲಿಯಲು ಪ್ರಯತ್ನಿಸುವುದು ಸಾಮಾನ್ಯ. ಹೀಗೆ ಕನ್ನಡ ಕಲಿಯಲು ಪ್ರಯತ್ನಪಟ್ಟ ಅನೇಕ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಸದ್ದು ಮಾಡಿವೆ. ಈಗ ಬಾಲಿವುಡ್ ನಟರೊಬ್ಬರು ಕನ್ನಡ ಕಲಿಯುತ್ತಿದ್ದಾರೆ! ಯಾರವರು? ಈ ಪ್ರಶ್ನೆಗೆ ಉತ್ತರ-ಆಯುಷ್ಮಾನ್ ಖುರಾನಾ.

ಕನ್ನಡ ಕಲಿಯುತ್ತಿದ್ದಾರೆ ಎಂದಮಾತ್ರಕ್ಕೆ ಆಯುಷ್ಮಾನ್ ಸ್ಯಾಂಡಲ್​ವುಡ್​ಗೆ ಕಾಲಿಡುವ ಯೋಚನೆ ಇಟ್ಟುಕೊಂಡಿದ್ದಾರೆ ಎಂದುಕೊಳ್ಳುವಂತಿಲ್ಲ. ಅವರು ಕನ್ನಡ ಕಲಿಯುವುದಕ್ಕೆ ಕಾರಣವೂ ಇದೆ. ಆಯುಷ್ಮಾನ್ ಹಾಗೂ ಪ್ರಣೀತಾ ಸುಭಾಷ್ ನಟನೆಯ ‘ಚನ್ ಕಿತ್ತಾನ್’ ವಿಡಿಯೋ ಸಾಂಗ್ ಇತ್ತೀಚೆಗೆ ಯೂಟ್ಯೂಬ್​ನಲ್ಲಿ ರಿಲೀಸ್ ಆಗಿತ್ತು. ಹಾಡು ರಿಲೀಸ್ ಆದ ನಂತರ ಪ್ರಣೀತಾ ಮತ್ತು ಆಯುಷ್ಮಾನ್ ಭೇಟಿಯಾಗಿದ್ದರು. ಆ ವೇಳೆ ಅವರಿಗೆ ಕನ್ನಡ ಹೇಳಿಕೊಟ್ಟಿದ್ದಾರೆ ಪ್ರಣೀತಾ. ‘ಕನ್ನಡ ಅಭಿಮಾನಿಗಳನ್ನು ನಾನು ಇಷ್ಟ ಪಡುತ್ತೇನೆ. ನಾನು ತುಂಬ ಒಳ್ಳೆ ಹುಡುಗ. ಧನ್ಯವಾದ’ ಎಂದಿದ್ದಾರೆ ಆಯುಷ್ಮಾನ್. ಇದನ್ನು ಚಿತ್ರೀಕರಿಸಿರುವ ಪ್ರಣೀತಾ, ‘ಯಾರು ಕನ್ನಡ ಕಲಿಯುತ್ತಿದ್ದಾರೆ ಎಂಬುದನ್ನು ನೋಡಿ’ ಎಂದು ವಿಡಿಯೋ ಸಮೇತ ಟ್ವೀಟ್ ಮಾಡಿದ್ದಾರೆ. ಈ ವಿಡಿಯೋ ಸಖತ್ ಸದ್ದು ಮಾಡುತ್ತಿದೆ. ‘ಚನ್ ಕಿತ್ತಾನ್’ ಹಾಡು ಯೂಟ್ಯೂಬ್​ನಲ್ಲಿ 95 ಲಕ್ಷ ಬಾರಿ ವೀಕ್ಷಣೆ ಕಂಡಿದೆ.